ಕಲಬುರಗಿಯಲ್ಲಿ 'ಭೀಮಾ' ಬಲ; ದ್ರಾಕ್ಷಿ ಕೃಷಿಯಿಂದ ರೈತನ ಕಜಾನೆ ಫುಲ್ ಕಾಂಚಣ!

By Suvarna News  |  First Published Mar 17, 2020, 10:37 AM IST

ಜೀವನದಿ ಭೀಮೆಯ ನೀರಿನ ಬಲ, ಜೊತೆಗೇ ಅಂತರ್ಜಲದ ಅನುಗ್ರಹ, ಕಲಬುರಗಿ ಜಿಲ್ಲೆಯ ಭೀಮಾ ನದಿ ತೀರದಲ್ಲೀಗ ದ್ರಾಕ್ಷಿ ಕೃಷಿ ಕ್ರಾಂತಿ ನಡೆದಿದೆ. ಕಳೆದ 3 ವರ್ಷಗಳಲ್ಲಿ ನೂ ರಿಂದ 100 ಎಕರೆ ವ್ಯಾಪಿಸಿದೆ ದ್ರಾಕ್ಷಿ ಬೇಸಾಯ. ರೈತರು ಫುಲ್‌ ಖುಷಿ, ಕಬ್ಬು ಕೃಷಿಗೆ ಒಗ್ಗಿಕೊಂಡಿದ್ದ ಭೀಮಾ ತೀರದ ರೈತರೀಗ ದ್ರಾಕ್ಷಿಯತ್ತ ಮುಖ ಮಾಡಿದ್ದಾರೆ.


ಶೇಷಮೂರ್ತಿ ಅವಧಾನಿ, ಮಣ್ಣೂರ

ಕಲಬುರಗಿ ಭೀಮಾ ತೀರದ ಕೃಷಿರಂಗದಲ್ಲೀಗ ಪರಿವರ್ತನೆ ಪರ್ವ. ಇಲ್ಲಿನ ರೈತರೀಗ ಸಾಂಪ್ರದಾಯಿಕ ಕೃಷಿಯಿಂದ ತೋಟಗಾರಿಕೆ ಕೃಷಿಗೆ ತೆರೆದುಕೊಳ್ಳುತ್ತಿದ್ದಾರೆ. ಮಣ್ಣೂರ, ದ್ಯಾವಪ್ಪನಗರ, ರಾಮ ನಗರ, ಕುಡಿಗನೂರ್‌ ಸೇರಿದಂತೆ ನದಿ ತೀರದ ಹತ್ತು ಹಳ್ಳಿಗಳಲ್ಲಿ ಸದ್ದಿಲ್ಲದೆ ‘ದ್ರಾಕ್ಷಿ ಬೇಸಾಯ’ ದ ಕ್ರಾಂತಿ ನಡೆಯುತ್ತದೆ.

Tap to resize

Latest Videos

undefined

ಒಣ ಬೇಸಾಯದ ಬೆಳೆಗಳಾದ ಜೋಳ, ತೊಗರಿ, ಕಡಲೆ, ನೀರಾವರಿ ಕೃಷಿಯ ಕಬ್ಬು, ಬಾಳೆಗೆ ಮಾತ್ರ ಇದುವರೆಗೂ ತಮ್ಮ ಒಕ್ಕಲುತನ ಸೀಮಿತ ಮಾಡಿಕೊಂಡಿದ್ದ ಭೀಮಾ ತೀರದ ಅನ್ನದಾತರು ಇದೀಗ ಪಕ್ಕದ ವಿಜಯಪುರ ಜಿಲ್ಲೆಯ ರೈತರಂತೆಯೇ ತಮಗಿರುವ ಅಲ್ಪಸ್ವಲ್ಪ ಹೊಲದಲ್ಲೇ 2 ರಿಂದ 5 ಎಕರೆಯಲ್ಲಿ ದ್ರಾಕ್ಷಿ ಬೇಸಾಯಕ್ಕೆ ಮುಂದಾಗುತ್ತ ಹಣ್ಣಿನ ಕೃಷಿಗೆ ಜೈ ಎನ್ನುತ್ತಿದ್ದಾರೆ.

ಜಮುನಾಪುರ ಮೇಕೆ ಮಾಂಸಕ್ಕೂ ಸೈ, ಹಾಲಿಗೂ ಸೈ!

ನಾವು ದ್ರಾಕ್ಷಿ ಬೇಸಾಯ ಶುರುಮಾಡಿ 5 ವರ್ಷವಾಯ್ತು. ಅಕಾಲಿಕ ಮಳೆ ಕುತ್ತಿನಿಂದ ಪಾರಾದರೆ ತೀರಿತು, ದ್ರಾಕ್ಷಿ ಬೇಸಾಯ ಉತ್ತಮ ಕೃಷಿ ಮಾರ್ಗ. ರೈತರು ಇಂತಹ ತೋಟಗಾರಿಕೆ ಬೆಳೆಗಳ ಬಗ್ಗೆ ಅರಿತು ಹೆಜ್ಜೆ ಹಾಕಬೇಕು. - ಸಿದ್ದರಾಮಪ್ಪ ಹಿರೇಕುರುಬರ್‌, ದ್ರಾಕ್ಷಿ ಕೃಷಿಕ

ಸಾಂಪ್ರದಾಯಿಕ ಕೃಷಿಯಿಂದ ದ್ರಾಕ್ಷಿಗೆ ಜಂಪ್‌

ಕಲಬುರಗಿ, ಅಫಜಲ್ಪುರ, ಜೇವರ್ಗಿಗೆ ಭೀಮೆ ಜೀವನದಿ. ಈ ನದಿ ತೀರದಲ್ಲಿ ’ಕನ್ನಡಪ್ರಭ’ ಸುತ್ತಾಡಿದಾಗ ಕನಿಷ್ಠ 100 ಕ್ಕೂ ಹೆಚ್ಚು ರೈತರು 200 ಎಕರೆಯಷ್ಟುದ್ರಾಕ್ಷಿ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ದ್ರಾಕ್ಷಿ ಸಿಹಿ ಸವಿಯುತ್ತಿದ್ದಾರೆ. ದ್ಯಾವಪ್ಪನಗರದ ಶ್ರೀಮಂತ ಕಟ್ಟಿಸೇರಿದಂತೆ ಸಾಹಸಿ ಕೆಲ ರೈತರಂತೂ ಭೀಮೆಯಿಂದ 4 ರಿಂದ 5 ಕಿಮೀ ಕೊಳವೆ ಹಾಕಿ ನೀರು ತಂದು ’ಹನಿ ನೀರಾವರಿ ಪದ್ದತಿ’ಯಂತೆ ಹಿತ- ಮಿತ ನೀರನ್ನು ಬಳಸುತ್ತ ದ್ರಾಕ್ಷಿ ಕೃಷಿಗೆ ತಮ್ಮನ್ನು ತೊಡಗಿಸಿಕೊಂಡರೆ, ಇನ್ನೂ ಹಲವರು ಹೊಲದಲ್ಲೇ ಕೊಳವೆ ಕೊರೆದು ’ದ್ರಾಕ್ಷಿ’ಯತ್ತ ಮುಖ ಮಾಡಿದ್ದಾರೆ. ನದಿ- ಕೊಳವೆ ಬಾವಿಯಿಂದ ನೀರನ್ನೆತ್ತಿ ಒಟ್ಟಾರೆಯಾಗಿ ಇವರೆಲ್ಲರು ಸಾಂಪ್ರದಾಯಿಕ ಕೃಷಿಯಿಂದ ತೋಟಗಾರಿಕೆಯ ದ್ರಾಕ್ಷಿ ಬೇಸಾಯದತ್ತ ’ಬಿಗ್‌ ಜಂಪ್‌’ ಮಾಡಿದ್ದಾರೆ.

ಎಕರೆ ದ್ರಾಕ್ಷಿಗೆ 2 ಲಕ್ಷ ರು ಹೂಡಿಕೆ

1 ಎಕರೆ ದ್ರಾಕ್ಷಿ ಕೃಷಿಗೆ ಕನಿಷ್ಠ 2 ಲಕ್ಷ ರು ಹೂಡಿಕೆ ಬೇಕು ಎನ್ನುತ್ತಾರೆ ರೈತರು. ಕಬ್ಬಿಣದ ಹಂದರ, ಕಲ್ಲಿನ ಕಂಬಗಳು, ಬಳ್ಳಿ ಹರಡಲು ವ್ಯವಸ್ಥೆ... ಹೀಗೆ ಆರಂಭದ ಹೂಡಿಕೆ ತುಸು ಹೆಚ್ಚಾದರೂ ದ್ರಾಕ್ಷಿ ಬಳ್ಳಿ ಹಸಿರು ಚಿಗುರಿದರೆ ತೀರಿತು, ರೈತನ ಹಿಡಿಯೋರೇ ಇಲ್ಲ. ವಾರ್ಷಿಕ ನಿರ್ವಹಣೆ ವೆಚ್ಚ ಮಾತ್ರ, ಉಳಿದೆಲ್ಲವೂ ಲಾಭಾಂಶವೇ!

ನಾನಂತೂ ಅನಕ್ಷರಸ್ಥ, ಆದರೂ ದ್ರಾಕ್ಷಿ ಕೃಷಿ ಬಗ್ಗೆ ಮಾಹಿತಿ ಹೊಂದಿರುವೆ. ಅನುಭವವೇ ನನಗೆÜ ಮಾಹಿತಿ ಒದಗಿಸಿದೆ. ದ್ರಾಕ್ಷಿ ರೋಗ ಹತೋಟಿ ಸೇರಿದಂತೆ ಎಲ್ಲಾ ಮಾಹಿತಿಯನ್ನ ನಾನೇ ಸುತ್ತಲಿನ ರೈತರಿಗೆ ಹೇಳುವೆ. ನಿಯಂತ್ರಣ ಕ್ರಮಗಳನ್ನು ಸೂಚಿಸುವೆ. ಭೀಮಾ ತೀರದಲ್ಲಿ ಮೂರ್ನಾಲ್ಕು ವರ್ಷದಿಂದ ರೈತರು ದ್ರಾಕ್ಷಿಯತ್ತ ಹೆಚ್ಚಿನ ಒಲವು ಹೊಂದುತ್ತಿದ್ದಾರೆ. - ಚಂದ್ರಾಮ ಶ್ರೀಮಂತ ಕಟ್ಟಿ, ದ್ರಾಕ್ಷಿ ಬೆಳೆಗಾರ, ದಾವಪ್ಪನಗರ

ಮನೂಕ (ಒಣ ದ್ರಾಕ್ಷಿ) ಮಾರಾಟದಿಂದ ಅಧಿಕ ಲಾಭ

ಇಲ್ಲಿನ ರೈತರು ದ್ರಾಕ್ಷಿ ಫಸಲನ್ನ ನೇರವಾಗಿ ಮಾರುಕಟ್ಟೆಗೆ ತಂದೋರಲ್ಲ, ದ್ರಾಕ್ಷಿಗೆ ಮೌಲ್ಯ ವರ್ಧನೆ ಮಾಡಿಯೇ ಮಾರುಕಟ್ಟೆದಾರಿ ಹಿಡಿಯುತ್ತಾರೆ. ನೆರಳಲ್ಲಿ ಚೆನ್ನಾಗಿ ಹರಡಿ, ವೈಜ್ಞಾನಿಕವಾಗಿ ದ್ರಾಕ್ಷಿಯನ್ನ ಒಣಗಿಸಿ ಮನೂಕು (ಒಣ ದ್ರಾಕ್ಷಿ) ಮಾಡಿಯೇ ಮಾರುಕಟ್ಟೆಗೆ ಹೊತ್ತೊಯ್ಯುತ್ತಾರೆ. ಇದರಿಂದ ದ್ರಾಕ್ಷಿಗೆ ಬೆಲೆಯೂ ಹೆಚ್ಚು, ಮಾರುಕಟ್ಟೆಯಲ್ಲಿ ಬೇಡಿಕೆಯೂ ವಿಪರೀತ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.

ಹೈನುಗಾರಿಕೆಗೆ ಅಡ್ಡಿಯಾಗಲಿಲ್ಲ ಅಂಗವೈಕಲ್ಯ; ದಿನಕ್ಕೆ 100 ಲೀ ಹಾಲು ಮಾರ್ತಾರೆ ಈ ರೈತ!

ರೈತರಾದ ಸಿದ್ದರಾಮಪ್ಪ ಹಿರೇಕುರುಬರ್‌, ಚಂದ್ರಕಾಂತ ಕಟ್ಟಿ, ಪುಂಡಲೀಕ ಕಟ್ಟಿ, ಖಾಜಪ್ಪ ಹಿರೇಕುರುಬರ್‌, ಶ್ರೀಮಂತ ಕಟ್ಟಿಸೇರಿದಂತೆ ಅನೇಕರು ‘ಥಾಮ್ಸನ್‌’ ತಳಿಯ ದ್ರಾಕ್ಷಿ ಬೇಸಾಯ ಮಾಡುತ್ತಿದ್ದಾರೆ. ತುಂಬ ಸಿಹಿಯಾದ ಈ ದ್ರಾಕ್ಷಿ ತಳಿ ಎಕರೆಗೆ 1 ರಿಂದ 2 ಟನ್‌ ಇಳುವರಿ ನೀಡುತ್ತದೆ. ಇದನ್ನೇ ಅವರು ಮನೂಕು ಆಗಿ ಪರಿವರ್ತಿಸಿ ಮಾರುತ್ತಿದ್ದಾರೆ.

ಹೊಳಿಯಿಂದ (ಭೀಮಾನದಿ) 5 ಕಿಮೀ ಉದಕ್ಕ ಪೈಪ್‌ಲೈನ್‌ ಮಾಡಿದ ರೈತ ನಾನು. ನನ್ನ ಪ್ರಯತ್ನ ಫೇಲ್‌ ಆಗ್ತದ ಅಂತ ಭಾಳ ಅಂದ್ರು, ನಾನು ಯಾರ್‌ ಮಾತ ಕೇಳ್ದ ಈ ಕೆಲ್ಸದಾಗ ಯಶ ಕಂಡೆ. ಈಗ ಎಲ್ಲಾರೂ ಹೊಳಿ ನೀರನ್ನೇ ಬಳಸಿ ದ್ರಾಕ್ಷಿ ಬೆಳ್ಯಾಕ ಮುಂದಾಗ್ಯಾರ್ರಿ. - ಶ್ರೀಮಂತ ಕಟ್ಟಿ, ಹಿರಿಯ ದ್ರಾಕ್ಷಿ ಬೆಳೆಗಾರ, ಮಣ್ಣೂರ

ಮನೂಕ ಕೆಜಿಗೆ 180 ರು, ಇನಂದ ತಳಿಗೆ ಕೆಜಿ 210 ರು

3 ರಿಂದ 4 ಕೆಜಿ ದ್ರಾಕ್ಷಿ 12 ರಿಂದ 14 ದಿನ ನೆರಳಲ್ಲೇ ಹರಡಿ ಒಣಗಿಸುವ ಮೂಲಕ ಅವನ್ನು ಮನೂಕ ಆಗಿ ಪರಿವರ್ತಿಸಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಘಟಕ ಇವರು ಸಿದ್ಧಪಡಿಸಿದ್ದಾರೆ. ನೆರಳಲ್ಲೇ ದ್ರಾಕ್ಷಿ 14 ದಿನ ಒಣಗಿಸಬೇಕು. ಆಗ ಹದಾವಂದ ಮನೂಕು ಸಿದ್ಧಗೊಳ್ಳುತ್ತವೆ. ಹೀಗೆ ಸಿದ್ದಗೊಂಡ ಮನೂಕ ಮೂಟೆಗಳಲ್ಲಿ ತುಂಬಿ ಮಹಾರಾಷ್ಟ್ರದ ತಾಸಗಾಂವ್‌ ಮಾರುಕಟ್ಟೆಗೆ ಸಾಗಿಸುತ್ತಾರೆ. ಮನೂಕ ಗುಣಮಟ್ಟಅವಲಂಬಿಸಿ ತಾಸಗಾಂವ್‌ ವರ್ತಕರು ಮಣ್ಣೂರಿನ ದ್ರಾಕ್ಷಿಯನ್ನು ಪ್ರತೀ ಕೆಜಿಗೆ 180 ರು ನಿಂದ 210 ರುವರೆಗೂ ಬೆಲೆ ನೀಡಿ ಖರೀದಿಸುತ್ತಿದ್ದಾರೆ.

ಅಂಬಣ್ಣ ವಾಯಿ, ಮಾಳಪ್ಪ ಪೂಜಾರಿ, ದಯಾನಂದ ನಾವಾಡಿ, ಗೋಪಾಳ ಚೋಪಡೆ, ರಾಂ ಅಂಜುಟಗಿ, ಶ್ರೀಮಂತ ಹಿರೇಕುರುಬರ್‌, ಅಶೋಕ, ಸಿದ್ರಾಮಪ್ಪ ಹಿರೇ ಕುರುಬರ್‌, ಸೇರಿದಂತೆ ಅನೇಕರು ಇದೀಗ ದ್ರಾಕ್ಷಿ ಬೇಸಾಯಕ್ಕೆ ಮುಂದಾಗಿದ್ದರಿಂದ ಭೀಮಾ ತೀರದ ಇಕ್ಕೆಲಗಳಲ್ಲಿ ದ್ರಾಕ್ಷಿಯ ಹಚ್ಚ ಹಸಿರು ಬಳ್ಳಿ ನಳನಳಿಸುತ್ತಿವೆ. ಭೀಮಾ ತೀರದ ಹೊಲಗದ್ದೆಗಳಲ್ಲಿ ರೈತರ ಮನೆಯ ಮುಂದೆಯೇ ಮನೂಕು ಪರಿರ್ತಕ ಘಟಗಳು ತಲೆ ಎತ್ತುವ ಮೂಲಕ ದ್ರಾಕ್ಷಿ ಬೇಸಾಯದ ಕ್ರಾಂತಿಗೆ ಶ್ರೀಕಾರ ಬರೆಯಲಾಗಿದೆ.

click me!