ಲಿಟರರೀ ಫೆಸ್ಟುಗಳ ಪಿತಾಮಹ ಜೈಪುರ ಲಿಟರರಿ ಫೆಸ್ಟಿವಲ್. ಸಾರ್ವಜನಿಕರಿಗೆ ಉಚಿತ ಪ್ರವೇಶ ಎಂಬ ಹೆಗ್ಗಳಿಕೆಯೊಂದಿಗೆ ಆರಂಭವಾದ ಜೈಪುರ ಲಿಟರರಿ ಫೆಸ್ಟಿವಲ್, ಜೆಎಲ್‌ಎಫ್, ಇದೀಗ ಹನ್ನೆರಡನೆಯ ಆವೃತ್ತಿಗೆ ಬಂದು ನಿಂತಿದೆ. ಈ ವರ್ಷ ಜನವರಿ 24ರಿಂದ 28ರ ತನಕ ನಡೆಯಲಿರುವ ಈ ಜೈಪುರ ಹಬ್ಬದಲ್ಲಿ ಯಾರೆಲ್ಲ ಇರುತ್ತಾರೆ, ಯಾರೆಲ್ಲ ಮಾತಾಡುತ್ತಾರೆ ಅನ್ನುವುದನ್ನು ಮೊದಲೇ ಜಾಹೀರುಪಡಿಸುತ್ತಾರೆ.
ಜೈಪುರ (ಜ. 20): ಸಾಹಿತ್ಯ ಸಮ್ಮೇಳನಗಳು ನಮಗೆ ಹೊಸತೇನಲ್ಲ. 84 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಾವು ನೋಡಿದ್ದೇವೆ. ಅದರ ಜೊತೆಗೇ ಅಸಂಖ್ಯಾತ ಜಿಲ್ಲಾ ಸಾಹಿತ್ಯ ಸಮ್ಮೇಳನಗಳೂ ತಾಲೂಕು ಸಾಹಿತ್ಯ ಸಮ್ಮೇಳನಗಳೂ ಹೋಬಳಿ ಸಾಹಿತ್ಯ ಸಮ್ಮೇಳನಗಳೂ ನಡೆದು ಹೋಗಿವೆ. ಇನ್ನೂ ನಡೆಯಲಿವೆ.
ಈ ಮಧ್ಯೆ ಸಾಹಿತ್ಯ ಸಂಭ್ರಮಗಳೂ ವಿಶೇಷ ಸಾಹಿತ್ಯ ಸಮಾರಾಧನೆಗಳೂ ಕೂಟಗಳೂ ಒಕ್ಕೂಟಗಳೂ ಉತ್ಸವಗಳೂ ಜಾತ್ರೆಗಳೂ ಪಲ್ಲವಗಳೂ ನಡೆದು ಸಾಹಿತ್ಯ ಜಗತ್ತು ಪುಲಕಗೊಳ್ಳುತ್ತಲೇ ಇದೆ.
undefined
ಈ ಪ್ರಾದೇಶಿಕ ಸಂಭ್ರಮಗಳ ಜೊತೆಗೇ ಇತ್ತೀಚೆಗೆ ಲಿಟರರೀ ಫೆಸ್ಟಿವಲ್‌ಗಳೆಂಬ ಹೊಸತೊಂದು ಇಂಗ್ಲಿಷ್ ಹಬ್ಬ ಹಲವು ರಾಜ್ಯಗಳಲ್ಲಿ ಆರಂಭವಾಗಿದ್ದನ್ನೂ ನೋಡಬಹುದು. ಸಾಹಿತ್ಯ ಸಮ್ಮೇಳನಗಳು ಸರ್ಕಾರಿ ಕೃಪಾಪೋಷಿತ ಕಾರ್ಯಕ್ರಮವಾದರೆ, ಈ ಲಿಟರರೀ ಫೆಸ್ಟಿವಲ್‌ಗಳಿಗೆ ಸರ್ಕಾರದ ಆರ್ಥಿಕ ಬೆಂಬಲ ಅಷ್ಟಾಗಿಲ್ಲ. ಅದರ ಖರ್ಚುವೆಚ್ಚಗಳನ್ನು ಖಾಸಗಿ ಸಮಿತಿ ನೋಡಿಕೊಳ್ಳುತ್ತದೆ.
ತನಗೆ ಬೇಕಾದ ಸಂಪನ್ಮೂಲಗಳನ್ನು ಅದೇ ಕ್ರೋಢೀಕರಿಸಿಕೊಂಡು ತನಗೆ ಬೇಕಾದವರನ್ನು ಕರೆಸಿಕೊಂಡು, ತನ್ನದೇ ಭಾಷೆಯಲ್ಲಿ ಅದು ಸಾಹಿತ್ಯದ ಕುರಿತು ಚರ್ಚಿಸುತ್ತದೆ. ಸಾಹಿತ್ಯ ಸಮ್ಮೇಳನ ಜನಪದವಾದರೆ, ಲಿಟರರೀ ಫೆಸ್ಟ್‌ಗಳು ಜಾಣಪದ. ಅಲ್ಲಿ ಪ್ರಾದೇಶಿಕ ಭಾಷೆಗೆ ಗೌರವ ಕಡಿಮೆ.
ಜೈಪುರದಲ್ಲಿ ಅಕ್ಷರದಾಹಿಗಳಿಗೆ ಕಾದಿದೆ ಓಯಸಿಸ್!
ಇಂಥ ಫೆಸ್ಟ್‌ಗಳ ಮಾಧ್ಯಮ ಇಂಗ್ಲಿಷ್. ತಪ್ಪಿದರೆ ಹಿಂದಿ. ಸಾಹಿತ್ಯ ಸಮ್ಮೇಳನ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳನ್ನು ದೂರವಿಟ್ಟರೆ, ಲಿಟರರಿ ಫೆಸ್ಟ್ ಸಿನಿಮಾ, ಉದ್ಯಮ, ವೈದ್ಯಕೀಯ, ಸಮಾಜಸೇವೆ, ಶಿಕ್ಷಣ- ಮುಂತಾದ ಕ್ಷೇತ್ರಗಳ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಗಣ್ಯರನ್ನು ಕರೆಸಿಕೊಂಡು ಕಾರ್ಯಕ್ರಮವನ್ನು ಚಂದಗಾಣಿಸಿಕೊಳ್ಳುತ್ತವೆ. ಸಾಹಿತ್ಯ ಸಮ್ಮೇಳನಗಳಲ್ಲಿ ಯುವಜನತೆ ಭಾಗವಹಿಸುವುದು ಕಡಿಮೆ. ಲಿಟರರೀ ಫೆಸ್ಟ್‌ಗಳಲ್ಲಿ ಯುವಕ ಯುವತಿಯರದ್ದೇ ಕಾರುಬಾರು.
ಇಂಥ ಲಿಟರರೀ ಫೆಸ್ಟುಗಳ ಪಿತಾಮಹ ಜೈಪುರ ಲಿಟರರಿ ಫೆಸ್ಟಿವಲ್. ಸಾರ್ವಜನಿಕರಿಗೆ ಉಚಿತ ಪ್ರವೇಶ ಎಂಬ ಹೆಗ್ಗಳಿಕೆಯೊಂದಿಗೆ ಆರಂಭವಾದ ಜೈಪುರ ಲಿಟರರಿ ಫೆಸ್ಟಿವಲ್, ಜೆಎಲ್‌ಎಫ್, ಇದೀಗ ಹನ್ನೆರಡನೆಯ ಆವೃತ್ತಿಗೆ ಬಂದು ನಿಂತಿದೆ. ಈ ವರ್ಷ ಜನವರಿ 24ರಿಂದ 28ರ ತನಕ ನಡೆಯಲಿರುವ ಈ ಜೈಪುರ ಹಬ್ಬದಲ್ಲಿ ಯಾರೆಲ್ಲ ಇರುತ್ತಾರೆ, ಯಾರೆಲ್ಲ ಮಾತಾಡುತ್ತಾರೆ ಅನ್ನುವುದನ್ನು ಮೊದಲೇ ಜಾಹೀರುಪಡಿಸುತ್ತಾರೆ.
ಹಾಗೆ ನೋಡಿದರೆ ಜೆಎಲ್‌ಎಫ್ ಹೆಸರಾದದ್ದೇ ವಿಶ್ವದ ಶ್ರೇಷ್ಠಾತಿಶ್ರೇಷ್ಠರನ್ನೆಲ್ಲ ಕರೆಸಿ ಮಾತಾಡಿಸುತ್ತದೆ ಎಂಬ ಕಾರಣಕ್ಕೆ. ನೊಬೆಲ್ ಪುರಸ್ಕೃತರಾದ ಜೆ ಎಂ ಕೋಝೀ, ಒರ್ಹಾನ್ ಪಾಮುಕ್,ವೋಲೆ ಸೋಯಿಂಕಾ, ಮ್ಯಾನ್ ಬೂಕರ್ ಪಡೆದ ಇಯಾನ್ ಮ್ಯಾಕಿವಾನ್, ಮಾರ್ಗರೆಟ್ ಅಟ್‌ವುಡ್, ಪೌಲ್ ಬೀಟ್ಲೀ, ನಮ್ಮವರೇ ಆದ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ನಮಗೆ ಗೊತ್ತಿರುವ ಗುಲ್ಜಾರ್, ಜಾವೇದ್ ಅಖ್ತರ್, ಎಂಟಿ ವಾಸುದೇವ ನಾಯರ್, ಮಹಾಶ್ವೇತಾ ದೇವಿ, ಜನಪ್ರಿಯ ಲೇಖಕರಾದ ಅಮಿಷ್ ತ್ರಿಪಾಠಿ, ಚಿಮ್ಮಂಡಾ, ವಿಕ್ರಮ್ ಸೇಥ್ ಜೊತೆಗೆ ಅಮರ್ತ್ಯಸೆನ್, ಅಮಿತಾಭ್ ಬಚ್ಚನ್, ಅಬ್ದುಲ್ ಕಲಾಮ್, ದಲೈಲಾಮಾ, ಒಫ್ರಾ ವಿನ್‌ಫ್ರೆ, ಸ್ಟೀಫನ್ ಫ್ರೈ, ಥಾಮಸ್ ಪಿಕೆಟ್ಟಿ-ಹೀಗೆ ದೊಡ್ಡ ಹೆಸರುಗಳೆಲ್ಲ ಜೈಪುರದ ದಿಗ್ಗಿ ಅರಮನೆಯ ಅಂಗಣದಲ್ಲಿ ಕಾಣಿಸಿಕೊಂಡಿವೆ.
ಜೈಪುರ ಲಿಟರರೀ ಫೆಸ್ಟ್‌ನಲ್ಲಿ ಅನೇಕ ಸಲ ಭಾಗವಹಿಸಿದ ಗಿರೀಶ್ ಕಾರ್ನಾಡರ ಪ್ರಕಾರ ‘ಜೆಎಲ್‌ಎಫ್ ಅದರದೇ ವಿಶಿಷ್ಟಕಾರಣಕ್ಕೆ ಮುಖ್ಯವಾದ ಸಾಹಿತ್ಯ ಮೇಳ. ಅಲ್ಲಿಗೆ ಯಾರು ಬೇಕಾದರೂ ಬರಬಹುದು. ವಿಶ್ವದ ಅತ್ಯುತ್ತಮ ಲೇಖಕರನ್ನು ಕರೆಸುತ್ತಾರೆ. ಅವರನ್ನೆಲ್ಲ ಮಾತಾಡಿಸುತ್ತಾರೆ. ಜನ ಸಾಗರದಂತೆ ಬಂದು ಸೇರುತ್ತಾರೆ.
ಒಂದೊಂದು ಗೋಷ್ಠಿ ನಡೆಯುವ ಜಾಗದಲ್ಲಿ ಕುಳಿತ ಮಂದಿ ಬೆಳಗಿನಿಂದ ಸಂಜೆಯ ತನಕ ಅಲ್ಲಾಡದೇ ಕುಳಿತು ಗೋಷ್ಠಿ ಕೇಳಿಸಿಕೊಳ್ಳುತ್ತಾರೆ. ಎದ್ದು ಹೋದರೆ ಮತ್ತೆಲ್ಲಿ ಜಾಗ ಸಿಗುವುದಿಲ್ಲವೋ ಎಂದು ಆತಂಕಪಡುತ್ತಾರೆ. ಮುಖ್ಯವಾದ ಚರ್ಚೆಗಳು ನಡೆಯುತ್ತವೆ. ಹೇಳಬೇಕಾದ್ದನ್ನು ಮುಕ್ತವಾಗಿ ಹೇಳುವುದಕ್ಕೆ ಅವಕಾಶವಿದೆ. ಹಾಗೆಯೇ, ಸಿನಿಮಾ ನಟನಟಿಯರು ಬಂದರೆ ಅಲ್ಲಿಯ ಶಾಲಾ ಕಾಲೇಜುಗಳ ಹುಡುಗರೆಲ್ಲ ಒಳಗೆ ನುಗ್ಗುತ್ತಾರೆ. ಅವರನ್ನು ನೋಡಲಿಕ್ಕೆಂದೇ ಬರುವ ಗುಂಪೂ ಇದೆ. ಅಷ್ಟಾದರೂ ಅದೊಂದು ಅವಿಸ್ಮರಣೀಯ ಅನುಭವ. ತರುಣ ಬರಹಗಾರರಿಗೆ ಸ್ಪೂರ್ತಿಯ ತಾಣ.’
ಈ ಸಲದ ಜೆಎಲ್‌ಎಫ್‌ನಲ್ಲಿ ಜಯಂತ ಕಾಯ್ಕಿಣಿ ಭಾಗವಹಿಸುತ್ತಿದ್ದಾರೆ. ಅವರ ಅನುವಾದಿತ ಕೃತಿಯ ಕುರಿತು ಚರ್ಚೆ ನಡೆಯಲಿದೆ. ಕರ್ನಾಟಕದಿಂದ ಆಹ್ವಾನಿತ ಲೇಖಕರಾಗಿ ಭಾಗವಹಿಸುತ್ತಿರುವುದು ಅವರೊಬ್ಬರೇ. ಅವರಿಗೂ ಈ ಅವಕಾಶ ಸಿಕ್ಕಿರುವುದು ಈ ವರ್ಷ. ಅದಕ್ಕೆ ಕಾರಣ ಅವರ ಕೃತಿ ಇಂಗ್ಲಿಷಿಗೆ ಅನುವಾದಗೊಂಡಿರುವುದು. ಅಲ್ಲಿ ಮಾತುಕತೆ ನಡೆಯುವುದು ಕೂಡ ಇಂಗ್ಲಿಷಿನಲ್ಲಿಯೇ. ಹೀಗಾಗಿ ಜೈಪುರ ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಬೇಕಿದ್ದರೆ ಇಂಗ್ಲಿಷ್ ಗೊತ್ತಿರುವುದು ಅನಿವಾರ್ಯ. ಇಲ್ಲದೇ ಹೋದರೆ ಇಂಗ್ಲಿಷ್ ಆದರೂ ಗೊತ್ತಿರಲೇಬೇಕು.
ಹಾಗೆಯೇ, ಪ್ರಾದೇಶಿಕ ಭಾಷೆಯ ಲೇಖಕರು ಜೈಪುರ ಲಿಟರರೀ ಫೆಸ್ಟ್‌ನಲ್ಲಿ ಭಾಗವಹಿಸಬೇಕಿದ್ದರೆ ಅವರ ಕೃತಿಗಳು ಇಂಗ್ಲಿಷಿಗೆ ಅನುವಾದಗೊಳ್ಳುವುದು ಕಡ್ಡಾಯ. ಇದು ಲಿಖಿತ ನಿಯಮವೇನೂ ಅಲ್ಲದೇ ಹೋದರೂ, ಅದನ್ನು ಈ ಹಬ್ಬ ಬಯಸುತ್ತದೆ ಅನ್ನುವುದು ಸುಳ್ಳಲ್ಲ. ಈ ಹಿಂದೆ ಇಲ್ಲಿ ಭಾಗವಹಿಸಿದವರ ಪಟ್ಟಿನೋಡಿದಾಗ ಇಂಗ್ಲಿಷ್ ಬಲ್ಲವರೇ ಇಲ್ಲಿ ಆಯ್ಕೆಯಾಗಿರುವುದು ಗೊತ್ತಾಗುತ್ತದೆ.
ಈ ಬಗ್ಗೆ ಅನೇಕ ಪ್ರಾದೇಶಿಕ ಲೇಖಕರಿಗೆ ಅಸಹನೆಯೂ ಇದ್ದಂತಿದೆ. ಲಿಟರರಿ ಫೆಸ್ಟಿವಲ್‌ಗಳಲ್ಲಿ ಅಬ್ಬರ ಜಾಸ್ತಿ, ಸಾರ ಕಮ್ಮಿ ಎಂಬ ಮಾತುಗಳೂ ಕೇಳಿಬರುವುದುಂಟು. ಅಲ್ಲಿ ಸತ್ವಯುತ ಮಾತುಕತೆಗಿಂತ ವಿವಾದಕ್ಕೇ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ವರ್ಷಕ್ಕೊಂದೋ ಎರಡೋ ವಿವಾದಾಸ್ಪದ ಹೇಳಿಕೆಗಳು ಹೊರಬರದೇ ಫೆಸ್ಟಿವಲ್ ಮುಗಿಯುವುದಿಲ್ಲ. ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾದವರಿಗೇ ಮೊದಲ ಮಣೆ ಎಂದೂ ಪ್ರಾದೇಶಿಕ ಭಾಷೆಯ ಲೇಖಕರು ಹೇಳಿಕೊಂಡದ್ದಿದೆ.
ಆದರೆ ಹೊಸ ತಲೆಮಾರಿನ ಓದುಗರು ಭೇಟಿಯಾಗಬಯಸುವ ಬಹುತೇಕ ಲೇಖಕರು ಇಲ್ಲಿ ಸಿಗುತ್ತಾರೆ ಅನ್ನುವುದು ಸುಳ್ಳಲ್ಲ. ಆಯಾ ವರ್ಷ ಒಂದೆರಡು ಕೃತಿ ಹೊರತಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಲೇಖಕರ ಪುಸ್ತಕ ಬಿಡುಗಡೆ, ಅವರ ಜೊತೆ ಮಾತುಕತೆ, ಸಂವಾದ, ಸೆಲ್ಫೀ, ಸಿಗ್ನೇಚರ್ -ಇವೇ ಮುಂತಾದ ಆಕರ್ಷಣೆಗೂ ಅನೇಕರು ಅತ್ತ ಕಾಲು ಹಾಕುವುದುಂಟು.
ನಮಿತಾ ಗೋಖಲೆ ಮತ್ತು ವಿಲಿಯಂ ಡಾರ್ಲಿಂಪ್‌್ಲ ಜಂಟಿಯಾಗಿ ನಿರ್ವಹಿಸುತ್ತಿರುವ ಜೈಪುರ ಸಾಹಿತ್ಯೋತ್ಸವದಲ್ಲಿ ಇಲ್ಲಿಯ ತನಕ 2000 ಮಂದಿ ದೇಶವಿದೇಶಗಳ ಲೇಖಕರು ಭಾಗವಹಿಸಿದ್ದಾರೆ. ಅನೇಕ ಮಹತ್ವದ ಚರ್ಚೆಗಳು ಶುರುವಾಗಿವೆ. ನಮ್ಮ ಕಾಲದ ರಾಜಕಾರಣ, ಆರ್ಥಿಕತೆ, ಸಮಾಜಶಾಸ್ತ್ರ, ವೈದ್ಯಜಗತ್ತು, ಸಾಹಿತ್ಯ, ಸಂಗೀತ, ಸಿನಿಮಾ ಎಲ್ಲವನ್ನೂ ಒಳಗೊಳ್ಳುವ ಜೈಪುರ ಸಾಹಿತ್ಯ ಜಾತ್ರೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗುವುದಿಲ್ಲ!
ಹೀಗಾಗಿ ನಿರ್ಣಯಗಳನ್ನು ಜಾರಿಗೆ ತರುವ ತುರ್ತು ಕೂಡ ಇಲ್ಲ. ನಿರ್ಣಯಗಳನ್ನು ಪ್ರತಿಯೊಬ್ಬ ಓದುಗನೂ ತನ್ನ ಮನಸ್ಸಿನಲ್ಲಿಯೇ ಕೈಗೊಳ್ಳಬೇಕು!
-ಎಚ್‌ಜಿಆರ್