ಕಾರಿಡಾರ್‌ ಸುತ್ತುತ್ತಾ ಕಾಲ ಕಳೆಯುವ ಕಾಲೇಜು ಬದುಕಿಗೆ ಬ್ರೇಕಿಂಗ್‌ ನ್ಯೂಸ್‌?

By Suvarna News  |  First Published Mar 12, 2020, 10:08 AM IST

ಕಾಲೇಜಿನ ತರಗತಿಗಳಲ್ಲಿ ನೀಡುವ ಪಾಠಗಳು ಪರೀಕ್ಷೆಗೆ ಸಿದ್ಧ ಮಾಡುತ್ತವೆಯೇ ಹೊರತು ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗಲ್ಲ. ನಿಜವಾದ ಪಾಠ ನಮಗೆ ತರಗತಿಗಳ ಹೊರಗೇ ಸಿಗುತ್ತದೆ. ಇದುವರೆಗೆ ಮಕ್ಕಳೆಂದೇ ಪರಿಗಣಿಸಿ ಯಾವುದಕ್ಕೂ ಮುಂದೆ ಬರಲು ಬಿಡದ ಹಿರಿಯರ ಕಾರಣ ಮೊದ್ದುಗಳಾಗಿಯೇ ಉಳಿದಿದ್ದ ನಮಗೆ ಜೀವನವನ್ನು ಸಂಘರ್ಷಿಸಲು ಕಲಿಸುವುದೇ ಕಾಲೇಜು.


ಚಿಕ್ಕಪುಟ್ಟಜಗಳ, ಸಮಾಜದಲ್ಲಿ ಹೇಗೆ ವರ್ತಿಸಬೇಕು, ಕಷ್ಟಕರ ಪರಿಸ್ಥಿತಿಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು ಮೊದಲಾದ ಹತ್ತು ಹಲವು ವಿಷಯಗಳ ಬಗ್ಗೆ ಕಾಲೇಜಿನಲ್ಲಿ ಕಲಿಯುವಷ್ಟನ್ನು ಇನ್ನೆಲ್ಲೂ ಕಲಿಯಲಾರಿರಿ. ಈ ಅನುಭವಗಳು ಮತ್ತು ಹೊಣೆಗಾರಿಕೆಗಳು ಕಾಲೇಜಿನ ಬಳಿಕ ನಿಜಜೀವನದಲ್ಲಿ ಅಡಿಯಿಡುವ ನಿಮಗೆ ಸದಾ ನೆರವಿಗೆ ಬರುತ್ತವೆ.

ಒಂದು ವಿಡಿಯೋ ಅವಾಂತರ; ನನ್ನ ಟಿಕ್‌ಟಾಕ್‌ ಸ್ಟೋರಿ!

Tap to resize

Latest Videos

undefined

ಹುಡುಗ-ಹುಡುಗಿಯರೆಲ್ಲಾ ಒಂದು ಸಂಬಂಧದಲ್ಲಿ ಇದ್ದೇ ಇರುತ್ತಾರೆ. ಕಾಲೇಜಿಗೆ ಬಂದ ಕೂಡಲೇ ಸುತ್ತ ಮುತ್ತಲ ಪರಿಸರವನ್ನು ಗಮನಿಸಿದಾಗ ಒಬ್ಬ ಹುಡುಗನಿಗೆ ಓರ್ವ ಹುಡುಗಿ, ಈಕೆ ಆತನ ಗಲ್‌ರ್‍ಫ್ರೆಂಡ್‌, ಆತ ಈಕೆಯ ಬಾಯ್‌ಫ್ರೆಂಡ್‌ ಎಂಬೆಲ್ಲಾ ಕುರಿತಾಗಿ ಗುಸುಗುಸು ಆಗುತ್ತಲೇ ಇರುತ್ತದೆ. ಅದರಲ್ಲೂ ಯಾವುದೋ ಕಾರಣದಿಂದ ಒಂದು ಜೋಡಿಯಲ್ಲಿ ಜಗಳವಾಗಿ ಬೇರ್ಪಟ್ಟರೆ ಈ ಗುಸುಗುಸು ನೂರು ಪಟ್ಟು ಹೆಚ್ಚುತ್ತದೆ. ಅಂದಿನ ದಿನದ ಬ್ರೇಕಿಂಗ್‌ ನ್ಯೂಸ್‌ ಇದೇ. ಪರಿಣಾಮವಾಗಿ ಕಾಲೇಜಿನ ಅಷ್ಟೂಯುವಕ ಯುವತಿಯರು ಒಬ್ಬರೊಂದಿಗೆ ಇನ್ನೊಬ್ಬರು ಸಂಬಂಧದಲ್ಲಿರುವವರೆಂದೇ ಉತ್ಪ್ರೇಕ್ಷಿಸಲಾಗುತ್ತದೆ. ಒಂದು ವೇಳೆ ಇಲ್ಲ ಎಂದಾದರೆ, ಪ್ರಯತ್ನಿಸುತ್ತಿರಿ, ಶೀಘ್ರವೇ ಸಿಗುತ್ತದೆ ಎಂಬ ಭರವಸೆ ಸಿಗುತ್ತದೆ. ಅಂದರೆ ಕಾಲೇಜಿನ ದಿನಗಳಲ್ಲಿ ಒಂದು ಸಂಬಂಧದಲ್ಲಿರುವುದು ಅನಿವಾರ್ಯ ಎಂಬಂತೆ ಬಿಂಬಿಸಲಾಗುತ್ತದೆ. ಇದರಲ್ಲಿ ಒಂದಕ್ಕಿಂತಲೂ ಕಡಿಮೆ ಶೇಕಡಾ ಜನರು ಮಾತ್ರ ಈ ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸಿ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುವುದನ್ನು ಗಮನಿಸಬಹುದು. ಇನ್ನುಳಿದವೆಲ್ಲಾ ಕಾಲೇಜು ಮುಗಿದ ಬಳಿಕ ಗಾಳಿಗೆ ತೂರಿ ಹೋದ ಭತ್ತದ ಹೊಟ್ಟಿನಂತೆ ಕಾಳುಗಳಿಂದ ಬೇರ್ಪಡುವುದು ವಾಸ್ತವವಾಗಿದೆ.

ಅಂಗೈಯಲ್ಲೇ ಜಗತ್ತು ತೋರಿಸೋ ಸಾಧನದ ಬಗ್ಗೆ ಹುಷಾರಾಗಿರಿ

ಕಾಲೇಜಿಗೆ ಹಾಜರಿ ಕಡಿಮೆ ಇದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ. ಕಾಲೇಜಿನ ತರಗತಿಗಳನ್ನು ನಡೆಸುವ ಮುಖ್ಯ ಕಾರಣವೇ ವಿದ್ಯಾರ್ಜನೆ. ತರಗತಿಗೆ ಬರದೇ ಇದ್ದರೆ ಇನ್ನು ವಿದ್ಯಾರ್ಜನೆ ಎಲ್ಲಿಂದ? ಕಾಲೇಜಿನ ತರಗತಿಗಳು ನಡುನಡುವೆ ಬಿಡುವು ನೀಡುವಂತಿರುವುದರಿಂದ ಕಾಲೇಜಿನ ವಠಾರದಲ್ಲಿ ಸದಾ ವಿದ್ಯಾರ್ಥಿಗಳು ತಿರುಗುತ್ತಿರುವುದನ್ನು ಗಮನಿಸಬಹುದು. ಈ ಸಮಯದಲ್ಲಿ ಕೊಚ್ಚುವ ಹರಟೆ, ವಿನಿಮಯ ಮಾಡಿಕೊಳ್ಳುವ ವಿಷಯ, ಮೊಬೈಲಿನಲ್ಲಿರುವ ವೀಡಿಯೋ ಮೊದಲಾದವುಗಳು ತರಗತಿಗಳಿಗಿಂತಲೂ ರೋಚಕವಾಗಿರುವುದರಿಂದ ಹಲವರು ತರಗತಿಗಳಿಗೆ ತಿಲಾಂಜಲಿಯಿತ್ತು ಇಲ್ಲಿಯೇ ಕಾಲ ಕಳೆದುಬಿಡುತ್ತಾರೆ. ಅತ್ತ ತರಗತಿಯಲ್ಲಿ ಹಾಜರಿ ಕಡಿಮೆಯಾಗುತ್ತದೆ. ಪ್ರತಿ ಕಾಲೇಜಿನಲ್ಲಿ ಇಷ್ಟುಹಾಜರಿ ಇರಲೇಬೇಕು,ಇಲ್ಲದಿದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ ಎಂಬ ಕಟ್ಟಪ್ಪಣೆ ಇರುತ್ತದೆ. ಆದರೆ ಇದು ವಾಸ್ತವವಾಗಿ ವಿದ್ಯಾರ್ಥಿಗಳನ್ನು ತರಗತಿಗೆ ಸೆಳೆಯುವ ತಂತ್ರವೇ ಹೊರತು ನಿಜವಾಗಿ ಪರೀಕ್ಷೆಗೆ ಕೂರಿಸದೇ ಇರುವುದಿಲ್ಲ. ಅತ್ಯಂತ ಕಡಿಮೆ ಹಾಜರಿ ಇದ್ದರೂ ಕೊಂಚ ದಂಡ ಅಥವಾ ಪಾಲಕರೊಡನೆ ವಿಮರ್ಶಿಸಿದ ಬಳಿಕ ಪರೀಕ್ಷೆಗೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೂ ಹಲವರು ಕಾಲೇಜಿನ ಹೊರಗೆ ಖಾಸಗಿಯಾಗಿ ಪಾಠಗಳನ್ನು ಪಡೆದುಕೊಂಡಿರುವ ಕಾರಣ ಆ ತರಗತಿಗಳಿಗೆ ಹೋಗುವುದು ಅನಿವಾರ್ಯ ಎಂದು ಭಾವಿಸುವುದಿಲ್ಲ.

ಕಾಲೇಜು ಹುಡುಗರೆಲ್ಲಾ ರಾತ್ರಿಯಿಡೀ ಹೊರಗೇ ಇರುತ್ತಾರೆ. ಸಾಮಾನ್ಯವಾಗಿ ಬೆಳಿಗ್ಗೆ ಕೆಂಪಾದ ಕಣ್ಣು, ಕೆದರಿದ ಕೂದಲಿನೊಂದಿಗೆ ತರಗತಿ ಪ್ರವೇಶಿಸಿದ ಹುಡುಗರನ್ನು ಕಂಡ ಕೂಡಲೇ ಎಲ್ಲರೂ ಈತ ರಾತ್ರಿ ಇಡೀ ಹೊರಗೆಲ್ಲೋ ತಿರುಗಾಡಿ ಈಗ ಬಂದಿದ್ದಾನೆ ಎಂಬ ಅಭಿಪ್ರಾಯಕ್ಕೆ ಬಂದು ಬಿಡುತ್ತಾರೆ. ಅದರಲ್ಲೂ ರಾತ್ರಿ ಹೊರಗಿರುವುದು ಎಂದರೆ ಒಬ್ಬೊಬ್ಬರೂ ಒಂದೊಂದು ರೀತಿ ಅರ್ಥೈಸಿಕೊಳ್ಳುತ್ತಾರೆ. ಕೆಲವರು ಮದ್ಯ ಕುಡಿಯಲು ಹೋಗಿದ್ದನೆಂದೂ ತಮ್ಮ ಮನಸ್ಸಿಗೆ ತೋಚಿದ್ದಂತೆ ಆಡಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಈ ಆರೋಪಗಳು ಎಲ್ಲೋ ಒಂದೆರಡು ಹತೋಟಿ ತಪ್ಪಿದ ಹುಡುಗರಿಗೆ ಅನ್ವಯಿಸಬಹುದೇ ಹೊರತು ಎಲ್ಲರಿಗೂ ಅಲ್ಲ. ಗುಂಪಿನಲ್ಲಿ ರಾತ್ರಿ ಹೊರಹೋಗಿ ಸಂತೋಷವಾಗಿ ಕಾಲ ಕಳೆಯುವುದು ಎಲ್ಲೋ ವರ್ಷದಲ್ಲಿ ಒಂದೆರಡು ದಿನಗಳು ಮಾತ್ರ. ಅದರಲ್ಲೂ ಇಂತಹ ಕೂಟಗಳಿಗೆ ಹಿರಿಯರ ಅಪ್ಪಣೆ ಅವಶ್ಯವಾದುದರಿಂದ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೂ ಬೇರಾವುದೋ ಸಕಾರಣಕ್ಕೆ ರಾತ್ರಿ ನಿದ್ದೆಗೆಟ್ಟು ಬೆಳಿಗ್ಗೆ ತರಗತಿಗೆ ಹೋಗುವ ವಿದ್ಯಾರ್ಥಿಗೂ ಅನಿವಾರ್ಯವಾಗಿ ಇಂತಹ ಸುಳ್ಳು ಅಪವಾದಗಳನ್ನು ಕೇಳಬೇಕಾಗಿ ಬರುತ್ತದೆ.

ತಂಗಂ.ಜಿ ಗೋಪಿನಾಥಂ

ಮಾನಸ ಗಂಗೋತ್ರಿ, ಮೈಸೂರು.

click me!