ರಾಘು ಕಾಕರಮಠ
ಅಂಕೋಲಾ (ಏ.13) : ಇಲ್ಲೊಂದು ವಿಚಿತ್ರ, ಅಪರೂಪದ ವಿವಾಹ ಸಮಾರಂಭ ನಡೆಯಿತು. ಇಂದಿನ ಆಧುನಿಕ, ಗಡಿಬಿಡಿಯ ಯುಗದಲ್ಲೂ ಮೂಲಸೌಲಭ್ಯವಿಲ್ಲದೇ ವಧು ವರರಿಬ್ಬರೂ ಹಲವಾರು ಕಿ.ಮೀ. ದೂರ ದಟ್ಟಾರಣ್ಯ ನಡೆದುಕೊಂಡೇ ಬಂದು ವಿವಾಹವಾದ ಸಾಹಸಗಾಥೆ ಇದು. ವಧು ಸುಮಾರು 10 ಕಿ.ಮೀ. ನಡೆದು ಬಂದರೆ, ವರ 22 ಕಿ.ಮೀ. ದೂರ ಕಾಲ್ನಡಿಗೆ ಮಾಡಿ ಪಾಣಿಗ್ರಹಣ ಮಾಡಿಕೊಳ್ಳಬೇಕಾಯಿತು.
undefined
ಹೌದು ಇದು ನಡೆದಿದ್ದು ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸವೆಗುಳಿಯಲ್ಲಿ. ಅರ್ಧ ಕಿ.ಮೀ. ಸಹ ನಡೆಯಲು ಒಲ್ಲದ, ವಾಹನಗಳನ್ನೇ ಆಶ್ರಯಿಸುವ ಟ್ರೆಂಡ್ ಹೆಚ್ಚುತ್ತಿರುವ ಸಂದರ್ಭದಲ್ಲೇ ವಧು ವರರು ಸೇರಿ ಎಲ್ಲರೂ ಹತ್ತಾರು ಕಿ.ಮೀ. ನಡೆದು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಯಿತು. ಇನ್ನು ಮದುವೆ ಮಾಡಿಸಿದ ಪುರೋಹಿತರೂ ಸಹ 10 ಕಿ.ಮೀ. ಕಾಲ್ನಡಿಗೆಯಲ್ಲಿ ಬೆವರು ಹರಿಸುತ್ತಲೇ ಬಂದು ಮದುವೆ ಮಾಡಿ ಹರಸಿ ತೆರಳಿದರು.
ಭಾವನ ಜೊತೆ ಸಂಬಂಧ ಇಟ್ಕೊಂಡಿದ್ದ ವಧು, ಮಂಟಪದಲ್ಲೇ ವರ ಮಾಡಿದ್ದೇನು ನೋಡಿ..
ನಡೆದದ್ದೇನು?:
ಸಿಕಳಿ ಗ್ರಾಮದ ಸುಮಿತ್ರಾ ರಾಮ ಗೌಡ(Sumitra ramagowda) ಹಾಗೂ ಸವೆಗುಳಿ ಮೂಲದ ಮಹಾಬಲೇಶ್ವರ ಗೌಡ(Mahabaleshwargowda) ಅವರೊಂದಿಗೆ ಏ. 10 ರಂದು ವಿವಾಹ ನಿಶ್ಚಯವಾಗಿತ್ತು. ಮಹಾಬಲೇಶ್ವರ ಗೌಡ ಕುಟುಂಬವು ಜೀವನಕ್ಕಾಗಿ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಕೆಂದಗಿಯಲ್ಲಿ ತೋಟದ ಕೆಲಸ ಮಾಡಿಕೊಂಡು ಅಲ್ಲೆಯೇ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಮದುವೆಯನ್ನು ಮದುಮಗನ ಮೂಲಮನೆ ಸವೆಗುಳಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ, ಕೆಂದಗಿಯಿಂದ 22 ಕಿಮೀ ಅಂತರದಲ್ಲಿರುವ ಸವೆಗುಳಿ ಗ್ರಾಮಕ್ಕೆ ತೆರಳಲು ರಸ್ತೆಯೇ ಇರಲಿಲ್ಲ. ಕಾಲುದಾರಿಯ ದುರ್ಗಮ ಕಲ್ಲು- ಮುಳ್ಳಿನ ರಸ್ತೆಯಲ್ಲೆ ಸಾಗಬೇಕಾದ ಅನಿವಾರ್ಯತೆಯಿತ್ತು. ಮದುವೆಯ ಹಿಂದಿನ ದಿನವೇ ಏ. 9 ಕಾಲ್ನಡಿಗೆಯಲ್ಲೆ 22 ಕಿಮೀ ಅಂತರವನ್ನು 6 ಗಂಟೆಯ ಅವಧಿಯಲ್ಲಿ ನಡೆದು ಬಂದು ಮದುವೆ ಮನೆಗೆ ಸೇರಿಕೊಂಡು ಮದುವೆಗೆ ಸಿದ್ಧರಾದರು.
ಮಧುವಣಗಿತ್ತಿಯ ನಡಿಗೆ:
ಇನ್ನು ಸಿಕಳಿ ಗ್ರಾಮದಲ್ಲಿರುವ ವಧು ಸುಮಿತ್ರಾ ಗೌಡ ಸವೆಗುಳಿಯಲ್ಲಿರುವ ಮದುವೆಯ ಮಂಟಪಕ್ಕೆ ಬರಬೇಕೆಂದರೆ 9.5 ಕಿಮೀ ನಡೆಯಬೇಕಿತ್ತು. ಏ. 10ರ ಸೋಮವಾರ ಬೆಳಗ್ಗೆ 6 ಗಂಟೆಗೆ ಅರಿಶಿಣ ಶಾಸ್ತ್ರ ಮುಗಿಸಿಕೊಂಡು ಕಾಲ್ನಡಿಗೆಯಲ್ಲೆ ಹೊರಟರು. ಮಧ್ಯಾಹ್ನ 11 ಗಂಟೆಗೆ ಮದುವೆ ಮಂಟಪಕ್ಕೆ ಸೇರಿಕೊಂಡರು.
ಸಾಂಪ್ರದಾಯಿಕ ಮದುವೆ:
ಕರಿ ಒಕ್ಕಲು ಸಮಾಜದ ಇವರು ತಮ್ಮದೇ ಆದ ಉಡುಗೆ, ತೊಡುಗೆ, ಸಂಸ್ಕೃತಿ ಪರಂಪರೆಯ ನಿನಾದದೊಂದಿಗೆ ಮದುವೆ ಮನೆ ತುಂಬಿಕೊಂಡಿತ್ತು. ಅರೆಯುವ ಕಲ್ಲಿನಲ್ಲಿ ಊಟ ಸಿದ್ಧಪಡಿಸಿ ಊಟದಲ್ಲೂ ಸಾಂಪ್ರದಾಯಿಕತೆ ಮೆರೆದದ್ದು ವಿಶೇಷವಾಗಿತ್ತು.
ಪುರೋಹಿತರ ಸಂಕಷ್ಠ:
ಈ ಮದುವೆಯ ಪ್ರಸಂಗದಲ್ಲಿ ಕೇವಲ ವಧು-ವರರ ಕುಟುಂಬದವರಷ್ಟೇ ಕಾಲ್ನಡಿಗೆಯ ಸಾಹಸಕ್ಕೆ ಒಳಗಾಗಿರಲಿಲ್ಲ. ಮದುವೆಯ ಪೌರೋಹಿತ್ಯ ವಹಿಸಿಕೊಳ್ಳಬೇಕಾದ ಪುರೋಹಿತ ರಾಮಚಂದ್ರ ಸೀತಾರಾಮ ಭಟ್ಟಸಹ ಮಲವಳ್ಳಿಯಿಂದ 30 ಕಿಮೀ ದೂರದಿಂದ ಬಂದು ಮದುವೆ ಶಾಸ್ತ್ರವನ್ನು ಮುಗಿಸಿದರು. 20 ಕಿಮೀ ಯಲ್ಲಾಪುರದ ಮಾರ್ಗವಾಗಿ ಬೈಕ್‌ನಲ್ಲಿ ಬಂದರೆ ಇನ್ನುಳಿದ 10 ಕಿಮೀ ಕಾಲ್ನಡಿಗೆಯಲ್ಲೆ ಬೆವರಿಳಿಸುತ್ತ ಬಂದು ಪೌರೋಹಿತರು ಸಂಕಷ್ಟಅನುಭವಿಸಿದರು.
ಮತ್ತೆ 22 ಕಿಮೀ ನಡಿಗೆ:
ಏ. 10 ಸೋಮವಾರ ಮದುವೆ ಏನೋ ಮುಗಿಯತು. ರಾತ್ರಿ ಸವೆಗುಳಿಯ ವರನ ಮೂಲ ಮನೆಯಲ್ಲಿ ತಂಗಿದ್ದರು. ಏ. 11ರ ಮಂಗಳವಾರದಂದು ಸವೆಗುಳಿಯಿಂದ ಮತ್ತೆ ತನ್ನ ಪತ್ನಿಯನ್ನು ಕರೆದುಕೊಂಡು ಕೆಂದಗಿಗೆ 22 ಕಿಮೀ ನಡೆದುಕೊಂಡು ಬಂದೇ ಮನೆ ಸೇರಿಕೊಂಡರು.
Relationship Tips: ಪತಿ ಹಿಂಗೆಲ್ಲ ಮಾಡಿದ್ರೆ ಪ್ರೀತಿಸೋದು ಹೆಂಗೆ?
ಈ ಒಂದು ಮದುವೆಯ ಸಮಾರಂಭದಲ್ಲಿ ಅರಣ್ಯ ಇಲಾಖೆಯ ಕುಮಾರೇಶ ಹಿರೇಗೌಡ್ರ, ಯಮನಪ್ಪ ಬಿ.ಎಚ್, ಬೀರಾ ಗೌಡ, ಗುರುದಾಸ ನಾಯ್ಕ, ಅಶೋಕ ಗೌಡ ಹಾಗೂ ಜಾನಪದ ಕಲಾವಿದ ಶಂಕರ ಗೌಡ ಅಡ್ಲೂರು ಪಾಲ್ಗೊಂಡು ಶುಭ ಹಾರೈಸಿದರು.
ಪ್ರೇತದ ಮೇಲೆ ಪ್ರೀತಿ ಹುಟ್ಟಿ ಮದ್ವೆಯಾದ್ಲು, ಈಗ ಫಜೀತಿ, ದೆವ್ವ ಬಿಡಿಸಿ ಅಂತಿದ್ದಾಳೆ!
ಈ ಮದುವೆಯು ಸಿನಿಮಾ ಕಥೆಯನ್ನು ಮೀರಿಸುವಂತೆ ನಡೆದಿತ್ತು. ಮೂಲಭೂತ ಸೌಕರ್ಯದ ಕೊರತೆಯಿಂದ ಇಲ್ಲಿನ ಜನತೆ ನಿತ್ಯ ಸಂಕಷ್ಟಪಡುವಂತಾಗಿದೆ. ಸರ್ಕಾರ ಈ ನಾಗರಿಕರ ನೆರವಿಗೆ ಬರುವಂತಾಗಿದೆ.
- ಶಂಕರ ಗೌಡ ಅಡ್ಲೂರು.