ನಾವೆಲ್ಲ ಈಗ ತಂತ್ರಜ್ಞಾನಕ್ಕೆ ಎಷ್ಟು ಅಡಿಯಾಳಾಗಿದ್ದೇವೆಂದರೆ, ಅದರ ಹೊರತು ಮುಂಚೆ ಒಂದು ಜೀವನವಿತ್ತು ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಟೆಕ್ನಾಲಜಿ ಅಡಿಕ್ಷನ್ ಹಲವರಲ್ಲಿ ಗಮನದ ಕೊರತೆ, ತಾಳ್ಮೆಯ ಕೊರತೆ, ಮುಖತಃ ಭೇಟಿ ತಪ್ಪಿಸಿಕೊಳ್ಳುವುದು, ಚೂರು ಟೆಕ್ನಾಲಜಿಯಿಂದ ಹೊರಗುಳಿದರೆ ಏಕಾಂಗಿಯಾಗುವ ಭಯ ಮುಂತಾದ ಸಮಸ್ಯೆಗಳನ್ನು ತಂದೊಡ್ಡಿದೆ. ಇವೆಲ್ಲವೂ ಟೆಕ್ನಾಲಜಿ ಆ್ಯಂಕ್ಸೈಟಿಯ ಲಕ್ಷಣಗಳು...
ಈಗ ತಂತ್ರಜ್ಞಾನ ನಮ್ಮ ಬದುಕಲ್ಲಿ ಅದೆಷ್ಟು ಹಾಸುಹೊಕ್ಕಾಗಿದೆಯೆಂದರೆ, ನಮ್ಮ ಸಂಪೂರ್ಣ ಪ್ರಪಂಚವನ್ನೇ ಮಾಹಿತಿ, ಮನರಂಜನೆ ಇತ್ಯಾದಿಯಾಗಿ ವಿಂಗಡಿಸಿ ಪುಟ್ಟ ಪುಟ್ಟ ಸ್ಕ್ರೀನ್‌ನೊಳಗೆ ತುಂಬಿಬಿಡಬಹುದು. ನಮ್ಮದೊಂದೇ ಏಕೆ, ಇಡೀ ಜಗತ್ತನ್ನೇ ಬೆಂಕಿಪೆಟ್ಟಿಗೆಯೊಳಗೆ ತುಂಬಿಟ್ಟಂತೆ ಫೋನ್‌ನೊಳಗೆ ತುಂಬಿಡಬಹುದು. ಮೊಬೈಲ್ ಫೋನ್‌ನೊಳಗೆ ಮುಳುಗಿ ಹೋದ ಮುಖಗಳೇ ಇಂದಿನ ಯುಗದ ಜನರ ಹಾಲ್ಮಾರ್ಕ್. ಇಂಥ ಈ ಟೆಕ್ನಾಲಜಿ ಎಷ್ಟು ಅನುಕೂಲವೋ, ಅಷ್ಟೇ ಅನನುಕೂಲವನ್ನೂ ಹೊತ್ತು ತರುತ್ತದೆ. ಸೈಕಾಲಜಿ ಹಿನ್ನೆಲೆಯಲ್ಲಿ ನೋಡಿದರೆ ಟೆಕ್ನಾಲಜಿಯು ಹಲವು ಮನೋರೋಗಗಳಿಗೂ ಕಾರಣವಾಗುತ್ತಿದೆ. ಅಷ್ಟೇ ಅಲ್ಲ, ದೈನಂದಿನ ಬದುಕಿಗೆ ಅಡ್ಡಿಯಾಗುವ ಸಣ್ಣಪುಟ್ಟ ಸಮಸ್ಯೆಗಳನ್ನೂ ಹೊತ್ತು ತರುತ್ತಿದೆ. ಅದರಲ್ಲೊಂದು ಟೆಕ್ನಾಲಜಿ ಆ್ಯಂಕ್ಸೈಟಿ.
ಏನಿದು ಟೆಕ್ನಾಲಜಿ ಆ್ಯಂಕ್ಸೈಟಿ?
ವೇಗವಾಗಿ ಬದಲಾಗುತ್ತಿರುವ ಟೆಕ್ನಾಲಜಿ ಮನುಷ್ಯರ ಮೇಲೆ ಏನೇನು ಪರಿಣಾಮ ಬೀರಿದೆ ಎಂಬುದರ ಕುರಿತು ಇತ್ತೀಚಿನ ಅಧ್ಯಯನವೊಂದು ಬೆಳಕು ಚೆಲ್ಲಿದೆ. ಅವುಗಳಲ್ಲಿ ಕೆಲವೆಂದರೆ,
undefined
- ಏಕಾಗ್ರತೆ ಕೊರತೆ
ಟೆಕ್ನಾಲಜಿಯು ಮಲ್ಟಿಟಾಸ್ಕಿಂಗ್ ಯುಗಕ್ಕೆ ಅಡಿಪಾಯ ಹಾಕಿದೆ. ಒಂದೇ ಸಮಯದಲ್ಲಿ ಮೂರ್ನಾಲ್ಕು ಕಡೆ ಗಮನ ಹರಿಸುವ ಈ ವೈಪರೀತ್ಯವು ಆತಂಕ, ಖಿನ್ನತೆ ಹಾಗೂ ಹೆಚ್ಚು ಸಮಯ ಯಾವುದರತ್ತಲೂ ಗಮನ ಹರಿಸಲಾಗದ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
- ತಾಳ್ಮೆಯ ಕೊರತೆ
ಎಲ್ಲ ಫಲಿತಾಂಶವೂ ತಕ್ಷಣವೇ ಬಂದು ನಮಗೆ ಅಭ್ಯಾಸ ಮಾಡಿಸಿಬಿಟ್ಟಿದೆ. ಇಂಟರ್ನೆಟ್ ವೇಗದಷ್ಟೇ ವೇಗವಾಗಿ ಎಲ್ಲವೂ ಆಗಬೇಕೆಂದು ಮನಸ್ಸು ಬಯಸುತ್ತದೆ. ಪರಿಣಾಮವಾಗಿ, ನಮ್ಮಲ್ಲಿ ತಾಳ್ಮೆಯ ಗುಣವೇ ಮಾಯವಾಗುತ್ತಿದೆ. ಇದರಿಂದ ಯಾವುದಕ್ಕಾದರೂ ಕಾಯಬೇಕೆಂದರೆ ಕೋಪ, ಕಿರಿಕಿರಿ ಶುರುವಾಗುತ್ತದೆ.
- ಮುಖತಃ ಭೇಟಿ ಬೇಡ
ಟೆಕ್ನಾಲಜಿಯೇ ಸಂವಹನದ ಪ್ರಮುಖ ಸಾಧನವಾಗಿದ್ದು, ಯಾರಿಗೆ ಏನು ಹೇಳಬೇಕೆಂದರೂ ಮೆಸೇಜ್ ಮಾಡುವ ಮಾರ್ಗವನ್ನೇ ಆಯ್ದುಕೊಳ್ಳುತ್ತೇವೆ. ಮುಖತಃ ಭೇಟಿ, ಸಮಾಜೀಕರಣ ಯಾವುದೂ ಇಲ್ಲವಾಗಿದೆ.
ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
- ಎಲ್ಲ ತಿಳಿದಿರುವ ಒತ್ತಡ
ಒಂದರ್ಧ ಗಂಟೆ ಫೇಸ್ಬುಕ್‌ನಿಂದ, ಟ್ವಿಟ್ಟರ್, ನ್ಯೂಸ್ ವೆಬ್‌ಗಳಿಂದ ದೂರ ಉಳಿದರೆ ಏನನ್ನೋ ಕಳೆದುಕೊಂಡ ಭಾವ, ಸುದ್ದಿ ನಮಗೆ ತಿಳಿಯದೆ ಹೋಗುವ ಆತಂಕ, ಮಿಸ್ ಮಾಡಿಕೊಳ್ಳುವ ಭಯ, ಸಾಮಾಜಿಕವಾಗಿ ದಡ್ಡರಾಗುವ, ಏಕಾಂಗಿಯಾಗುವ ಆತಂಕ ಕಾಡತೊಡಗುತ್ತದೆ.
ಇವೆಲ್ಲವೂ ಟೆಕ್ನಾಲಜಿ ಆ್ಯಂಕ್ಸೈಟಿಯ ಲಕ್ಷಣಗಳು. ನೀವೂ ಇದರಿಂದ ಬಳಲುತ್ತಿದ್ದೀರಾದರೆ ನಿಭಾಯಿಸುವುದು ಹೇಗೆ ಹೇಳ್ತೀವಿ ಕೇಳಿ,
1. ರಾತ್ರಿ ಹೊತ್ತಿನಲ್ಲಿ ನಿಮ್ಮ ಫೋನ್ ಸ್ವಿಚ್ ಆಫ್ ಮಾಡಿ.
ಬಹಳಷ್ಟು ಜನರು ತಮ್ಮ ಫೋನ್‌ಗೆ ಅಡಿಕ್ಟ್ ಆಗಿರುವುದನ್ನು ಸಂಶೋಧನೆಗಳು ಕಂಡುಕೊಂಡಿವೆ. ಟಾಯ್ಲೆಟ್ ಬಳಸುವಷ್ಟು ಹೊತ್ತು ಫೋನ್‌ನಿಂದ ದೂರವಿದ್ದರೂ ಅವರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ, ನಿದ್ರಿಸಿದ ಮೇಲೂ ಮಧ್ಯೆ ಮಧ್ಯೆ ಎಚ್ಚರವಾದಾಗ ಫೋನ್ ಚೆಕ್ ಮಾಡುವುದು ಒಂದು ಚಟವಾಗಿದೆ. ಇನ್ನೂ ಕೆಲವರು ಫೋನ್ ಚೆಕ್ ಮಾಡುವ ಚಟಕ್ಕೇ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಫೋನ್‌ಗೆ ಅಡಿಕ್ಟ್ ಆಗಿರುವ ಹಲವರಲ್ಲಿ ಆತ್ಮವಿಶ್ವಾಸದ ಕೊರತೆ ಹಾಗೂ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಹಿಂದೆ ಬೀಳುವ ಅಧೈರ್ಯ ಕಂಡುಬರುತ್ತಿದೆ. ಇದಕ್ಕಾಗಿಯೇ ಅವರು ಫೋನ್ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಹಟಕ್ಕೆ ಬೀಳುತ್ತಾರೆ. ಹೀಗಾಗಿ, ಈ ಎಲ್ಲ ಸಮಸ್ಯೆಗಳನ್ನು ಆದಷ್ಟು ಕಡಿಮೆ ಮಾಡಲು ಕನಿಷ್ಠ ಪಕ್ಷ ರಾತ್ರಿ 10ರಿಂದ ಬೆಳಗ್ಗೆ 8 ಗಂಟೆವರೆಗೆ ಪೋನ್ ಸ್ವಿಚ್ ಆಫ್ ಮಾಡಿಡುವುದು ಅಭ್ಯಾಸ ಮಾಡಿಕೊಳ್ಳಿ. ಹಗಲಿನಲ್ಲೂ ಕೆಲಸದ ವೇಳೆ ಫೋನ್ ಸ್ವಿಚ್ ಆಫ್ ಮಾಡಿಟ್ಟಿರಾದರೆ ಅದು ನಿಮ್ಮ ಬದ್ಧತೆಯೊಂದಿಗೆ ಮನೋಬಲವನ್ನೂ ಸಾಬೀತುಪಡಿಸುತ್ತದೆ.
2. ಟೆಕ್ಸ್ಟಿಂಗ್ ಬದಲು ಜನರನ್ನು ನೇರ ಭೇಟಿ ಮಾಡಿ.
ಸೋಷ್ಯಲ್ ಮೀಡಿಯಾಗಳಲ್ಲಿ ಮಾತನಾಡುತ್ತಾ, ಕಾಮೆಂಟ್‌ಗಳಿಗೆ ಸಂಭ್ರಮಿಸುತ್ತಾ ಕುಳಿತರೆ ರಿಯಲ್ ಲೈಫ್‌ನಲ್ಲಿ ನಿಮಗೆ ಗೆಳೆಯರಾಗುವುದು ಹೋಗಲಿ, ನೆಂಟರಿಷ್ಟರ ಪರಿಚಯವೂ ಇರುವುದಿಲ್ಲ. ಇದು ಸೋಷ್ಯಲ್ ಆ್ಯಂಕ್ಸೈಟಿಗೆ ಕಾರಣವಾಗಿ ಸದಾ ಯಾರಿಗಾದರೂ ಟೆಕ್ಸ್ಟಿಂಗ್ ಮಾಡುತ್ತಾ ಇರಲೇಬೇಕೆನಿಸತೊಡಗುತ್ತದೆ. ಇದರ ಬದಲಿಗೆ ಫೋನ್ ದೂರವಿಟ್ಟು ಸಾಧ್ಯವಾದಷ್ಟು ಜನರನ್ನು ಮುಖತಃ ಭೇಟಿಯಾಗಿ. ನಿಧಾನವಾಗಿ ನಿಮ್ಮ ಬಳಗವೂ ದೊಡ್ಡದಾಗುತ್ತದೆ, ಮನಸ್ಸೂ ಪ್ರಶಾಂತವಾಗಿರುತ್ತದೆ.
ಲೈಫ್‌ಸ್ಟೈಲ್ ಸುದ್ದಿಗಳಿವೆ ಓದಿ...
3. ಹೋಲಿಕೆ ಮಾಡಿಕೊಳ್ಳುವ ಅಭ್ಯಾಸ ಬಿಡಿ
ಸೋಷ್ಯಲ್ ಮೀಡಿಯಾ ತಂದೊಡ್ಡಿರುವ ಬಹು ದೊಡ್ಡ ಸಮಸ್ಯೆಯೆಂದರೆ ಪ್ರತಿಯೊಬ್ಬರೂ ತಮ್ಮ ಬದುಕನ್ನು ಮತ್ತೊಬ್ಬರ ಬದುಕಿಗೆ ಕಂಪೇರ್ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದರಿಂದ ಆತ್ಮವಿಶ್ವಾಸ ಕುಗ್ಗುತ್ತದೆ, ಜೊತೆಗೆ ಖಿನ್ನತೆ, ಆತಂಕ ಎಲ್ಲವೂ ಸಾಲಿನಲ್ಲಿ ಹಿಂಬಾಲಿಸುತ್ತವೆ. ನಾವು ಹಾಕಿದ ಫೋಟೋ, ನಮ್ಮ ಪೋಸ್ಟ್‌ಗೆ ಹೆಚ್ಚು ಲೈಕ್ ಗಳಿಸಲಿಲ್ಲವೆಂದರೆ ಅದಕ್ಕೆ ಬೆಲೆಯೇ ಇಲ್ಲವೆನಿಸುತ್ತದೆ. ಸೋಷ್ಯಲ್ ಮೀಡಿಯಾ ಪೋಸ್ಟ್‌ಗಳನ್ನು ನೋಡಿ ಯಾರನ್ನೂ ಜಡ್ಜ್ ಮಾಡಲಾಗುವುದಿಲ್ಲ. ಖುಷಿಯ ಕ್ಷಣಗಳಷ್ಟೇ ಅಲ್ಲಿ ಪೋಸ್ಟ್ ಆಗುತ್ತವೆ. ಅಲ್ಲದೆ, ಯಾರೂ ಇಬ್ಬರು ಒಂದೇ ತರ ಇರುವುದಿಲ್ಲ. ಹೀಗಾಗಿ, ಹೋಲಿಕೆ ಮಾಡುವ ಅಭ್ಯಾಸದಿಂದ ಹೊರಬನ್ನಿ. ಬೆಟರ್ ಎಂದರೆ ಸೋಷ್ಯಲ್ ಮೀಡಿಯಾದಿಂದಲೇ ಹೊರಬನ್ನಿ.
4. ನೋಟಿಫಿಕೇಶನ್ಸ್ ಟರ್ನ್ ಆಫ್ ಮಾಡಿ
ಪದೇ ಪದೇ ಶಬ್ದ ಮಾಡುವ ನೋಟಿಫಿಕೇಶನ್‌ಗಳು ಫೋನನ್ನು ಕೆಳಗಿಟ್ಟು ಆರಾಮಾಗಿರಲು ಬಿಡುವುದಿಲ್ಲ. ಮತ್ತೆ ಮತ್ತೆ ಫೋನ್ ಚೆಕ್ ಮಾಡುವ ಚಟಕ್ಕೆ ತಂದು ನಿಲ್ಲಿಸುತ್ತವೆ. ಇದು ಒತ್ತಡ, ಕಡಿಮೆ ಉತ್ಪಾದಕತೆ, ಏಕಾಗ್ರತೆ ಕೊರತೆಗೆ ಕಾರಣವಾಗುತ್ತದೆ. ಹೀಗಾಗಿ, ನೋಟಿಫಿಕೇಶನ್ಸ್ ಟರ್ನ್ ಆಫ್ ಮಾಡಿ.