ಕೆಲವೊಮ್ಮೆ ಸೆಲೆಬ್ರಿಟಿಗಳು ತನಗೆ ಡಿಪ್ರೆಶನ್ ಇದೆ, ಉದ್ವೇಗದ ಸಮಸ್ಯೆ ಇದೆ ಅಂದಾಗ, ಅರೆ, ಈ ಪ್ರಾಬ್ಲೆಮ್ ನಮಗೂ ಇದೆಯಲ್ಲ ಅಂತನಿಸುತ್ತೆ. ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲವಾದರೂ ಕಿರಿಕಿರಿ ಇದ್ದದ್ದೇ. ಅಂಥ ಪ್ರಾಬ್ಲೆಮ್‌ಗಳ ಬಗ್ಗೆ, ಸಣ್ಣಪುಟ್ಟ ಪರಿಹಾರದ ಬಗ್ಗೆ ವಿವರ ಇಲ್ಲಿದೆ...
ನಿತ್ತಿಲೆ
ಸೈಕಾಲಜಿ ಕ್ಲಾಸ್‌ನಲ್ಲಿ ಪ್ರೊಫೆಸರ್ ಒಂದೊಂದೇ ಮಾನಸಿಕ ರೋಗಗಳ ಲಕ್ಷಣ ವಿವರಿಸ್ತಾ ಇದ್ದರೆ, ಅರೆ, ಈ ಸಮಸ್ಯೆ ನಂಗೂ ಇದೆಯಲ್ಲಾ ಅಂತ ಅನಿಸೋದು. ಮನಃ ಶಾಸ್ತ್ರದಲ್ಲಿ, ‘ಅಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್’ ಅರ್ಥಾತ್ ಓಸಿಡಿ ಅಂತೊಂದು ಸಮಸ್ಯೆ ಬರುತ್ತೆ. ಈ ಸಮಸ್ಯೆ ಇರುವವರಿಗೆ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡಬೇಕು ಅನಿಸುತ್ತೆ. ನೆಲ ಎಷ್ಟೇ ಚೆನ್ನಾಗಿ ಒರೆಸಿದರೂ ಕ್ಲೀನ್ ಆಗಿಲ್ಲ ಅಂತನಿಸಿ ಮತ್ತೆ ಮತ್ತೆ ಒರೆಸೋದು, ಮನೆ ಲಾಕ್ ಮಾಡಿದ ಮೇಲೂ ಸರಿಯಾಗಿ ಲಾಕ್ ಮಾಡಿದ್ದೀನಾ ಇಲ್ವಾ ಅಂತನಿಸಿ ಮತ್ತೆ ಮತ್ತೆ ನೋಡೋದು..ಈ ಥರ. ಇದರ ಜೊತೆಗೆ ವಿನಾಕಾರಣ ಉದ್ವೇಗ, ಭಯನೂ ಇರುತ್ತೆ. ನಮ್ ಪ್ರೊಫೆಸರ್ ಈ ಸಿಮ್‌ಟಮ್‌ಗಳನ್ನೆಲ್ಲ ಉದಾಹರಣೆಗಳ ಸಮೇತ ವಿವರಿಸುವಾಗ ಅರೆ, ನಾನೂ ಕೆಲವೊಮ್ಮೆ ಹೀಗೆ ಮಾಡ್ತೀನಲ್ಲಾ ಅಂತ ಕ್ಲಾಸ್‌ನಲ್ಲಿದ್ದ ಸುಮಾರು ಜನಕ್ಕೆ ಅನಿಸೋದು. ಸಡನ್ನಾಗಿ ಅಮ್ಮನ ನೆನಪಾಗಿ ಅವಳಿಗೂ ಸಮಸ್ಯೆ ಇದೆ ಅನಿಸೋದು. ಅಮ್ಮನದೊಂದು ಕಾಮನ್ ಸಮಸ್ಯೆ ಅಂದರೆ ಮನೆಯಿಂದ ಸ್ವಲ್ಪ ದೂರ ಬಂದ ಮೇಲೆ ಗ್ಯಾಸ್ ಆಫ್ ಮಾಡಿದ್ದೀನಾ ಇಲ್ವಾ ಅಂತ ಡೌಟು ಬರೋದು. ಮತ್ತೆ ಮನೆಗೆ ಬಂದು ನೋಡಿ ಎಲ್ಲ ಸರಿಯಾಗಿದೆ ಅನಿಸಿದ ಮೇಲೆಯೇ ಸಮಾಧಾನ.
ಒಮ್ಮೆ ಈ ಬಗ್ಗೆ ಫ್ರೊಫೆಸರ್‌ಅನ್ನೇ ಕೇಳಿದರೆ ಅವರು ನಕ್ಕರು. ಆಮೇಲೆ ವಿವರಿಸಿದರು. ‘ನೋಡೂ, ಒಂದಿಲ್ಲೊಂದು ಮಾನಸಿಕ ಸಮಸ್ಯೆ ಪ್ರತಿಯೊಬ್ಬನಿಗೂ ಇರುತ್ತೆ. ಅದು ಸಹಜ. ಹೆಚ್ಚಾದರೆ ಮಾತ್ರ ಕಷ್ಟ.’ ಮೊನ್ನೆ ಆಲಿಯಾ ಭಟ್ ತನಗೆ ಉದ್ವೇಗದ ಸಮಸ್ಯೆ ಇದೆ ಅಂದಾಗ ಇದೆಲ್ಲ ನೆನಪಾಯ್ತು. ಅದಕ್ಕೂ ಮೊದಲು ದೀಪಿಕಾ ತನಗೆ ಡಿಪ್ರೆಶನ್ ಇದೆ ಅಂದಿದ್ದರು. ‘ಇವ್ರಿಗೆಲ್ಲ ನಿಜವಾದ ಡಿಪ್ರೆಶನ್ ಬಗ್ಗೆ ಗೊತ್ತಿಲ್ಲ. ತಮಗೆ ತಾವೇ ಏನೋ ಅಂದುಕೊಂಡು ಮೀಡಿಯಾ ಮುಂದೆ ಹೇಳ್ತಾರೆ. ಸೆಲೆಬ್ರಿಟಿಗಳಲ್ವಾ, ಅವರ ಮಾತು ದೊಡ್ಡ ಸುದ್ದಿಯಾಗುತ್ತೆ.’ ಅಂತ ಹಿರಿಯ ಮನೋ ವಿಜ್ಞಾನಿಯೊಬ್ಬರು ಕಿರಿಕಿರಿಯಿಂದ ಹೇಳಿದ್ದರು.
ಅಷ್ಟಕ್ಕೂ ಸಾಮಾನ್ಯರನ್ನೂ ಕಾಡುವ ಕೆಲವು ಮಾನಸಿಕ ಸಮಸ್ಯೆಗಳಿವೆ. ಅವು ನೆಗಡಿಯಷ್ಟೇ ಕಿರಿಕಿರಿ ತರಿಸುತ್ತವೆ. ಆ ಕಡೆ ಜ್ವರದ ಲೆವೆಲ್‌ವರೆಗೂ ಹೋಗಲ್ಲ, ಈ ಕಡೆ ವಾಸಿನೂ ಆಗಲ್ಲ. ಪದೇ ಪದೇ ಸತಾಯಿಸೋ ಈ ಸಣ್ಣ ಪುಟ್ಟ ಸಮಸ್ಯೆಗಳಿಂದಾಗುವ ಕಿರಿಕಿರಿಯೂ ಸಣ್ಣದಲ್ಲ.
ಕೆಲಸಕ್ಕೆ ಹೋಗೋ ಅಮ್ಮನ ಮಕ್ಕಳು ಸ್ಟ್ರಾಂಗು ಗುರು!
ಫೋಬಿಯಾಗಳು
ಇದೊಂಥರ ವಿಚಿತ್ರ. ಕಾರಣವೇ ಇಲ್ಲದೇ ಕೆಲವೊಂದು ನಿರ್ದಿಷ್ಟ ಸಂದರ್ಭದಲ್ಲಿ ಭಯವಾಗೋದು. ಇದನ್ನು ಆ್ಯಂಗ್ಸೈಟಿ ಡಿಸಾರ್ಡರ್ ಅರ್ಥಾತ್ ಉದ್ವೇಗದ ಸಮಸ್ಯೆಗಳಲ್ಲೊಂದು ಅಂತ ಗುರುತಿಸುತ್ತಾರೆ. ಎತ್ತರದ ಜಾಗಕ್ಕೆ ಹೋದರೆ ಭಯ, ತಲೆ ಸುತ್ತು, ಆಳದ ನೀರು ಕಂಡಾಗ, ಗುಡುಗು, ಮಿಂಚು ಬಂದಾಗ, ಒಬ್ಬರೇ ಇದ್ದಾಗ, ರಕ್ತ ಕಂಡಾಗ, ಜಿರಲೆ, ಹಲ್ಲಿ, ಹಾವು ಇತ್ಯಾದಿ ಕಂಡಾಗ ವಿಪರೀತ ಭಯವಾಗೋದು. ಇದರಲ್ಲಿ ಆಧುನಿಕ ಕಾಲದ ನಾನಾ ಫೋಬಿಯಾಗಳೂ ಸೇರಿಕೊಂಡಿವೆ. ಕೆಲವರಿಗೆ ಕೆಲವೊಂದು ಮೊಬೈಲ್ ರಿಂಗ್ ಟೋನ್ ಕೇಳಿದರೂ ಭಯವಾಗುತ್ತೆ. ಬೆವರುಕ್ಕಿ ಬರುತ್ತೆ, ಎದೆನೋವು, ಚುಚ್ಚಿದಂಥಾ ಅನುಭವ ಇತ್ಯಾದಿಗಳಾಗಬಹುದು. ಅಂತಹ ಸಂದರ್ಭಗಳಿಂದ ಪ್ರಜ್ಞಾಪೂರ್ವಕವಾಗಿ ದೂರವಿರೋದೆ ಇದಕ್ಕೆ ಬೆಸ್ಟ್ ಪರಿಹಾರ. ಅತಿಯಾದರೆ ಕೆಲವು ಥೆರಪಿ, ಆ್ಯಂಟಿ ಡಿಪ್ರೆಸೆಂಟ್ ಸೇವನೆಯಿಂದ ಹತೋಟಿಗೆ ಬರುತ್ತೆ.
ಉದ್ವೇಗ
‘ಉದ್ವೇಗ ಸಂಬಂಧಿ ಸಮಸ್ಯೆ’ಗಳ ದೊಡ್ಡ ಪಟ್ಟಿಯೆ ಇದೆ. ಹೆಚ್ಚಿನ ಸಲ ಸಣ್ಣಪುಟ್ಟ ಉದ್ವೇಗ ಅಂದರೆ, ಎಕ್ಸಾಂ ಹಾಲ್‌ಗೆ ಹೋಗೋ ಮೊದಲಿನ ಕ್ಷಣದ ಉದ್ವೇಗ, ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲಿನ ಕ್ಷಣಗಳು ಎಲ್ಲ ಈ ಸಮಸ್ಯೆಗೆ ಸೇರಲ್ಲ.ಅಸಹಜ ಬೆವರು, ಚುಚ್ಚಿದಂಥಾ ನೋವು, ಎದೆ ನೋವು, ಹೃದಯಾಘಾತ ಇತ್ಯಾದಿ ದೈಹಿಕ ಲಕ್ಷಣಗಳೂ ಸೇರಿಕೊಂಡರೆ ಸಮಸ್ಯೆಯನ್ನು ಗಂಭೀರ ಅಂತ ಗುರುತಿಸಬಹುದು. ಆದರೆ ಹೆಚ್ಚಿನವರು ಆಗಾಗ ಉದ್ವೇಗಕ್ಕೊಳಗಾಗುತ್ತಾರೆ. ಸಣ್ಣಪುಟ್ಟದಕ್ಕೂ ಕಿರುಚಾಟ, ಹಾರಾಟ, ಟೆನ್ಶನ್‌ನಲ್ಲಿ ಕೈಕಾಲು ಆಡದ ಸ್ಥಿತಿ ಕೆಲವೊಮ್ಮೆ ಪದೇ ಪದೇ ಬರುತ್ತೆ. ಹೆಣ್ಣುಮಕ್ಕಳಲ್ಲಿ ಹಾರ್ಮೋನಲ್ ಏರುಪೇರಿನಿಂದ ಸಮಸ್ಯೆಯಾಗುತ್ತದೆ. ಇದಕ್ಕೆಲ್ಲ ಪರಿಹಾರ ಧ್ಯಾನ, ಮಾರ್ನಿಂಗ್ ವಾಕ್‌ನಂಥ ಮನಸ್ಸನ್ನು ಪ್ರಫುಲ್ಲಗೊಳಿಸುವ ಚಟುವಟಿಕೆಗಳು.
ಖಿನ್ನತೆ
ಡಿಪ್ರೆಶನ್ ಅನ್ನೋದು ಜನರ ಆಡುಮಾತಿನಲ್ಲಿ ಬೇಸರ, ನೋವಿಗೆ ಪರ‌್ಯಾಯವಾಗಿ ಬಳಕೆಯಾಗುವ ಶಬ್ದ. ಆದರೆ ವೈದ್ಯಕೀಯವಾಗಿ ಖಿನ್ನತೆಯಲ್ಲಿ ಮಂಕುತನ, ನಿರಾಸಕ್ತಿ, ಸುಸ್ತು, ವಿಪರೀತ ಸ್ನಾಯು ಸೆಳೆತ ಇತ್ಯಾದಿ ಲಕ್ಷಣಗಳಿರುತ್ತವೆ. ಆದರೆ ಇದರ ಮಧ್ಯದ ಸ್ಥಿತಿ ಹೆಚ್ಚಿನವರ ಅನುಭವಕ್ಕೆ ಬಂದಿರುತ್ತೆ. ಏನು ಮಾಡಲೂ ಮನಸ್ಸಿಲ್ಲ, ಸಣ್ಣ ಪುಟ್ಟ ವಿಷಯಕ್ಕೆ ಉಕ್ಕಿ ಬರುವ ಅಳು, ಸ್ವಲ್ಪ ಕೆಲಸ ಮಾಡಿದರೂ ಆಯಾಸ, ಸುಮ್ಮನೆ ನಿದ್ದೆ ಮಾಡೋಣ ಅನ್ನೋ ಮನಸ್ಸು, ಆದರೆ ಮಲಗಿದರೆ ಏನೇನೋ ಯೋಚನೆಗಳು. ಇಂಥ ಸ್ಥಿತಿಯಲ್ಲಿ ಮನಸ್ಸಿನ ಮಾತಿಗೆ ಬೆಲೆ ಕೊಡದೇ ಆಸಕ್ತಿಯ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಗಾರ್ಡನಿಂಗ್, ನಾಟಕ, ಹಾಡು, ಪ್ರವಾಸ ನಿಮ್ಮನ್ನು ಮತ್ತೆ ಮೊದಲಿನ ಲವಲವಿಕೆಗೆ ತಂದು ನಿಲ್ಲಿಸುತ್ತದೆ.