
ಕನ್ನಡಕ ಧರಿಸುವವರಿಗೆ ಕಾಂಟ್ಯಾಕ್ಟ್ ಲೆನ್ಸ್ ಹಾಕಿಸುವ ಆಸೆ. ಮೊದಲ ಬಾರಿ ಕಾಂಟ್ಯಾಕ್ಟ್ ಲೆನ್ಸ್ ಹಾಕಿಸಿದಾಗ, ಯಾಕಪ್ಪಾ ಬೇಕಿತ್ತು, ಕಣ್ಣಿನೊಳಗೇನೋ ಕುಳಿತು ಚುಚ್ಚುತ್ತಿದೆಯಲ್ಲಾ ಎನಿಸುವುದು ಸಹಜ.
ಆದರೆ, ಅಭ್ಯಾಸವಾದ ಮೇಲೆ ಕಾಂಟ್ಯಾಕ್ಟ್ ಲೆನ್ಸ್ ತೆಗೆಯಲೇ ಮನಸ್ಸು ಬಾರದು. ಕನ್ನಡಕವಿಲ್ಲದೆಯೇ ಸುತ್ತಲಿನ ಜಗತ್ತನ್ನು ಇಷ್ಟು ಸ್ಪಷ್ಟವಾಗಿ ನೋಡಬಹುದೆಂಬ ಖುಷಿಯೇ ನಿಮ್ಮನ್ನು ಕೆಲ ದಿನ ಆವರಿಸಿಕೊಳ್ಳುತ್ತದೆ. ಆದರೆ, ಇಡೀ ದಿನ ನಿರಂತರವಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು ಕಣ್ಣಿಗೆ ಖಂಡಿತಾ ಒಳ್ಳೆಯದಲ್ಲ. ಸ್ವಲ್ಪ ಹೊತ್ತು ಧರಿಸವುದು ಓಕೆ, ಆದರೆ ಬಹಳ ಸಮಯದವರೆಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದರಿಂದ ಏನೇನು ಅಪಾಯಗಳಿವೆ ಗೊತ್ತಾ?
1. ಕಣ್ಣುಗಳಿಗೆ ಆಕ್ಸಿಜನ್ ಕೊರತೆ
ನಿಮ್ಮ ಕಣ್ಣುಗಳು ಸಹಜವಾಗಿ ಕೆಲಸ ಮಾಡಲು ಆಕ್ಸಿಜನ್ ಬೇಕು. ಆದರೆ, ಕಾಂಟ್ಯಾಕ್ಟ್ ಲೆನ್ಸ್‌ಗಳು ಕಣ್ಣಿನ ಮೇಲೆ ನೇರ ಕುಳಿತು ಪೂರ್ತಿ ಕಾರ್ನಿಯಾವನ್ನು ಆವರಿಸುವುದರಿಂದ ಕಣ್ಣುಗಳಿಗೆ ಬೇಕಾದ ಆಮ್ಲಜನಕ ಒಳಹೋಗಲು ಅಡ್ಡಿಯಾಗುತ್ತದೆ. ಹೀಗಾಗಿ, ಕಣ್ಣುಗಳಿಗೆ ಆಕ್ಸಿಜನ್ ಒದಗಿಸಲು ಆಗಾಗ ಕಾಂಟ್ಯಾಕ್ಟ್ ಲೆನ್ಸ್ ತೆಗೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
2. ಒಣಕಣ್ಣುಗಳು
ಕಣ್ಣು ಕೆಂಪಾಗಿ ತುರಿಕೆ ಕಾಣಿಸಿಕೊಂಡಾಗ ಅದು ಡ್ರೈ ಐ ಸಿಂಡ್ರೋಮ್ ಲಕ್ಷಣ. ಇದರಿಂದ ಕಾರ್ನಿಯಾ ಮೇಲೆ ಗೆರೆಗಳೇಳಬಹುದು. ಕಾಂಟ್ಯಾಕ್ಟ್ ಲೆನ್ಸ್‌ಗಳು ತಾವು ಮೃದುವಾಗಿರುವ ಸಲುವಾಗಿ ನಮ್ಮ ಕಣ್ಣೀರನ್ನು ತಾವೇ ತೆಗೆದುಕೊಳ್ಳುತ್ತವೆ. ಇದರಿಂದ ಕಣ್ಣು ಡ್ರೈ ಆಗಬಹುದು.
ಕಂಪ್ಯೂಟರ್ ಮುಂದೆ ಕೂರುವಾಗ ಹೈ ಫೈ ಟೆಸ್ಟ್ ಮಾಡಿಕೊಳ್ಳಿ...
3. ಅಲರ್ಜಿ ಹಾಗೂ ಇನ್ಫೆಕ್ಷನ್
ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಪ್ರತಿದಿನ ಬಹಳಷ್ಟು ಹೊತ್ತು ಹಾಕಿಕೊಂಡಿರುವುದರಿಂದ ಕಾಲಾಂತರದಲ್ಲಿ ಅದು ಕಣ್ಣಿನ ಇನ್ಫೆಕ್ಷನ್ ಹಾಗೂ ಅಲರ್ಜಿ ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು. ಡ್ರೈ ಐಸ್ ಸಮಸ್ಯೆಯಾದರೆ ಅಥವಾ ಲೆನ್ಸ್‌ಗಳು ಸರಿಯಾಗಿ ಕಣ್ಣಿನ ಮೇಲೆ ಕೂರಲಿಲ್ಲವೆಂದರೆ ಕಾರ್ನಿಯಲ್ ಅಬ್ರೇಶನ್ ಆಗುತ್ತದೆ. ಅಂದರೆ, ಕಾರ್ನಿಯಾ ಮೇಲೆ ಸ್ಕ್ರ್ಯಾಚ್ ಆಗುತ್ತದೆ. ಇದರಿಂದ ನೋವು, ಕಣ್ಣೀರು, ತುರಿಕೆ, ಕೆಂಪಾಗುವುದು, ಬೆಳಕನ್ನು ನೋಡಲು ಸಮಸ್ಯೆ, ತಲೆನೋವು ಬರಬಹುದು. ಇದಕ್ಕೆ ಚಿಕಿತ್ಸೆ ಪಡೆಯಲಿಲ್ಲವೆಂದರೆ ನಿಧಾನವಾಗಿ ಅದು ಇನ್ಫೆಕ್ಷನ್‌ಗೆ ತಿರುಗುತ್ತದೆ. ಇದರಿಂದ ಕಾರ್ನಿಯಲ್ ಅಲ್ಸರ್ ಆಗುತ್ತದೆ.
4. ಕಾರ್ನಿಯಲ್ ಅಲ್ಸರ್
ಮೊದಲೇ ಹೇಳಿದಂತೆ ಕಾಂಟ್ಯಾಕ್ಟ್ ಲೆನ್ಸ್‌ನ ಅತಿಯಾದ ಬಳಕೆಯಿಂದ ಇನ್ಫೆಕ್ಷನ್ ಆದರೆ, ಬ್ಯಾಕ್ಟೀರಿಯಾ, ಫಂಗಸ್, ವೈರಸ್ ಮುಂತಾದವು ಕಣ್ಣಿನಲ್ಲಿ ಕೂರುತ್ತವೆ. ಅವುಗಳಿಗೆ ತಕ್ಷಣ ಚಿಕಿತ್ಸೆ ಪಡೆಯಲಿಲ್ಲವೆಂದಾಗ ಕಾರ್ನಿಯಲ್ ಅಲ್ಸರ್‌ಗೆ ತಿರುಗುತ್ತದೆ. ಇದು ತೀರಾ ಗಂಭೀರ ಪ್ರಕರಣಗಳಲ್ಲಿ ಕುರುಡುತನಕ್ಕೆ ಕೂಡಾ ಕಾರಣವಾಗುತ್ತದೆ.
5. ವೀಕ್ ಆಗುವ ಕಾರ್ನಿಯಲ್ ರಿಫ್ಲೆಕ್ಸ್
ಧೂಳು, ಕಸಕಡ್ಡಿ ಹಾರಿಬಂದಾಗ ತಕ್ಷಣ ಕಣ್ಣು ಮುಚ್ಚಿಬಿಡುತ್ತೇವೆ. ಕಣ್ಣುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವ ರಿಫ್ಲೆಕ್ಸ್ ಆ್ಯಕ್ಷನ್ ಇದು. ಆದರೆ ನಿರಂತರವಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದರಿಂದ ಈ ರಿಫ್ಲೆಕ್ಸ್ ಆ್ಯಕ್ಷನ್ ವೀಕ್ ಆಗಬಹುದು. ಅದರಿಂದ ಅಪಾಯದ ಸಂದರ್ಭಗಳಲ್ಲಿ ತಕ್ಷಣ ಕಣ್ಣುಗಳು ಮುಚ್ಚಿಕೊಳ್ಳದೇ ಹೋಗಬಹುದು. ಇದು ಕಣ್ಣಿಗೆ ಬಹಳಷ್ಟು ಅಪಾಯಗಳನ್ನು ತಂದೊಡ್ಡಬಲ್ಲದು.
6. ನೋವು
ಕಾಂಟ್ಯಾಕ್ಟ್ ಲೆನ್ಸ್ ಹೆಚ್ಚು ಕಾಲ ಬಳಸುವವರು ಕಣ್ಣಿನಲ್ಲಿ ನೋವು ಎಂದು ದೂರುವುದು ಸಾಮಾನ್ಯ. ಮೊದಲೇ ಹೇಳಿದಂತೆ ಅತಿಯಾದ ಕಾಂಟ್ಯಾಕ್ಟ್ ಲೆನ್ಸ್ ಬಳಕೆಯಿಂದ ಕಣ್ಣಿಗೆ ಆಕ್ಸಿಜನ್ ಕೊರತೆಯಾಗುತ್ತದೆ. ಇದರಿಂದಾಗಿ ದೃಷ್ಟಿ ಮಂದವಾಗಬಹುದು ಅಥವಾ ಕಣ್ಣುಗಳಿಗೆ ನೋವಾಗಬಹುದು. ಕಣ್ಣುಗಳನ್ನು ಕಳೆದುಕೊಂಡ ಉದಾಹರಣೆಗಳೂ ಇಲ್ಲದಿಲ್ಲ.
ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ಏನೆಲ್ಲ ಎಚ್ಚರ ವಹಿಸಬೇಕು ತಿಳ್ಕೊಳಿ.
- ಕಾಂಟ್ಯಾಕ್ಟ್ ಲೆನ್ಸ್‌ನ್ನು 24/7 ಧರಿಸಬೇಡಿ. ಮಲಗುವಾಗ ಅವನ್ನು ತೆಗೆದಿಡಿ.
- ಸರಿಯಾಗಿ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದೀರಿ ಎಂದು ಅರಿಯಲು ಅವನ್ನು ಕೈಬೆರಳ ತುದಿಯಲ್ಲಿ ಹಿಡಿಯಿರಿ. ಆಗ ಯು ಶೇಪ್ ಇದ್ದರೆ ಸರಿಯಾಗಿದೆ ಎಂದರ್ಥ. ಸಣ್ಣ ತುದಿಗಳು, ಬೇರೆ ಆಕಾರ ಕಂಡುಬಂದರೆ ಅದು ಉಲ್ಟಾ ಆಗಿದೆ ಎಂದರ್ಥ.
- ಕಾಂಟ್ಯಾಕ್ಟ್ ಲೆನ್ಸ್ ಮುಟ್ಟುವ ಮುಂಚೆ ಕೈಗಳನ್ನು ತೊಳೆಯುವುದು ಮರೆಯಬೇಡಿ. ಲನೋನಿನ್ ಹಾಗೂ ಇತರೆ ಮಾಯಿಶ್ಚರೈಸಿಂಗ್ ಏಜೆಂಟ್ ಹೊಂದಿದ ಯಾವುದೇ ಲೋಶನ್‌ಗಳನ್ನು ಲೆನ್ಸ್ ಮುಟ್ಟುವ ಮುಂಚೆ ಮುಟ್ಟಬೇಡಿ.
- ಆಯ್ಲಿ ಹಾಗೂ ಸುಗಂಧಯುಕ್ತ ಸೋಪ್ ಬಳಸಬೇಡಿ.
- ಉಗುರುಗಳನ್ನು ಬುಡದವರೆಗೆ ತೆಗೆಯುವುದು ಮರೆಯಬೇಟಿ. ಇಲ್ಲದಿದ್ದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಇಡುವಾಗ ಎಂದಾದರೂ ಕಣ್ಣಿಗೆ ಸ್ಕ್ರಾಚ್ ಆಗಬಹುದು.
- ಕಣ್ಣುಗಳನ್ನು ಆಗಾಗ ಪರೀಕ್ಷಿಸಿ ಮತ್ತು ಲೆನ್ಸ್ ಬದಲಿಸಬೇಕೇ ಎಂದು ತಿಳಿದುಕೊಳ್ಳಿ.
- ಸಿಲಿಕಾನ್ ಹೈಡ್ರೋಜೆಲ್ ಲೆನ್ಸ್ ಆಯ್ಕೆ ಮಾಡಿ. ಇವು ಕಣ್ಣಿಗೆ ಆಕ್ಸಿಜನ್ ಸಪ್ಲೈ ಕಡಿಮೆಯಾಗದಂತೆ ನೋಡಿಕೊಳ್ಳುತ್ತವೆ.
- ಕಾಂಟ್ಯಾಕ್ಟ್ ಲೆನ್ಸ್ ತೆಗೆದಾಗೆಲ್ಲ ಕಣ್ಣಿಗೆ ಐ ಡ್ರಾಪ್ಸ್ ಬಿಡಿ. ಇದರಿಂದ ಕಣ್ಣುಗಳು ಡ್ರೈ ಆಗುವುದು ತಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.