ಜಗತ್ತನ್ನು ಆಳಲಿದೆ ರೋಬೋ, ಮನೆ ಸದಸ್ಯನಾಗಲಿದೆಯೇ ರೋಬೋಟ್‌?

By Kannadaprabha News  |  First Published Mar 26, 2023, 2:29 PM IST

ವೃದ್ಧರಿಗೆ, ಅಶಕ್ತರಿಗೆ ನೆರವಾಗಲು ಅಥವಾ ಮನೆಗೆಲಸ ಮಾಡಲು ಜಪಾನಿನಲ್ಲಿ ರೋಬೋಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ರೋಬೋಟ್‌ಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವಂತೆಯೂ ತರಬೇತಿ ನೀಡಲಾಗಿರುತ್ತದೆ. ಮುಂದೆ ನಮ್ಮಲ್ಲಿಯೂ ಇಂಥಾ ರೋಬೋಟ್‌ಗಳು ಪ್ರಾಬಲ್ಯ ಮೆರೆಯಬಹುದೇ? ಈ ಕುರಿತ ಕುತೂಹಲಕರ ಬರಹ ಇಲ್ಲಿದೆ.


-ಎ.ಎಸ್‌.ಬಾಲಸುಬ್ರಹ್ಮಣ್ಯ

ಹೆಚ್ಚುತ್ತಿರುವ ನಗರೀಕರಣ, ವಿಭಕ್ತ ಕುಟುಂಬಗಳು ಮತ್ತು ವೃದ್ಧಾಪ್ಯ ಹೊಸ ಸಾಮಾಜಿಕ ಸಮಸ್ಯೆಗಳನ್ನು ಎಲ್ಲೆಡೆ ಸೃಷ್ಟಿಸುತ್ತಿವೆ. ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ 2050ರ ವೇಳೆಗೆ ವೃದ್ಧರ ಸಂಖ್ಯೆ ಪ್ರತಿಶತ 22ರಷ್ಟುತಲುಪಲಿದೆ. ಪರಿಣಾಮ, ಕಡಿಮೆ ಕೆಲಸಿಗರ ಸಂಖ್ಯೆ ಮತ್ತು ವೃದ್ಧರ ಆರೋಗ್ಯ ಸೌಕರ್ಯಗಳ ಹೆಚ್ಚಳದ ಸವಾಲು. ಈ ತೊಡಕುಗಳನ್ನು ಎದುರಿಸಲು ಇರುವ ಒಂದೇ ಮಂತ್ರದಂಡ ರೋಬೋಟ್‌ಗಳ ಬಳಕೆ.

Tap to resize

Latest Videos

undefined

ಯಂತ್ರಗಳ ಬಳಕೆಗೆ ನಾವೆಲ್ಲ ಒಗ್ಗಿ ಹೋಗಿದ್ದೇವೆ. ಬೆಳಿಗ್ಗೆಯಿಂದ ಸಂಜೆಯ ತನಕ- ಪ್ರಯಾಣಕ್ಕೆ ಕಾರು, ಬಸ್ಸು, ರೈಲು, ಸ್ಕೂಟರ್‌, ಮನೆಯಲ್ಲಿ ಫ್ಯಾನು, ಮಿಕ್ಸಿ, ಟಿ.ವಿ, ಇತರರನ್ನು ಸಂಪರ್ಕಿಸಲು ಮೊಬೈಲು- ಹೀಗೆ ಯಂತ್ರಗಳು ಇಲ್ಲದೆ ಜೀವನ ಊಹಿಸಲು ಅಸಾಧ್ಯ. ಇವುಗಳಿಗೆ ನಿಧಾನವಾಗಿ ಸೇರ್ಪಡೆಯಾಗುತ್ತಿರುವುದು ರೋಬೋಟ್‌ಗಳು.

ಅಭ್ಯಾಸ ಆರಂಭಿಸಿದ ವಿಶ್ವದ ಮೊದಲ ರೋಬೋಟ್ ವಕೀಲ ವಿರುದ್ಧ ದಾಖಲಾಯ್ತು ಕೇಸ್!

ಹಲವಾರು ವಾಡಿಕೆಯ ಕೆಲಸಗಳನ್ನು ಮಾಡಲು ಕಾರ್ಖಾನೆಗಳಲ್ಲಿ ಕೈಗಾರಿಕಾ ರೋಬೊಗಳು ಬಂದು ಬಹು ದಿನಗಳೇ ಕಳೆದಿವೆ. ಇದರ ಮುಂದಿನ ಹಂತವೇ ಕೃತಕ ಬುದ್ಧಿಮತ್ತೆ ನೆರವಿನ ಮಾನವರೂಪಿ ರೋಬೊಗಳು. ಕೃತಕ ಬುದ್ಧಿಮತ್ತೆ ಬಹುವೇಗವಾಗಿ ವಿಸ್ತಾರಗೊಳ್ಳುತ್ತಿರುವ ತಂತ್ರಜ್ಞಾನ. ಇದರ ನೆರವಿನಿಂದ ನಾವು ಯೋಚಿಸುವ ರೀತಿಯಲ್ಲೇ ರೋಬೋಗಳು ಯೋಚಿಸಿ ತಮಗೆ ಸೂಚಿಸಿದ ಕೆಲಸಗಳನ್ನು ನಿರ್ವಹಿಸುತ್ತವೆ. ನಾವು ಆಡುವ ಮಾತುಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ಉತ್ತರಿಸುತ್ತವೆ. ನೀವು ಕೇಳುವ ಪ್ರಶ್ನೆಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತವೆ. ನೀವು ಕೇಳಬಹುದಾದ ಪ್ರಶ್ನೆಗಳನ್ನೆಲ್ಲ ಊಹಿಸಿ ಅವುಗಳಿಗೆ ತಕ್ಕ ಉತ್ತರಗಳನ್ನು ಸಿದ್ಧಪಡಿಸಿ, ಯಂತ್ರಾಂಶಗಳ ಮೂಲಕ ರೋಬೋಗಳಲ್ಲಿ ಅಳವಡಿಸಲಾಗಿರುತ್ತದೆ.

ಜಪಾನ್‌ನಲ್ಲಿ ರೋಬೋ ಬಳಕೆ ಹೆಚ್ಚಳ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಪಾನ್‌ ಅಗ್ರಗಣ್ಯ ದೇಶ. ಕೇವಲ 12.5 ಕೋಟಿ ಜನಸಂಖ್ಯೆಯ ಈ ಪುಟ್ಟದ್ವೀಪಗಳ ದೇಶ ಎರಡನೇ ವಿಶ್ವ ಮಹಾಯುದ್ಧದಲ್ಲಿ ಅಪಾರ ನಷ್ಟಅನುಭವಿಸಿತು. ಈ ಸಂಕಷ್ಟದಿಂದ ಮೇಲೆ ಬರಲು ಅದು ತಂತ್ರಜ್ಞಾನದ ಮೊರೆ ಹೋಯಿತು. ಕಡಿಮೆ ಸಮಯ ಹಾಗೂ ಖರ್ಚಿನಲ್ಲಿ ಅಧಿಕ ಉತ್ಪಾದನೆ ಮಾಡಲು ಆ ದೇಶ ರೋಬೋಗಳನ್ನು ಬಳಸಿತು. ಕೈಗಾರಿಕಾ ವಸ್ತುಗಳ ಉತ್ಪನ್ನದಲ್ಲಿ ಆರಂಭವಾದ ರೋಬೋಗಳ ಬಳಕೆ ಈಗ ಎಷ್ಟುಜನಪ್ರಿಯವಾಗಿವೆಯೆಂದರೆ, ಇವು ಜಪಾನೀಯರ ಜೀವನದಲ್ಲಿ ಹಾಸುಹೊಕ್ಕಿವೆ.

ಬೇರೆ ದೇಶಗಳಲ್ಲಿ ರೋಬೋಗಳು ನಮ್ಮ ಕೆಲಸವನ್ನು ಕದಿಯುತ್ತವೆ ಎನ್ನುವ ಭಾವನೆ ಇದ್ದರೆ, ಈ ದೇಶದಲ್ಲಿ ಹಾಗಲ್ಲ. 2025ರ ವೇಳೆಗೆ ಜಪಾನಿನ ಪ್ರತಿಮನೆಯಲ್ಲಿ ಒಂದಿಲ್ಲೊಂದು ರೀತಿಯ ರೋಬೋಗಳು ಕಾರ್ಯನಿರ್ವಹಿಸಲಿವೆ. ಏಕೆಂದರೆ ಮಹಿಳೆಯರು ಮನೆ ಕೆಲಸಗಳಲ್ಲಿ ವಿಪರೀತವಾಗಿ ದುಡಿದು, ಅವರಿಗೆ ಮಕ್ಕಳೇ ಬೇಡವೆನಿಸಿವೆ. ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು 65 ವರ್ಷ ಮೀರಿದ್ದಾರೆ. ಇವರು ಜನಸಂಖ್ಯೆಯ ಶೇ.28.7 ಭಾಗದಷ್ಟಿದ್ದಾರೆ. ಜಗತ್ತಿನ ಕುಗ್ಗುತ್ತಿರುವ ಮತ್ತು ಅತಿಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶ ಎಂದು ಜಪಾನ್‌ ಕರೆಸಿಕೊಂಡಿದೆ. ದುಡಿಯುವವರೂ ಇಲ್ಲ, ಜತೆಗೆ ವೃದ್ಧರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಜಪಾನಿನ ಇನ್ನೊಂದು ಪ್ರಮುಖ ಸಮಸ್ಯೆ ಏನೆಂದರೆ ಅವರಿಗೆ ಹೊರ ದೇಶಗಳ ವಲಸಿಗರು ಬೇಡ. ಅದು ಅವರಿಗೆ ಸಹ್ಯವಾಗದು. ಬೇರೆ ಸಂಸ್ಕೃತಿಯ ಜನ ಬೇಡ. ಉಳಿದಿರುವುದು ಒಂದೇ ಮಾರ್ಗ ರೋಬೋಗಳ ಸಖ್ಯ.

ಇದಕ್ಕೆ ಜಪಾನಿನ ಸರ್ಕಾರ ಸಹಮತ ಸೂಚಿಸಿ ದೀರ್ಘಕಾಲೀನ ಯೋಜನೆಯನ್ನೇ ರೂಪಿಸಿದೆ. ಯಂತ್ರಗಳ ನೆರವಿನಿಂದ ಸುರಕ್ಷಿತ, ಆರಾಮದಾಯಕ ಮತ್ತು ಅನುಕೂಲಕರ ಜೀವನವನ್ನು ರೋಬೋಟಿಕ್‌ ಜೀವನಶೈಲಿಯಲ್ಲಿ ನಡೆಸಲು ಜನರ ಪರಿವರ್ತನೆಗೆ ಮುಂದಾಗಿದೆ. ಪ್ರತಿ ಮನೆಯೂ ರೋಬೋಸ್ನೇಹಿ ಆಗುವಂತೆ ಜನತೆಯ ಮನವೊಲಿಸಿದೆ.

ಕೇರಳ ದೇಗುಲದ ಜಾತ್ರೆಯಲ್ಲಿ ರೋಬೋಟ್‌ ಆನೆಯ ಬಳಕೆ: ದೇಶದಲ್ಲೇ ಮೊದಲು ವಿದ್ಯುಚ್ಛಾಲಿತ ಆನೆ ಮೆರವಣಿಗೆ

ಅಮೆರಿಕೆ ಹಾಗೂ ಇತರ ದೇಶಗಳಲ್ಲಿ ತಂತ್ರಜ್ಞಾನ ಒಂದು ದಿಕ್ಕಿನಲ್ಲಿ ಮುಂದುವರೆದರೆ, ಜಪಾನಿನಲ್ಲಿ ಅದು ಹೆಚ್ಚು ಪ್ರಾಯೋಗಿಕ. ಹೀಗಾಗಿಯೇ ಅವರ ಉತ್ಪನ್ನಗಳು ವಿಶ್ವದೆಲ್ಲೆಡೆ ಜನಪ್ರಿಯ. ಜಪಾನಿನ ಧಾರ್ಮಿಕ ನಂಬಿಕೆಗಳು ಸಹ ಇದಕ್ಕೆ ಇಂಬು ಕೊಡುತ್ತವೆ. ಪ್ರಾಕೃತಿಕ ಕೊಡುಗೆಗಳ ಜತೆ (ಪ್ರಾಣಿ, ಗಿಡ, ಬೆಟ್ಟ, ಪರ್ವತ ಮುಂತಾದ) ಯಂತ್ರಗಳ ಮೂಲಕ ಸೃಷ್ಟಿಸುವ ಉತ್ಪನ್ನಗಳು ಮಾನವನಿಗೆ ನೆರವಾಗುವಂತಹ ಸೃಷ್ಟಿಯೇ ಎಂದು ಜಪಾನೀಯರು ನಂಬುತ್ತಾರೆ. ಹೀಗಾಗಿ ಮನುಷ್ಯರಿಗೆ ನೆರವಾಗುವ ಯಂತ್ರಗಳ ಆವಿಷ್ಕಾರಕ್ಕೆ ಇವರು ಮುಂದಾಗಿದ್ದಾರೆ. ರೋಬೋ ಕ್ಷೇತ್ರದಲ್ಲಂತೂ ಇವರು ಅಗ್ರಗಣ್ಯರು.

ಆಸ್ಟ್ರೋ ಬಾಯ್‌
1951ರಲ್ಲಿ ವೈದ್ಯ ಮತ್ತು ಚಿತ್ರರಚನಕಾರ ಒಸಾಮು ತೇಜುಕಾ ಸೃಷ್ಟಿಸಿದ ‘ಆಸ್ಟ್ರೋ ಬಾಯ್‌’ ಎಂಬ ಕಾಲ್ಪನಿಕ ರೋಬೋ, ಅದು ಮಾಡಬಹುದಾದ ಎಲ್ಲಾ ಸಾಹಸಗಳನ್ನು ಕಥೆಗಳು, ಕಾಮಿಕ್ಸ್‌ ಮೂಲಕ ವಿವರಿಸಿದರು. ಇಂತಹ ರೋಬೋಗಳು ನಮ್ಮ ಸಮಾಜಕ್ಕೆ ಅವಶ್ಯವಿವೆ ಎಂಬುದನ್ನು ವಿಜ್ಞಾನಿಗಳು ಮನಗಂಡರು. ಮಾನವನಂತಿರುವ ರೋಬೋಟ್‌ ಅನ್ನು ರಚಿಸುವ ಗೀಳನ್ನು ಹೊಂದಿರುವ ಈ ಕಥೆಯ ಜನಪ್ರಿಯತೆ ಆತನನ್ನು ಸೂಪರ್‌ಹೀರೋ ಮಾಡುತ್ತದೆ. ಆಸ್ಟ್ರೋ ಬಾಯ್‌ನ ಕಥೆಯನ್ನು ವಿವಿಧ ಮಾಧ್ಯಮಗಳಲ್ಲಿ ಮತ್ತು ಅನಿಮೇಟೆಡ್‌ ರೂಪಾಂತರಗಳಲ್ಲಿ ಪುನಃ ಹೇಳಲಾಯಿತು. ಅಮೆರಿಕನ್ನರು ಇಂತಹ ರೋಬೋಗಳನ್ನು ಸೃಷ್ಟಿಸಿ ರಕ್ಷಣೆ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಪ್ರಯೋಗಿಸಿದರೆ, ಜಪಾನಿಯರು ತಮ್ಮ ಕಾರ್ಖಾನೆ ಮತ್ತು ಕೌಟುಂಬಿಕ ಅಗತ್ಯಗಳತ್ತ ಗಮನಹರಿಸಿದರು.

ರೋಬೋಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಜಪಾನ್‌, 5-ಜಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆನ್ಸರ್‌ಗಳು (ಸಂವೇದಕಗಳು) ಮುಂತಾದ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಕುಗ್ಗುತ್ತಿರುವ ಶ್ರಮಿಕರ ಸಂಖ್ಯೆ ಹಾಗೂ ವೃದ್ಧರ ಕ್ಷೇಮ ಮತ್ತು ಆರೋಗ್ಯ ಮೇಲ್ವಿಚಾರಣೆಗೆ ಯಂತ್ರಗಳ ಮೊರೆ ಹೋಗಲು ನಿರ್ಧರಿಸಿದೆ. ಈಗಾಗಲೇ ವೃದ್ಧರು ಮತ್ತು ರೋಗಿಗಳಿಗೆ ಶುಶ್ರೂಷೆ ಮಾಡುವ, ಚಿಕಿತ್ಸೆ ನೀಡುವ, ಅವರೊಡನೆ ಸ್ನೇಹ ಬೆಳೆಸುವ, ಬೆಂಕಿ ಅಪಘಾತಗಳಲ್ಲಿ ನೆರವಾಗುವ, ಭಾರವಾದ ಹೊರೆಗಳನ್ನು ಹೊತ್ತೊಯ್ಯುವ ಮತ್ತು ರೋಗಿಗಳಿಗೆ ದೈಹಿಕ ಚಿಕಿತ್ಸೆ ನೀಡುವ ರೋಬೋಗಳನ್ನು ಜಪಾನೀಯರು ಅಭಿವೃದ್ಧಿಪಡಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಲೈಂಗಿಕ ರೋಬೋಗಳ ಜನಪ್ರಿಯತೆ. ಈ ಮಾರುಕಟ್ಟೆಪ್ರಪಂಚದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿದೆ.

ಪೆಪ್ಪರ್‌ ಮತ್ತು ಪಾರೋ
ಜಪಾನ್‌ನ ಟೋಕಿಯೋ ಮತ್ತು ಒಸಾಕಾದಲ್ಲಿ, ವಿಮಾನ ನಿಲ್ದಾಣಗಳು, ಮಳಿಗೆಗಳು ಮತ್ತು ಕ್ಯಾಂಪಸ್‌ಗಳಲ್ಲಿ, ಪೆಪ್ಪರ್‌ ಮತ್ತು ಪಾರೊದಂತಹ ರೋಬೋಟ್‌ಗಳನ್ನು ಭೇಟಿ ಮಾಡಬಹುದು. ಅವುಗಳನ್ನು ಪ್ರತಿಯೊಂದೂ ಮಾಹಿತಿ ಮತ್ತು ಭೌತಿಕ ಪರಿಹಾರಗಳನ್ನು ಮಾತ್ರವಲ್ಲದೆ ಭಾವನಾತ್ಮಕ ಬೆಂಬಲ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪೆಪ್ಪರ್‌ ಎನ್ನುವ ಮಗುವಿನಂತಹ ಮಾನವರೂಪಿ ರೋಬೋ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. ಇದರ ಬೆಲೆ 2,000 ಅಮೆರಿಕನ್‌ ಡಾಲರ್‌.(ರು.1.66 ಲಕ್ಷ ) ಇದು ಲಿಂಗ ರಹಿತವಾದರೂ, ಇದನ್ನು ಸೃಷ್ಟಿಸಿದವರು ಅವನು ಎಂದೇ ಸಂಬೋಧಿಸುತ್ತಾರೆ. ಮಗುವಿನಂತೆ ಹೋಲುವ ಪೆಪ್ಪರ್‌, ಶುಭ್ರ ಬೆಳಕಿನ ಪ್ಲಾಸ್ಟಿಕ್‌ನಿಂದ ನಿರ್ಮಿತವಾಗಿದೆ. ನೀಲಿ ಬೆಳಕಿನಿಂದ ಮಿನುಗುವ ದೊಡ್ಡ ಕಪ್ಪು ಕಣ್ಣುಗಳನ್ನು ಹೊಂದಿರುವ ಈ ಪುಟಾಣಿ ಕುಟುಂಬದ ಸದಸ್ಯನಂತೆಯೇ ಕಾಣುತ್ತಾನೆ.

ನಮ್ಮ ಮಾನಸಿಕ ತುಮುಲಗಳನ್ನು ಪೆಪ್ಪರ್‌ ಗುರುತಿಸಬಲ್ಲದು. ಸಂತೋಷ, ದುಃಖ, ಕೋಪ, ಆಶ್ಚರ್ಯ ಸನ್ನಿವೇಶಗಳಿಗೆ ತಕ್ಕಂತೆ ತನ್ನ ಸುತ್ತಲಿನ ಮನುಷ್ಯರ ಮನಸ್ಥಿತಿಗೆ ಹೊಂದಿಕೊಳ್ಳುವ ಅಸಾಧಾರಣ ಶಕ್ತಿ ಇದಕ್ಕಿದೆ. ಮೂರು ವರ್ಷಗಳ ಖಾತರಿಯೊಂದಿಗೆ ಬರುವ ಪೆಪ್ಪರ್‌ ಖರೀದಿಸುವವರು ಇದನ್ನು ಲೈಂಗಿಕ ಅಥವಾ ಅಸಭ್ಯ ನಡವಳಿಕೆಯ ಉದ್ದೇಶಕ್ಕಾಗಿ ಬಳಸುವುದಿಲ್ಲ ಎಂದು ಭರವಸೆ ನೀಡುವ ಒಪ್ಪಂದಕ್ಕೆ ಸಹಿ ಹಾಕಬೇಕು. ಕೋವಿಡ್‌-19ರ ಸಮಯದಲ್ಲಿ, ಪೆಪ್ಪರ್‌ ಅನ್ನು ಆಸ್ಪತ್ರೆಗಳಲ್ಲಿ ಸ್ವಾಗತಕಾರರಾಗಿ, ರೋಗಿಗಳನ್ನು ಸ್ವಾಗತಿಸಲು, ತಾಪಮಾನವನ್ನು ತೆಗೆದುಕೊಳ್ಳುವುದು ಮತ್ತು ಕೈ ನೈರ್ಮಲ್ಯವನ್ನು ಜಾರಿಗೊಳಿಸಲು ಬಳಸಲಾಯಿತು. ಹೆಚ್ಚಿನ ಚಿಕಿತ್ಸಕ ಪಾತ್ರದಲ್ಲಿ, ದಾದಿಯರ ಕೊರತೆಯ ನಡುವೆ ವಯಸ್ಸಾದ ರೋಗಿಗಳಲ್ಲಿ ಒಂಟಿತನವನ್ನು ಕಡಿಮೆ ಮಾಡಲು ಪೆಪ್ಪರ್‌ ಅನ್ನು ನಿಯೋಜಿಸಲಾಯಿತು.

ಬಹುದಿನಗಳಿಂದಲೂ ಬಳಕೆಯಲ್ಲಿರುವ ಇನ್ನೊಂದು ಮುದ್ದಾದ ರೋಬೊ ಪಾರೋ ಚಿಕಿತ್ಸಕ ರೋಬೋಟ್‌ ಆಗಿದ್ದು, ಬೆಚ್ಚಗಿನ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹೊರಹೊಮ್ಮಿಸಲು ಮತ್ತು ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳಲ್ಲಿ ರೋಗಿಗಳನ್ನು ಶಾಂತಗೊಳಿಸುವ ಪರಿಣಾಮವನ್ನು ಬೀರುವಂತೆ ವಿನ್ಯಾಸಗೊಳಿಸಲಾಗಿದೆ. ರೋಮಗಳಿಂದ ಕೂಡಿದ ಇದು ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತದೆ. ಶಬ್ದಗಳಿಗೆ ಪ್ರತಿಕ್ರಿಯಿಸುತ್ತದೆ. ತನ್ನ ಮತ್ತು ಮಾಲೀಕರ ಹೆಸರನ್ನು ನೆನಪಿನಲ್ಲಿ ಇಡುತ್ತದೆ. ಸುಮಾರು ನಾಲ್ಕು ಲಕ್ಷ ರೂ ಬೆಲೆಯ ಈ ರೋಬೋ ತನ್ನ ಮಾಲೀಕರ ನಡವಳಿಕೆಯ ಬಗ್ಗೆ ಕಲಿತು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ನಿಮ್ಮ ಮೂಡ್‌ ಗೆ ತಕ್ಕಂತೆ; ಸಂತೋಷ, ಕೋಪ ಮತ್ತು ಆಶ್ಚರ್ಯದ ಭಾವನೆಗಳನ್ನು ಅನುಕರಿಸುತ್ತದೆ.

ಇದು ನಿಜವಾದ ಬೇಬಿ ಸೀಲ್‌ನಂತೆ ಧ್ವನಿಸುತ್ತದೆ. ಹಗಲಿನಲ್ಲಿ ಸಕ್ರಿಯವಾಗಿ ರಾತ್ರಿಯಲ್ಲಿ ಇದು ಮಲಗುತ್ತದೆ. ರೋಗಿಗಳಲ್ಲಿ ಆತಂಕ, ಖಿನ್ನತೆ ಮತ್ತು ಒಂಟಿತನದಿಂದ ಹೊರಬರಲು ಸಹಾಯ ಮಾಡುತ್ತದೆ. ಪಾರೋ ರೋಗಿಗಳ ಖಿನ್ನತೆಯನ್ನು ನಿವಾರಿಸಲು ಮತ್ತು ಪರಸ್ಪರ ಬಾಂಧವ್ಯ ವೃದ್ಧಿಗೆ ಮತ್ತು ಉತ್ತಮವಾಗಿ ಸಂವಹನ ನಡೆಸಲು ನೆರವಾಗುತ್ತದೆ. ಈ ರೋಬೋ ವಿಶೇಷವಾಗಿ ಪಾಶ್ರ್ವವಾಯು ಮತ್ತು ಚಲನೆಯಿಲ್ಲದ ರೋಗಿಗಳಿಗೆ ವರದಾನವಾಗಿದೆ. ಈ ಬಗೆಯ ರೋಬೋಗಳು ರೋಗಿಗಳಲ್ಲಿ ಭರವಸೆ, ಪ್ರೀತಿ, ಭದ್ರತೆ ಮತ್ತು ಶಾಂತ ಭಾವನೆಗಳನ್ನು ಸುಧಾರಿಸುತ್ತವೆ ಎಂದು ಸಂಶೋಧನೆಗಳು ಧೃಢೀಕರಿಸುತ್ತಿವೆ. ಇವುಗಳ ಉಪಯೋಗ ಮನಗಂಡ ನ್ಯೂಯಾರ್ಕ್ ರಾಜ್ಯವು ಕೋವಿಡ್‌ ಸಮಯದಲ್ಲಿ ಒಂಟಿತನದ ಸಮಸ್ಯೆ ಎದುರಿಸುತ್ತಿರುವ ನಿವಾಸಿಗಳಿಗೆ 1,100 ರೋಬೋಗಳನ್ನು ವಿತರಿಸಿತು. ಅಮೇರಿಕ ಮತ್ತು ಐರೋಪ್ಯ ದೇಶಗಳಲ್ಲಿ ನರ್ಸ್‌ಗಳ ಕೊರತೆ ಕಾಡುತ್ತಿದೆ. ಇರುವ ನರ್ಸ್‌ಗಳ ಕೆಲಸ ಕಡಿಮೆಗೊಳಿಸಲು ಹಾಗೂ ಸಾಮಾನ್ಯ ಕೆಲಸಗಳಿಂದ ಅವರಿಗೆ ಮುಕ್ತಿ ನೀಡಲು ರೋಬೋಟ್‌ಗಳ ಬಳಕೆ ಹೆಚ್ಚುತ್ತಿದೆ.

ಪ್ಲೆಯೊ ಮತ್ತು ಐಬೋ
ಹೊಸ ಟ್ರೆಂಡ್‌ ಏನೆಂದರೆ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳಿಗೆ ತೋರಿಸುವ ಪ್ರೀತಿಯನ್ನೇ ಈ ರೋಬೋಗಳಿಗೂ ನೀಡುತ್ತಾರೆ. ರೋಬೋಪೆಟ್‌ಗಳ ಪರಿಕಲ್ಪನೆ ವೇಗವಾಗಿ ಬೆಳೆಯುತ್ತಿದೆ. ಇವುಗಳ ಬಳಕೆ ಸಹ ಹೆಚ್ಚುತ್ತಿದೆ. ಉದಾಹರಣೆಗೆ, ಬೇಬಿ ಡೈನೋಸಾರ್‌ ‘ಪ್ಲೆಯೊ’ ಮತ್ತು ಸೋನಿ ಕಂಪನಿಯ ‘ಐಬೋ’ ನಾಯಿಗಳೇ ಇದಕ್ಕೆ ಉದಾಹರಣೆಗಳು. 2015ರಲ್ಲಿ ಮಾರುಕಟ್ಟೆಯಿಂದ ವಾಪಸ್ಸು ತೆಗೆದುಕೊಳ್ಳುತ್ತಿದ್ದ ಐಬೋ ರೋಬೋಟ್‌ ನಾಯಿಗಳಿಗೆ ಜಪಾನ್‌ನ ಬೌದ್ಧ ದೇವಾಲಯದಲ್ಲಿ ಅಂತ್ಯಕ್ರಿಯೆ ಸಮಾರಂಭ ನಡೆಸಿದಾಗ ಪ್ರಪಂಚದಾದ್ಯಂತ ಸುದ್ದಿಯಾಯಿತು. ಈಗ ಮಾರುಕಟ್ಟೆಯಲ್ಲಿ ಇಂತಹ ಹತ್ತಾರು ಕೈಗೆಟುಕುವ ರೋಬೋಪೆಟ್‌ಗಳಿವೆ. ನಗರ ಜೀವನದ ಏಕತಾನತೆಯಿಂದ ಹೊರಬರಲು ಇವು ಸಹಕಾರಿಯಾಗಿವೆ.

ಹಿರಿಯರ ಆರೈಕೆಗೆ ನೆರವಾಗುವ ಹಲವಾರು ರೋಬೋಗಳ ಅಭಿವೃದ್ಧಿಗೆ ಜಪಾನಿನ ಸರ್ಕಾರ ಉದಾರವಾದ ಧನ ಸಹಾಯ ನೀಡುತ್ತಿದೆ. ರೋಗಿಗಳನ್ನು ಕರೆದೊಯ್ಯುವ, ದೈಹಿಕ ಚಿಕಿತ್ಸೆ ಮತ್ತು ಪುನರ್ವಸತಿಯಲ್ಲಿ ನೆರವಾಗುವ ಹಲವಾರು ರೋಬೋಗಳು ರೂಪುಗೊಳ್ಳುತ್ತಿವೆ. ‘ರೋಬಿಯ’ ಶ್ವೇತ ಬಣ್ಣದಲ್ಲಿ ಹೊಳೆಯುವ ರೋಬೋ, ರೋಗಿಗಳನ್ನು ಎತ್ತಿಕೊಂಡು ತಿರುಗಾಡಬಲ್ಲದು. ಟೋಕಿಯೋದ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಲಾದ ‘ಸಯಾನ’ ಸಾಂಪ್ರದಾಯಿಕ ನರ್ಸ್‌ ಕೆಲಸಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹಿಂಬದಿಯ ಕೂದಲಿನೊಂದಿಗೆ ಬಿಳಿ ಬಣ್ಣದ ಧಿರಿಸಿನಲ್ಲಿ ಬರುವ ಈ ರೋಬೋ, ದಾದಿಯರ ಬಹುತೇಕ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ನಗರೀಕರಣ ಮತ್ತು ವಿಭಕ್ತ ಕುಟುಂಬ ವ್ಯವಸ್ಥೆಗಳಲ್ಲಿ ಮುಪ್ಪಿನ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಬಹು ಕಠಿಣವಾಗಲಿವೆ. 2055ರ ಹೊತ್ತಿಗೆ, ಜಪಾನ್‌ನ ಸುಮಾರು 40 ಪ್ರತಿಶತದಷ್ಟುಜನರು ವಯಸ್ಸಾದವರಾಗಿರುತ್ತಾರೆ. ಮುಪ್ಪಿನ ಸಮಸ್ಯೆಗಳು ಒಂದೆರಡಲ್ಲ. ಅವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ಒಂಟಿತನ, ಬುದ್ಧಿಮಾಂದ್ಯತೆ, ಸಾಮಾಜಿಕ ಪ್ರತ್ಯೇಕತೆ ಹಾಗು ಇನ್ನಿತರ ತೊಡಕುಗಳು ವೃದ್ಧಾಪ್ಯದಲ್ಲಿ ಸಾಮಾನ್ಯ. ದೈಹಿಕ ಮತ್ತು ಭಾವನಾತ್ಮಕ ಸವಾಲುಗಳಿಂದ ಇವರನ್ನು ಸುರಕ್ಷಿತವಾಗಿ ಆರೈಕೆ ಮಾಡುವುದು ದೊಡ್ಡ ಸವಾಲೇ ಸರಿ. ಸಹಾನುಭೂತಿಯನ್ನು ಹೆಚ್ಚಿಸುವ ಮತ್ತು ಬೆಂಬಲಿಸುವ ಸಾಮರ್ಥ್ಯವನ್ನು ರೋಬೋಗಳು ವರ್ಧಿಸಬಹುದು. ಮಾನವ ಕಾಳಜಿಗೆ ಅದು ಪೂರಕವಾಗಿ ನೆರವಾಗಬಲ್ಲದು. ಆಧುನಿಕ ಕೃತಕ ಬುದ್ಧಿಮತ್ತೆ ಜ್ಞಾನದ ನೆರವಿನಿಂದ ಸೃಷ್ಟಿಸಲ್ಪಡುವ ರೋಬೋಗಳು ಖಂಡಿತವಾಗಿ ಮಹತ್ತರ ಪಾತ್ರ ವಹಿಸಬಲ್ಲವು. ಭವಿಷ್ಯತ್ತಿನ ಸಮಸ್ಯೆಗಳನ್ನು ಅರಿತು ಈ ರೋಬೋಯಂತ್ರಗಳಿಗೆ ಒಗ್ಗಲು ಮಾನಸಿಕವಾಗಿ ಸಮಾಜ ಸಿದ್ಧವಾಗಬೇಕಾಗಿದೆ.

click me!