ಮಗುವಿನ ಮುದ್ದು ಮುದ್ದಾದ ನಗು, ಹೊಳೆಯುವ ಕಣ್ಗಳು, ಅರಳುವ ಕೆನ್ನೆ, ಚಪ್ಪಾಳೆ ತಟ್ಟುವ ಮೃದುವಾದ ಕೈಗಳು - ಈ ದೃಶ್ಯ ನೋಡುವುದರ ಮುಂದೆ ಪೋಷಕರಿಗೆ ಆಸ್ಕರ್ ಗೆದ್ದ ಸಿನಿಮಾವೂ ಬೇಡ. ಪೋಷಕರು ಹಾಗೂ ಮಗುವಿನ ಬಂಧವೇ ಅಂಥದ್ದು- ಒಬ್ಬರೊಬ್ಬರ ಕಂಪನಿಯಲ್ಲಿ ಖುಷಿ ಕಾಣುವವರು. ಮಗುವಿಗೆ ನಿಮ್ಮ ಸಖ್ಯ ಬೇಕು, ನಿಮಗೆ ಮಗುವಿನ ಸುಖ ಬೇಕು.
ಹೊಸತಾಗಿ ಪೋಷಕರಾಗುವುದೆಂದರೆ ಎಷ್ಟು ದೊಡ್ಡ ಜವಾಬ್ದಾರಿಯೋ, ಅಷ್ಟೇ ಹೆಚ್ಚು ಸಂತೋಷ ಕೂಡಾ. ಮುದ್ದಾದ ಮೃದುವಾದ ಪುಟ್ಟ ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುವುದರಿಂದ ಹಿಡಿದು, ಅದರ ಬೇರೆ ಬೇರೆ ರೀತಿಯ ಅಳುವನ್ನು ಅರ್ಥ ಮಾಡಿಕೊಳ್ಳುವವರೆಗೆ ಪೋಷಕರ ಸುಖವೋ ಸುಖ. ನೀವು ಮಗುವನ್ನು ಹತ್ತಿರದಲ್ಲಿ, ಮೈಗಂಟಿಸಿಕೊಂಡು ಹಿಡಿದುಕೊಂಡಾಗ ಮಗು ಹೆಚ್ಚು ಆರಾಮಾಗಿ ಹಾಗೂ ಭಯವಿಲ್ಲದೆ ಇರುತ್ತದೆ. ನಿಮ್ಮ ಸ್ಪರ್ಶ ಅದಕೆ ಹರ್ಷ. ಮಗು ಹಾಗೂ ಪೋಷಕರ ನಡುವಿನ ಬಂಧ ಹುಟ್ಟಿನಿಂದಲೇ ಬೆಸೆಯುತ್ತಾ ಬರುತ್ತದೆ.
ಸಂಶೋಧನೆಯೊಂದರ ಪ್ರಕಾರ, ಮಗುವು ಮೊದಲ 12 ತಿಂಗಳಲ್ಲಿ ತಂದೆತಾಯಿಯೊಂದಿಗೆ ಚೆನ್ನಾಗಿ ಕನೆಕ್ಟ್ ಆಗಿ ಸಂತೋಷವಾಗಿದ್ದರೆ, 20ರ ವಯಸ್ಸಿನಲ್ಲಿ ತನ್ನ ಸಂಗಾತಿಯೊಡನೆ ಜಗಳವಾದರೂ ಕನೆಕ್ಟೆಡ್ ಫೀಲಿಂಗ್ ಹೊಂದಿರುತ್ತದೆಯಂತೆ. ನಿಮ್ಮ ಹಾಗೂ ಮಗುವಿನ ಉತ್ತಮ ಭವಿಷ್ಯಕ್ಕಾಗಿ ನಿಮ್ಮ ಮಗುವಿನೊಂದಿಗೆ ಎಂದೂ ಮುರಿಯದ, ಮುಗಿಯದ ಸಂಬಂಧವೊಂದನ್ನು ಹೊಸೆಯುವ ಕಲೆ ಕಲಿಯಬೇಕಿದೆ. ಪುಟ್ಟ ಪುಟ್ಟ ವಿಷಯಗಳಿಂದಲೇ ಇದು ಸಾಕಾರವಾಗುತ್ತದೆ.
undefined
ಮಕ್ಕಳಿಗೆ ಕ್ಲೀನ್ ಕ್ಲೀನ್ ಅಂತ ಕಾಟ ಕೊಡುವ ಪೋಷಕರೇ ಒಮ್ಮೆ ಇದನ್ನು ಓದಿ!
ಸ್ಪರ್ಶ
ಮಗುವನ್ನು ಸಾಧ್ಯವಾದಷ್ಟು ನಿಮ್ಮ ಎದೆಗೆ ತಾಕಿಸಿಕೊಂಡು ಕೈಗಳಲ್ಲಿ ಎತ್ತಿಕೊಳ್ಳಿ. ನಿಮ್ಮ ಹಾಗೂ ಮಗುವಿನ ದೇಹಸ್ಪರ್ಶ ಅದರ ಹೃದಯ ಬಡಿತ ಹಾಗೂ ಉಸಿರಾಟವನ್ನು ನಿಯಂತ್ರಿಸಬಲ್ಲದು. ಈ ಮನುಷ್ಯರ ಸ್ಪರ್ಶದಿಂದ ಮಗುವು ಸಮಾಧಾನ ಹೊಂದುವುದಷ್ಟೇ ಅಲ್ಲ, ನಿರ್ಭಯವಾಗಿ ನಿಮ್ಮ ಆಸರೆಯಲ್ಲಿ ಬೆಳೆಯುವುದು.
ತೊನೆದಾಡಿಸಿ
ಮಗು ನಿಮ್ಮ ಕಾಲುಗಳ ಮೇಲೆ ನಿದ್ದೆ ಮಾಡಿದ ಕೂಡಲೇ ತೊಟ್ಟಿಲಿಗೆ ಹಾಕಿ ಬಿಡಬೇಡಿ. ಅದನ್ನು ಕೈಗಳಲ್ಲಿ ಎತ್ತಿ ಹಿಂದೆ ಮುಂದೆ ತೂಗುತ್ತಾ, ಹಾಡು ಹೇಳಿ. ನಿಮ್ಮಿಂದಲೇ ಜನಿಸಿದ ಈ ಪುಟಾಣಿ ಅದ್ಭುತವನ್ನು ಕಂಡು ಚಕಿತಗೊಳ್ಳಿ, ಅದರ ಕೋಮಲ ಸ್ಪರ್ಶವನ್ನು ಅನುಭವಿಸಿ.
ಮಕ್ಕಳ ಭಾವನಾತ್ಮಕ ಆರೋಗ್ಯ ಕಾಪಾಡುವುದು ಹೇಗೆ?
ಮಾತನಾಡಿ
ನಿಮ್ಮ ಮಗು ಮಾತನಾಡುವುದಿಲ್ಲ, ಅದಕ್ಕೆ ನೀವು ಮಾತನಾಡಿದ್ದೂ ಅರ್ಥವಾಗುವುದಿಲ್ಲ ನಿಜ. ಆದರೆ, ನೀವು ಅದರೊಂದಿಗೆ ಖಂಡಿತಾ ಮಾತನಾಡಬಹುದು. ಮಗು ಹುಟ್ಟಿದ ಮೊದಲ ತಿಂಗಳುಗಳಲ್ಲಿ ಬಾಣಂತಿಗೆ ಏಕಾಂಗಿತನ ಕಾಡಬಹುದು. ಈ ಸಂದರ್ಭದಲ್ಲಿ ಮಗುವನ್ನೇ ಬೆಸ್ಟ್ ಫ್ರೆಂಡ್ ಮಾಡಿಕೊಂಡು ಬಿಡಿ. ಅನಿಸಿದ್ದೆಲ್ಲವನ್ನೂ ಮದುವಿನ ಮುಂದೆ ಹೇಳಿಕೊಳ್ಳಿ. ಅದು ಅರ್ಥವಾಗದೆಯೂ ಅರ್ಥವಾದಂತೆ ನಿಮ್ಮತ್ತ ನೋಡುವ, ನಗುವ, ಅಳುವ ಭಾವನೆಗಳನ್ನು ಆಸ್ವಾದಿಸಿ.
ಅಳು ಅರ್ಥ ಮಾಡಿಕೊಳ್ಳಿ
ಮಗುವಿಗೆ ಮಾತನಾಡಲು ಬರುವುದಿಲ್ಲ. ಹೀಗಾಗಿ ಅದು ಎಲ್ಲವನ್ನೂ ಅಳುವಿನ ಮೂಲಕವೇ ಹೇಳುತ್ತದೆ. ಒಂದೊಂದು ಬಾರಿ ಮಗು ಅತ್ತಾಗಲೂ ಕಾರಣಗಳು ಬೇರೆ ಬೇರೆ ಇರಬಹುದು. ಸುಸೂ ಆಗಿದೆಯೇ, ಹೊಟ್ಟೆ ನೋವೇ, ಹಸಿವಾಗಿದೆಯೇ, ಅಥವಾ ಸುಮ್ಮನೆ ಬೋರ್ ಆಗಿ ಅಳುತ್ತಿದೆಯೇ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಿ.
ಲಾಲಿಹಾಡು
ತಾಯಿಯ ಮಾತಿಗಿಂತ ಮಗುವಿಗೆ ಇನ್ನೇನು ಬೇಕು? ಆಕೆಯೊಬ್ಬಳು ಜೊತೆಯಿದ್ದರೆ ಯಾವ ಚಿಂತೆಯಿಲ್ಲದೆ ಮಗು ಆರಾಮಾಗಿ ಆಡಿಕೊಂಡಿರುತ್ತದೆ. ಅಂಥದರಲ್ಲಿ ತಾಯಿ ಏನಾದರೂ ಲಾಲಿಹಾಡು ಹೇಳಿದರೆ ಮಗುವಿಗೆ ಅದಕ್ಕಿಂತ ಖುಷಿ ಬೇರೊಂದಿಲ್ಲ. ಜೊತೆಗೆ, ಸಂತೋಷವಾಗಿ ನಿದ್ರಿಸುತ್ತದೆ.
ಎದೆಹಾಲು
ಆಗ ತಾನೇ ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅಮೃತ ಸಮಾನ. ಎದೆಹಾಲು ಕುಡಿಸುವಾಗೆಲ್ಲ ತಲೆ ನೇವರಿಸುತ್ತಾ ಮಗುವಿಗೆ ಕಾಳಜಿ ತೋರಿಸಿ. ಎದೆಹಾಲು ಕುಡಿಸುವುದೆಂದರೆ ಕೇವಲ ಬೆಳವಣಿಗೆಗೆ ಪೋಷಕಾಂಶ ನೀಡುವುದಲ್ಲ. ಈ ಸಂದರ್ಭದಲ್ಲಿ ಮಗು ನಿಮ್ಮ ವಾಸನೆ, ಸ್ಪರ್ಶ, ಹೃದಯಬಡಿತ ಎಲ್ಲವನ್ನೂ ಅರಿತುಕೊಳ್ಳುತ್ತಿರುತ್ತದೆ.
ಮಕ್ಕಳ ಕೈಗೆ ಸ್ಮಾರ್ಟ್‌ಫೋನ್; ಮೆದುಳಿನ ಬೆಳವಣಿಗೆಗೂ ಮಾರಕ!
ವಾಕಿಂಗ್
ಮಗುವಿಗೆ 4 ತಿಂಗಳು ದಾಟುತ್ತಿದ್ದಂತೆ ಪ್ರತಿ ದಿನ ಅದನ್ನು ವಾಕಿಂಗ್ ಕರೆದುಕೊಂಡು ಹೋಗಿ. ಫ್ರೆಶ್ ಏರ್ ತೆಗೆದುಕೊಳ್ಳುವುದರಿಂದ ನೀವಷ್ಟೇ ಅಲ್ಲ, ಮಗು ಕೂಡಾ ಹೊಸ ಉತ್ಸಾಹದಿಂದ ಮನೆಗೆ ಹಿಂದಿರುಗುತ್ತದೆ. ಅಲ್ಲದೆ, ಹೊಸ ಪ್ರಪಂಚವನ್ನು ಕುತೂಹಲದಲ್ಲಿ ನೋಡುವ ಅದರ ಸಡಗರಕ್ಕೆ ನೀವು ಸದಾ ಜೊತೆಯಾಗಿ.
ಮುದ್ದು
ಇದನ್ನು ಹೇಳುವುದೇ ಬೇಡ. ಮುಗ್ಧ ಮನಸ್ಸಿನ ದೇವರಂತಾ ಮಗುವನ್ನು ನೋಡುವಾಗ ಯಾರಿಗೆ ತಾನೇ ಮುದ್ದು ಬರುವುದಿಲ್ಲ? ಆದರೂ, ಪ್ರತಿದಿನ ಸಮಯ ಸಿಕ್ಕಾಗಲೆಲ್ಲ ಮಗುವನ್ನು ಮುದ್ದಿಸಿ, ಅಪ್ಪಿಕೊಳ್ಳಿ, ಮುತ್ತು ಕೊಡಿ, ಪ್ರೀತಿಯ ಹೆಸರುಗಳಿಂದ ಕರೆಯುತ್ತಾ ಮುದ್ದು ಭಾಷೆಯಲ್ಲಿ ಮಾತನಾಡಿ.