ಫೇಸ್ಬುಕ್‌ನಲ್ಲಿ ನಿಮ್ಮ ಲವ್ ಲೈಫ್ ಬಗ್ಗೆ ಹಾಕಿದ್ದನ್ನು ಜನ ನಂಬ್ತಾರಾ?

By Web Desk  |  First Published Jul 23, 2019, 3:59 PM IST

ಫೇಸ್ಬುಕ್ ನೋಡಿದರೆ ಎಲ್ಲರ ಬದುಕೂ ಎಷ್ಟು ಚೆನ್ನಾಗಿದ್ಯಲ್ಲಪ್ಪಾ, ಎಲ್ಲರೂ ಎಷ್ಟೊಂದು ಸಂತೋಷದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎನಿಸದಿರದು. ಆದರೆ, ಹೀಗೆ ನಿಮ್ಮ ಲವ್ ಲೈಫ್ ಬಗ್ಗೆ ನೀವು ಫೇಸ್ಬುಕ್‌ನಲ್ಲಿ ಹಾಕಿದ್ದನ್ನೆಲ್ಲ ಜನ ನಂಬ್ತಾರಾ? 
 


ಈಗ ಕಾಲ ಹೇಗಾಗಿದೆ ಎಂದರೆ, ನಮಗೆ ಗೆಳೆಯರು ಬೇಕು, ಹೆಚ್ಚು ಹೆಚ್ಚು ಕಾಂಟ್ಯಾಕ್ಟ್‌ಗಳು ಬೇಕು. ಆದರೆ, ಅದು ಫೇಸ್ಬುಕ್, ವಾಟ್ಸಾಪ್ ಮೆಸೇಜು, ಲೈಕಿಗಷ್ಟೇ ಸೀಮಿತವಾಗಬೇಕು. ಎದುರಿನಿಂದ ಭೇಟಿಯಾಗಿ ಮಾತನಾಡುವುದೆಂದರೆ ಬಹುತೇಕರಿಗೆ ಅಲರ್ಜಿ. ಭೇಟಿಗೆ ಸಮಯವಿಲ್ಲ ಎನಿಸುತ್ತದೆ. ಆದರೆ, ಈ ಸೋಷ್ಯಲ್ ಮೀಡಿಯಾಗಳಲ್ಲಿ ಅದೆಷ್ಟು ಸಮಯವನ್ನು ವ್ಯರ್ಥ ಮಾಡುತ್ತಿರುತ್ತೀವೆಂದು ಲೆಕ್ಕ ಹಾಕಿದರೆ, ಅರ್ಧ ದಿನ ಭೇಟಿಯೇ ವಾಸಿ. ಅದೆಷ್ಟು ಲೈಕ್‌ಗಳ ಹಪಹಪಿಗೆ ಬಿದ್ದಿದ್ದೀವೆಂದರೆ ನಾವು ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿರುವುದನ್ನೆಲ್ಲ ಸೋಷ್ಯಲ್ ಮೀಡಿಯಾಗಳಲ್ಲಿ ಘೋಷಣೆ ಮಾಡಲು ಕಾತರರಾಗಿದ್ದೇವೆ. ಅಷ್ಟೇ ಅಲ್ಲ, ಫೇಸ್ಬುಕ್‌ಗೆ ಹಾಕಬೇಕೆಂದೇ ಬದುಕಿನಲ್ಲಿ ಕೆಲವೊಂದನ್ನು ಮಾಡುತ್ತಿದ್ದೇವೆ. ಅದರಲ್ಲೂ ನಮ್ಮ ರೊಮ್ಯಾಂಟಿಕ್ ಲೈಫ್‌ಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಫೇಸ್ಬುಕ್‌ನಲ್ಲಿ ಹಾಕುತ್ತಲೇ ಇರುತ್ತೇವೆ. ಇವುಗಳೆಲ್ಲವನ್ನೂ ನಿಜವೆಂದು ನಿಮ್ಮ ಸೋಷ್ಯಲ್ ಮೀಡಿಯಾ ಸ್ನೇಹಿತರು ನಂಬುತ್ತಾರೆಂದು ಭಾವಿಸಿದ್ದೀರಾ? ನಿಮ್ಮ ಫೇಸ್ಬುಕ್ ಪ್ರೊಫೈಲ್‌ನಲ್ಲಿ ಬಿಂಬಿಸಿಕೊಂಡ ಸಂಬಂಧಗಳ ಕುರಿತು ನಿಮ್ಮ ಜನ ಏನು ಯೋಚಿಸುತ್ತಾರೆ ಎಂಬ ಕುರಿತು ಅಧ್ಯಯನವೊಂದು ಬೆಳಕು ಚೆಲ್ಲದೆ. ಅದು ಕಂಡುಕೊಂಡ ಆಸಕ್ತಿಕರ ವಿಷಯಗಳು ಇಲ್ಲಿವೆ.

ಬಿರುಕು ಬಿಟ್ಟ ಸಂಬಂಧಗಳನ್ನು ನಿಭಾಯಿಸೋದು ಹೇಗೆ? ಇಲ್ಲಿವೆ ಟಿಪ್ಸ್

Tap to resize

Latest Videos

undefined

ಏನಿದು ಅಧ್ಯಯನ?

ಅಧ್ಯಯನವನ್ನು ಎರಡು ಭಾಗಗಳಾಗಿ ಮಾಡಲಾಯಿತು. ಮೊದಲನೆಯದಾಗಿ ಸಂಶೋಧಕರು ಒಂದಿಷ್ಟು ಕಾಲ್ಪನಿಕ ಜನರನ್ನು ಸೃಷ್ಟಿಸಿ ಅವರ ಫೇಸ್ಬುಕ್ ಪ್ರೊಫೈಲ್ ಕ್ರಿಯೇಟ್ ಮಾಡಿದರು. ಈ ಫೇಕ್ ಪ್ರೊಫೈಲ್‌ಗಳಲ್ಲಿ ಕೆಲವಕ್ಕೆ ತಮ್ಮ ಸಂಗಾತಿಯೊಂದಿಗಿರುವಂಥ ಫೋಟೋ ಹಾಕಿದರೆ, ಮತ್ತೆ ಕೆಲವಕ್ಕೆ ರಿಲೇಶನ್ಶಿಪ್ ಸ್ಟೇಟಸ್ ಹಾಕಿದರು. ಮತ್ತೆ ಕೆಲವು ಪ್ರೊಫೈಲ್‌ಗಳು ತಮ್ಮ ಲವ್ ಲೈಫ್ ಬಗ್ಗೆ ಏನನ್ನೂ ಹೇಳಲಿಲ್ಲ. 

ನೀವು ತೋರಿಸಿಕೊಂಡಿದ್ದನ್ನು ಜನ ನಂಬುವರೇ?

ಸುಮಾರು 200 ಜನರಿಗೆ ಈ ಪ್ರೊಫೈಲ್‌ಗಳನ್ನು ನೋಡಿ, ಈ ಕಪಲ್ ನಿಜವಾದ ಬದುಕಿನಲ್ಲಿ ಎಷ್ಟು ಖುಷಿಯಾಗಿರಬಹುದೆಂದು ರೇಟ್ ಮಾಡಲು ಹೇಳಲಾಯಿತು. ಆಸಕ್ತಿಕರ ವಿಷಯವೆಂದರೆ ಸಂತೋಷದಿಂದಿರುವ ಕಪಲ್ ಫೋಟೋ ಹಾಗೂ ಸ್ಟೇಟಸ್ ಇದ್ದ ಪ್ರೊಫೈಲ್‌ಗಳು ರಿಯಲ್ ಲೈಫ್‌ನಲ್ಲಿ ತಮ್ಮ ಸಂಬಂಧದ ಬಗ್ಗೆ ಹೆಚ್ಚು ತೃಪ್ತಿ ಹಾಗೂ ಬದ್ಧತೆಯಿಂದಿರುವುದಾಗಿ ಈ ಜನರು ಪ್ರತಿಕ್ರಿಯಿಸಿದರು. ಅಂದರೆ, ಜನ ನೀವು ನಿಮ್ಮನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಹೇಗೆ ಬಿಂಬಿಸಿಕೊಳ್ಳುವಿರೋ ಅದನ್ನು ನಂಬುತ್ತಾರೆಯೆಂದಾಯಿತು.

ಹೆಂಡ್ತೀರು ಈ ಗುಟ್ಟು ಬಿಟ್ಟು ಕೊಡೋದು ಕಷ್ಟ...? 

ಎರಡನೆಯ ಭಾಗ

ಎರಡನೆಯ ಭಾಗದಲ್ಲಿ ಸರ್ವೆಯಲ್ಲಿ ಪಾಲ್ಗೊಂಡ 200 ಮಂದಿಗೆ ಅರ ಸಂಬಂಧದ ಗುಣಮಟ್ಟದ ಕುರಿತು ಪ್ರಶ್ನಾವಳಿ ನೀಡಲಾಯಿತು. ಬಳಿಕ ಸಂಶೋಧಕರು ಆ ಉತ್ತರಗಳನ್ನೂ, ಅವರ ಫೇಸ್ಬುಕ್ ಪ್ರೊಫೈಲ್‌ಗಳನ್ನೂ ತಾಳೆ ಹಾಕಿ ನೋಡಿದರು. ಆಶ್ಚರ್ಯವೆಂದರೆ, ಪಾರ್ಟ್ನರ್ ಜೊತೆ ಫೋಟೋ ಹಾಕಿ ತಮ್ಮ ಸಂಬಂಧದ ಕುರಿತ ಸ್ಟೇಟಸ್‌ಗಳನ್ನು ಹಾಕಿಕೊಂಡವರಲ್ಲಿ ಬಹುತೇಕರು ನಿಜವಾಗಿಯೂ ತಮ್ಮ ಸಂಗಾತಿಯೊಂದಿಗೆ ಹೆಚ್ಚು ತೃಪ್ತರಾಗಿಯೂ, ಹೆಚ್ಚು ಬದ್ಧತೆಯಿಂದಲೂ ಇದ್ದರು. ಅಂದರೆ, ನಾವಂದುಕೊಂಡ ಹಾಗೆ ಫೋಸ್ಬುಕ್‌ನಲ್ಲಿ ಎಲ್ಲರೂ ಫೇಕ್ ಅಲ್ಲ. ತಮ್ಮ ಸಂತೋಷದ ಕುರಿತು ಮುಖವಾಡ ಹಾಕಿರುವುದಿಲ್ಲ. ಆದರೆ, ಅತಿಯಾದರೆ ಅಮೃತವೂ ವಿಷ. ಅದು ನೀವು ಫೇಸ್ಬುಕ್‌ನಲ್ಲಿ ಪದೇ ಪದೆ ಹಾಕುವ ಸ್ಟೇಟಸ್‌ಗೂ ಅಪ್ಲೈ ಅಗುತ್ತದೆ. ಅತಿಯಾದ ಹ್ಯಾಪಿ ಕಪಲ್ ಫೋಟೋಸ್ ಹಾಗೂ ಪ್ರೀತಿ ತೋರ್ಪಡಿಕೆಯ ಸ್ಟೇಟಸ್‌ಗಳನ್ನು ಜನರು ಇಷ್ಟಪಡುವುದಿಲ್ಲ. ಅಧ್ಯಯನದಲ್ಲಿ ಪಾಲ್ಗೊಂಡವರ ಪ್ರಕಾರ, ಅಂಥ ಫೇಸ್ಬುಕ್ ಬಳಕೆದಾರರ ಜೊತೆ ಭೇಟಿ ಸಂತೋಷ ನೀಡುವುದಿಲ್ಲ.

ಮಿತಿಯೇ ಉತ್ತಮ

ಫೇಸ್ಬುಕ್‌ನ ಅಯಾದ ಬಳಕೆಯ ವಿಷಯಕ್ಕೆ ಬಂದರೆ ನೀವು ತಿಳಿದುಕೊಳ್ಳಬೇಕಾದ ಕೆಲ ವಿಷಯಗಳಿವೆ. ಅಮೆರಿಕನ್ ಜರ್ನಲ್ ಆಫ್ ಎಪಿಡೆಮಾಲಜಿಯಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ, ಅತಿಯಾಗಿ ಫೇಸ್ಬುಕ್ ಬಳಸುವವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಲವು ಏರುಪೇರುಗಳನ್ನು ಕಾಣುತ್ತದೆ. ಹೀಗಾಗಿ, ನಿಮ್ಮ ಪ್ರೀತಿಪಾತ್ರರ, ಹತ್ತಿರದವರ ಜೊತೆ ಸಂಪರ್ಕ ಸಾಧಿಸುವುದಕ್ಕಷ್ಟೇ ಆನ್‌ಲೈನ್ ವೇದಿಕೆ ಬಳಕೆಯಾಗಲಿ. ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡುವ ಅಭ್ಯಾಸವೂ ಚಟವಾಗಿ ತಿರುಗುವವರೆಗೆ ಅಪಾಯಕಾರಿಯೇನಲ್ಲ. ಆಫ್‌ಲೈನ್‌ ಬದುಕಿನಲ್ಲಿ ಒದ್ದಾಡುತ್ತಾ, ಆನ್‌ಲೈನ್‌ನಲ್ಲಿ ಮಾತ್ರ ಬದುಕಿನಲ್ಲಿ ನೂರೆಂಟು ಉತ್ತಮ ಸಂಗತಿಗಳು ಘಟಿಸುತ್ತಿವೆ ಎಂದು ತೋರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅಲ್ಲವೇ? 
 

click me!