ಸಿಲಿಕಾನ್ ಸಿಟಿ ಬೆಂಗಳೂರು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಹಲವಾರು ಐಟಿ-ಬಿಟಿ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು ಹೊಸದಾಗಿ ಆರಂಭವಾಗುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ನಗರಕ್ಕೆ ಆಗಮಿಸುತ್ತಿರುವ ಜನರ ಸಂಖ್ಯೆಯೂ ಹೆಚ್ಚಾಗ್ತಿದೆ. ಇದರ ಜೊತೆಯಲ್ಲೇ ಮನೆ ಮತ್ತು ಪಿಜಿ ಬಾಡಿಗೆಗಳೂ ಗಗನಕ್ಕೇರಿವೆ.
ಬೆಂಗಳೂರು..ಹಳ್ಳಿಗಳಲ್ಲಿ ಇರುವವರಿಗೆ ಕನಸಿನ ನಗರ. ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ ಹೀಗೆ ನಾನಾ ಕಾರಣಗಳಿಗಾಗಿಯೇ ಜನರು ಇಲ್ಲಿ ಸೇರುತ್ತಲೇ ಇರುತ್ತಾರೆ. ಬೇರೆಯದೇ ಜಿಲ್ಲೆ, ರಾಜ್ಯ, ದೇಶಗಳ ಜನರೂ ಇಲ್ಲಿ ಬದುಕು ಕಂಡುಕೊಂಡಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಮನೆ ಮತ್ತು ಪಿಜಿ ಬಾಡಿಗೆಗಳು ಗಗನಕ್ಕೇರಿವೆ. ನಗರದಲ್ಲಿರುವ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಮತ್ತು ಪೇಯಿಂಗ್-ಗೆಸ್ಟ್ ವಸತಿಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಬೆಂಗಳೂರಿನಲ್ಲಿ ಸುಮಾರು 1.5 ಮಿಲಿಯನ್ ಟೆಕ್ಕಿಗಳು ನೆಲೆಸಿದ್ದಾರೆ. ಹೀಗಾಗಿ ಪೇಯಿಂಗ್ ಗೆಸ್ಟ್ ವಸತಿ ಮತ್ತು ಮನೆಗಳ ಬೇಡಿಕೆ ಯಾವಾಗಲೂ ಹೆಚ್ಚಾಗಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಕಡಿಮೆಯಾಗುವುದರೊಂದಿಗೆ ಟೆಕ್ಕಿಗಳು ವರ್ಕ್‌ಫ್ರಂ ಹೋಂ ಮುಗಿಸಿ ನಗರಕ್ಕೆ ಮರಳಿದ್ದಾರೆ. ಇದರಿಂದ ಬಾಡಿಗೆಗಳು ಕನಿಷ್ಠ 25%ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಈ ವರ್ಷವೂ ಮನೆ ಬಾಡಿಗೆ ಶೇ.7-12ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಇದರ ಜೊತೆಗೆ ಮನೆ ಮಾಲೀಕರನ್ನು ಕಡಿಮೆ ಬಾಡಿಗೆಗೆ ಒಪ್ಪಿಸುವುದು ಕಷ್ಟವಾಗಿದೆ ಎಂದಿದ್ದಾರೆ.
ಕೊನೆಗೂ ಬೆಂಗಳೂರಲ್ಲಿ ಮನೆ ಸಿಕ್ತು ಎಂದು ಪೋಸ್ಟ್ ಮಾಡಿದ ವ್ಯಕ್ತಿ, ರೂಮಾ, ಜೈಲಾ ಎಂದ ನೆಟ್ಟಿಗರು!
ಟೆಕ್ಕಿಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿ ಬಾಡಿಗೆ ಹೆಚ್ಚಳ
ಸರ್ಜಾಪುರ ರಸ್ತೆಯಲ್ಲಿ ಸುಮಾರು ರೂ 27,000, 1,000 ಚದರ ಅಡಿ ಅಪಾರ್ಟ್‌ಮೆಂಟ್ (ಎರಡು ಬಿಎಚ್‌ಕೆ) ಬಾಡಿಗೆಯನ್ನು ನೀಡಿದ್ದು, ಈ ವರ್ಷ ಬಾಡಿಗೆಗಳು ಸುಮಾರು 7-12% ರಷ್ಟು ಹೆಚ್ಚಾಗಲಿದೆ ಎಂದು ಅನಾರಾಕ್ ರಿಸರ್ಚ್ ಬಿಡುಗಡೆ ಮಾಡಿರುವ ಡೇಟಾ ತೋರಿಸುತ್ತದೆ. ಹೊರ ವರ್ತುಲ ರಸ್ತೆ, ಬೆಳ್ಳಂದೂರು ಮತ್ತು ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತಲಿನ ವಸತಿ ಪ್ರದೇಶಗಳು ಸುಮಾರು ಅರ್ಧ ಮಿಲಿಯನ್ ಟೆಕ್ಕಿಗಳನ್ನು ಹೊಂದಿರುವುದರಿಂದ ಹೆಚ್ಚಿನ ಬಾಡಿಗೆ ಹೆಚ್ಚಳವನ್ನು ಕಾಣುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಕೆಲವು ಪ್ರದೇಶಗಳಲ್ಲಿ, ಬಾಡಿಗೆಗಳು 30-50% ರಷ್ಟು ಹೆಚ್ಚಾಗಿದೆ.
2023ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರು ಕೇವಲ 13,500 ವಸತಿ ಘಟಕಗಳನ್ನು ಸೇರಿಸಿದೆ ಎಂದು ಅನರಾಕ್ ವರದಿ ಹೇಳಿದೆ, ಇದು ಮುಂಬೈನಲ್ಲಿ 55% ಜಿಗಿತಕ್ಕೆ ಹೋಲಿಸಿದರೆ ಕೇವಲ 3% ಹೆಚ್ಚಾಗಿದೆ. 3.9% ಬಾಡಿಗೆಯ ಇಳುವರಿಯಲ್ಲಿ ಬೆಂಗಳೂರು ಅಗ್ರ ಭಾರತದ ನಗರವಾಗಿದೆ. 2019 ರಿಂದ 2022 ರವರೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 18% ಸರಾಸರಿ ಬಾಡಿಗೆ ಬೆಳವಣಿಗೆ ಕಂಡುಬಂದಿದೆ, ಆದರೆ ರಾಜಾಜಿ ನಗರದಲ್ಲಿ ಇದು 16% ಆಗಿದೆ. ವರ್ತೂರಿನಲ್ಲಿ, ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಸುಮಾರು 10% ಬಾಡಿಗೆ ಹೆಚ್ಚಾಗಿದೆ.
ಫುಡ್ಡೀಸ್‌ಗೆ ಗುಡ್‌ನ್ಯೂಸ್..ಬೆಂಗಳೂರಲ್ಲಿ ಆರಂಭವಾಗಲಿದೆ 2ನೇ ಫುಡ್ ಸ್ಟ್ರೀಟ್, ಎಲ್ಲಿ..ಯಾವಾಗ?
ಪಿಜಿ, ವಸತಿ ಸೌಲಭ್ಯ ಸಿಗದೆ ಸಮಸ್ಯೆ
ಟೆಕ್ಕಿಗಳು ತಮ್ಮ ಬಜೆಟ್‌ನೊಳಗೆ ಉತ್ತಮ ಅಪಾರ್ಟ್‌ಮೆಂಟ್‌ಗಳನ್ನು ಹುಡುಕಲು ಹೆಣಗಾಡುತ್ತಿರುವಾಗ, ಬೆಂಗಳೂರಿನಲ್ಲಿ ಪೇಯಿಂಗ್-ಗೆಸ್ಟ್ ವಸತಿ ಸಹ 25 ರಿಂದ 40% ವರೆಗೆ ಬಾಡಿಗೆಗಳಲ್ಲಿ ಏರಿಕೆ ಕಂಡಿದೆ. ಶಿಕ್ಷಣ ಸಂಸ್ಥೆಗಳ ಬಳಿ ಇರುವ ಪಿಜಿಗಳು ಪ್ರತಿ ವ್ಯಕ್ತಿಗೆ ರೂ 13,000 (ಮೂವರು ಇರುವ ಕೋಣೆ) ರೂ 21000 (ಒಂದೇ ಕೊಠಡಿ) ವರೆಗೆ ಶುಲ್ಕ ವಿಧಿಸುತ್ತಿವೆ ಎಂದು ವರದಿಗಳು ತಿಳಿಸಿವೆ.
ವಿದ್ಯಾರ್ಥಿಗಳು ತಮ್ಮ ಬಜೆಟ್‌ನೊಳಗೆ ಬಾಡಿಗೆ ಬೇಕು ಎಂದು ಹುಡುಕುವುದಾದರೇ ಸ್ಥಳ ಅಥವಾ ಸೌಕರ್ಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾದ ಸ್ಥಿತಿಯಿದೆ. ಇನ್ನು, ಹಲವಾರು ವಿದ್ಯಾರ್ಥಿಗಳು ಕಡಿಮೆ ಬಜೆಟ್‌ನಲ್ಲಿ ಅಪಾರ್ಟ್ಮೆಂಟ್ ಸಿಗದ ಕಾರಣ ಇತರರ ಜೊತೆ ಶೇರಿಂಗ್ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ನೆಟಿಜನ್‌ಗಳು ಅಳಲು ತೋಡಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಬಾಡಿಗೆದಾರರ ಒಕ್ಕೂಟ ಇರಬೇಕು ಎಂದು ಕೆಲವು ನೆಟ್ಟಿಗರು ಒತ್ತಾಯಿಸಿದ್ದಾರೆ.