Dehydration - ಆದ್ರೆ ಹಿಂಗಿಂಗೆಲ್ಲ ಆಗುತ್ತೆ ನೋಡ್ರಣ್ಣ...

By Web Desk  |  First Published Aug 7, 2019, 2:34 PM IST

ಡಿಹೈಡ್ರೈಶನ್ ಆದಾಗ ಬಾಯಾರಿಕೆ ಆಗುತ್ತದೆ. ಆಗ ನೀರು ಕುಡಿದರೆ ಎಲ್ಲ ಸರಿ ಹೋಗುತ್ತದೆ ಎಂದು ಬಹುತೇಕರು ನಂಬಿದ್ದಾರೆ. ಆದರೆ, ನಿರ್ಜಲೀಕರಣ ಸಮಸ್ಯೆಯಾದ್ರೆ ಅದನ್ನು ಬೇರೆ ಬೇರೆ ಭಾಷೆಯಲ್ಲಿ ದೇಹ ಹೇಳಲೆತ್ನಿಸುತ್ತದೆ. ಅರ್ಥ ಮಾಡಿಕೊಂಡರೆ ಆರಾಮಾಗಿರಬಹುದು. 
 


"ಅಯ್ಯೋ ನೀರಿಲ್ದೆ ಸಾಯ್ತಾ ಇದೀನಿ, ಸ್ವಲ್ಪ ನೀರು ಕುಡ್ಸು ನಂಗೆ, ಇಲ್ಲಾಂದ್ರೆ ನೀನೇ ಅನುಭವಿಸಬೇಕು "- ಎಂದು ದೇಹ ಗೋಳೋ ಎನ್ನುತ್ತಲೇ ಎಚ್ಚರಿಕೆ ಕೊಡ್ತಾ ಇದೆ ಅಂದ್ರೆ ಅಸಡ್ಡೆ ಮಾಡ್ಬೇಡಿ. "ನನ್ನ ದೇಹ, ನಂಗಿಷ್ಟ ಬಂದಾಗ ನೀರು ಕುಡೀತೀನಿ. ಬಾಯಾರಿಕೆ ಆದ್ರೆ ಮಾತ್ರ ಕುಡಿಯೋದು" ಎಂದೆಲ್ಲ ಮೊಂಡು ಹಿಡಿಬೇಡಿ. ಏಕೆಂದರೆ, ಡಿಹೈಡ್ರೇಶನ್ ಆದ್ರೆ ಬರೀ ಬಾಯಾರಿಕೆಯಲ್ಲ, ಬೇರೆ ಬೇರೆ ರೀತಿಯ ಅನಾರೋಗ್ಯದಿಂದ ದೈಹಿಕ ಸೂಚನೆಗಳು ಸಿಗುತ್ತವೆ. ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕೆನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ, ಬಹುತೇಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಿಮಗೆ ನಿರ್ಜಲೀಕರಣ ಆಗಿದೆ ಎಂಬುದನ್ನು ಸೂಚಿಸುವ ಅನಾರೋಗ್ಯಗಳಿವು. 

1. ಮಲಬದ್ಧತೆ

Tap to resize

Latest Videos

ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು ತುಂಬಾ ನೀರು ಬೇಕು. ಆಹಾರವು ಜೀರ್ಣನಾಳದಲ್ಲಿ ಸಂಚರಿಸಲು ನೀರು ಬೇಕೇ ಬೇಕು. ಕರುಳು ಆರೋಗ್ಯವಾಗಿರಲು ಕೂಡಾ ನೀರೇ ಮುಖ್ಯ. ನಿಮಗೆ ಮಲಬದ್ಧತೆಯಾಗಿದ್ದರೆ, ಆಹಾರ ಸರಿಯಾಗಿ ಜೀರ್ಣವಾಗಿ ಹೊರಬರಲು ಸಾಕಷ್ಟು ನೀರನ್ನು ನೀವು ಸೇವಿಸುತ್ತಿಲ್ಲ ಎಂದರ್ಥ. 

ತೂಕ ಇಳಿಸಿಕೊಳ್ಳಲು ಮಳೆಗಾಲ ಬೆಸ್ಟ್ ಟೈಮ್...

2. ಲೋ ಬಿಪಿ

ನಮ್ಮ ರಕ್ತದ ಅರ್ಧದಷ್ಟು ಭಾಗ ಪ್ಲಾಸ್ಮಾದಿಂದ ಆಗಿದೆ. ಈ ಪ್ಲಾಸ್ಮಾವು ನೀರು, ಪ್ರೋಟೀನ್ ಹಾಗೂ ಉಪ್ಪಿನ ಮಿಶ್ರಣ. ಹಾಗಾಗಿ, ರಕ್ತವು ಅತಿಯಾಗಿ ಕಾಂನ್ಸೆಂಟ್ರೇಟೆಡ್ ಆಗದಿರದಂತೆ ನೋಡಿಕೊಳ್ಳಲು ನೀರಿನ ಅಗತ್ಯವಿದೆ. ನೀರು ಕಡಿಮೆಯಾದಾಗ ರಕ್ತ ಸ್ವಲ್ಪ ಗಟ್ಟಿಯಾಗುತ್ತದೆ. ಆಗ ಪ್ರಮುಖ ಅಂಗಗಳಿಗೆ ಅದರ ಚಲನೆ ನಿಧಾನವಾಗುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಹೈ ಬಿಪಿಯಂತೆ ಲೋ ಬಿಪಿ ಕೂಡಾ ಆರೋಗ್ಯಕ್ಕೆ ಕೆಟ್ಟದು ಎಂಬುದು ನಿಮಗೆ ಗೊತ್ತೇ ಇದೆ ಅಲ್ಲವೇ? 

3. ಸ್ನಾಯು ಸೆಳೆತ

ಡಿಹೈಡ್ರೇಶನ್‌ನ ಮತ್ತೊಂದು ಅಡ್ಡ ಪರಿಣಾಮ ಎಂದರೆ ಮಸಲ್ ಕ್ರ್ಯಾಂಪಿಂಗ್. ನೀರು ಕಡಿಮೆಯಾದಾಗ ರಕ್ತ ದಪ್ಪವಾಗುತ್ತದೆ ಎಂದು ಈಗಷ್ಟೇ ಹೇಳಿದ್ದೇವೆ. ಹಾಗಾದಾಗ ರಕ್ತದ ಪ್ರಮಾಣ ಇಳಿಕೆಯಾಗುತ್ತದೆ. ಇದರಿಂದ ದೇಹ ಯಾವುದಕ್ಕೆ ರಕ್ತದ ಹರಿವು ಅತಿ ಮುಖ್ಯವೋ ಅದಕ್ಕೆ ಪ್ರಾಮುಖ್ಯತೆ ಕೊಡುತ್ತದೆ. ಹೃದಯಕ್ಕೆ ರಕ್ತ ಹರಿಸುವತ್ತ ಹೆಚ್ಚು ಗಮನ ಹರಿಸುತ್ತದೆ. ಆಗ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಸ್ನಾಯು ಸೆಳೆತ ಉಂಟಾಗುತ್ತದೆ. 

4. ತಲೆನೋವು

ಮೈಗ್ರೇನ್ ಹುಟ್ಟುಹಾಕುವ ಪ್ರಮುಖ ಅಪರಾಧಿಯೇ ಡಿಹೈಡ್ರೇಶನ್. ನಮ್ಮ ಮೆದುಳಿಗೆ ಸರಿಯಾಗಿ ಕೆಲಸ ಮಾಡಲು ಅಗತ್ಯವಿರುವಷ್ಟು ದ್ರವ ಸಿಗದೆ ಹೋದಾಗ ತಲೆನೋವು, ಮೈಗ್ರೇನ್, ತಲೆ ತಿರುಗುವುದು, ಪ್ರಜ್ಞೆ ತಪ್ಪಿದಂತಾಗುವುದು ಮುಂತಾದ ಲಕ್ಷಣಗಳು ತಲೆದೋರುತ್ತವೆ. ಹೀಗೆಲ್ಲ ಆಗುತ್ತಿದ್ದರೆ ಮೊದಲು ಹೋಗಿ ಚೆನ್ನಾಗಿ ನೀರು ಕುಡಿಯಿರಿ. 

ಕೂದಲು ಹಾಗೂ ತ್ವಚೆಗೆ ಎಳನೀರ ಆರೈಕೆ!

5. ಸಿಕ್ಕಾಪಟ್ಟೆ ಸುಸ್ತು

ದಿನದ ಕೆಲ ಸಮಯ ಇದ್ದಕ್ಕಿದ್ದಂತೆ ಸಖತ್ತು ಸುಸ್ತಾಗುತ್ತದೆಯೇ? ಮುಂಚೆಯೇ ಹೇಳಿದಂತೆ ನೀರು ಕಡಿಮೆಯಾದರೆ ರಕ್ತದೊತ್ತಡ ಕಡಿಮೆಯಾಗುತ್ತದೆ. ಲೋ ಬಿಪಿಯಿಂದಾಗಿ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ, ಹೃದಯ ಬಡಿತದ ವೇಗ ಹೆಚ್ಚಾಗುತ್ತದೆ. ಪರಿಣಾಮವಾಗಿ ವಿಪರೀತ ಸುಸ್ತು ಆವರಿಸಿಕೊಳ್ಳುತ್ತದೆ. 

6. ಉರಿಮೂತ್ರ, ಕಡಿಮೆ ಬಾರಿ ಮೂತ್ರ ಪಾಸ್ ಮಾಡುವುದು

ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಗೆ ಹೇಗೆ ನೀರು ಅತ್ಯಗತ್ಯವೋ, ಮೂತ್ರಾಂಗ ವ್ಯವಸ್ಥೆಗೂ ಅಷ್ಟೇ ಅಗತ್ಯ. ರಕ್ತದಿಂದ ಬೇಡದ ವೇಸ್ಟ್ ತೆಗೆದು ಅದನ್ನು ಯೂರಿನ್ ಆಗಿ ಪರಿವರ್ತಿಸಲು ನೀರು ಬೇಕೇ ಬೇಕು. ಈ ನೀರು ಸೇವನೆ ಕಡಿಮೆಯಾದಾಗ ಮೂತ್ರ ಪಾಸ್ ಮಾಡಬೇಕಾದ ಅಗತ್ಯವೂ ಕಡಿಮೆಯಾಗುತ್ತದೆ. ಈ ಬೇಡದ ವೇಸ್ಟ್ ದೇಹದಲ್ಲೇ ಉಳಿಯುತ್ತದೆ. ಅಲ್ಲದೆ, ಮೂತ್ರವು ಹೆಚ್ಚು ಕಾನ್ಸೆಂಟ್ರೇಟೆಡ್ ಆಗಿ ಹಳದಿ ಬಣ್ಣದಲ್ಲಿ ಹೋಗುತ್ತದೆ. ಇದರಿಂದ ಉರಿಮೂತ್ರ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಎಲ್ಲವೂ ಸರಿಯಿದೆ ಎಂದರೆ ಮೂತ್ರ ಯಾವಾಗಲೂ ನೀರಿನ ಬಣ್ಣದಲ್ಲಿರಬೇಕು. 

7. ಒಣತ್ವಚೆ

ನಮ್ಮ ಚರ್ಮ ಕೂಡಾ ಒಂದು ಅಂಗ. ಅದು ಸರಿಯಾಗಿ ಕೆಲಸ ನಿರ್ವಹಿಸಲು ರಕ್ತ ಪರಿಚಲನೆ ಚೆನ್ನಾಗಿರಬೇಕು. ಮಾಯಿಶ್ಚರೈಸರ್ ಹಚ್ಚಿದರೆ ಸಾಕಲ್ಲ ಎಂದು ನಿಮಗನಿಸಬಹುದು. ಅದು ಹೊರಗಿನಿಂದ ರಕ್ಷಣೆಯಾಯಿತು. ಒಳಗಿನಿಂದ ರಕ್ತ ಸಂಚಲನ ಚೆನ್ನಾಗಿ ಆಗುವಂತೆ ನೋಡಿಕೊಳ್ಳಲು ನೀರು ಬೇಕೇ ಬೇಕು. 

8. ಒಣಗಿದ ಬಾಯಿ

ಬೆಳಗ್ಗೆ ಏಳುವಾಗ ಬಾಯಿಯಲ್ಲಿ ಹತ್ತಿ ತುರುಕಿಟ್ಟುಕೊಂಡಂತೆನಿಸಬಹುದು. ಎಂಜಲ ಉತ್ಪಾದನೆ ಕಡಿಮೆಯಾದದ್ದು ಅನುಭವಕ್ಕೆ ಬರಬಹುದು. ಸಲೈವಾ ಉತ್ಪಾದನೆ ಹೆಚ್ಚಾಗಲು ಹೆಚ್ಚು ದ್ರವಪದಾರ್ಥ ಒಳಸೇರಬೇಕು. ಈ ಒಣಬಾಯಿಯಿಂದ ವಾಸನೆ ಕೂಡಾ ಬರುತ್ತದೆ. ಹೀಗಾಗಿ, ಹೆಚ್ಚು ಹೆಚ್ಚು ನೀರು ಕುಡಿದು ಒಣಬಾಯಿಯಾಗದಂತೆ ಬಾಯಿ ಮುಚ್ಚಿಸಿ. 

click me!