ನಾವು ತಿನ್ನುವ ಆಹಾರ ಕೇವಲ ದೈಹಿಕ ಆರೋಗ್ಯ ಕಾಪಾಡುವುದಲ್ಲ, ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತವೆ. ಆಹಾರದ ಆಯ್ಕೆ ಎಷ್ಟು ಮುಖ್ಯವೆಂದರೆ ಕೆಲವು ನಮ್ಮ ಮಾನಸಿಕ ನೆಮ್ಮದಿಯನ್ನು ಮತ್ತಷ್ಟು ಕಸಿದರೆ, ಮತ್ತೆ ಕೆಲವು ಮೂಡ್ ಚೆನ್ನಾಗಾಗಿಸುತ್ತವೆ.
ಇಂದಿನ ಜೀವನಶೈಲಿಯಲ್ಲಿ ಆತಂಕ, ಒತ್ತಡ, ಖಿನ್ನತೆಯ ಲಕ್ಷಣಗಳು ಬಹುತೇಕ ಜನರನ್ನು ಹೆಚ್ಚೂ ಕಡಿಮೆ ಪ್ರತಿದಿನ ಆವರಿಸಿಕೊಂಡೇ ಇರುತ್ತವೆ. ಇದು ಕೇವಲ ಮಾನಸಿಕ ಸಮಸ್ಯೆಯಲ್ಲ, ದೈಹಿಕವಾಗಿ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಏಕೆಂದರೆ ಒತ್ತಡವು ಕಾರ್ಟಿಸಾಲ್ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಜಂಕ್ ಫುಡ್‌ಗಾಗಿ ಕ್ರೇವಿಂಗ್ಸ್ ಹೆಚ್ಚುತ್ತದೆ.
ಇನ್ನು ಆತಂಕ ಹೆಚ್ಚಿರುವವರು ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ. ಆಗ ಕೂಡಾ ಕಾರ್ಟಿಸಾಲ್ ಬಿಡುಗಡೆ ಹೆಚ್ಚುತ್ತದೆ. ಇನ್ನು ಕೆಲಸದಲ್ಲಿ ಬ್ಯುಸಿಯಾಗಿ ತಿನ್ನಲು ಸಮಯವಾಗದೆ, ಸಮಯವಾದಾಗ ಸಿಕ್ಕಿಸಿಕ್ಕಿದ್ದನ್ನೆಲ್ಲ ತಿನ್ನುವಂತಾಗುವುದು ಹಲವರ ಸಮಸ್ಯೆ. ಇವೆಲ್ಲವೂ ಮೂಡನ್ನು ಹಾಳು ಮಾಡುವ, ದೇಹಕ್ಕೆ ಹೊರೆಯಾದ ಆಹಾರಾಭ್ಯಾಸಗಳೇ. ಆದರೆ, ಇಂಥ ಸಮಸ್ಯೆಗಳಿಂದ ಬಳಲುವಾಗ ಮೂಡನ್ನು ಉತ್ತಮಗೊಳಿಸುವ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು.
ಅಂಥ ಆಹಾರಗಳು ಯಾವುವು ನೋಡೋಣ..
ಸಾರ್ಡೈನ್ಸ್
ಆಯ್ಲಿ ಫಿಶ್‌ನಲ್ಲಿ ಒಮೆಗಾ-3 ಹೆಚ್ಚಿದ್ದು, ಅದು ಮೂಡ್ ಉತ್ತಮಗೊಳಿಸುವ ಕೆಲಸ ಮಾಡುತ್ತದೆ. ಎನ್‌ಸಿಬಿಐನಲ್ಲಿ ಪ್ರಕಟವಾದ ವರದಿಯಂತೆ, ಖಿನ್ನತೆಯ ಲಕ್ಷಣವಿರುವವರು ಒಮೆಗಾ 3 ಹೆಚ್ಚಿರುವ ಆಹಾರ ತಿಂದ ಬಳಿಕ ಗುಣಮುಖರಾದುದು ಸಾಬೀತಾಗಿದೆ.
ಕಡಲೆಕಾಳು
ಖಿನ್ನತೆ ಹೊಂದಿರುವವರಲ್ಲಿ ವಿಟಮಿನ್ ಬಿ6 ಕೊರತೆ ಇರುವುದನ್ನು ಕೆನಡದ ಸಂಶೋಧಕರು ಕಂಡುಕೊಂಡಿದ್ದಾರೆ. ಕಡಲೆಕಾಳಿನಲ್ಲಿ ವಿಟಮಿನ್ ಬಿ6 ಹೆಚ್ಚಿದ್ದು, ರುಚಿಯೂ ಹೆಚ್ಚು, ಪ್ರೋಟೀನ್ ಕೂಡಾ.
ಕಿತ್ತಳೆ ಹಣ್ಣುಗಳು
ವಿಟಮಿನ್ ಸಿ ರಕ್ತದೊತ್ತಡ ತಗ್ಗಿಸುವ ಜೊತೆಗೆ ಒತ್ತಡದ ಹಾರ್ಮೋನ್ ಕಾರ್ಟಿಸೋಲ‌್ ಬಿಡುಗಡೆಯನ್ನು ಕೂಡಾ ಕಡಿಮೆ ಮಾಡುತ್ತದೆ.
ಪಾಲಕ್
ಪಾಲಕ್‌ನಲ್ಲಿ ಕೂಡಾ ವಿಟಮಿನ್ ಬಿ ಹೇರಳವಾಗಿದ್ದು, ಅದು ದೇಹದಲ್ಲಿ ಸೆರಟೋನಿನ್ ಹಾರ್ಮೋನ್ ಬಿಡುಗಡೆ ಹೆಚ್ಚಿಸಿ ಮೂಡನ್ನು ಖುಷಿಯಾಗಿರಿಸುತ್ತದೆ.
ಬೆಣ್ಣೆಹಣ್ಣು
ಬೆಣ್ಣೆಹಣ್ಣು ಕೂಡಾ ವಿಟಮಿನ್ ಬಿಯಿಂದ ಶ್ರೀಮಂತವಾಗಿದ್ದು, ಇದು ಸೆರಟೋನಿನ್ ಹಾಗೂ ಡೊಪಮೈನ್ ನ್ಯೂರೋಟ್ರಾನ್ಸ್‌ಮಿಟರ್ಸ್ ಬಿಡುಗಡೆ ಮಾಡಿ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.
ಬ್ರೊಕೋಲಿ
ಬ್ರೊಕೋಲಿಯಿಂದ ಹಲವಾರು ಆರೋಗ್ಯ ಲಾಭಗಳಿವೆ. ಬ್ರೊಕೋಲಿಯಲ್ಲಿರುವಷ್ಟು ಕ್ರೋಮಿಯಂ ಇನ್ನಾವುದೇ ತರಕಾರಿಯಲ್ಲಿ ಸಿಗುವುದಿಲ್ಲ. ಈ ಕ್ರೋಮಿಯಂ, ಸೆರೆಟೋನಿನ್, ನೋರೆಪೈನ್‌ಫ್ರೈನ್ ಹಾಗೂ ಮೆಲಟೋನಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಎಲ್ಲ ನ್ಯೂರೋಟ್ರಾನ್ಸ್‌ಮಿಟರ್‌ಗಳೂ ಮೂಡನ್ನು ಚೆನ್ನಾಗಾಗಿಸಿ ದೇಹವನ್ನು ಆರೋಗ್ಯಯುತವಾಗಿಡುತ್ತವೆ.
ಕಪ್ಪು ಬೀನ್ಸ್
ಕಪ್ಪು ಬೀನ್ಸ್‌ನಲ್ಲಿ ಫೋಲಿಕ್ ಆ್ಯಸಿಡ್ ಹಾಗೂ ಮೆಗ್ನೀಶಿಯಂ ಹೆಚ್ಚಾಗಿರುತ್ತದೆ. ಇವೆರಡು ಪೋಷಕಸತ್ವಗಳು ಕೂಡಾ ಖಿನ್ನತೆಯ ವಿರುದ್ಧ ಹೋರಾಡುವಲ್ಲಿ ಎತ್ತಿದ ಕೈ. ಆ್ಯಕ್ಟಿವ್ ಡಿಸಾರ್ಡರ್ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯ ಪ್ರಕಾರ, ಮೆಗ್ನೀಶಿಯಂ ಅಧಿಕವಾಗಿರುವ ಡಯಟ್ ಡಿಪ್ರೆಶನ್ ಕಡಿಮೆ ಮಾಡುತ್ತದೆ.
ಗೋಡಂಬಿ
ಗೋಡಂಬಿಯಲ್ಲಿ ಕೂಡಾ ಮೆಗ್ನೀಶಿಯಂ ಅಧಿಕವಾಗಿದ್ದು, ಸದಾ ಬೇಜಾರು, ಸುಮ್ಮಸುಮ್ಮನೆ ಅಲು ಬರುವುದು ಇಂಥ ಲಕ್ಷಣಗಳು ನಿಮ್ಮಲ್ಲಿದ್ದರೆ ಪ್ರತಿದಿನ 8-10 ಗೋಡಂಬಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಬಾದಾಮಿ
ಬಾದಾಮಿಯಲ್ಲಿ ವಿಟಮಿನ್ ಬಿ2 ಹಾಗೂ ಇ ಹೇರಳವಾಗಿದೆ. ಈ ವಿಟಮಿನ್‌ಗಳು ಒತ್ತಡದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ರಿಇನ್ಫೋರ್ಸ್ ಮಾಡುತ್ತವೆ.
ಈರುಳ್ಳಿ
ಈರುಳ್ಳಿಯು ಕ್ಯಾನ್ಸರ್ ರಿಸ್ಕ್ ಕಡಿಮೆ ಮಾಡುತ್ತದೆ. ಜೊತೆಗೆ ಒತ್ತಡದ ವಿರುದ್ಧ ಹೋರಾಡಲು ಕೂಡಾ ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಆ್ಯಂಟಿ ಆಕ್ಸಿಡೆಂಟ್ ಮೆದುಳನ್ನು ಒತ್ತಡದ ವಿರುದ್ಧ ರಕ್ಷಿಸುತ್ತದೆ.
ಮೊಸರು
ಪ್ರೊಬಯೋಟಿಕ್ ಮೊಸರು ಡಿಪ್ರೆಶನ್ ಲಕ್ಷಣ ಕಡಿಮೆ ಮಾಡುತ್ತದೆ. ಎನ್‌ಸಿಬಿಐನಲ್ಲಿ ವರದಿಯಾದ ಅಧ್ಯಯನದಂತೆ ಕರುಳಿನ ಪ್ರೊಬಯೋಟಿಕ್‌ಗಳು ಮೆದುಳು ಹಾಗೂ ಕರುಳಿನ ನಡುವೆ ಸಂವಹನ ಸಾಧಿಸುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತವೆ. ಖಿನ್ನತೆಯಿಂದ ಬಳಲುವವರಿಗೆ ಅವು ಬಹಳ ಅಗತ್ಯ.
ಕ್ಯಾರಟ್
ಕ್ಯಾರೆಟ್‌ನಲ್ಲಿ ಲುಟೇನ್ ಹೆಚ್ಚಾಗಿರುತ್ತದೆ. ಇದು ಹಳದಿ ಹಾಗೂ ಆರೆಂಜ್ ಬಣ್ಣದ ಆಹಾರಗಳಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್. ಕಣ್ಣಿನ ಆರೋಗ್ಯ ಹೆಚ್ಚಿಸುವ ಜೊತೆಗೆ ಇವು ಮಾನಸಿಕ ಆರೋಗ್ಯವನ್ನು ಕೂಡಾ ಹೆಚ್ಚಿಸುತ್ತವೆ.