ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ. ಇದೀಗ ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಕೊಯ್ಲಿನ ಕೆಲಸ ಆರಂಭವಾಗಿದೆ. ಕೂಲಿ ಕಾರ್ಮಿಕರು ಕಾಫಿ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಕಾಫಿ ತೋಟಗಳಿದ್ದು, ಇವುಗಳಲ್ಲಿ ಅರೆಬಿಕಾ ಹಾಗೂ ರೊಬಸ್ಟಾ ಕಾಫಿಯನ್ನು ಬೆಳೆಸಲಾಗುತ್ತದೆ.
ಮಡಿಕೇರಿ(ನ.11): ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ. ಇದೀಗ ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಕೊಯ್ಲಿನ ಕೆಲಸ ಆರಂಭವಾಗಿದೆ. ಕೂಲಿ ಕಾರ್ಮಿಕರು ಕಾಫಿ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಕಾಫಿ ತೋಟಗಳಿದ್ದು, ಇವುಗಳಲ್ಲಿ ಅರೆಬಿಕಾ ಹಾಗೂ ರೊಬಸ್ಟಾ ಕಾಫಿಯನ್ನು ಬೆಳೆಸಲಾಗುತ್ತದೆ.
ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅರೆಬಿಕಾ ಕಾಫಿ ಬೆಳೆಸಲಾಗುತ್ತಿದೆ. ಸುಂಟಿಕೊಪ್ಪ, ಚೆಟ್ಟಳ್ಳಿ, ಮಾದಾಪುರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಈ ಭಾಗದಲ್ಲಿ ಅತಿ ಹೆಚ್ಚು ಅರೆಬಿಕಾ ಕಾಫಿ ತೋಟಗಳಿದ್ದು, ಈ ಪ್ರದೇಶದಲ್ಲಿ ಮೊದಲ ಸುತ್ತಿನ ಕೊಯ್ಲು ಮಾಡಲಾಗುತ್ತಿದೆ.
ಈರುಳ್ಳಿ: ಗದಗದಲ್ಲಿ ಕ್ವಿಂ.ಗೆ 200, ಮಂಗಳೂರಲ್ಲಿ ಕೆಜಿಗೆ 70..!
ಕಾರ್ಮಿಕರ ಸಮಸ್ಯೆ:
ಬೆಳೆಗಾರರಿಗೆ ಕಾಫಿ ಕೊಯ್ಲಿನ ಸಂದರ್ಭ ಕೂಲಿ ಕಾರ್ಮಿಕರ ಸಮಸ್ಯೆ ಕಾಡುವುದು ಸಾಮಾನ್ಯವಾಗಿದೆ. ಕೆಲವು ಬೃಹತ್ ಖಾಸಗಿ ಕಾಫಿ ತೋಟಗಳ ಸಂಸ್ಥೆಗಳಲ್ಲಿ ಕೂಲಿ ಕಾರ್ಮಿಕರಿಗೆ ವಸತಿ ಸೌಲಭ್ಯಗಳನ್ನು ನೀಡಿ ಆಶ್ರಯ ನೀಡಲಾಗಿದೆ. ಆದರೆ ಸಣ್ಣ ಬೆಳೆಗಾರರು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ಇಂದು ಬೃಹತ್ ಕಾಫಿ ಸಂಸ್ಥೆಯಿಂದ ಹಿಡಿದು ಸಣ್ಣಪುಟ್ಟ ಕಾಫಿ ತೋಟಗಳಲ್ಲೂ ವಲಸಿಗ ಕಾರ್ಮಿಕರನ್ನು ಇಟ್ಟುಕೊಳ್ಳಲಾಗಿದೆ. ಕಾಫಿ ಕೊಯ್ಲಿನ ಅವಧಿಯಲ್ಲಿ ಕಾರ್ಮಿಕರನ್ನು ಕರೆಸಿಕೊಂಡು ಕೆಲಸ ಮಾಡಿಸಲಾಗುತ್ತದೆ. ಕೆಲಸ ಪೂರ್ಣಗೊಂಡ ನಂತರ ಸ್ವಸ್ಥಾನಕ್ಕೆ ಮರಳುತ್ತಾರೆ.
ಬೆಳೆಗಾರರಿಗೆ ಆತಂಕ:
ಕಾಫಿ ಬೆಳೆಗಾರರಿಗೆ ಈಗ ಮಳೆಯದ್ದೇ ಆತಂಕ. ಅಕ್ಟೋಬರ್ ಕೊನೆಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಹಣ್ಣಾಗಿದ್ದ ಕಾಫಿ ನೆಲಕಚ್ಚಿತ್ತು. ಇದೀಗ ಅರೆಬಿಕಾ ಕಾಫಿ ಕೊಯ್ಲು ಮಾಡಲಾಗುತ್ತಿದ್ದು, ಈಗ ಕೊಯ್ಲಾದ ಕಾಫಿಯನ್ನು ಒಣಗಿಸಬೇಕು. ಇದಕ್ಕೆ ಬಿಸಿಲಿನ ವಾತಾವರಣ ಇರಲೇಬೇಕು. ಆದರೆ ಈ ಬಾರಿ ಮತ್ತೆ ಮಳೆ ಆಗಬಹುದೆಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ಕೊಯ್ಲಿನಲ್ಲಿ ಮಹಿಳೆಯರು:
ಕಾಫಿ ಕೊಯ್ಲು ಕೆಲಸದಲ್ಲಿ ಮಹಿಳಾ ಕಾರ್ಮಿಕರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ. ಗಿಡದಲ್ಲಿ ಸಂಪೂರ್ಣವಾಗಿ ಕಾಫಿ ಹಣ್ಣಾದರೆ ದಿನಕ್ಕೆ ಸರಾಸರಿ 50- 100 ಕೆ.ಜಿ. ವರೆಗೆ ಓರ್ವ ಮಹಿಳೆ ಕಾಫಿಯನ್ನು ಕೀಳುತ್ತಾರೆ. ಅರೆಬಿಕಾ ಕಾಫಿಯನ್ನು ನಿಂತಲ್ಲೇ ಕೊಯ್ಲು ಮಾಡಬಹುದು. ಆದರೆ ರೊಬಸ್ಟಾ ಕಾಫಿ ಕೊಯ್ಲು ಮಾಡುವುದು ಅಷ್ಟು ಸುಲಭವಲ್ಲ.
ಮೊದಲ ಸುತ್ತಿನ ಕೊಯ್ಲು:
ಇದೀಗ ಹಣ್ಣಾಗಿರುವ ಅರೆಬಿಕಾ ಕಾಫಿಯನ್ನು ಮಾತ್ರ ಮೊದಲ ಸುತ್ತಿನಲ್ಲಿ ಕೊಯ್ಲು ಮಾಡಲಾಗುತ್ತಿದೆ. ಒಂದು ವೇಳೆ ಮಳೆ ಬಂದರೆ ಹಣ್ಣಾದ ಕಾಫಿ ಉದುರುತ್ತದೆ. ಆದ್ದರಿಂದ ಇದೀಗ ಹಣ್ಣಾಗಿರುವ ಕಾಫಿ ಕೊಯ್ಲು ಮಾಡಿ ಮತ್ತೊಂದು ಸುತ್ತಿನಲ್ಲೂ ಕೊಯ್ಯಲಾಗುತ್ತದೆ. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲಾಗುತ್ತದೆ. ಅರೆಬಿಕಾ ಕಾಫಿ ಕೊಯ್ಲು ಮುಕ್ತಾಯಗೊಳ್ಳುತ್ತಿದ್ದಂತೆ ರೊಬೆಸ್ಟಾ ಕಾಫಿ ಹಣ್ಣಾಗಿ ಇದರ ಕೊಯ್ಲು ಕೂಡ ನಡೆಯಲಿದೆ. ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ರೊಬೆಸ್ಟಾ ಕಾಫಿ ತೋಟಗಳಿವೆ.
-ವಿಘ್ನೇಶ್ ಎಂ. ಭೂತನಕಾಡು