ಕೆಲಸಕ್ಕಾಗಿ ಅಸ್ಸಾಂ, ಪಶ್ಚಿಮ ಬಂಗಾಳಗಳಿಂದ ಕಾರ್ಮಿಕರ ವಲಸೆ| ಅಪರಾಧ ಕೃತ್ಯಗಳೂ ಹೆಚ್ಚುತ್ತಿದೆ| ಗಡಿಪಾರು ಮಾಡಲು ಆಗ್ರಹ| ಮಧ್ಯವರ್ತಿಗಳು ಅಸ್ಸಾಂ ಹಾಗೂ ಇತರೆ ಕಡೆಗಳಿಂದ ಕಾರ್ಮಿಕರನ್ನು ತಂದು ಬಿಟ್ಟಿದ್ದಾರೆ| ಕಾರ್ಮಿಕರ ಹಾವಳಿಯಿಂದಾಗಿ ಸ್ಥಳೀಯರು ಸಮಸ್ಯೆ ಅನುಭವಿಸುವಂತಾಗಿದೆ|
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ(ಅ.29): ಕೊಡಗು ಜಿಲ್ಲೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ನಾನಾ ಕಡೆಗಳಿಂದ ಕಾಫಿ ತೋಟಗಳಲ್ಲಿ ಕೂಲಿ ಕಲಸಕ್ಕೆ ಆಗಮಿಸಿರುವ ವಲಸಿಗರ ಹಾವಳಿ ಮಾತ್ರವಲ್ಲದೆ, ಅಪರಾಧ ಕೃತ್ಯಗಳೂ ಹೆಚ್ಚುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಹಲವು ಅಪರಾಧ ಕೃತ್ಯ ಪ್ರಕರಣಗಳು ನಡೆದಿವೆ. ಇವರು ಬಾಂಗ್ಲಾದಿಂದ ವಲಸೆ ಬಂದಿರುವುದಾಗಿ ಕೆಲವರು ಆರೋಪ ಮಾಡುತ್ತಿದ್ದು, ತಮ್ಮ ಸ್ವಸ್ಥಾನಕ್ಕೆ ಅವರನ್ನು ಗಡಿಪಾರು ಮಾಡಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ.
ಕೊಡಗು ಜಿಲ್ಲೆಯ ಬಹುತೇಕ ಕಾಫಿ ತೋಟಗಳಲ್ಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಕಡಿಮೆ ಕೂಲಿ ನೀಡಿ ಅಸ್ಸಾಂ ಮೂಲದ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮಧ್ಯವರ್ತಿಗಳು ಅಸ್ಸಾಂ ಹಾಗೂ ಇತರೆ ಕಡೆಗಳಿಂದ ಕಾರ್ಮಿಕರನ್ನು ತಂದು ಬಿಟ್ಟಿದ್ದಾರೆ. ಆರಂಭದಲ್ಲಿ ಕಾಫಿ ಕೊಯ್ಲಿನ ಅವಧಿಯಲ್ಲಿ ಮಾತ್ರ ವಲಸಿಗರನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಕಾರ್ಮಿಕರು ಕಾಯಂ ಆಗಿ ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇದೀಗ ಇಂತಹ ಕಾರ್ಮಿಕರ ಹಾವಳಿಯಿಂದಾಗಿ ಸ್ಥಳೀಯರು ಸಮಸ್ಯೆ ಅನುಭವಿಸುವಂತಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಾಂಗ್ಲಾ ದೇಶದ ಪ್ರಜೆಗಳೂ ಜಿಲ್ಲೆಯಲ್ಲಿ ವಾಸವಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಜಿಲ್ಲೆಯಲ್ಲಿ ಬಾಂಗ್ಲಾ ಪ್ರಜೆಗಳು ವಾಸವಾಗಿದ್ದಾರೆ ಎಂಬುದು ಕೆಲ ಪ್ರಕರಣಗಳಲ್ಲಿ ದೃಢಪಟ್ಟಿದೆ. ಇಂತಹ ವಲಸಿಗರಿಂದ ಕೊಡಗು ಜಿಲ್ಲೆಗೆ ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲೆಯಿಂದ ಅವರ ಸ್ಥಳಕ್ಕೆ ಕಳುಹಿಸಬೇಕೆಂಬ ಒತ್ತಾಯಗಳು ಜೋರಾಗಿ ಕೇಳಿಬರುತ್ತಿವೆ. ಈ ಹಿಂದೆ ಜಿಲ್ಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗಳನ್ನೂ ನಡೆಸಿದ್ದವು.
ಕಡಿಮೆ ಕೂಲಿ, ಹೆಚ್ಚು ಕೆಲಸ:
ಅಸ್ಸಾಂ ಕಾರ್ಮಿಕರಿಗೆ ಸ್ಥಳೀಯ ಕಾರ್ಮಿಕರಿಗೆ ನೀಡುವ ವೇತನಕ್ಕಿಂತ ಕಡಿಮೆ ಕೂಲಿ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಅವರು ಹೆಚ್ಚು ಕೆಲಸ ಮಾಡುತ್ತಾರೆ. ಈ ಹಿನ್ನೆಲೆ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕಾಫಿ ತೋಟದ ಮಾಲಿಕರು ವಲಸಿಗರನ್ನು ದುಡಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕೊಡಗಿನ ತಾರಿಕಟ್ಟೆಯಲ್ಲಿ ವಲಸಿಗರಿಗೆ ಕಾನೂನು ಬಾಹಿರವಾಗಿ ಆಧಾರ್ ಕಾರ್ಡ್ ವಿತರಣೆ ಮಾಡುತ್ತಿದ್ದ ನಾಲ್ವರನ್ನು ಕೊಡಗು ಜಿಲ್ಲಾ ಪೊಲೀಸರು 2017ರ ಏಪ್ರಿಲ್‌ನಲ್ಲಿ ಬಂಧಿಸಿದ್ದರು. ಅಸ್ಸಾಂ ಮೂಲದ ವಲಸಿಗರಿಂದ 750ರು. ಹಣ ಪಡೆದು ಆಧಾರ್ ಲಿಂಕ್ ಮಾಡಿಕೊಡುವ ದಂಧೆಯಲ್ಲಿ ತೊಡಗಿದ್ದರು.
ಬಾಂಗ್ಲಾ ಪ್ರಜೆಯ ಬಂಧನ:
ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸವಿದ್ದ ಬಾಂಗ್ಲಾ ವ್ಯಕ್ತಿಯನ್ನು 2018ರ ಫೆಬ್ರವರಿ ತಿಂಗಳಲ್ಲಿ ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದರು. ಬಾಂಗ್ಲಾದೇಶದ ಢಾಕಾ ರಾಜ್ಯದ ರಾಜಸೈ ಜಿಲ್ಲೆಯ ಥಾನಾ ಗುದಗರಿಯ ದಿಹಾರ್ ಮಾಣಿಕ್ ಚೌಕ್‌ನ ನಿವಾಸಿ ಸಹರುಲ್ ಇಸ್ಲಾಂ ಬಂಧಿತನಾಗಿದ್ದ ಆರೋಪಿ. ಈತ ಕೂಲಿ ಕೆಲಸಕ್ಕೆಂದು ಮೂರು ಬಾರಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ನುಸುಳಿಕೊಂಡು ಭಾರತಕ್ಕೆ ಬಂದಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿತ್ತು.
ವಲಸಿಗರಿಂದ ಅಪರಾಧ ಕೃತ್ಯಗಳು:
ಪ್ರಕರಣ 1: ಕೊಡಗಿನ ಸಿದ್ದಾಪುರ ಸಮೀಪದ ಎಮ್ಮೆಗುಂಡಿ ತೋಟದಲ್ಲಿ ಪಶ್ಚಿಮ ಬಂಗಾಳ ಮೂಲದ ರಂಜಿತ್ ಹಾಗೂ ಸಂದೀಪ್ ಎಂಬುವರು ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿದ್ದಲ್ಲದೆ ಕೊಲೆ ಮಾಡಿದ್ದರು.
ಪ್ರಕರಣ 2: ಮೂಲತಃ ಅಸ್ಸಾಂ ರಾಜ್ಯದ ಉಸ್ಮಾನ್ ಅಲಿ ಎಂಬಾತ ಜ.3 ರಂದು ತನ್ನ ಎರಡನೇ ಪತ್ನಿಯನ್ನು ಜಿಲ್ಲೆಯ ಅರಮೇರಿ ಗ್ರಾಮದಲ್ಲಿ ಹತ್ಯೆ ಮಾಡಿದ್ದ. ಮೊದಲ ಪತ್ನಿ ಜೊತೆಗೆ ವಾಸವಿದ್ದ ಉಸ್ಮಾನ್ ಅಲಿಯನ್ನು ತನ್ನ ಜೊತೆಗೆ ಬರುವಂತೆ ಎರಡನೇ ಪತ್ನಿ ಮರ್ಜೀನಾ ಒತ್ತಾಯಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯನ್ನು ಮನೆ ಬಳಿ ಕರೆಸಿ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿದ್ದ.
ಪ್ರಕರಣ 3: ಸೋಮವಾರಪೇಟೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ಅಸ್ಸಾಂ ಮೂಲದ ಯುವತಿಯೊಬ್ಬಳು ಕಳೆದ ಆಗಸ್ಟ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ನಡೆದಿತ್ತು.
ಪ್ರಕರಣ 4: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಡಗು ಜಿಲ್ಲೆಯ ಚೇರಂಬಾಣೆಯಲ್ಲಿ 2017ರ ನವೆಂಬರ್‌ನಲ್ಲಿ ನಡೆದಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್ ಅವರು, ಕೊಡಗು ಜಿಲ್ಲಾದ್ಯಂತ ಕಾಫಿ ತೋಟಗಳಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯಗಳ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ತಮ್ಮಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕೂಲಿ ಕಾರ್ಮಿಕರ ಬಗ್ಗೆ ದಾಖಲೆಗಳ ಸಮೇತ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ವಲಸಿಗರ ಆಧಾರ್ ಸೇರಿದಂತೆ ವಿವಿಧ ದಾಖಲೆಗಳನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂಬ ನಿಯಮವಿದೆ. ಆದರೆ ಮಾಲಿಕರು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದ ಬಾಂಗ್ಲಾ ನುಸುಳುಕೋರರಿಗೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ. ಬಾಂಗ್ಲನ್ನರು ಅಸ್ಸಾಂ ಮೂಲಕವೇ ಬರುತ್ತಾರೆ. ಇಂಥವರ ಬಗ್ಗೆ ಸೂಕ್ತ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಿದ್ದಾಪುರದ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಅವರು ತಿಳಿಸಿದ್ದಾರೆ.
ವಲಸಿಗರ ವಿರುದ್ಧ ಆಕ್ರೋಶ:
ಸಿದ್ದಾಪುರ ಸಮೀಪದ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ ಪಶ್ಚಿಮ ಬಂಗಾಳದ ವಲಸಿಗರ ವಿರುದ್ಧ ಕೊಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಗೊಂಡಿತ್ತು. ವಲಸಿಗರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತಷ್ಟುಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ವಲಸಿಗರನ್ನು ಅವರ ಊರಿಗೆ ಗಡಿಪಾರು ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.