*ಕೋವಿಡ್ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ವ್ಯರ್ಥವಾಗಿ ಹಣ ತೆರುತ್ತಿರುವ ಸರ್ಕಾರ
*ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟೆಲೇಟರ್ ಸೇರಿ ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಖಾಲಿ
*ಆದರೂ ಸೋಂಕಿತರಿಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಶುಲ್ಕ ನೀಡಿ ಚಿಕಿತ್ಸೆ
ಬೆಂಗಳೂರು (ಜ. 27): ಕೊರೋನಾ ಸೋಂಕಿತರ ಚಿಕಿತ್ಸೆಗೆ (Covid 19) ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇದ್ದರೂ, ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸ್ವತಃ ಸರ್ಕಾರವೇ ಶುಲ್ಕ ಪಾವತಿಸಿ ಚಿಕಿತ್ಸೆ ಕೊಡಿಸುತ್ತಿದೆ. ಬಿಬಿಎಂಪಿ ಖಾಸಗಿ ಆಸ್ಪತ್ರೆಗೆ ಪ್ರತಿದಿನ ₹10ಲಕ್ಷ ಖರ್ಚು ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ (Government) 1200ಕ್ಕೂ ಹೆಚ್ಚು ಬೆಡ್ ಖಾಲಿ ಇದ್ದರೂ ಖಾಸಗಿ ಆಸ್ಪತ್ರೆಗಳಿಗೆ (Private Hospital) ಡಿಮ್ಯಾಂಡ್ ಹೆಚ್ಚಿದೆ. ಖಾಸಗಿ ಆಸ್ಪತ್ರೆ ಶುಲ್ಕ ಪಾವತಿಸುವ ಮೂಲಕ ಬಿಬಿಎಂಪಿ ಅನಗತ್ಯ ಖರ್ಚು ಮಾಡುತ್ತಿದೆ.
ಕೊರೋನಾ ಸೋಂಕಿನ ಸಂದರ್ಭದಲ್ಲಿ(ಈ ಹಿಂದಿನ ಎರಡು ಅಲೆಗಳಲ್ಲಿ) ಒಮ್ಮೆಗೆ ಆಸ್ಪತ್ರೆ ದಾಖಲಾತಿಗಳು ಹೆಚ್ಚಳವಾಗಿ ಹಾಸಿಗೆಗಳ ಅಭಾವ ಸೃಷ್ಟಿಯಾಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಸರ್ಕಾರಿ ಕೋಟಾದಡಿ(ಚಿಕಿತ್ಸೆ ವೆಚ್ಚ ಪಾವತಿಸಿ) ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Covid 3rd Wave: ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೊರೋನಾ ಕೇಸ್ ಹೆಚ್ಚಳ
ಈ ಹಿಂದೆ ಸರ್ಕಾರಿ ಆಸ್ಪತೆಗಳಲ್ಲಿ ಹಾಸಿಗೆಗಳು ಭರ್ತಿಯಾದ ಬಳಿಕವಷ್ಟೇ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಸೋಂಕಿತರಿಗೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಸೋಂಕಿನ ತೀವ್ರತೆ ಕಡಿಮೆ ಇದ್ದು, ಆಸ್ಪತ್ರೆ ದಾಖಲಾತಿ ಸಾಕಷ್ಟುಕಡಿಮೆ ಇದೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸಾಕಷ್ಟುಹಾಸಿಗೆಗಳು ಖಾಲಿ ಇವೆ. ಆದರೂ, ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾ ಹಾಸಿಗೆಗಳನ್ನು ನೀಡಲಾರಂಭಿಸಿದೆ.
ಸರ್ಕಾರ ಪಾವತಿಸುತ್ತಿರುವ ಶುಲ್ಕ: ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರೊಬ್ಬರಿಗೆ ಪ್ರತಿ ದಿನ ಚಿಕಿತ್ಸೆಗೆ ಸಾಮಾನ್ಯ ಹಾಸಿಗೆಗೆ ಐದು ಸಾವಿರ ರು., ಆಕ್ಸಿಜನ್ ಹಾಸಿಗೆಗೆ ಏಳು ಸಾವಿರ ರು., ಐಸಿಯು ಹಾಸಿಗೆಗೆ ಎಂಟು ಸಾವಿರ ರು., ವೆಂಟಿಲೇಟರ್ ಸಹಿತಿ ಐಸಿಯುಗೆ 10 ಸಾವಿರ ರು., ಶುಲ್ಕ ನಿಗಡಿ ಪಡಿಸಲಾಗಿದೆ.
ಕಳೆದ 2 ಅಲೆಗಳ 140 ಕೋಟಿ ರು. ಬಾಕಿ: ‘ಮೊದಲ ಮತ್ತು ಎರಡನೇ ಅಲೆಯಲ್ಲಿ ಸರ್ಕಾರಿ ಕೋಟಾದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ಸಾವಿರಾರು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಈವರೆಗೂ ಚಿಕಿತ್ಸಾ ವೆಚ್ಚ ಪಾವತಿಯಾಗಿಲ್ಲ. ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಅಸೋಸಿಯೇಷನ್ (ಫನಾ) ನೀಡುವ ಮಾಹಿತಿಯಂತೆ, ಸೋಂಕಿತರ ಚಿಕಿತ್ಸಾ ವೆಚ್ಚ ಪಾವತಿಸುವ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇಂದಿಗೂ 140 ಕೋಟಿ ರು. ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ: Night Curfew ಸಮಯ ಬದಲಾವಣೆ ಮಾಡಿ: ಉದ್ಯಮಿಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ
ಖಾಸಗಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಕೊರೊನಾ ವಾರ್ಡ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದುಪ್ಪಟ್ಟು ಸಂಬಳ ನೀಡಬೇಕು. ಚಿಕಿತ್ಸೆಗೆ ಅತ್ಯಗತ್ಯವಾದ ವೈದ್ಯಕೀಯ ಸಲಕರಣೆಗಳ ಖರೀದಿಗೆ ಲಕ್ಷಾಂತರ ರು. ನೀಡಬೇಕು. ಆದರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಸಾಕಷ್ಟುಮನವಿ ಮಾಡಿದ್ದೇವೆ. ಮುಂದಿನ ವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಾಕಿ ಶುಲ್ಕ ಪಾವತಿಗೆ ಮನವಿ ಮಾಡಲಾಗುವುದು ಎಂದು ಫನಾ ಅಧ್ಯಕ್ಷ ಡಾ.ಪ್ರಸನ್ನ ತಿಳಿಸಿದ್ದಾರೆ.
ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಕೊರೋನಾ: ಕರ್ನಾಟಕ(Karnataka) ಪ್ರಸ್ತುತ ಕರೋನಾ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸದ್ಯ ದೇಶದಲ್ಲಿಯೇ(India) ಅತಿ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುತ್ತಿರುವುದು ಕರ್ನಾಟಕದಲ್ಲಿಯೇ! ಅದರಲ್ಲೂ, ಕಳೆದ ಕೆಲ ದಿನಗಳಿಂದ ಸೋಂಕು ಹೆಚ್ಚು ಬಾಧಿಸುವ ರಾಜ್ಯವೆಂದು ಹೇಳುವ ಮಹಾರಾಷ್ಟ್ರಕ್ಕಿಂತಲೂ ಒಂದೂವರೆಪಟ್ಟು ಅಧಿಕ ಮಂದಿ ಕರ್ನಾಟಕದಲ್ಲಿ ಸೋಂಕಿತರಾಗುತ್ತಿದ್ದಾರೆ. ಕೊರೋನಾ(Coronavirus) ಹೊಸ ಪ್ರಕರಣಗಳು ಮಹಾರಾಷ್ಟ್ರ(Maharashtra) ಮತ್ತು ತಮಿಳುನಾಡಿನಲ್ಲಿ(Tamil Nadu) 30 ಸಾವಿರ, ಕೇರಳದಲ್ಲಿ 25 ಸಾವಿರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ 15 ಸಾವಿರ, ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಐದು ಸಾವಿರ ಆಸುಪಾಸಿಗೆ ಇಳಿಕೆಯಾಗಿವೆ.
ಆದರೆ, ಕರ್ನಾಟಕದಲ್ಲಿ ಡಿ.23ರಂದು 50 ಸಾವಿರಕ್ಕೆ ಹೆಚ್ಚಳವಾಗಿದ್ದು, ಕಳೆದ ಎಂಟು ದಿನಗಳಿಂದ 40 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ನಾಲ್ಕು ದಿನಗಳಿಂದ 40 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ, ಸೋಂಕಿತರ ಸಾವು ದಾಖಲೆಯಷ್ಟು ವರದಿಯಾಗುತ್ತಿದೆ. ಈ ಮೂಲಕ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ಆರೋಗ್ಯ ತಜ್ಞರು(Health Expert)