ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಶನಿವಾರ ಇಲ್ಲಿ ಮೊದಲ ಕೆಡಿಪಿ ಸಭೆ ನಡೆಯುತ್ತಿದ್ದು, ಜಿಲ್ಲೆಯ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ. ಮಳೆ ಅಭಾವದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವುದು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮೈಚಳಿ ಬಿಡಿಸಿಬೇಕಿದೆ.
ನಾರಾಯಣ ಹೆಗಡೆ
ಹಾವೇರಿ (ಜು.1) : ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಶನಿವಾರ ಇಲ್ಲಿ ಮೊದಲ ಕೆಡಿಪಿ ಸಭೆ ನಡೆಯುತ್ತಿದ್ದು, ಜಿಲ್ಲೆಯ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ. ಮಳೆ ಅಭಾವದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವುದು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮೈಚಳಿ ಬಿಡಿಸಿಬೇಕಿದೆ.
undefined
ಸಕ್ಕರೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಜು. 1ರಂದು ಮೊದಲ ತ್ರೈಮಾಸಿಕ ಕೆಡಿಪಿ ಸಭೆ ಕರೆಯಲಾಗಿದೆ. ಸರ್ಕಾರ ರಚನೆಯಾಗಿ 45 ದಿನಗಳ ಬಳಿಕ ನಡೆಯುತ್ತಿರುವ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಆಗಲಿದೆ. ಕಳೆದ ಐದಾರು ತಿಂಗಳಿಂದ ನೀತಿ ಸಂಹಿತೆ, ಚುನಾವಣಾ ಕಾರ್ಯ ಎಂಬ ಕಾರಣದಿಂದ ಅಭಿವೃದ್ಧಿ ಕಾರ್ಯಗಳು ಬಹುತೇಕ ಸ್ಥಗಿತಗೊಂಡಂತೆ ಆಗಿವೆ.
ಹಾವೇರಿ ಉಸ್ತುವಾರಿ ಸಚಿವರಾಗಿ ಶಿವಾನಂದ ಪಾಟೀಲ್: ಹೆಗಲೇರಿವೆ ಹಲವು ಸವಾಲು!
ಜಿಲ್ಲೆಯ 6 ಕ್ಷೇತ್ರಗಳಲ್ಲಿ ಐವರು ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಇದ್ದಾರೆ. ಎಲ್ಲ ಶಾಸಕರೂ ಅನುಭವಿಗಳೇ ಆಗಿರುವುದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಆಡಳಿತ ಯಂತ್ರಕ್ಕೆ ಮೊದಲ ಸಭೆಯಲ್ಲೇ ಚುರುಕು ಮುಟ್ಟಿಸುವ ಕಾರ್ಯ ಮಾಡಬೇಕಿದೆ. ಜಿಡ್ಡುಗಟ್ಟಿದ ಅಧಿಕಾರಿಗಳಿಗೆ ಹದವಾಗಿ ಚಾಟಿ ಬೀಸಬೇಕಿದೆ. ಉಸ್ತುವಾರಿ ಸಚಿವರ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಜಿಲ್ಲೆಯ ಜನರು ಎದುರಿಸುತ್ತಿರುವ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಂಡು ತಮ್ಮ ರಾಜಕೀಯ ಹಾಗೂ ಆಡಳಿತದ ಅನುಭವವನ್ನು ಜಿಲ್ಲೆಯ ಅಭಿವೃದ್ಧಿಗೆ ತೊಡಗಿಸಬೇಕಿದೆ.
ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ:
ಜಿಲ್ಲೆಯ ಆಡಳಿತಯಂತ್ರ ಚುರುಕಾಗಿಲ್ಲ ಎಂಬುದು ಸಾರ್ವಜನಿಕರಿಂದ ಕೇಳಿಬರುತ್ತಿರುವ ಆರೋಪ. ಅದರಲ್ಲೂ ಕೆಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಯಾರ ಕೈಗೂ ಸಿಗುತ್ತಿಲ್ಲ. ಜತೆಗೆ, ತಮ್ಮ ಇಲಾಖೆಯನ್ನೂ ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಅಂಥವರು ಯಾರು ಎಂಬುದು ಜಿಲ್ಲೆಯ ಶಾಸಕರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಅಂಥ ಅಧಿಕಾರಿಗಳಿಗೆ ಚಳಿ ಬಿಡಿಸುವ ಕೆಲಸವಾಗಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದವರು, ಯಾವಾಗಲೂ ಕಚೇರಿಯಲ್ಲಿ ಇಲ್ಲದ ಅಧಿಕಾರಿಗಳು ಇದ್ದಾರೆ. ತಮ್ಮ ಇಲಾಖೆಯಡಿ ಇರುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲೂ ನಿರ್ಲಕ್ಷ್ಯ ತೋರುವರಿದ್ದಾರೆ. ಅಂಥವರಿಗೆಲ್ಲ ಸ್ವಲ್ಪ ಬಿಸಿ ಮುಟ್ಟಿಸುವ ಕೆಲಸವಾಗಬೇಕಿದೆ.
ಸಮಸ್ಯೆಯಲ್ಲಿ ಅನ್ನದಾತ:
ಜಿಲ್ಲೆಯಲ್ಲಿ ಈ ಸಲ ಮುಂಗಾರು ಮಳೆ ಕೈಕೊಟ್ಟಿದೆ. ಜೂನ್ ತಿಂಗಳ ಮುಗಿದರೂ ಇನ್ನೂ ಬಿತ್ತನೆಯಾಗಿಲ್ಲ. ಜೂನ್ ತಿಂಗಳ 123 ಮಿಮೀ ವಾಡಿಕೆ ಮಳೆಯಲ್ಲಿ ಈ ವರೆಗೆ 59 ಮಿಮೀ ಮಳೆಯಾಗಿದೆ. ಅಂದರೆ, ಶೇ. 52ರಷ್ಟುಮಳೆ ಕೊರತೆಯಾಗಿದೆ. ಕೆರೆ-ಕಟ್ಟೆಗಳು ಬತ್ತಿವೆ. ಜಿಲ್ಲೆಯಲ್ಲಿ ಹರಿದಿರುವ ನದಿಗಳು ಒಣಗಿವೆ. ಅಂತರ್ಜಲ ಮಟ್ಟಕುಸಿದಿದ್ದು, ಕೊಳವೆಬಾವಿಗಳು ಬರಿದಾಗಿವೆ. ಬಿತ್ತನೆ ಬೀಜ, ಗೊಬ್ಬರ ಖರೀದಿಸಿರುವ ರೈತರು ಕೈಕಟ್ಟಿಕೂರುವಂತಾಗಿದೆ.
ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದು ಒಣಗಿದೆ. ಎರಡು ದಿನಗಳಿಂದ ಮಳೆ ವಾತಾವರಣವಿದ್ದರೂ ಬಿತ್ತನೆಗಾಗುವಷ್ಟುಬಂದಿಲ್ಲ. ಇನ್ನೊಂದು ವಾರದೊಳಗೆ ಬಿತ್ತನೆಯಾಗದಿದ್ದರೆ ಮುಂಗಾರು ಬೆಳೆಯನ್ನೇ ರೈತರು ಕಳೆದುಕೊಳ್ಳಲಿದ್ದಾರೆ. ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ರೈತರು ಆರ್ಥಿಕ ಸಂಕಷ್ಟಎದುರಿಸುತ್ತಿದ್ದಾರೆ. ಅದಕ್ಕಾಗಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಚರ್ಚಿಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಒತ್ತಡ ತರಬೇಕಿದೆ.
ಗಂಭೀರ ಸಮಸ್ಯೆ ಬಗ್ಗೆ ಚರ್ಚೆಯಾಗಲಿ:
ಜಿಲ್ಲೆಯ ಸರ್ಕಾರಿ ಶಾಲೆಗಳ ಒಂದು ಸಾವಿರಕ್ಕೂ ಹೆಚ್ಚು ಕೊಠಡಿಗಳು ದುರಸ್ತಿಗೆ ಕಾಯುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಇಲ್ಲದೇ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈ ನಿಟ್ಟಿನಲ್ಲಿ ಶಾಶ್ವತ ಕಾಮಗಾರಿ ಅಗತ್ಯವಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಏತ ನೀರಾವರಿ ಯೋಜನೆ, ಹಲವು ಅಭಿವೃದ್ಧಿ ಕಾಮಗಾರಿಗಳ ಸದ್ಯದ ಪ್ರಗತಿ ಪರಿಶೀಲಿಸಿ ಚುರುಕು ನೀಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಆದ್ಯತೆಗಳನ್ನು ಶಾಸಕರು ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಸಮಗ್ರ ಅಭಿವೃದ್ಧಿಗೆ ಒಂದಾಗಿ ಶ್ರಮಿಸಬೇಕಿದೆ.
ವಿಜಯಪುರ: ಜಿಲ್ಲೆಗೆ ಸಚಿವಗಿರಿಯ ಡಬಲ್ ಧಮಾಕಾ, ಇಂಡಿಗೆ ಮತ್ತೆ ಅನ್ಯಾಯ!
ಮನೆ ಹಾನಿ ಪರಿಹಾರದ ಬಗ್ಗೆ ಧ್ವನಿಯೆತ್ತುವರೇ?
ಕಳೆದ ವರ್ಷ ಅತಿವೃಷ್ಟಿಯಲ್ಲಿ ಹಾನಿಯಾದ ಮನೆಗಳಿಗೆ ನೀಡುವ ಪರಿಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್, ಈಗ ಈ ಬಗ್ಗೆ ಧ್ವನಿಯೆತ್ತಬೇಕಿದೆ. ಅರ್ಹ ಫಲಾನುಭವಿಗಳಿಗೆ ಪರಿಹಾರ ಕಲ್ಪಿಸಲು ಮುಂದಾಗಬೇಕಿದೆ. ಅತಿವೃಷ್ಟಿವೇಳೆ ಬಿದ್ದ ಮನೆಗಳಿಗೆ ಸರ್ಕಾರ . 5 ಲಕ್ಷ ಪರಿಹಾರ ಘೋಷಿಸಿತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಎ ಕೆಟಗರಿಯಲ್ಲಿ ಪರಿಹಾರ ಪಡೆಯಲು ಅನೇಕರು ಕಸರತ್ತು ನಡೆಸಿದ್ದರು. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಅನರ್ಹರಿಗೆ ಮನೆ ಪರಿಹಾರ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ಸಿನವರು ಆರೋಪಿಸಿದ್ದರು. ಈ ಬಗ್ಗೆ ಈಗಿನ ಕಾಂಗ್ರೆಸ್ ಶಾಸಕರು ಯಾವ ಹೆಜ್ಜೆ ಇಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.