ವರದಿ : ಶ್ರೀಶೈಲ ಮಠದ
ಬೆಳಗಾವಿ (ಸೆ.04): ಭಾಷೆ, ಗಡಿ ವಿಚಾರದಲ್ಲೇ ಚುನಾವಣೆ ಎದುರಿಸುತ್ತ ಬಂದಿದ್ದ ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಈ ಬಾರಿ ಯಾರ ಪಾಲಾಗಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.
ಬೆಳಗಾವಿ ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಚಿಹ್ನೆ ಮೇಲೆ ಚುನಾವಣೆ ಎದುರಿಸಿವೆ. ರಾಜಕೀಯ ಪಕ್ಷಗಳ ಸ್ಪರ್ಧೆಯಿಂದ ಎಂಇಎಸ್ ಕಂಗಾಲಾಗಿದೆ. ಮರಾಠಿ ಬಾಹುಳ್ಯವುಳ್ಳ ವಾರ್ಡ್‌ಗಳಲ್ಲಿ ಮತದಾರರು ಯಾವ ಪಕ್ಷ ಬೆಂಬಲಿಸುತ್ತಾರೆ? ಇಲ್ಲವೇ ಪಕ್ಷೇತರ ಅಭ್ಯರ್ಥಿಗಳಿಗೆ ಜೈ ಎನ್ನುತ್ತಾರೆಯೆ ಎನ್ನುವ ಹಲವು ಪ್ರಶ್ನೆಗಳು ಸಹಜವಾಗಿ ಮೂಡಿವೆ.
ಬೆಳಗಾವಿ ಪಾಲಿಕೆಯ ಈ ಹಿಂದಿನ ಎಲ್ಲ ಚುನಾವಣೆಗಳು ಕನ್ನಡ- ಮರಾಠಿ ಭಾಷೆ, ಗುಂಪುಗಾರಿಕೆ ಹೆಸರಿನಲ್ಲಿ ಎದುರಿಸಿತ್ತು. ಭಾಷೆ, ಗುಂಪುಗಾರಿಕೆ ರಾಜಕಿಯವೇ ಇಲ್ಲಿ ಪ್ರಬಲ ಹಿಡಿತ ಸಾಧಿಸಿತ್ತು. ಕನ್ನಡ ಮತ್ತು ಮರಾಠಿ ಭಾಷಿಕರೇ ಕೂಡಿಕೊಂಡು ಗುಂಪುಗಾರಿಕೆ ಹೆಸರಿನಲ್ಲಿ ರಾಜಕೀಯ ಮಾಡುತ್ತ ಬಂದಿದ್ದರು. ಆದರೆ, ಈ ಬಾರಿ ಭಾಷೆ, ಗುಂಪುಗಾರಿಕೆ ರಾಜಕೀಯಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ತೊಡೆತಟ್ಟಿನಿಂತಿವೆ. ಈ ಹೊಸ ರಾಜಕೀಯ ಬೆಳವಣಿಗೆಯಿಂದ ಭಾಷೆ, ಗುಂಪುಗಾರಿಕೆ ರಾಜಕೀಯ ನೇಪಥ್ಯಕ್ಕೆ ಸರಿಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಈ ಬಾರಿ ಬೆಳಗಾವಿ ಪಾಲಿಕೆ ಕಾಂಗ್ರೆಸ್‌ಮಯವಾಗಲಿದೆ: ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ
ಒಟ್ಟು 58 ವಾರ್ಡ್‌ಗಳಿಗೆ ಮತದಾನ ನಡೆದಿದ್ದು, ಅಧಿಕಾರ ಹಿಡಿಯಲು ಬೇಕಾಗಿರುವ ಸಂಖ್ಯೆ 30. ಆದರೆ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗೆಲವು ಅಷ್ಟೊಂದು ಸುಲಭವಲ್ಲ. ಪಕ್ಷೇತರ ಅಭ್ಯರ್ಥಿಗಳು ಕೂಡ ಗೆಲ್ಲುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟಬಹುಮತ ಸಿಗದಿದ್ದರೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. 30ರ ಮ್ಯಾಜಿಕ್ ಸಂಖ್ಯೆ ತಲುಪಿದವರು ಸುಲಭವಾಗಿ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಬಹುದು.
ಒಟ್ಟು 385 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ 55, ಕಾಂಗ್ರೆಸ್ 45, ಜೆಡಿಎಸ್ 11, ಆಮ್ ಆದ್ಮಿ ಪಾರ್ಟಿ 27, ಎಸ್‌ಡಿಪಿಐ ಪಾರ್ಟಿ 1, ಉತ್ತಮ ಪ್ರಜಾಕೀಯ ಪಾರ್ಟಿ 1 ಹಾಗೂ ಎಐಎಂಐಎಂನ ಏಳು ಅಭ್ಯರ್ಥಿಗಳಿದ್ದಾರೆ. 285 ಪಕ್ಷೇತರ ಅಭ್ಯರ್ಥಿಗಳು ತಮ್ಮ ರಾಜಕೀಯ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ. ಅವರ ರಾಜಕೀಯದ ಹಣೆಬರಹ ಮತಯಂತ್ರ ಸೇರಿದ್ದಾಗಿದೆ. ರಾಜಕೀಯ ಪಕ್ಷಗಳ ಸ್ಪರ್ಧೆಯಿಂದ ಕಂಗಾಲಾಗಿರುವ ಎಂಇಎಸ್, ಶಿವಸೇನೆ ಜೊತೆಗೆ ಮೈತ್ರಿಮಾಡಿಕೊಂಡಿದೆ. ಅಲ್ಲದೇ, ಸೋಲಿನ ಭೀತಿಯಿಂದಾಗಿ ಎಂ ಪ್ಲಸ್ ಎಂ ರಾಜಕೀಯ ಸೂತ್ರವನ್ನೂ ಕಂಡುಕೊಂಡಿದೆ. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬಂದಿದ್ದರೂ ಚುನಾವಣಾ ಫಲಿತಾಂಶ ಏನಾಗುತ್ತದೆ ಎಂಬುದನ್ನು ಸುಲಭವಾಗಿ ಹೇಳುವುದು ಕಷ್ಟಸಾಧ್ಯ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸೇರಿದಂತೆ ಘಟಾನುಘಟಿ ನಾಯಕರು ಸ್ಥಳದಲ್ಲೇ ಬೀಡುಬಿಟ್ಟು ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಕೈಗೊಂಡಿದ್ದರು. ಸಚಿವರ ದಂಡೇ ಪ್ರಚಾರ ನಡೆಸಿತ್ತು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಮಾರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೂಡ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಯಿಂದ ಮುನಿಸಿಕೊಂಡ ಹಿನ್ನೆಲೆಯಲ್ಲಿ ಫಲಿತಾಂಶ ಕೊನೆಯ ಹಂತದ ಎಣಿಕೆಯಲ್ಲಿ ಬಿಜೆಪಿ ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಆಗ ಬಿಜೆಪಿ ಗೆಲುವಿಗೆ ಲೀಡ್ ದೊರೆತಿತ್ತು. ಇದು ಪಾಲಿಕೆ ಚುನಾವಣೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಒಬ್ಬರಿಗೆ ಬಹುಮತ ಬರುವುದು ಸುಲಭವೂ ಅಲ್ಲ. ಗೆಲುವು ಯಾರಿಗೆ ಎನ್ನುವುದನ್ನು ಈಗ ಹೇಳುವುದು ತುಂಬ ಕಷ್ಟ. ಒಂದು ವೇಳೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟಬಹುಮತ ದೊರೆಯದಿದ್ದರೆ ಮೈತ್ರಿ ಆಡಳಿತ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೇ, ಯಾರ ಜೊತೆ ಯಾರು ಹೋಗುತ್ತಾರೆ ಎನ್ನುವುದು ಕೂಡ ಪ್ರಮುಖವಾಗಿದೆ.