* ನದಿ ಹೂಳು ತೆಗೆದು ರೈತರಿಗೆ ಉಚಿತ ಮರಳು: ಸಚಿವ ಕಾರಜೋಳ
* ರಮೇಶಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ
* ಮಲಪ್ರಭಾ ನದಿ ಒತ್ತುವರಿ ತೆರವಿಗೆ ಕ್ರಮ
ಧಾರವಾಡ(ಫೆ.13): ಹಿಜಾಬ್(Hijab) ಬಗ್ಗೆ ತೀರ್ಪು ಬರುವರೆಗೂ ನಾವೆಲ್ಲ ಕಾಯೋಣ, ಎಲ್ಲರೂ ಸೇರಿ ಒಂದು ಸುಂದರ ನಾಡು ಕಟ್ಟೋಣ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರವಾಗಿ ಪ್ರಕರಣ ನ್ಯಾಯಾಲಯದಲ್ಲಿದೆ(Court). ಅದನ್ನು ನಾವೆಲ್ಲ ಪಾಲನೆ ಮಾಡಬೇಕು. ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ ಎಂದರು.
ರಮೇಶ ಜಾರಕಿಹೊಳಿಗೆ(Ramesh Jarkiholi) ಸಚಿವ ಸ್ಥಾನ ಕೊಡಬೇಕೆಂದು ವಾಲ್ಮೀಕಿ ಸಮುದಾಯದ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ವೈಯಕ್ತಿಕ ಹೇಳಿಕೆ ಕೊಡಲು ಆಗುವುದಿಲ್ಲ. ಹೈಕಮಾಂಡ್ ಮತ್ತು ಸಿಎಂ ಅವರಿಗೆ ಬಿಟ್ಟವಿಚಾರ ಎಂದು ತಿಳಿಸಿದರು.
Hubballi: ಹಿಜಾಬ್-ಕೇಸರಿ ಶಾಲು ವಿವಾದ, ಸಭೆ ಕರೆಯಿರಿ: ಸಭಾಪತಿ ಹೊರಟ್ಟಿ
ಮಲಪ್ರಭಾ ನದಿ ಒತ್ತುವರಿ ತೆರವಿಗೆ ಕ್ರಮ
ಮಲಪ್ರಭಾ ನದಿ(Malaprabha River) ಒತ್ತುವರಿ ಹೆಚ್ಚಾಗುತ್ತಿದ್ದು, ತೆರವುಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜಲಸಂಪನ್ಮೂನ ಸಚಿವ ಗೋವಿಂದ ಕಾರಜೋಳ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಒತ್ತುವರಿಯಿಂದಾಗಿ ಪ್ರವಾಹ ತಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಹದಾಯಿ(Mahadayi), ಕಳಸಾ-ಬಂಡೂರಿ(Kalasa Banduri) ನಾಲಾದಿಂದ ಕೂಡಲಸಂಗಮ ವರೆಗೆ ಒಟ್ಟು 354 ಕಿಮೀ ನದಿ ಇದೆ. 22 ತಾಲೂಕುಗಳು ಈ ವ್ಯಾಪ್ತಿ ಬರುತ್ತವೆ. ಒಂದೊಂದು ಕಡೆಗೆ ಹೆಚ್ಚಿನ ಒತ್ತುವರಿಯಾಗಿ ಕಾಲುವೆ ತರ ನದಿ ಕಾಣುತ್ತಿದೆ. ಹೂಳು ತೆಗೆಯುವ ಕೆಲಸ ಪ್ರಾರಂಭಿಸಿ, ರೈತರಿಗೆ(Farmers) ಉಚಿತವಾಗಿ ಮರಳು ನೀಡಲು ಸೂಚಿಸಲಾಗಿದೆ ಎಂದರು.
ಕಾಲುವೆಗಳ ನಿರ್ವಹಣೆ ಕುರಿತಂತೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ವಾರ ಪ್ರವಾಸ ಹಾಕಿಕೊಂಡು ಪರಿಶೀಲನೆ ಕಾರ್ಯ ನಡೆಸಬೇಕು. ಅಲ್ಲದೇ ಪ್ರಗತಿ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವಿಷಯದಲ್ಲಿ ಯಾರಾದರೂ ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಲಪ್ರಭಾ ಆಣೆಕಟ್ಟನ್ನು(Malaprabha Dam) ಕಟ್ಟಿದ ಬಾಳೆಕುಂದ್ರಿ ಅವರ 100ನೇ ಜನ್ಮ ಶತಮಾನೋತ್ಸವ ಮೇ 5ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸವದತ್ತಿ ಆಣೆಕಟ್ಟಿನಲ್ಲಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ. ಕೆರೆ ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಇಲಾಖೆಯಲ್ಲಿ ಅವ್ಯವಹಾರದಲ್ಲಿ ತೊಡಗಿಕೊಂಡಿದ್ದವರನ್ನು ಜೈಲಿಗೆ ಕಳುಹಿಸಲಾಗಿದೆ. ಅವರಿಂದ ಆ ಹಣವನ್ನು ವಾಪಸ್ ಪಡೆದುಕೊಳ್ಳಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ಯಾವುದೇ ಸಮಯದಲ್ಲೂ ಅಕ್ರಮ ನಡೆದಿದ್ದರೆ ಸೂಕ್ತ ತನಿಖೆ ನಡೆಸಲು ಸರ್ಕಾರ ಬದ್ಧ. ನದಿಗಳಿಂದ ನೀರು ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಅನೇಕ ಅಡೆತಡೆಗಳು ಉಂಟು. ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಒಪ್ಪಿಗೆ ಪಡೆದುಕೊಳ್ಳಬೇಕು. ಹೀಗಾಗಿ ಅದೊಂದು ದೊಡ್ಡ ಸವಾಲಿನ ಕೆಲಸವಾಗಿದೆ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಸಮಯ ಬೇಕಾಗುತ್ತದೆ. ಸುಪ್ರೀಂಕೋರ್ಟ್‌ನಲ್ಲಿ(Supreme Court) ಈ ಪ್ರಕರಣ ಇದೆ ಎಂದು ತಿಳಿಸಿದರು.
ಇಲಾಖೆ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಗತಿ ಹಂತದಲ್ಲಿರುವ ಕಾಮಗಾರಿಗಳಿಗೆ ಸಾಕಷ್ಟುಹಣ ಬೇಕಾಗುತ್ತದೆ. ಅವುಗಳು ಒಳಗೊಂಡು ಹೊಸ ಯೋಜನೆಗಳಿಗೆ ಸೂಕ್ತ ಅನುದಾನ ಬಜೆಟ್‌ನಲ್ಲಿ ನೀಡುತ್ತಾರೆ ಎನ್ನುವ ಭರವಸೆ ಇದೆ. ಇತ್ತೀಚಿನ ವರ್ಷಗಳಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನೂ 15 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೊಳಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
Flyover Construction Work: ಹುಬ್ಳೀಲಿ ಟ್ರಾಫಿಕ್ ಹೆಚ್ಚಿಸಿದ ಫ್ಲೈಓವರ್
ಪ್ರಸಕ್ತ ವಲಯದಡಿಯಲ್ಲಿ ಒಟ್ಟು 2,39,912 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಬೇಕಾಗಿದ್ದು, ಈ ವರೆಗೆ 2,20,812 ಹೆಕ್ಟೇರ್ ಪ್ರದೇಶಕ್ಕೆ ಒದಗಿಸಲಾಗಿರುತ್ತದೆ. ಬಾಕಿ ಇರುವ 19,100 ಹೆಕ್ಟೇರ್ ಪ್ರದೇಶಕ್ಕೆ ಪ್ರಮುಖವಾಗಿ ಸವಣೂರ ಹಾಗೂ ಶಿಗ್ಗಾಂವಿ ಏತ ನೀರಾವರಿ ಯೋಜನೆಗಳ ಅಡಿ ಯೋಚಿಸಲಾದ ಸೂಕ್ಷ್ಮ ನೀರಾವರಿ ಪದ್ಧತಿ ಒದಗಿಸಬೇಕಾಗಿರುತ್ತದೆ ಎಂದು ತಿಳಿಸಿದರು.
ಮಲಪ್ರಭಾ ಆಣೆಕಟ್ಟು, ಹರಿನಾಲಾ ಆಣೆಕಟ್ಟು, ಏತ ನೀರಾವರಿ ಯೋಜನೆಗಳು ಹಾಗೂ ಕೆರೆ ತುಂಬಿಸುವ ಯೋಜನೆಗಳು ಪ್ರಗತಿಯಲ್ಲಿವೆ. ಶಿಗ್ಗಾಂವಿ, ಸವಣೂರ, ಕಲಘಟಗಿ, ಧಾರವಾಡ, ಹಳಿಯಾಳ, ಉಳವಿ, ಮುಂಡಗೋಡ, ಬೆಳಗಾವಿ ಸೇರಿದಂತೆ ವಿವಿಧೆಡೆ ಕೆರೆ ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮಲಪ್ರಭಾ ನದಿಗೆ ಬೌಂಡರಿ ಕಲ್ಲುಗಳು ಹಾಕುವುದು, ತುಪ್ಪರಿಹಳ್ಳ ಹಾಗೂ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ, ಚೊಳಚಗುಡ್ಡ ಬ್ಯಾರೇಜ್ ಮರು ನಿರ್ಮಾಣ ಸೇರಿದಂತೆ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.