ಕುಲಕಸುಬಿನ ಮೂಲಕ ದೇಶದ ಸಂಸ್ಕೃತಿ ಉಳಿಸುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಇಂದಿಗೂ ಸಹ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಜನಾಂಗಕ್ಕೆ ಅವಕಾಶ ಸಿಗಬೇಕೆಂದರೆ ಮೀಸಲಾತಿ ಅತ್ಯವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿದರು.
ನಾಗಮಂಗಲ (ಜು.24): ಕುಲಕಸುಬಿನ ಮೂಲಕ ದೇಶದ ಸಂಸ್ಕೃತಿ ಉಳಿಸುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಇಂದಿಗೂ ಸಹ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಜನಾಂಗಕ್ಕೆ ಅವಕಾಶ ಸಿಗಬೇಕೆಂದರೆ ಮೀಸಲಾತಿ ಅತ್ಯವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿದರು. ಪಟ್ಟಣದ ಎಸ್‌ಎಸ್‌ಕೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಚೇರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ 10ಕೋಟಿಗೂ ಹೆಚ್ಚು ವಿಶ್ವಕರ್ಮ ಜನಾಂಗದವರು ಕುಲಕಸುಬುಗಳ ಮೂಲಕ ದೇಶದ ಸಂಸ್ಕೃತಿ ಉಳಿಸುತ್ತಾ ಬಂದಿದ್ದಾರೆ. ಆದರೆ, ಶಿಕ್ಷಣದ ಕೊರತೆಯಿಂದಾಗಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸದೃಢಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಜನಾಂಗದಲ್ಲಿ ಹುಟ್ಟುವಾಗಲೇ ಎಂಜಿನಿಯರ್‌ಗಳಾಗಿ ಹುಟ್ಟುತ್ತೇವೆ. ಆದರೆ, ವಿದ್ಯೆ ಇಲ್ಲದಿದ್ದರೂ ಕುಲಕಸುಬು ರಕ್ತಗತವಾಗಿ ಬಂದಿದೆ. ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಸರ್ಕಾರದ ಸವಲತ್ತುಗಳು ಸಿಗಬೇಕು. ಇದಕ್ಕಾಗಿ ರಾಜಕೀಯ ಜ್ಞಾನ, ಸಂವಿಧಾನದಲ್ಲಿನ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದರು. ಯಾವುದೇ ಸಮಾಜ ದೊಡ್ಡ ಕೆಲಸ ಮಾಡಿಕೊಟ್ಟರೂ ಸಹ ಅದನ್ನು ಗುರುತಿಸಲು ಕಲೆ ಎಷ್ಟುಮುಖ್ಯವೋ ವಿದ್ಯೆಯೂ ಅಷ್ಟೇ ಮುಖ್ಯವಾಗುತ್ತದೆ. ವಿದ್ಯೆ ಇಲ್ಲದಿದ್ದರೆ ಸಮಾಜಕ್ಕೆ ಎಷ್ಟುದೊಡ್ಡ ಕೊಡುಗೆ ಕೊಟ್ಟರೂ ಕೂಡ ಅದು ನೆನಪಿನಲ್ಲಿ ಉಳಿಯುವುದಿಲ್ಲ ಎಂದರು.
ಸುತ್ತೂರು, ಚುಂಚನಗಿರಿ ಎರಡು ಕಣ್ಣುಗಳಿದ್ದಂತೆ: ಸಚಿವ ಚಲುವರಾಯಸ್ವಾಮಿ
102 ಜಾತಿಗಳಿರುವ ಹಿಂದುಳಿದ ವರ್ಗದಲ್ಲಿ ವಿಶ್ವಕರ್ಮ ಸಮಾಜವಿದೆ. ಅದರಲ್ಲಿ ಬಹಳ ಬಲಿಷ್ಠವಾದ ಸಮಾಜ ಇರುವುದರಿಂದ ರಾಜ್ಯದಲ್ಲಿ ವಿಶ್ವಕರ್ಮರು 40ಲಕ್ಷ ಜನಸಂಖ್ಯೆಯಿದ್ದರೂ ಕೂಡ ಅದರ ಉಪಯೋಗ ಪಡೆದುಕೊಳ್ಳುವಷ್ಟು ಶಕ್ತಿವಂತರಾಗಿಲ್ಲ ಎಂದರು. 1976ರಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗದಲ್ಲಿರುವ ಸಮಾಜಗಳಿಗೆ ಅವರಲ್ಲಿರುವ ಕುಲಕಸುಬುಗಳನ್ನು ಉಳಿಸಿಕೊಂಡು ಎಲ್ಲರಂತೆ ಬದುಕಬೇಕೆಂದು ಆಯನೂರು ಆಯೋಗವನ್ನು ರಚಿಸಿದ್ದರು. ಆದರೆ, ರಾಜಕೀಯ ಪ್ರಜ್ಞೆಯಿಲ್ಲದ ಆ ಸಂದರ್ಭದಲ್ಲಿ ಮೀಸಲಾತಿಯನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
45 ವರ್ಷಗಳ ಹಿಂದೆಯೇ ಈ ಎಲ್ಲ ಅಂಶಗಳನ್ನು ಹೇಳಿದ್ದರೆ ನಾವೆಲ್ಲರೂ ಪರಿಶಿಷ್ಟಪಂಗಡಕ್ಕೆ ಸೇರ್ಪಡೆಗೊಳ್ಳುತ್ತಿದ್ದೆವು. ಅಸಲಿಗೆ ಹಿಂದುಳಿದ ವರ್ಗದಲ್ಲಿ ನಾವು ಎಲ್ಲಿದ್ದೇವೆ ಎನ್ನುವುದೇ ಗೊತ್ತಿಲ್ಲದ ರೀತಿಯಲ್ಲಿ ಬದಲಾವಣೆಗಳಾಗಿವೆ. ನಾವು ನಿಜವಾಗಿಯೂ ಪರಿಶಿಷ್ಟಪಂಗಡಕ್ಕೆ ಸೇರಬೇಕು ಎಂದರು. ದೇಶದಲ್ಲಿ ಐದಾರು ರಾಜ್ಯಗಳನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ರಾಜ್ಯಗಳಲ್ಲಿ ವಿಶ್ವಕರ್ಮರನ್ನು ಪರಿಶಿಷ್ಟಪಂಗಡ ಮತ್ತು ಪರಿಶಿಷ್ಟ ಜಾತಿಯಲ್ಲಿಯೂ ಸೇರಿಸಲಾಗಿದೆ. ರಾಜ್ಯದ ಕೊಳ್ಳೇಗಾಲದಲ್ಲಿಯೂ ಸಹ ನಾವು ಪರಿಶಿಷ್ಟವರ್ಗದಲ್ಲಿದ್ದೇವೆ. ರಾಜ್ಯದಲ್ಲಿರುವ ವಿಶ್ವಕರ್ಮ ಜನಾಂಗವನ್ನು ಪರಿಶಿಷ್ಟವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ಎಲ್ಲೆಡೆ ಚರ್ಚೆ ನಡೆಸಬೇಕೆಂಬ ಉದ್ದೇಶದಿಂದ ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸಮುದಾಯದ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ ಎಂದರು.
ನಿಂತು ನಿಂತು ಓಡುತ್ತಿರುವ ಮಂಡ್ಯದ ಮೈ ಶುಗರ್: ನುರಿತ ತಜ್ಞರಿಲ್ಲದೇ ಪದೇ ಪದೇ ತಾಂತ್ರಿಕ ಸಮಸ್ಯೆ
ಇದಕ್ಕೂ ಮುನ್ನ ಪಟ್ಟಣದ ಹೊರವಲಯ ಮುಳಕಟ್ಟೆ ಬಳಿಯಿರುವ ಸಂಘದ ನಿವೇಶನಕ್ಕೆ ಭೇಟಿಕೊಟ್ಟಎಂಎಲ್ಸಿ ಕೆ.ಪಿ.ನಂಜುಂಡಿ ಸ್ಥಳ ಪರಿಶೀಲಿಸಿದ ಬಳಿಕ ಪಟ್ಟಣದ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದರು. ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಲೋಹಿತ್ ಕಲ್ಲೂರು, ಸಂಘದ ಜಿಲ್ಲಾಧ್ಯಕ್ಷ ಹೇಮಂತ್, ತಾಲೂಕು ಸಂಘದ ಅಧ್ಯಕ್ಷ ನಲ್ಕುಂದಿ ಎನ್.ಕೃಷ್ಣಾಚಾರ್, ಕಾರ್ಯದರ್ಶಿ ವಿಶ್ವಮೂರ್ತಿ, ವಕೀಲ ಲಕ್ಷ್ಮೀಸಾಗರ್, ಪಾಂಡವಪುರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರ, ಮುಖಂಡರಾದ ದಿವಾಕರ್, ಅಭಿಜಿತ್, ಮಂಜುನಾಥಚಾರ್, ಸತ್ಯಭಾಮ, ರುಕ್ಮಿಣಿ, ಸುಕನ್ಯ, ಚಂದ್ರಕಲಾ, ಕವಿತ, ನಂದಿನಿ ಸೇರಿದಂತೆ ದೇವಲಾಪುರ, ಬಿಂಡಿಗನವಿಲೆ, ಕಸಬಾ, ಬೆಳ್ಳೂರು, ಹೊಣಕೆರೆ ಹೋಬಳಿಯ ಮತ್ತು ಪಟ್ಟಣದ ಸಮುದಾಯದ ಮುಖಂಡರು ಇದ್ದರು.