ಉತ್ತರ ಕನ್ನಡ ಬ್ರಿಟಿಷರ ಆಡಳಿತ ಕಾಲದಲ್ಲಿ ನಿರ್ಮಾಣವಾದ ಆ ಸೇತುವೆ ಮುಖಾಂತರವೇ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿಕೊಡಲಾಗಿದೆ. ವಿವಿಧ ವ್ಯಾಪಾರ- ವಹಿವಾಟುಗಳು ಕೂಡಾ ಈ ಸೇತುವೆ ಮುಖಾಂತರವೇ ನಡೆಯುತ್ತೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕುಮಟಾ (ಮಾ.28): ಉತ್ತರ ಕನ್ನಡ ಬ್ರಿಟಿಷರ ಆಡಳಿತ (British Administration) ಕಾಲದಲ್ಲಿ ನಿರ್ಮಾಣವಾದ ಆ ಸೇತುವೆ (Bridge) ಮುಖಾಂತರವೇ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿಕೊಡಲಾಗಿದೆ. ವಿವಿಧ ವ್ಯಾಪಾರ- ವಹಿವಾಟುಗಳು ಕೂಡಾ ಈ ಸೇತುವೆ ಮುಖಾಂತರವೇ ನಡೆಯುತ್ತೆ. ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ಮತ್ತು ಸಾರ್ವಜನಿಕರ ಓಡಾಟವೂ ಈ ಸೇತುವೆಯನ್ನು ಅವಲಂಬಿಸಿದೆ. ಆದರೆ, ಈಗ ಈ ಸೇತುವೆಯಲ್ಲಿ ಜನರು ಓಡಾಡಲು ಆತಂಕ ಪಡುತ್ತಿದ್ದಾರೆ. ಯಾಕೆ ಅಂತೀರಾ. ಈ ಸ್ಟೋರಿ ನೋಡಿ.
undefined
ಒಂದೆಡೆ ಎಲ್ಲೆಂದರಲ್ಲಿ ಬಿರುಕು ಬಿಟ್ಟಿರುವ ಪಿಲ್ಲರ್‌ಗಳು, ಮತ್ತೊಂದೆಡೆ ಸೇತುವೆ ಸುತ್ತಮುತ್ತಾ ಬೆಳೆದು ನಿಂತಿರುವ ಗಿಡಗಂಟಿಗಳು, ಇನ್ನೊಂದೆಡೆ ಆತಂಕದಲ್ಲೇ ಸೇತುವೆ ಮೇಲೆ ಓಡಾಡುತ್ತಿರುವ ಜನರು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾದ (Kumta)ಬಳಿಯಿರುವ ಮೆಕ್ಕೆಂಜೆ ಸೇತುವೆಯಲ್ಲಿ (Mekkenje Bridge). ಹೌದು, ಈ ಸೇತುವೆ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು, ಜನರು ಸಂಚಾರ ಮಾಡುತ್ತಿದ್ದು, ಶಶಿಹಿತ್ತಲ, ಹೊನ್ನಳ್ಳಿ, ಕಡಲೆ, ಮಂಗೋಟ್ಲೂ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸಿದೆ. ಒಂದು ವೇಳೆ ಸೇತುವೆ ಸಂಪೂರ್ಣ ಹಾಳಾದರೆ ಈ ಹಳ್ಳಿಗಳಿಗೆ ಸಂಪರ್ಕ ಕಡಿತವಾಗುತ್ತೆ. ಇಷ್ಟೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಸೇತುವೆ ದುರಸ್ತಿಗೊಳಿಸದೇ ಕಣ್ಣು ಮುಚ್ಚಿ ಕುಳಿತಿದ್ದಾರೆ.
Arava Ganapathi Temple: ಗೋವಾದಿಂದ ಕಾರವಾರಕ್ಕೆ ಬಂದ ಗಣಪಗೆ ಮಾಜಿ ಯೋಧರ ಸೇವೆ
ಅಂದಹಾಗೆ, ಬ್ರಿಟೀಷರ ಕಾಲದಲ್ಲಿ ಉತ್ತರಕನ್ನಡ ಜಿಲ್ಲೆಯ ಮೂಲಕ ಸಾಂಬಾರ ಪದಾರ್ಥಗಳು, ಹತ್ತಿ, ಅಕ್ಕಿ, ದಿನಸಿ ಸಾಮಾನುಗಳು ಭಾರತದಿಂದ ಇಂಗ್ಲೆಂಡ್, ಜರ್ಮನಿ, ಅಮೆರಿಕಾ ಇನ್ನಿತರ ದೇಶಗಳಿಗೆ ಜಲ ಮಾರ್ಗದ ಮೂಲಕ ರಫ್ತಾಗುತ್ತಿದ್ದವು. ಆದರೆ, ಶಶಿಹಿತ್ತಲ ಬಳಿ ಬೃಹದಾಕಾರ ಹಳ್ಳ ಹರಿಯುತ್ತಿದ್ದರಿಂದ ಸಾಗಾಟ ಹಾಗೂ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಇದನ್ನು ಮನಗಂಡ ಬ್ರಿಟೀಷ್ ಸರ್ಕಾರ ಎಂಜಿನಿಯರ್ ಮ್ಯಾಕಂಝಿ ಮುಂದಾಳತ್ವದಲ್ಲಿ 29-12-1879ರಲ್ಲಿ ಈ ಸೇತುವೆಯನ್ನು ನಿರ್ಮಿಸಿದ್ದು, ಈ ಸೇತುವೆ 20 ಅಡಿ ಉದ್ದ ಹಾಗೂ 10 ಅಡಿ ಅಗಲವಿದೆ. ಮ್ಯಾಕಂಝಿ ನಿರ್ಮಿಸಿದ ಈ ಸೇತುವೆ ಕಾಲ ಕ್ರಮೇಣ ಮೆಕ್ಕೆಂಜೆ ಸೇತುವೆಯಾಗಿ ಕರೆಯಲ್ಪಟ್ಟಿತು.
ಅಂದು ನಿರ್ಮಾಣವಾದ ಈ ಸೇತುವೆ ಇಂದಿನವರೆಗೂ ಹಾಗೆಯಿದ್ದು, ಇದರ ದುರಸ್ತಿ ಕಾರ್ಯಕ್ಕೂ ತಾಲೂಕು ಆಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಮುಂದಾಗಿಲ್ಲ ಅನ್ನೋದು ವಿಪರ್ಯಾಸ. ಇನ್ನು ಅಷ್ಟು ಪ್ರಾಮುಖ್ಯತೆ ಪಡೆದಿದ್ದ ಮೆಕ್ಕಂಜೆ ಸೇತುವೆ ಇಂದು ಶಿಥಿಲಸ್ಥಿತಿಗೆ ಬಂದಿದ್ದು, ಎಲ್ಲೆಂದರಲ್ಲಿ ಸೇತುವೆಯ ಪಿಲ್ಲರ್‌ಗಳು, ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ, ಸುತ್ತಲೂ ಗಿಡಗಂಟಿಗಳು ಬೆಳೆದು ಸೇತುವೆಯ ಸ್ಥಿತಿ ಅಧೋಗತಿಯಾಗಿದೆ. ಈ ಸೇತುವೆ ಮೇಲೆಯೇ ಘನ ವಾಹನಗಳು, ಪ್ರತಿನಿತ್ಯ ಶಾಲಾ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಬಸ್ ಹಾಗೂ ವಾಹನಗಳು ಸಾಗುತ್ತವೆ. ಅಲ್ಲದೇ, ಈ ಸೇತುವೆ ಹತ್ತಾರು ಹಳ್ಳಿಗಳಿಗೆ ಸಂಪರ್ಕವನ್ನೂ ಕಲ್ಪಿಸಿದೆ.
ಕಾಳಿ ತಟದಲ್ಲಿ ಕಾಪ್ರಿ ದೇವರ ಉತ್ಸವ: ಮದ್ಯ, ಸಿಗರೇಟು ನೈವೇದ್ಯ ಪಡೆಯುವ ದೇವರ ವಿಶಿಷ್ಟ ಜಾತ್ರೆ!
ಒಂದು ವೇಳೆ ಈ ಸೇತುವೆ ಬಿದ್ದಲ್ಲಿ ಬಹುದೊಡ್ಡ ಆಪಾಯ ಆಗಬಹುದಲ್ಲದೇ, ಹತ್ತಾರು ಹಳ್ಳಿಗಳ ಸಂಪರ್ಕ ಕೂಡಾ ಕಡಿತವಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಯಾವುದೂ ಯೋಚನೆಯಿಲ್ಲದೇ ಸುಮ್ಮನಿದ್ದಾರೆ. ಹೀಗಾಗಿ, ಯಾವುದೇ ಅಪಾಯವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸೇತುವೆಯನ್ನು ದುರಸ್ತಿಗೊಳಿಸಬೇಕೆಂದು ಸ್ಥಳೀಯರ ಒತ್ತಾಯ. ಒಟ್ಟಿನಲ್ಲಿ ಶತಮಾನಗಳ ಸೇತುವೆ ಪ್ರಸ್ತುತ ಶಿಥಿಲಾವಸ್ಥೆಗೆ ತಲುಪಿದ್ದು, ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಯಾವುದೇ ದುರ್ಘಟನೆಗಳು ನಡೆಯುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಲ್ಲಿ ಭವಿಷ್ಯದಲ್ಲಿ ಎದುರಾಗುವ ಅಪಾಯವನ್ನು ತಡೆಗಟ್ಟಬಹುದಾಗಿದೆ.