ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕುಂಬಾರವಾಡ ಗ್ರಾಮಪಂಚಾಯತ್ ವ್ಯಾಪ್ತಿಯ ಡೇರಿಯಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿ ಮೂಡಿಬಂದಿದೆ. ಮಕ್ಕಳ ಮೂಲಕವೇ ಕೃಷಿ ಮಾಡಿಸುವ ಮೂಲಕ ಕಳೆದ 14 ವರ್ಷದಿಂದ ಮಕ್ಕಳಿಗೆ ಕೃಷಿ ಪಾಠ ಮಾಡುತ್ತಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ , ಏಷ್ಯಾನೆಟ್ ಸುವರ್ಣನ್ಯೂಸ್
ಉತ್ತರ ಕನ್ನಡ (ಜೂ.9): ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಎಂತಹ ಪಠ್ಯ ನೀಡಬೇಕು ಅನ್ನೋ ಬಗ್ಗೆ ಪರ-ವಿರೋಧಗಳು ನಡೆಯುತ್ತಲೇ ಇದೆ. ಆದ್ರೆ, ಉತ್ತರಕನ್ನಡ (Uttara kannada) ಜಿಲ್ಲೆಯ ಈ ಸರ್ಕಾರಿ ಶಾಲೆ (Govt school) ಮಾತ್ರ ಮಕ್ಕಳ ಮೂಲಕವೇ ಕೃಷಿ (agriculture ) ಮಾಡಿಸುವ ಮೂಲಕ ಕಳೆದ 14 ವರ್ಷದಿಂದ ಮಕ್ಕಳಿಗೆ ಕೃಷಿ ಪಾಠ ಮಾಡುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳನ್ನು ಮಣ್ಣಿನ ಮಕ್ಕಳನ್ನಾಗಿ ಶಾಲೆ ಬೆಳೆಸುತ್ತಿದೆ.
ರಾಜ್ಯದ ಮಕ್ಕಳಿಗೆ ಯಾವ ಪಠ್ಯ ನಿಗದಿ ಮಾಡಬೇಕು ಅಂತಾ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕುಂಬಾರವಾಡ ಗ್ರಾಮಪಂಚಾಯತ್ ವ್ಯಾಪ್ತಿಯ ಡೇರಿಯಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿ ಮೂಡಿಬಂದಿದೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ.
GADAG: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಒದ್ದಾಡುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ್
ಈ ಶಾಲೆಗೆ ಒಂದನೇ ತರಗತಿಗೆ ಪ್ರವೇಶ ಪಡೆಯುವ ಹಾಗೂ ಐದನೇ ತರಗತಿ ಮುಗಿಸಿ ಹೋಗುವ ಯಾವುದೇ ಮಗುವಿರಲಿ ಮೊದಲು ಈ ಶಾಲೆಯಲ್ಲಿ ಯಾವುದಾದರೂ ಒಂದು ಗಿಡವನ್ನು ನೆಟ್ಟು ಪೋಷಣೆ ಮಾಡಬೇಕು. ಈ ಶಾಲೆಯಲ್ಲಿ ಒಂದೂವರೆ ಎಕರೆ ಜಾಗ ಸಹ ಇರುವುದರಿಂದ 14 ವರ್ಷದಲ್ಲಿ ಈ ಶಾಲೆಗೆ ಬಂದು ಹೋದ ವಿದ್ಯಾರ್ಥಿಗಳು ನೆಟ್ಟ ಮಾವು, ಹಲಸು, ತೆಂಗಿನ ಮರಗಳು ಇಂದು ಫಲ ನೀಡುತ್ತಿದೆ.
ಅಲ್ಲದೇ, ಇಲ್ಲಿ ಜೇನು ಸಾಕಾಣಿಕೆ, ಗೆಡ್ಡೆ ಗೆಣಸು, ತೋಟಗಾರಿಕಾ ಬೆಳೆಗಳನ್ನು ಕೂಡಾ ಬೆಳೆಯಲಾಗುತ್ತಿದ್ದು, ಮಕ್ಕಳೇ ಗಿಡವನ್ನು ನೆಟ್ಟು ಫಸಲು ನೀಡುವವರೆಗೆ ಪೋಷಣೆ ಮಾಡಿದ್ರೆ, ಶಿಕ್ಷಕರು ಹಾಗೂ ಪೋಷಕರು ಹೇಗೆ ಆರೈಕೆ ಮಾಡಬೇಕು ಎಂಬುದನ್ನು ತೋರಿಸಿಕೊಡುತ್ತಾರೆ. ಪ್ರತೀ ವರ್ಷ ಮಳೆಗಾಲದಲ್ಲಿ ಶಾಲೆಯ ಪಕ್ಕದಲ್ಲಿ ಇರುವ ಗದ್ದೆಯಲ್ಲಿ ಉಳಿಮೆ ಮಾಡುತ್ತಾರಲ್ಲದೇ, ಕಬ್ಬನ್ನು ಸಹ ಬೆಳೆದು ಬೆಲ್ಲ ಮಾಡುವ ಕೌಶಲ್ಯವನ್ನು ಇಲ್ಲಿನ ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಲಾಗುತ್ತಿದೆ.
Kolara; ಮಾಲೂರು ಶಾಸಕನ ಬರ್ತಡೇಯಲ್ಲಿ ಬಿರಿಯಾನಿಗಾಗಿ ಹೋರಾಟ!
ಕಳೆದ 14 ವರ್ಷದ ಹಿಂದೆ ಈ ಶಾಲೆಯಲ್ಲಿ ಶಿಕ್ಷಕರಾಗಿ ಆಗಮಿಸಿದ್ದ ಲೀಲಾದರ್ ಮೊಗೇರ್ ರವರು ಮಕ್ಕಳಿಗೆ ಕೃಷಿ ಬಗ್ಗೆ ಪಾಠ ಮಾಡುವ ಹಾಗೂ ಶಾಲೆಯಲ್ಲಿ ಮಕ್ಕಳಿಂದಲೇ ತೋಟ ನಿರ್ಮಿಸುವ ಕಾರ್ಯವನ್ನು ಮೊದಲು ಪ್ರಾರಂಭಿಸಿದ್ದರು. ಅವರು ವರ್ಗಾವಣೆಗೊಂಡು ಇದೀಗ ಮೂರು ವರ್ಷಗಳಾಗಿವೆ. ಇವರ ನಂತರ ಈ ಶಾಲೆಗೆ ಖಾಯಂ ಶಿಕ್ಷಕರಿಲ್ಲದೇ ಓರ್ವ ಅಥಿತಿ ಉಪನ್ಯಾಸಕರಿಂದ ಈ ಶಾಲೆ ನಡೆಯುತ್ತಿದೆ. ಆದರೂ, ಪೋಷಕರ ಸಹಕಾರದಿಂದ ಈಗಲೂ ಮಕ್ಕಳಿಗೆ ಕೃಷಿ ಪಾಠ ಮಾಡಲಾಗುತ್ತದೆ.
ಇನ್ನು ಮಕ್ಕಳೇ ಬೆಳೆದ ಬೆಳೆಗಳನ್ನು ಇಲ್ಲಿನ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಹಣ್ಣು ಹೆಚ್ಚು ಬೆಳೆ ಬಂದರೆ ಮಕ್ಕಳಿಗೆ ಹಂಚಿ ಉಳಿದುದನ್ನು ಮಾರಾಟ ಮಾಡಿ ಬಂದ ಹಣವನ್ನು ಮಕ್ಕಳಿಗಾಗಿ ಬಳಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಈ ಶಾಲೆಗೆ ಹಸಿರು ಶಾಲೆ ಎಂಬ ರಾಜ್ಯ ಪ್ರಶಸ್ತಿ ಕೂಡಾ ದೊರೆತಿದ್ದು, ಮಾದರಿ ಎನಿಸಿದೆ.
ಒಟ್ಟಿನಲ್ಲಿ ಶಾಲೆ ಎಂದಾಕ್ಷಣ ಶಿಕ್ಷಕರು ಹೇಳಿಕೊಡುವ ಪಾಠಕ್ಕೆ ಮಾತ್ರ ಸೀಮಿತವಾಗಿರುವ ಇಂದಿನ ದಿನದಲ್ಲಿ ಮಕ್ಕಳಿಗೆ ಕೃಷಿ ಹಾಗೂ ಪರಿಸರದ ಬಗ್ಗೆ ಪಾಠ ಮಾಡುವ ಜೊತೆ ಪ್ರಾಯೋಗಿಕವಾಗಿ ಕೂಡಾ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಮಾಡುತ್ತಿರುವ ಈ ಶಾಲೆ ನಿಜವಾಗಿಯೂ ರಾಜ್ಯದಲ್ಲೇ ಮಾದರಿ.