ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಏನಾಗುತ್ತೆ? | ತಡವಾಗಿ ನಾಟಿ ಮಾಡಿದ್ದೇ ದೊಡ್ಡ ಸಮಸ್ಯೆ| ಆಂಧ್ರ, ತೆಲಂಗಾಣಕ್ಕಿಲ್ಲದ ಸಮಸ್ಯೆ ರಾಜ್ಯಕ್ಕೆ ಮಾತ್ರ ಯಾಕೆ?| ತುಂಗಭದ್ರಾ ತುಂಬಿದ್ದರೂ 2ನೇ ಬೆಳೆಗೆ ನೀರು ಅನಿಶ್ಚಿತ| 224 ಟಿಎಂಸಿ ನೀರು ಸಮುದ್ರ ಪಾಲು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ನ.21): ತುಂಗಭದ್ರಾ ಜಲಾಶಯ ಭರ್ತಿಯಾಗಿ ಈ ವರ್ಷ ಬರೋಬ್ಬರಿ 224 ಟಿಎಂಸಿ ನೀರು ನದಿ ಮೂಲಕ ಹರಿದು ಆಂಧ್ರ, ತೆಲಂಗಾಣ ಸೇರಿದೆ ! ಈಗಲೂ ಜಲಾಶಯ ತುಂಬಿ ತುಳುಕುತ್ತಿದ್ದರೂ ರಾಜ್ಯದ ಅಚ್ಚುಕಟ್ಟು ಪ್ರದೇಶಕ್ಕೆ 2ನೇ ಬೆಳೆಗೆ ನೀರು ಅನುಮಾನ ಎನ್ನಲಾಗುತ್ತಿದೆ.
undefined
ತುಂಗಭದ್ರಾ ಬೋರ್ಡ್ ಮತ್ತು ತುಂಗಭದ್ರಾ ಕಾಡಾ ಅಧಿಕಾರಿಗಳ ಲೆಕ್ಕಚಾರದ ಪ್ರಕಾರ ಈ ವರ್ಷವೂ ತುಂಗಭದ್ರಾ ಜಲಾಶಯದ ರಾಜ್ಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡನೇ ಬೆಳೆಗೆ ನೀರಿಲ್ಲ. ಆದರೆ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ರೈತರಿಗೆ ಈ ಸಮಸ್ಯೆ ಇಲ್ಲ.
ತುಂಬಿರುವ ಜಲಾಶಯ:
ತುಂಗಭದ್ರಾ ಜಲಾಶಯದಲ್ಲಿ ಸದ್ಯ 96 ಟಿಎಂಸಿ ನೀರು ಇದ್ದು, ಇನ್ನು ಡಿಸೆಂಬರ್ ಅಂತ್ಯದವರೆಗೂ ಮುಂಗಾರು ಬೆಳೆಗೆ ನೀರು ಬಳಕೆಯಾಗುತ್ತಿದೆ. ಪ್ರತಿ ದಿನ ಸಾಮಾನ್ಯವಾಗಿ 0.90 ಟಿಎಂಸಿ ನೀರು ಕೃಷಿಗೆ ಬಳಕೆಯಾಗುತ್ತದೆ. ಇದರ ಲೆಕ್ಕಾಚಾರದಲ್ಲಿ ಸರಿಸುಮಾರು 30 ಟಿಎಂಸಿ ನೀರು ಬಳಕೆಯಾದರೆ ಜನವರಿ ಮೊದಲ ವಾರಕ್ಕೆ 66 ಟಿಎಂಸಿ ನೀರು ಉಳಿಯುತ್ತದೆ. ಎರಡನೇ ಬೆಳೆಗೆ ಆಂಧ್ರ ಮತ್ತು ರಾಜ್ಯ ಸೇರಿ ಸುಮಾರು 75 ಟಿಎಂಸಿ ನೀರು ಬೇಕಾಗುತ್ತದೆ. ಇದಲ್ಲದೆ ಡೆಡ್ ಸ್ಟೋರೇಜ್, ಆವಿಯಾಗುವಿಕೆ, ಕುಡಿಯುವ ನೀರಿಗಾಗಿ ಕಾಯ್ದಿರಿಸುವ ಲೆಕ್ಕಾಚಾರ ಪ್ರತ್ಯೇಕ. ಇದೆಲ್ಲಕ್ಕೂ ಜನವರಿ ಅಂತ್ಯಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತದೆ ಎನ್ನುವುದು ಅಧಿಕಾರಿಗಳು ಹಾಕಿಕೊಂಡಿರುವ ಆಂತರಿಕ ಲೆಕ್ಕಾಚಾರ.
ಇದರ ಆಧಾರದ ಮೇಲೆ ಮತ್ತೆ ಈ ಬಾರಿಯೂ ಎರಡನೇ ಬೆಳೆಗೆ ರಾಜ್ಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡುವುದು ಅನುಮಾನ ಎನ್ನುವ ಗುಮಾನಿ ಎದ್ದಿದೆ. ನ. 21 ರಂದು ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಏನು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
171 ಟಿಎಂಸಿ ನೀರು ಲಭ್ಯ:
ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯದಲ್ಲಿ 171 ಟಿಎಂಸಿ ನೀರು ಕೃಷಿಗೆ ಲಭ್ಯವಾಗಿದೆ. ಇದರಲ್ಲಿ ಕುಡಿಯುವ ನೀರು, ಡೆಡ್ ಸ್ಟೋರೇಜ್ ಲೆಕ್ಕಾಚಾರವನ್ನು ತೆಗೆದು ರಾಜ್ಯಕ್ಕೆ 112.110 ಟಿಎಂಸಿ ಮತ್ತು ಆಂಧ್ರಕ್ಕೆ 53.639 ಟಿಎಂಸಿ ನೀರು ಲಭ್ಯವಾಗಿದೆ ಬಚಾವತ್ ನಿಯಮದಂತೆ. ನ. 16 ವರೆಗೆ ರಾಜ್ಯದ ಅಚ್ಚುಕಟ್ಟು ಪ್ರದೇಶಕ್ಕೆ 51.932 ಟಿಎಂಸಿ ಮತ್ತು ಆಂಧ್ರ, ತೆಲಂಗಾಣ ಸೇರಿ 24.919 ಟಿಎಂಸಿ ನೀರು ಬಳಕೆ ಮಾಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗ ಇರುವ ನೀರಿನಲ್ಲಿ ರಾಜ್ಯಕ್ಕೆ 60.178 ಟಿಎಂಸಿ ಹಾಗೂ ಆಂಧ್ರಕ್ಕೆ 28.720 ಟಿಎಂಸಿ ನೀರಿನ ಪಾಲು ಇದೆ. ಮುಂಗಾರು ಹಂಗಾಮಿಗಾಗಿಯೇ ಸುಮಾರು 30 ಟಿಎಂಸಿ ನೀರು ಬಳಕೆಯಾಗುವುದರಿಂದ ಜಲಾಶಯದಲ್ಲಿ 60 ಟಿಎಂಸಿ ಆಸುಪಾಸು ನೀರು ಉಳಿಯುತ್ತದೆ. ಹೀಗಾಗಿ, ಎರಡನೇ ಬೆಳೆಗೆ ನೀರು ಕೊಡುವುದು ಕಷ್ಟ ಎನ್ನುವ ಲೆಕ್ಕಾಚಾರ ನೀರಾವರಿ ಸಲಹಾ ಸಮಿತಿ ಸಭೆಗೂ ಮುನ್ನವೇ ಸಿದ್ಧವಾಗಿದೆ.
ಎಷ್ಟು ಹಾನಿ?:
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 8.5 ಲಕ್ಷ ಎಕರೆ ಭತ್ತದ ಪ್ರದೇಶ ಇದೆ. ಎರಡನೇ ಬೆಳೆ ಬಂದರೆ (ಎಕರೆಗೆ ಕೇವಲ 30 ಚೀಲ ಲೆಕ್ಕ ಹಾಕಿದರೂ) 2.40 ಕೋಟಿ ಚೀಲ ಬತ್ತ ಉತ್ಪಾದನೆಯಾಗುತ್ತದೆ. ಸಾವಿರ ರುಪಾಯಿಗೆ ಚೀಲ ಲೆಕ್ಕ ಹಾಕಿದರೂ 2400 ಕೋಟಿ ಆದಾಯ ಬರುತ್ತದೆ ಎಂಬ ಲೆಕ್ಕಾಚಾರ ಇದೆ. ಎರಡನೇ ಬೆಳೆಗೆ ನೀರು ಕೊಡದಿದ್ದರೆ ಇಷ್ಟು ಪ್ರಮಾಣದ ಭತ್ತದ ಬೆಳೆ ಕಳೆದುಕೊಳ್ಳಬೇಕಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಎರಡನೇ ಬೆಳೆ ನೀರು ಕೊಡದೆ ಇರುವುದರಿಂದ 10 ಸಾವಿರ ಕೋಟಿ ಮೌಲ್ಯದಷ್ಟು ರಾಜ್ಯದ ಉತ್ಪಾದನೆಗೆ ಹಿನ್ನಡೆಯಾಗಿದೆ. ಆದರೂ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ
224 ಟಿಎಂಸಿ ನೀರು ಸಮುದ್ರ ಪಾಲು
ಪ್ರಸಕ್ತ ವರ್ಷ ಜಲಾಶಯದಿಂದ ಕೃಷಿಗೆ ಬಳಕೆಯಾಗುತ್ತಿರುವ ನೀರಿನ ಪ್ರಮಾಣ ಕೇವಲ 171 ಮಾತ್ರ. ಆದರೆ, ನದಿಯ ಮೂಲಕ ಸಮುದ್ರ ಅಥವಾ ಆಂಧ್ರ, ತೆಲಂಗಾಣಕ್ಕೆ ಹೋಗಿರುವ ನೀರಿನ ಪ್ರಮಾಣವೇ 224 ನೀರು. ಕೃಷಿಗೆ ಬಳಕೆಯಾಗಿರುವ ನೀರಿಗಿಂತ ಹರಿದು ಹೋಗಿರುವ ನೀರಿನ ಪ್ರಮಾಣವೇ ಅಧಿಕ. ಇಲ್ಲದಿರುವ ನೀರಿಗಾಗಿ ಕಚ್ಚಾಡುವ ಸರ್ಕಾರ ಇಲ್ಲಿರುವ ನೀರು ಬಳಕೆಗೂ ಪರ್ಯಾಯ ಯೋಜನೆಗಳನ್ನು ತುರ್ತಾಗಿ ರೂಪಿಸುತ್ತಿಲ್ಲ ಎನ್ನುವುದು ಮಾತ್ರ ಕೊರಗು.
ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಈ ವರ್ಷವೂ ರೈತರಿಗೆ ಎರಡನೇ ಬೆಳೆಗೆ ನೀರು ಇಲ್ಲ ಎಂದರೆ ಕೇಳುವುದಿಲ್ಲ. ಎರಡನೇ ಬೆಳೆಗೆ ನೀರು ಕೊಡಲೇಬೇಕು. ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಖಂಡಿತವಾಗಿಯೂ ಕೊಡಬಹುದು ಎಂದು ಕಾಂಗ್ರೆಸ್ ಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
ಕೊಪ್ಪಳ ಎರಡನೇ ಬೆಳೆಗೆ ನೀರು ಕೊಡದಿದ್ದರೆ ಕೇಳುವುದಿಲ್ಲ. ಜಲಾಶಯ ಭರ್ತಿಯಾದ ವೇಳೆಯಲ್ಲಿಯೂ ಎರಡನೇ ಬೆಳೆಗೆ ನೀರಿಲ್ಲ ಎಂದರೆ ಕೇಳುವವರು ಯಾರು ಎಂದು ನೇ ಬೆಳೆಗೆ ನೀರು ಕೊಡಲೇಬೇಕು ಎಂದು ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ ಅವರು ತಿಳಿಸಿದ್ದಾರೆ.