ವಿಜಯಪುರ: ಅನಧಿಕೃತ ಬೋರವೆಲ್‌ ವಾಹನಗಳ ಸದ್ದು, ದುರಂತಗಳಿಗೆ ಹೊಣೆ ಯಾರು?

By Kannadaprabha News  |  First Published Apr 10, 2024, 7:35 AM IST

ಇಂಡಿ ತಾಲೂಕಿನಲ್ಲಿ ಆಂಧ್ರ, ತಮಿಳುನಾಡಿನಿಂದ ಕೊಳವೆಬಾವಿ ಕೊರೆಯುವ ವಾಹನಗಳು ಬರುತ್ತಲೇ ಇವೆ. ತಾಲೂಕು ಹಾಗೂ ಹೋಬಳಿಗೊಬ್ಬ ಏಜೆಂಟರನ್ನು ನೇಮಕ ಮಾಡಿ ಕೊಳವೆಬಾವಿ ತೋಡಿಸುವ ರೈತರನ್ನು ಸಂಪರ್ಕಿಸಿ ಬೋರ್‌ವೆಲ್‌ ಕೊರೆಸುವುದು ನಡೆಯುತ್ತಲೆ ಇದೆ. 


ಇಂಡಿ(ಏ.10):  ಲಚ್ಯಾಣ ಕೊಳವೆ ದುರಂತ ಪ್ರಕರಣಕ್ಕೆ ಯಾರು ಹೋಣೆ?. ಹೀಗೊಂದು ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಾಲೂಕು, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಮುಖ್ಯಸ್ಥರ ಪರಿಶ್ರಮದಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದ್ದರ ಫಲವಾಗಿ, ದೈವಿಶಕ್ತಿಯ ಪ್ರಭಾವದಿಂದ ಮಗು ಬುದುಕಿ ಬಂದಿರುವುದು ಎಲ್ಲರಲ್ಲೂ ಖುಷಿ ತಂದಿದೆ. ಆದರೆ, ರಾಜ್ಯದಲ್ಲಿ ಆಗಾಗ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳುಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಭೀಮಾತೀರದಲ್ಲಿ ಅನಧಿಕೃತ ಬೋರವೆಲ್‌ ವಾಹನಗಳ ಸದ್ದು !

ತಾಲೂಕಿನಲ್ಲಿ ಆಂಧ್ರ, ತಮಿಳುನಾಡಿನಿಂದ ಕೊಳವೆಬಾವಿ ಕೊರೆಯುವ ವಾಹನಗಳು ಬರುತ್ತಲೇ ಇವೆ. ತಾಲೂಕು ಹಾಗೂ ಹೋಬಳಿಗೊಬ್ಬ ಏಜೆಂಟರನ್ನು ನೇಮಕ ಮಾಡಿ ಕೊಳವೆಬಾವಿ ತೋಡಿಸುವ ರೈತರನ್ನು ಸಂಪರ್ಕಿಸಿ ಬೋರ್‌ವೆಲ್‌ ಕೊರೆಸುವುದು ನಡೆಯುತ್ತಲೆ ಇದೆ. ಜಿಲ್ಲೆ, ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ಬೋರ್‌ವೆಲ್‌ ವಾಹನಗಳಿವೆ. ಅವುಗಳಲ್ಲಿ ಪರವಾನಗಿ ಪಡೆದ ಅಧಿಕೃತ ಬೋರ್‌ವೆಲ್‌ ವಾಹನಗಳು ಎಷ್ಟಿವೆ ಎಂಬ ಮಾಹಿತಿ ಆಯಾ ತಾಲೂಕು ಕಚೇರಿಗಳಲ್ಲಿ ಲಭ್ಯವಿರಬೇಕು. ಇಂಡಿ ತಾಲೂಕಿನಾದ್ಯಂತ ಹಲವು ಬೋರ್‌ವೆಲ್‌ ವಾಹನಗಳಿದ್ದು, ಅವುಗಳಲ್ಲಿ ಅನಧಿಕೃತ ಬೋರ್‌ವೆಲ್‌ ವಾಹನಗಳೇ ಹೆಚ್ಚು ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Latest Videos

undefined

ವಿಜಯಪುರ: ಬಾವಿಗೆ ಬಿದ್ದು ಬದುಕಿದ ಮಗು, ತಂದೆಗೆ ಎಫ್‌ಐಆರ್‌ ಸಂಕಷ್ಟ

ಇಲಾಖೆ ಬಳಿಯೇ ಇಲ್ಲ ಬೋರ್‌ವೆಲ್‌ ವಾಹನಗಳ ಲೆಕ್ಕ:

ಸರ್ಕಾರದ ನಿಯಮಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ತಾಲೂಕಿನಲ್ಲಿ ಬೋರವೆಲ್‌ ವಾಹನಗಳಿವೆ, ಎಷ್ಟು ಕೊರೆಯಿಸಲಾಗಿದೆ ಪರವಾನಗಿ ಪಡೆದು ಹಾಗೂ ಅನಧಿಕೃತವಾಗಿ ಎಷ್ಟು ಬೋರ್‌ವೆಲ್‌ ಕೊರೆಸಿದ್ದಾರೆ ಎಂಬುದರ ತನಿಖೆ ನಡೆಯಕಾಗಿದೆ. ವಿಜಯಪುರದ ಗಣಿ ಹಾಗೂ ಭೂಗರ್ಭ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ 12 ಬೋರ್‌ವೆಲ್‌ ವಾಹನಗಳು ಪರವಾನಗಿ ಪಡೆದುಕೊಂಡಿವೆ. ಕೆಲವೊಂದು ಬೋರ್‌ವೆಲ್‌ ವಾಹನಗಳು ರಾಜ್ಯದ ಯಾವುದೇ ಜಿಲ್ಲೆಯಿಂದಲೂ ಪರವಾನಗಿ ಪಡೆಯಬಹುದು ಎನ್ನಲಾಗುತ್ತಿದೆ. ಆದರೆ ಯಾವ ಬೋರ್‌ವೆಲ್‌ ವಾಹನ ಯಾವ ಜಿಲ್ಲೆಯಲ್ಲಿ ಪರವಾನಗಿ ಪಡೆದುಕೊಂಡಿದೆ ಎಂಬ ಮಾಹಿತಿ ಜಿಲ್ಲಾ ಗಣಿ ಹಾಗೂ ಭೂಗರ್ಭ ಇಲಾಖೆಯಲ್ಲಿ ಇರಬೇಕು. ಕನಿಷ್ಠ ಪಕ್ಷ ಜಿಲ್ಲೆಯಲ್ಲಿ ಎಷ್ಟು ಬೋರ್‌ವೆಲ್‌ ವಾಹನಗಳು ಕಾರ್ಯಾಚರಿಸುತ್ತಿವೆ. ಅವು ಎಲ್ಲಿಂದ ಬಂದಿವೆ ಎಂಬ ಮಾಹಿತಿಯಾದರೂ ಇರಬೇಕು. ಜಿಲ್ಲೆಯಲ್ಲಿ ಕೇವಲ 12 ಬೋರ್‌ವೆಲ್‌ ವಾಹನಗಳು ಪರವಾನಗಿ ಪಡೆದುಕೊಂಡಿವೆ ಎಂದರೆ, ಉಳಿದ ಬೊರವೆಲ್‌ ವಾಹನಗಳು ಯಾವ ಜಿಲ್ಲೆಯಲ್ಲಿ ಪರವಾನಗಿ ಪಡೆದು ಡ್ರೀಲ್‌ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಸರ್ಕಾರದ ಮಾರ್ಗಸೂಚಿ ಹೇಳೋದೇನು?:

ಬೋರ್‌ವೆಲ್‌ ಕೊರೆಸುವುದಕ್ಕೂ ಮುನ್ನ 15 ದಿನಗಳ ಮುಂಚೆಯೇ ಸರ್ಕಾರದಿಂದ ಅನುಮತಿ ಪಡೆದಿರಬೇಕು. ಬೋರ್‌ವೆಲ್‌ ಏಜೆನ್ಸಿಗಳು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ನೋಂದಣಿಯಾಗಿರಬೇಕು. ತೆರೆದ ಕೊಳವೆಬಾವಿಗಳನ್ನು ಮುಚ್ಚದಿದ್ದರೆ ಪಿಡಿಒ, ಎಇಇ, ಉಪ ತಹಸೀಲ್ದಾರ್ ಮೇಲೆ ಕ್ರಮಕೈಗೊಳ್ಳಲು ಅವಕಾಶ. ಸರ್ಕಾರಿ ಕೊಳವೆಬಾವಿಗಳು ವಿಫಲವಾದರೆ ಅವುಗಳನ್ನು ಮುಚ್ಚಿದ ಛಾಯಾಚಿತ್ರ ಒದಗಿಸಿದರೆ ಮಾತ್ರ ಬಿಲ್ ಪಾವತಿ ಮಾಡಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ (ಎಸ್‌ಪಿ, ಇಇ, ತಹಶೀಲ್ದಾರ್, ಇಒ ಸಮಿತಿ ಸದಸ್ಯರಿದ್ದು,) ಅದು ಬೊರ್ ವೆಲ್ ಮುಚ್ಚಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಕೊಳವೆ ಬಾವಿಯನ್ನು ಕೊರೆಯಲು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಗ್ರಾಮಮಟ್ಟದಲ್ಲಿ ಕೊಳವೆ ಬಾವಿ ಕೊರೆಯಲು ಮುಚ್ಚಳಿಕೆ ಪತ್ರವನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು. ಒಂದು ವೇಳೆ ಕೊಳವೆ ಬಾವಿ ವಿಫಲವಾದರೆ ಅದನ್ನು 48 ಗಂಟೆಗಳಲ್ಲಿ ಮುಚ್ಚಿಸುವುದಾಗಿ ಈ ಮುಚ್ಚಳಿಕೆಯಲ್ಲಿ ತಿಳಿಸಬೇಕು. ನೀರು ಬಂದರೆ ಕೊಳವೆ ಬಾವಿಗೆ ಸೂಕ್ತ ಕ್ಯಾಪ್ ಅಥವಾ ಸುತ್ತಲೂ ಫಿನಿಸಿಂಗ್ ಅಳವಡಿಸುವುದಾಗಿ ಅರ್ಜಿದಾರರು ದೃಢೀಕರಿಸಬೇಕು.
ನಿರಾಪೇಕ್ಷಣಾ ಪತ್ರ (ಎನ್‌ಒಸಿ) ದೊರೆತ ನಂತರವಷ್ಟೇ ಕೊಳವೆಬಾವಿ ಕೊರೆಯಬಹುದು. ಎನ್‌ಡಿಆರ್‌ಎಫ್‌ ಪ್ರಕಾರ ಕೊಳವೆ ಬಾವಿಗಳು ವಿಫಲವಾದರೆ ಅವುಗಳನ್ನು ಮಣ್ಣು, ಕಲ್ಲು, ಇಟ್ಟಿಗೆಗಳಿಂದ ಮುಚ್ಚಬೇಕು. ಈ ಎಲ್ಲ ನಿಯಮಗಳಿದ್ದರೂ ಇಲ್ಲಿಯವರೆಗೆ ಜಿಲ್ಲೆ, ತಾಲೂಕು ಮಟ್ಟದಲ್ಲಿ ಎಷ್ಟು ಬೊರವೆಲ್‌ ಏಜೆನ್ಸಿಗಳು ಈ ನಿಯಮ ಪಾಲನೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು. ಜಿಲ್ಲೆ, ತಾಲೂಕಿನಲ್ಲಿ ಅನಧಿಕೃತ ಬೋರ್‌ವೆಲ್‌ ವಾಹನಗಳು ಡ್ರಿಲ್‌ ಮಾಡದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಲಚ್ಯಾಣದಲ್ಲಿ ಸಾವು ಗೆದ್ದ 2 ವರ್ಷದ ಸಾತ್ವಿಕ್; ರಂಜಾನ್ ನಡುವೆಯೂ ದಂಡವತ್ ಹಾಕಿ ಹರಕೆ ತೀರಿಸಿದ ಮುಸ್ಲಿಂ ಯುವಕ!

ಸ್ಥಳೀಯ ಅಧಿಕಾರಿಗಳು, ಪೊಲೀಸರೇಕೆ ಕ್ರಮ ಕೈಗೊಳ್ಳುತ್ತಿಲ್ಲ

ತಾಲೂಕಿನಲ್ಲಿ 50ಕ್ಕೂ ಹೆಚ್ಚು ಬೋರ್‌ವೆಲ್‌ ವಾಹನಗಳು ಇವೆ ಎಂದು ಅಂದಾಜಿಸಲಾಗಿದೆ. ಆದರೆ, ಆ ವಾಹನಗಳು ಪರವಾನಗಿ ಪಡೆದಿವೆಯೇ ಹಾಗೂ ಸರ್ಕಾರದ ನಿಯಮ ಪಾಲನೆ ಮಾಡಿ ಮಾಡುತ್ತಿವೆಯೇ ಎಂಬುದು ಸಂಬಂಧಿಸಿದ ಅಧಿಕಾರಿಗಳಾಗಲಿ, ಪೊಲೀಸ್‌ ಇಲಾಖೆಯಾಗಲಿ ಪರಿಶೀಲನೆ ಮಾಡುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ಎಷ್ಟು ಬೋರ್‌ವೆಲ್‌ ವಾಹನಗಳು ಇಂಡಿ ತಾಲೂಕಿನಲ್ಲಿ ನಿಯಮದ ಪ್ರಕಾರ ಬೋರ್‌ವೆಲ್‌ ಕೊರೆಯಿಸಿವೆ ಎಂಬ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು. ಜೀವಕ್ಕೆ ಅಪಾಯ, ಹಾನಿ ಆಗುವ ಮುಂಚೆ ಅಧಿಕಾರಿಗಳು ಎಚ್ಚರ ವಹಿಸಿ ಸರ್ಕಾರದ ನಿಯಮದಂತೆ ಬೋರ್‌ವೆಲ್‌ ಕೊರೆಯಲು ಬೋರ್‌ವೆಲ್‌ ಏಜೆನ್ಸಿಗಳಿಗೆ ಸೂಚನೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸರ್ಕಾರದ ನಿಯಮದ ಪ್ರಕಾರವೇ ಕೊಳವೆ ಬಾವಿಯನ್ನು ಬೊರವೆಲ್‌ ಏಜೆನ್ಸಿಗಳು ಕೊರೆಯುವಂತೆ ಎಲ್ಲ ಬೋರ್‌ವೆಲ್‌ ವಾಹನಗಳ ಮಾಲೀಕರಿಗೆ ಹಾಗೂ ಏಜೆನ್ಸಿಗಳಿಗೆ ನೋಟಿಸ್‌ ನೀಡಲಾಗುವುದು. ಈಗಾಗಲೇ ಈ ಕುರಿತು ಪಿಡಿಒಗಳ ಸಭೆ ಕೆರೆಯಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಖಾಸಗಿ ಇಲ್ಲವೆ ಸರ್ಕಾರದ ವತಿಯಿಂದ ಕೊಳವೆ ಬಾವಿ ಕೊರೆಯಿಸುವಾಗ ಸರ್ಕಾರದ ನಿಯಮ ಪಾಲಿಸಲು ಹೇಳಲಾಗಿದೆ. ಕೊರೆದ ಕೊಳವೆ ಬಾವಿಗಳನ್ನು ಸುರಕ್ಷತೆ ಇಲ್ಲದೆ ಹಾಗೆಯೇ ಬಿಡುವುದರಿಂದ ಮುಂದಾಗುವ ಅಪಾಯಗಳಿಗೆ ಭೂ ಮಾಲೀಕರು ಹಾಗೂ ಡ್ರಿಲ್ಲಿಂಗ್‌ ಏಜೆನ್ಸಿಯವರೇ ನೇರ ಹೊಣೆಯಾಗುತ್ತಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತೆರೆದ ಕೊಳವೆ ಬಾವಿಗಳನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚಿಸಬೇಕು ಎಂದು ಇಂಡಿ ಎಸಿ ಅಬೀದ್‌ ಗದ್ಯಾಳ ಹೇಳಿದ್ದಾರೆ. 

click me!