• ಬೆಳಗಾವಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ
• ಟಿ.ಎಸ್.ನಾಗಾಭರಣ ಕೇಳಿದ ಸಾಲು ಸಾಲು ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು
• ಹಲ್ಲು ಕಿತ್ತ ಹಾವಿನಂತಾಗಿದೆಯಾ ಕನ್ನಡ ಅಭಿವೃದ್ಧಿ ಪ್ರಾಧಿಕಾರ?
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜು.19): ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಭೆ ಆರಂಭದಲ್ಲಿಯೇ ಟಿ.ಎಸ್.ನಾಗಾಭರಣ ಸಭೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ಉದ್ದೇಶಿಸಿ, 'ಆತ್ಮಸಾಕ್ಷಿಯಾಗಿ ನಿಮ್ಮ ನಿಮ್ಮ ಇಲಾಖೆಯಲ್ಲಿ ಕನ್ನಡ ಅನುಷ್ಠಾನ ಆಗಿದೆಯಾ ಹೇಳಿ ಎಂದು ಪ್ರಶ್ನಿಸಿದರು. ಟಿ.ಎಸ್.ನಾಗಾಭರಣರವರ ಸಾಲು ಸಾಲು ಪ್ರಶ್ನೆಗೆ ಅಧಿಕಾರಿಗಳು ಮೌನ ವಹಿಸಿದ್ದು ಕಂಡು ಬಂತು. ತಮ್ಮ ತಮ್ಮ ಇಲಾಖೆಯ ವೆಬ್ ಪೋರ್ಟಲ್ ಡಿಫಾಲ್ಟ್ ಪೇಜ್ ಕನ್ನಡ ಇದ್ದರೆ ತೋರಿಸಿ ಎಂದಾಗಲೂ ಒಂದೆರಡು ಇಲಾಖೆ ಹೊರತು ಪಡಿಸಿ ಉಳಿದ ಅಧಿಕಾರಿಗಳು ಮೌನವಾಗಿ ಕುಳಿತಿದ್ದು ಕಂಡು ಬಂತು.
ಈ ವೇಳೆ ಸರ್ಕಾರಿ ಇಲಾಖೆ ವೆಬ್‌ಸೈಟ್‌ನಲ್ಲಿ ಸಂಬಂದಿಸಿದ ಇಲಾಖೆಯ ಲೋಗೋ ಕಡ್ಡಾಯ ಆಗಿರಬೇಕು, 30 ದಿನಗಳಲ್ಲಿ ಬಾಕಿ ಇರುವ ವೆಬ್‌ಸೈಟ್‌ಗಳ ಡಿಫಾಲ್ಟ್ ಪೇಜ್ ಕನ್ನಡದಲ್ಲಿ ಇರುವ ಹಾಗೇ ನೋಡಿಕೊಳ್ಳಲು ಸೂಚನೆ ನೀಡಿದರು. ಕರ್ನಾಟಕ ಸರ್ಕಾರದ ವೆಬ್‌ಸೈಟ್ ಅಂತಾ ಗೊತ್ತಾಗಬೇಕು ಎಂದರು. 2018ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಭೆಯ ಅನುಪಾಲನಾ ವರದಿ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಟಿ.ಎಸ್.ನಾಗಾಭರಣ, 'ಕನ್ನಡ ಭಾಷಾ ಕಲಿಕೆ ಅಧಿನಿಯಮ ಬಗ್ಗೆ ಯಾರಿಗೆ ಗೊತ್ತಿದೆ ಎಂದು ಪ್ರಶ್ನಿಸಿದಾಗಲೂ ಅಧಿಕಾರಿಗಳು ಉತ್ತರಿಸದೇ ಮೌನವಹಿಸಿದರು.
Belagavi Rain Update : ತಗ್ಗಿದ ಮಳೆ... ಆದರೂ ತಪ್ಪದ ಪ್ರವಾಹ ಭೀತಿ... ಏಕೆ ಗೊತ್ತಾ?
ಬೆಳಗಾವಿ ಡಿಡಿಪಿಐಗೆ ಈ ಬಗ್ಗೆ ನಿಮಗೆ ಗೊತ್ತಿರಬೇಕು ಎಂದ ಟಿ.ಎಸ್. ನಾಗಾಭರಣ, 'ಅಧಿಕಾರಿಗಳು ಅಧಿಕಾರ ವಹಿಸುವ ಮುನ್ನ ಹಿಂದಿನ ಸುತ್ತೋಲೆಗಳನ್ನ ಓದಿಕೊಳ್ಳಲು ಸಲಹೆ ನೀಡಿದರು. ಅಧಿಕಾರಿಗಳು ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸಿ. ಪಿಡಬ್ಲೂಡಿ ಇಲಾಖೆಯಲ್ಲಿ ಇ-ಟೆಂಡರ್ ಕನ್ನಡ ಮೂಲ ಭಾಷೆಯಾಗಿ ಬಳಕೆಯಾಗಲಿ. ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಲೈಸೆನ್ಸ್ ರದ್ದತಿ ಸೇರಿ ಹಲವು ಸೂಚನೆ ನೀಡಿದರು.
ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಕರಡು ಪ್ರತಿ ಸಿದ್ದ: ಬೆಳಗಾವಿಗೆ ಗಡಿ ಸಂರಕ್ಷಣಾ ಆಯೋಗ ಕಚೇರಿ ಸ್ಥಳಾಂತರಕ್ಕೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಟಿ.ಎಸ್.ನಾಗಾಭರಣ, 'ಗಡಿ ಸಂರಕ್ಷಣಾ ಆಯೋಗಕ್ಕೆ ಇಲ್ಲಿಯವರನ್ನೇ ನೇಮಿಸಲಿ. ಗಡಿ ಸಂರಕ್ಷಣಾ ಆಯೋಗ ಇಲ್ಲಿಯೇ ಇರಬೇಕಲ್ವಾ. ನಾನು ಅದನ್ನೇ ಪ್ರಶ್ನೆ ಮಾಡುತ್ತಿರೋದು ಎಂದರು. ಈ ವೇಳೆ ನೀವು ಸರ್ಕಾರಕ್ಕೆ ಒತ್ತಾಯ ಮಾಡ್ತೀರಾ ಎಂದಾಗ, 'ನಾನು ಒತ್ತಾಯ ಮಾಡಿದ್ರೆ ಮಾಡಿಬಿಡ್ತಾರಾ? ನನ್ನ ಪತ್ರ ಹೋಗುತ್ತೆ ಅಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲ್ಲು ಕಿತ್ತಿದ ಹಾವು ಆಗಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, 'ಖಂಡಿತ ಇದು ನಿಮಗೆ ಗೊತ್ತಿದೆ' ಎಂದು ಮುಗುಳ್ನಕ್ಕರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸು ಮಾಡುವ ಪ್ರಾಧಿಕಾರ, ಏನಾದರೂ ದಂಡನೆ ಕೊಡಕ್ಕಾಗುತ್ತಾ? ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇವೆ ಅಂತಾ ಹೇಳಬಹುದು. ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದು ಅಷ್ಟೇ. ಸರ್ಕಾರದ ಇಚ್ಛಾಶಕ್ತಿ ಇದ್ರೆ ಖಂಡತುಂಡವಾಗಿ ಮಾಡಬಹುದು. ಯಾರೇ ಆಗಲಿ ಇದೇ ರೀತಿ ಆಗಬೇಕು ಅಂತಾ ಹೇಳೋಕೆ ಸಾಧ್ಯವಾಗಬಹುದು. ಇಷ್ಟು ವರ್ಷವಾದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದಂಡಾಧಿಕಾರ ನೀಡದೇ ಇರೋ ಕಾರಣವಾಗಲಿ, ಲೋಕಾಯುಕ್ತಕ್ಕೆ ನಿಧಾನವಾಗಿ ದಂಡಾಧಿಕಾರ ಕೇವಲ ಶಿಫಾರಸಿಗೆ ಶಿಫ್ಟ್ ಮಾಡಿದ್ದಾಗಲಿ, ಇವೆಲ್ಲವನ್ನ ಗಮನಿಸಿದಾಗ ಈ ಎಲ್ಲ ಸಮಸ್ಯೆ ಹಾಗೇ ಇದ್ದಷ್ಟು ರಾಜಕೀಯವಾಗಿ ಉಪಯೋಗಕ್ಕೆ ಬರುತ್ತೆ.
ಒಂದ್ಸಾರಿ ಬೇಕು ಇದ್ದಾಗ ಹಿಂಗೆ, ಬೇಡ ಎಂದಾಗ ಹಿಂಗೆ ಎಂಬ ವ್ಯವಸ್ಥೆ ಕಾಣುತ್ತಿದ್ದೇವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ 30 ವರ್ಷ ಏನು ಮಾಡಿದೆ ಇನ್ಮುಂದೆ ಅದೇ ಮಾಡುತ್ತೆ. ಸಮಸ್ಯೆ ಮೇಲ್ಪದರ ನೋಡಿದಾಗ ಹಾಗೇ ಇರುತ್ತೆ ಏನೂ ಬದಲಾಗಲ್ಲ. ಸಮಸ್ಯೆ ಮೂಲ ಹುಡುಕಿಕೊಂಡು ಹೋದಾಗ ತಿದ್ದುಪಡಿ ಮಾಡಿದ್ರೆ ಮಾತ್ರ ಸರಿಯಾಗುವುದು' ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು. ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಬಗ್ಗೆ ಈಗ ಒಂದು ವರ್ಷದಿಂದ ಎಲ್ಲಾ ಇಲಾಖೆಗಳ ಜೊತೆ ಚರ್ಚಿಸಿದ್ದು, ಕರಡು ಪ್ರತಿ ಸಿದ್ಧ ಮಾಡಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಗೆ ನೀಡಿದ್ದೇವೆ.
ಇನ್ನೊಂದು ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸುನಿಲಕುಮಾರ್‌ಗೆ ನೀಡುತ್ತೇವೆ. ಈ ವರ್ಷದ ಮಳೆಗಾಲದ ಅಧಿವೇಶನದಲ್ಲಿ ಕರಡು ಮಂಜೂರಾತಿ ಬಂದ್ರೆ ಅದರಿಂದ ಗಡಿಯಲ್ಲಿ ಆಗಬೇಕಾದ ಕಠಿಣ ನಿಲುವು ಬರುತ್ತೆ. ಗಡಿಯಲ್ಲಿ ಕನ್ನಡ ಕಲಿಕಾ ಅಧಿನಿಯಮ ಜಾರಿಗೊಳಿಸುವ ಮನೋಭಾವ ಸರ್ಕಾರಕ್ಕೆ, ಅಧಿಕಾರಿಗಳಿಗೆ, ಪ್ರಜೆಗಳಿಗೆ ಬರದಿದ್ರೆ ಆಗಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಯೋಗಗಳನ್ನು ಇಡುತ್ತಾ ಹೋಗುತ್ತೆ. ಉದಾಹರಣೆಗೆ ಭಾಷಾ ಪ್ರಯೋಗಾಲಯ.
ಬೆಳಗಾವಿಯಲ್ಲಿ ಮುಂದುವರಿದ ವರುಣಾರ್ಭಟ: 13 ಸೇತುವೆಗಳು ಮುಳುಗಡೆ
19 ಜಿಲ್ಲೆಗಳ 38 ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಕನ್ನಡ ಮಕ್ಕಳಿಗೆ ಭಾಷಾ ಪ್ರಯೋಗಾಲಯ ಮಾಡುತ್ತಿದ್ದು ಗಡಿಭಾಗ ಬೆಳಗಾವಿಯಲ್ಲಿ ಈಗ ಮನೆಯಲ್ಲಿ ಮರಾಠಿ ಹಾಗೂ ಶಾಲೆಯಲ್ಲಿ ಕನ್ನಡ ಮಾತನಾಡುವ ಮಗು ಹೇಗೆ ಎರಡು ಭಾಷೆ ಸಮೀಕರಿಸಬೇಕು ಗೊತ್ತಾಗಬೇಕು. ಅದಕ್ಕೆ ಪಠ್ಯಕ್ರಮವೇ ಬೇರೆಯಾಗಬೇಕು. ಮಕ್ಕಳ ಮನೋಧರ್ಮಕ್ಕೆ ಒಪ್ಪುವ ಆಡಿಯೋ ವಿಸ್ಯೂಯಲ್ಸ್, ಆಟ ಆಡುತ್ತಾ ಕಲಿಯುವ ಆಟಿಕೆ, ಪರಿಕರ ಸಿದ್ಧ ಮಾಡ್ತಿದೇವೆ. ನಾವು ಇದನ್ನ ಪ್ರಯೋಗ ಮಾಡಿ ಇದು ಒಳ್ಳೆಯದು ಎನಿಸಿದ್ರೆ ಎಲ್ಲಾ ಜಿಲ್ಲೆಗಳಿಗೆ ಶಿಕ್ಷಣ ಇಲಾಖೆ ಮಾಡುವ ಹಾಗೇ ಆಗಬೇಕು. ಅದನ್ನ ಪ್ರಯೋಗ ಮಾಡಿ ಅದರ ಪಾಸಿಟಿವಿಟಿ ಶಿಕ್ಷಣ ಇಲಾಖೆ ಮುಂದಿಡುತ್ತೇವೆ ಎಂದರು.
ನಾವು ನಿರ್ದೇಶಕರು ನಾಯಕರಲ್ಲ ಎಂದ ಟಿ.ಎಸ್.ನಾಗಾಭರಣ: ಇನ್ನು ಕನ್ನಡಪರವಾಗಿ, ರಾಜ್ಯದ ವಿಚಾರಗಳಲ್ಲಿ ಕನ್ನಡ ಚಿತ್ರರಂಗದವರು ಹೋರಾಟ ಮಾಡುವಲ್ಲಿ ನಾಯಕತ್ವ ಕೊರತೆ ಇದೆಯಾ? ಎಂಬ ಪ್ರಶ್ನೆಗೆ ಪರೋಕ್ಷವಾಗಿ ಹೌದು ಅಂತಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದರು. ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಸ್ಯೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು, 'ನಿಮ್ಮ ಹಿಂದೆ ಚಿತ್ರರಂಗದ ದೊಡ್ಡ ಶಕ್ತಿ ಇದೆ ಹೋರಾಟಕ್ಕೆ ಕರೆ ಕೊಟ್ರೆ ಅನುಕೂಲ ಆಗುತ್ತೆ ಎಂದು ಹೇಳಿದಾಗ ಚಿತ್ರರಂಗದವರು ಯಾರಾದರೂ ಹೋರಾಟದಲ್ಲಿ ಎಷ್ಟರಮಟ್ಟಿಗೆ ಬಂದಿದ್ರು? ಅಂತಾ ಪ್ರಶ್ನಿಸಿದರು.
ಗೋಕಾಕ್ ಚಳವಳಿಯಲ್ಲಿ ಡಾ.ರಾಜಕುಮಾರ್, ಪಾಟೀಲ ಪುಟ್ಟಪ್ಪ ಬಂದಿದ್ದರಿಂದ ಅದು ಆಯ್ತು ಅಂತಾ ತಿಳಿಸಿದರು. ಕನ್ನಡ ಚಿತ್ರರಂಗದವರು ಹೋರಾಟದಲ್ಲಿ ಏಕೆ ಬರ್ತಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, 'ಪಾಪ ಅವರಿಗೆ ಅವರದ್ದೇ ಸಮಸ್ಯೆಗಳಿವೆ. ಕನ್ನಡ ಸಿನಿಮಾ ಜನ ನೋಡಲ್ಲ, ನೋಡೋರು ಇಲ್ಲ. ಅದಕ್ಕೆ ಪ್ರೇಕ್ಷಕರನ್ನು ಒತ್ತಾಸೆಯಾಗಿಟ್ಟುಕೊಂಡು ಮಾಡುವಂತ ಸಾಕಷ್ಟು ಸಿನಿಮಾಗಳು ಬೇಕು. ಹೊಸ ರೀತಿ ಸಿನಿಮಾ ಮೇಕರ್ಸ್ ಬಂದಿದ್ದಾರೆ, ಅವರಿನ್ನು ಎಸ್ಟ್ಯಾಬ್ಲಿಷ್ ಆಗ್ತಿದ್ದಾರೆ. ಬಹಳ ಅದ್ಭುತವಾದ ಹೊಸ ನಿರ್ದೇಶಕರುಗಳು ಬರುತ್ತಿದ್ದಾರೆ.
ಬೆಳಗಾವಿ: ಸುಧಾರಣೆಯಾದ ವಿಟಿಯು ಶ್ರೇಯಾಂಕ..!
ಅಲ್ಲಿ ಇನ್ನೊಂದು ಮರುಹಟ್ಟು ಪಡೆದುಕೊಳ್ಳುತ್ತಿದೆ. ಈ ಮರುಹುಟ್ಟು ಪಡೆದುಕೊಳ್ಳುವ ಸಮಯದಲ್ಲಿ ಯಾವುದೇ ಚಳವಳಿಯಲ್ಲಿ ಭಾಗವಹಿಸಬೇಕಾದ್ರೆ ಆ ಮನಸ್ಥಿತಿಯ ನಾಯಕ ಅಲ್ಲಿ ಇನ್ನೊಬ್ಬ ಇರಬೇಕು ಎಂದರು. ಹಾಗಾದ್ರೆ ಚಿತ್ರರಂಗದಲ್ಲಿ ನಾಯಕತ್ವ ಕೊರತೆ ಇದೆಯಾ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಅಲ್ವಾ? ಅಂತಾ ಪ್ರಶ್ನಿಸಿದರು. ಆಗ ಟಿ.ಎಸ್.ನಾಗಾಭರಣ ಮೊದಲು ನಾಯಕತ್ವ ಪಡೆಯಲಿ ಎಂದ ಮಾಧ್ಯಮದವರು ಹೇಳಿದಾಗ, 'ಖಂಡಿತ ಆಗಲ್ಲ, ನಾವು ನಿರ್ದೇಶಕರು ನಾಯಕರಲ್ಲ ಎಂದು ತಿಳಿಸಿದರು.