ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಬಸ್ ಹಾಗೂ ರೈಲ್ವೆ ನಿಲ್ದಾಣದಿಂದ ತಮ್ಮ ಮನೆಗಳಿಗೆ ತಲುಪಲು ಭಾರಿ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳು ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಮುಂದೆ ಬಂದಿದ್ದು, ಈ ಅಗ್ರಿಗೇಟರ್ ಸೇವೆಯನ್ನು ಆರಂಭಿಸಲು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದಿಂದ ಇನ್ನೆರಡು ದಿನಗಳಲ್ಲಿ ಅನುಮತಿ ಸಿಗುವ ಸಾಧ್ಯತೆ ಕಂಡುಬರುತ್ತಿದೆ.
ಬೆಂಗಳೂರು (ಡಿ.4): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಬಸ್ ಹಾಗೂ ರೈಲ್ವೆ ನಿಲ್ದಾಣದಿಂದ ತಮ್ಮ ಮನೆಗಳಿಗೆ ತಲುಪಲು ಅನುಕೂಲವಾಗುವಂತೆ "ಬೈಕ್ ಟ್ಯಾಕ್ಸಿ' ಸೇವೆಯನ್ನು ಆರಂಭಿಸಲು ರಾಜ್ಯ ಸಾರಿಗೆ ಪ್ರಾಧಿಕಾರದಿಂದ ಅನುಮತಿ ಸಿಗುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತಿದೆ. ಒಂದು ವೇಳೆ ಎಲೆಕ್ಟ್ರಾನಿಕ್ ಬೈಕ್ (ಇ-ಬೈಕ್) ಟ್ಯಾಕ್ಸಿಗೆ ಅನುಮತಿ ಸಿಕ್ಕಲ್ಲಿ ಮಹಿಳಾ ಬೈಕ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ಖಾಸಗಿ ಸಂಸ್ಥೆಗಳು ನಿರ್ಧರಿಸಿವೆ. ಇದರಿಂದ ಮೆಟ್ರೋ, ಬಿಎಂಟಿಸಿ ಬಸ್ ಹಾಗೂ ರೈಲ್ವೆ ನಿಲ್ದಾಣದಿಂದ ತಮ್ಮ ಮನೆಗಳಿಗೆ ತಲುಪಲು ಅನುಕೂಲ ಆಗಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ತಪ್ಪಿಸುವುದು ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಬಳಸುವಂತೆ ಸರ್ಕಾರ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ, ಮೊದಲ ಸ್ಥಳದಿಂದ ಹೊರಡುವುದು ಹಾಗೂ ಸಾರ್ವಜನಿಕ ಸಾರಿಗೆ ಬಳಕೆಯ ನಂತರ ಕೊನೆಯ ತಾಣಗಳನ್ನು ತಲುಪಲು ತುಂಬಾ ಸಮಸ್ಯೆ ಆಗುತ್ತಿದೆ. ಇನ್ಜು ಆಟೋ ಮತ್ತು ಟ್ಯಾಕ್ಸಿ ದರಗಳು ಹೆಚ್ಚಾಗಿದ್ದು, ಖಾಸಗಿ ವಾಹನಗಳನ್ನು ಬಳಸುವವರ ಸಂಖ್ಯೆಯೇ ಅಧಿಕವಾಗಿದೆ. ಆದರೆ, ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಸೇವೆಗಳನ್ನು ನೀಡಲು ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತಿದೆ. ಆದರೆ, ಇದಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ಸಿಕ್ಕಿರಲಿಲ್ಲ. ಈ ಬಗ್ಗೆ ವಿವಿಧ ಖಾಸಗಿ ಕಂಪನಿಗಳು ಸಾರಿಗೆ ಪ್ರಾಧಿಕಾರದೊಂದಿಗೆ ಹಲವು ಸತ್ತಿನ ಮಾತುಕತೆಗಳನ್ನು ನಡೆಸಿದ್ದರೂ, ಪೂರ್ಣ ಪ್ರಮಾಣದ ಅನುಮತಿ ದೊರೆತಿರಲಿಲ್ಲ. ಈಗ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ (ಕೆಎಸ್‌ಟಿಎ) ವತಿಯಿಂದ ಡಿ.6ರಂದು ಅನುಮತಿ ಸಿಗುವ ಸಾಧ್ಯತೆ ಕಂಡುಬರುತ್ತಿದೆ.
Rapido Ban Demand: ಆಟೋ-ಕ್ಯಾಬ್ ಚಾಲಕರೊಂದಿಗೆ ಸಚಿವ ಶ್ರೀ ರಾಮುಲು ಸಭೆ: ರ‍್ಯಾಪಿಡೋ ನಿಷೇಧ ತೀರ್ಮಾನ?
ಅಗ್ರಿಗೇಟರ್ ಪರವಾನಗಿ ಲಭ್ಯತೆ?:
ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕೆಎಸ್‌ಟಿಎ ಸಭೆ ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಕುರಿತು ನಿರ್ಧಾರ ಕೈಗೊಳ್ಳಬಹುದು. ಈ ಮೂಲಕ ಪ್ರಯಾಣಿಕರ ಕೊನೆಯ ಸ್ಥಳದ ಸಂಪರ್ಕ ಮತ್ತು ಕಡಿಮೆ ದೂರದ ಪ್ರಯಾಣವನ್ನು ಬಯಸುವ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ. ಪ್ರಸ್ತುತ ಬೌನ್ಸ್ ಬೈಕ್‌ಗಳನ್ನು ನಡೆಸುತ್ತಿರುವ ವಿಕ್ಡ್ ರೈಡ್ ಅಡ್ವೆಂಚರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನಿಂದ ಒಂದು ಪ್ರತ್ಯೇಕ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್ ವೇಳೆ ವಿಕ್ಡ್ ರೈಡ್ ಅಡ್ವೆಂಚರ್ ಸಂಸ್ಥೆಯಿಂದ ಇ-ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಅಗ್ರಿಗೇಟರ್ ಪರವಾನಗಿ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈ ಬಗ್ಗೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್-2021 ರ ಅಡಿಯಲ್ಲಿ ಪರವಾನಗಿ ನೀಡಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
undefined
ಬೌನ್ಸ್ ಶೇರ್ ಅಪ್ಲಿಕೇಶನ್:
ಬೌನ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ವಿವೇಕಾನಂದ ಹಲ್ಲೇಕೆರೆ ಮಾತನಾಡಿ "ನಾವು ಇ-ಬೈಕ್ ಪರವಾನಗಿಗಾಗಿ ಕಾಯುತ್ತಿದ್ದೇವೆ. ಈಗಾಗಲೇ ಬೌನ್ಸ್ ಶೇರ್ ಅಪ್ಲಿಕೇಶನ್ ಪ್ರಾರಂಭಿಸಲಾಗಿದೆ. ಈಗ, ನಮ್ಮ ಸ್ವಂತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಂದಿದ್ದೇವೆ (ಬೌನ್ಸ್ ಇನ್ಫಿನಿಟಿ). ಕೋರಮಂಗಲ ಮತ್ತು ಬೆಳ್ಳಂದೂರು ಸೇರಿದಂತೆ ಟೆಕ್ ಕಾರಿಡಾರ್‌ಗಳಂತಹ ಸ್ಥಿರ ಮಾರ್ಗಗಳಲ್ಲಿ ಮತ್ತು ಹೆಚ್ಚಿನ ದಟ್ಟಣೆ ಇರುವ ಮೆಜೆಸ್ಟಿಕ್‌ನಂತಹ ಸ್ಥಳಗಳಲ್ಲಿ ನಾವು ಬೈಕ್ ಟ್ಯಾಕ್ಸಿಗಳನ್ನು ನಿಯೋಜಿಸುವ ಯೋಜನೆಯಿದೆ. ಆದರೆ ಬೈಕ್ ಟ್ಯಾಕ್ಸಿಗಳ ಕಾರ್ಯತಂತ್ರವನ್ನು ಇನ್ನೂ ಅಂತಿಮಗೊಳಿಸಿಲ್ಲ. ನಗರದಲ್ಲಿ ಬೈಕ್ ಬಾಡಿಗೆ (ಬೌನ್ಸ್ ಶೇರ್) ಪುನರಾರಂಭಿಸಬೇಕೆಂಬ ಬೇಡಿಕೆಯೂ ಇದೆ. ನಾವು ವಿಧಾನಗಳ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬೋರಾದ ಕೆಲಸ... ವಾರಾಂತ್ಯದಲ್ಲಿ ಕ್ಯಾಬ್ ಡ್ರೈವರ್ ಆದ ಸಾಫ್ಟ್‌ವೇರ್ ಡೆವಲಪರ್
ಮಹಿಳಾ ಸವಾರರ ನಿಯೋಜನೆಗೆ ಅರ್ಜಿ ಸಲ್ಲಿಕೆ:
ಜುಲೈ 2021 ರಲ್ಲಿ, ಮುಖ್ಯವಾಗಿ ಮೆಟ್ರೋ, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಒದಗಿಸಲು ಇ-ಬೈಕ್ ಟ್ಯಾಕ್ಸಿಗಳನ್ನು ಅನುಮತಿಸುವ ಯೋಜನೆಯನ್ನು ಸರ್ಕಾರವು ಅನಾವರಣಗೊಳಿಸಿತು. ಆದರೆ, ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿಯೊಂದಿಗೆ, ವಿಶೇಷವಾಗಿ ಇತ್ತೀಚಿನ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ, ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಮಹಿಳಾ ಸವಾರರನ್ನು (ಕ್ಯಾಪ್ಟನ್) ಸೆಳೆಯಲು ಮುಂದಾಗಿದೆ. ಮೆಟ್ರೊರೈಡ್ ಸಂಸ್ಥಾಪಕ ಗಿರೀಶ್ ನಾಗಪಾಲ್ ಮಾತನಾಡಿ, ನಾವು ಜಯನಗರ ಸಾರಿಗೆ ಕಚೇರಿಯಲ್ಲಿ ಬೈಕ್ -ಟ್ಯಾಕ್ಸಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ಅವರು ಹೆಚ್ಚಿನ ಸ್ಪಷ್ಟೀಕರಣಗಳನ್ನು ಕೇಳಿದ್ದಾರೆ. ಇದಕ್ಕೆ ಹೆಚ್ಚಿನ ಮಾಹಿತಿಯನ್ನು ಒದಗಿಸಿ ಅನುಮತಿ ಪಡೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಮಹಿಳಾ ರೈಡರ್ ಸೇವೆಗೆ ಸಿದ್ಧತೆ:
ನಾವು ಬೈಕ್ ಟ್ಯಾಕ್ಸಿಗಳನ್ನು ಚಲಾಯಿಸಲು ಸಿದ್ಧರಿರುವ ಮಹಿಳೆಯರನ್ನು ಆಹ್ವಾನಿಸುತ್ತಿದ್ದೇವೆ. ನಾವು ಅವರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒದಗಿಸುತ್ತೇವೆ. ನಾವು ಮಹಿಳಾ ಸವಾರರಿಗೆ ಮಹಿಳಾ ಗ್ರಾಹಕರನ್ನು ಮಾತ್ರ ನಿಯೋಜಿಸುತ್ತೇವೆ. ನಮ್ಮ ಯೋಜನೆಯು ಮೊದಲ ಹಂತದಲ್ಲಿ 100 ಕ್ಕಿಂತ ಕಡಿಮೆ ಸ್ಕೂಟರ್‌ಗಳೊಂದಿಗೆ ಪ್ರಾರಂಭಿಸುವುದು. ಅದನ್ನು ಹಂತ ಹಂತವಾಗಿ 1,000 ಕ್ಕಿಂತ ಹೆಚ್ಚು ಬೈಕ್‌ಗಳಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಕೋಣನಕುಂಟೆ, ಇಂದಿರಾನಗರ, ಯಲಚೇನಹಳ್ಳಿ ಸೇರಿ ಮುಂತಾದ ಮೆಟ್ರೋ ನಿಲ್ದಾಣಗಳಿಂದ ಮಹಿಳಾ ಇ-ಬೈಕ್ ಟ್ಯಾಕ್ಸಿಗಳನ್ನು ನಿಯೋಜಿಸುವುದು ಮೆಟ್ರೋರೈಡ್‌ನ ಯೋಜನೆಯಾಗಿದೆ ಎಂದು ಮೆಟ್ರೊರೈಡ್ ಸಂಸ್ಥಾಪಕ ಗಿರೀಶ್ ನಾಗಪಾಲ್ ಹೇಳಿದರು.
ಸಾರಿಗೆ ಪ್ರಾಧಿಕಾರ ನಿಗದಿಯಂತೆ ಬೈಕ್ ಟ್ಯಾಕ್ಸಿ ಸೇವೆಯ ದರ:
* ಮೊದಲ 5 ಕಿ,ಮೀ. ಸಂಚಾರಕ್ಕೆ ಕನಿಷ್ಠ 25 ರೂ. ದರವಿರುತ್ತದೆ. ನಂತರ 5 ರಿಂದ 10 ಕಿ,ಮೀ. ದೂರದ ಪ್ರಯಾಣಕ್ಕೆ 50 ರೂ. ದರ ನಿಗದಿಪಡಿಸಲಾಗಿದೆ.
* ಇ-ಬೈಕ್ ಸೇವೆಯು ಆಟೋಗಳು ಮತ್ತು ಟ್ಯಾಕ್ಸಿ ದರಕ್ಕಿಂತ ತುಂಬಾ ಕಡಿಮೆಯಾಗಲಿದೆ. ಆಟೋಗಳಲ್ಲಿ ಮೊದಲ 2 ಕಿ.ಮೀ. ಸೇವೆಗೆ 30 ರೂ. ಹಾಗೂ ಹೆಚ್ಚಿನ ಪ್ರತಿ ಕಿ.ಮೀ ಪ್ರಯಾಣಕ್ಕೆ 15 ರೂ. ಹೆಚ್ಚಳ ಮಾಡಬಹುದು.
* ಪ್ರಯಾಣಿಕರು ತಲುಪುವ ಸ್ಥಳ ಆರಂಭದ ಸ್ಥಳದಿಂದ 10 ಕಿ.ಮೀ.ಗಿಂತ ಹೆಚ್ಚು ದೂರ ಇರಬಾರದು.
* ಬೈಕ್ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಕಡ್ಡಾತವಾಗಿ ಹಳದಿ ಹೆಲ್ಮೆಟ್ ಧರಿಸಿರಬೇಕು.
* ಬೈಕ್ ನೋಂದಣಿಯ ನಂತರ ಇತರೆ ಪೂರ್ವಾಪರಗಳನ್ನು ಪೊಲೀಸ್ ಇಲಾಖೆಯು ನೋಡಿಕೊಳ್ಳಲಿದೆ.
* ಇ-ಬೈಕ್ ಟ್ಯಾಕ್ಸಿ ಚಾಲನೆಗೆ 5 ವರ್ಷದ ಪರವಾನಗಿ ನೀಡಲಾಗುತ್ತದೆ.
* ಪ್ರತಿ ಬೈಕ್‌ಗೆ ಪರವಾನಗಿ ನೀಡುವ ವೇಳೆ 5 ಸಾವಿರ ರೂ. ಭದ್ರತಾ ಠೇವಣಿ ಪಾವತಿಸಿಕೊಳ್ಳಲಾಗುತ್ತದೆ.