895 ಎಕರೆಯಲ್ಲಿ 250 ಕೋಟಿ ಹೂಡಿಕೆ| ರಾಜ್ಯ ಗ್ರೀನ್ ಸಿಗ್ನಲ್, ಕೇಂದ್ರ ಅನುಮತಿ ಬಾಕಿ| ಈ ಉತ್ಪಾದನಾ ಘಟಕ ಪರಿಸರ ಸ್ನೇಹಿಯಾಗಲಿದೆ| ಮಕ್ಕಳಿಗೆ ಅಗತ್ಯವಿರುವ ಆಟಿಕೆ ಸಾಮಗ್ರಿಗಳನ್ನು ತಯಾರು ಮಾಡಲಿದೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮಾ.07): ಟಾಯ್ಸ್ ಸೇರಿದಂತೆ ಮಕ್ಕಳ ಆಟಿಕೆಗಳನ್ನು ಹೆಚ್ಚಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ದೇಶದಲ್ಲಿಯೇ ಇಂಥ ಆಟಿಕೆ ಸಾಮಗ್ರಿ ಉತ್ಪಾದನೆಗೆ ಸಿದ್ಧತೆ ನಡೆದಿದ್ದು, ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಏಕಸ್ ಕಂಪನಿಯ ಬೃಹತ್ ಉತ್ಪಾದನಾ ಘಟಕ ಶೀಘ್ರದಲ್ಲಿಯೇ ತಲೆ ಎತ್ತಲಿದೆ.
ಈ ಘಟಕಕ್ಕಾಗಿ ಈಗಾಗಲೇ 985 ಎಕರೆ ಭೂಮಿಯನ್ನು ಖರೀದಿ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡೆ ಉತ್ಪಾದನಾ ಘಟಕ ಪ್ರಾರಂಭವಾಗಲಿದೆ. 250 ಕೋಟಿ ಅಂದಾಜು ವೆಚ್ಚದ ಈ ಉತ್ಪಾದನಾ ಘಟಕ ಪರಿಸರ ಸ್ನೇಹಿಯಾಗಲಿದೆ. ಮಕ್ಕಳಿಗೆ ಅಗತ್ಯವಿರುವ ಆಟಿಕೆ ಸಾಮಗ್ರಿಗಳನ್ನು ತಯಾರು ಮಾಡಲಿದೆ. ಇದಕ್ಕೆ ಅಗತ್ಯ ಮಾರುಕಟ್ಟೆ ಸೌಲಭ್ಯವನ್ನೂ ಕಲ್ಪಿಸಲು ಉದ್ದೇಶಿಸಿದ್ದು, ಸುಮಾರು 3 ಸಾವಿರ ಜನರಿಗೆ ಸ್ಥಳೀಯವಾಗಿ ಉದ್ಯೋಗ ಸಹ ಲಭಿಸಲಿದೆ. ಇದರೊಂದಿಗೆ ಜಿಲ್ಲೆಯಲ್ಲಿಯೇ ಅತ್ಯಧಿಕ ಉದ್ಯೋಗ ಸೃಷ್ಟಿಯ ಘಟಕ ಇದಾಗಲಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಕ್ಕಳ ಆಟಿಕೆಗಳ ಘಟಕ ಸ್ಥಾಪನೆ ಕುರಿತಂತೆ ಘೋಷಿಸಿದ್ದರು. ಇದೀಗ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರದ ಅನುಮತಿ ಸಿಗುತ್ತಿದ್ದಂತೆ ನಿರ್ಮಾಣ ಕಾರ್ಯ ಶುರುವಾಗಲಿದೆ.
ಹಸಿರು ನಿಶಾನೆ:
ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಈಗಾಗಲೇ ಘಟಕ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದು, ಘಟಕ ಸ್ಥಾಪನೆಗೆ ಇದ್ದ ಎಲ್ಲ ಅಡ್ಡಿ ಆತಂಕ ನಿವಾರಣೆಯಾಗಿದೆ. ಇನ್ನು ಕೇವಲ ಕೇಂದ್ರ ಸರ್ಕಾರದಿಂದ ಎನ್‌ಒಸಿಗಾಗಿ ಕಾಯಲಾಗುತ್ತಿದೆ. ಕೇಂದ್ರ ಸರ್ಕಾರದ ಆರ್ಥಿಕ ವಲಯದ ಕಾರ್ಯದರ್ಶಿಯೂ ಸಹ ಕೊಪ್ಪಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆದರೆ, ವರದಿಯಲ್ಲಿ ಏನಿದೇ ಎನ್ನುವುದು ಬಹಿರಂಗವಾಗಿಲ್ಲ. ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದು, ಸಕಾರಾತ್ಮಕವಾಗಿಯೇ ಮಾತನಾಡಿದ್ದಾರೆ ಎನ್ನಲಾಗಿದೆ.
ಮರಳಿ ಹೋದ ಫೋಸ್ಕೋ:
ಈ ಹಿಂದೆ ಇದೇ ಜಾಗೆಯಲ್ಲಿ ಫೋಸ್ಕೋ ಕಾರ್ಖಾನೆ ಸ್ಥಾಪಿಸುವ ನಿರ್ಧಾರ ಆಗಿತ್ತು. ಆದರೆ, ಅದು ಪರಿಸರ ವಿರೋಧಿಯಾಗಿದ್ದರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದರ ವಿರುದ್ಧ ಗದಗ ಸೇರಿದಂತೆ ನಾನಾ ಕಡೆ ಬಹುದೊಡ್ಡ ಹೋರಾಟ ನಡೆದಿದ್ದರಿಂದ ಇಲ್ಲಿಂದ ಫೋಸ್ಕೋ ಕಾಲ್ಕಿತ್ತಿದೆ. ಆದರೆ, ಏಕಸ್ ಕಂಪನಿ ಪರಿಸರ ಸ್ನೇಹಿ ಮತ್ತು ಸ್ಥಳೀಯವಾಗಿಯೇ ಉದ್ಯೋಗ ನೀಡುವ ಭರವಸೆಯೊಂದಿಗೆ ಪ್ರಾರಂಭವಾಗುತ್ತಿರುವುದರಿಂದ ಈಗಾಗಲೇ ರೈತರು ಭೂಮಿ ನೀಡಿದ್ದಾರೆ.
ಪ್ರೇರಣೆ ಏನು?:
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿಯೇ ಸುಪ್ರಸಿದ್ದಿಯಾಗಿದ್ದ ಕಿನ್ನಾಳ ಕಲೆ ಮತ್ತು ಉತ್ಪಾದನೆಗಳು ಕೊಪ್ಪಳ ಬಳಿ ಆಟಿಕೆ ಸಾಮಗ್ರಿ ಉತ್ಪಾದನೆ ಘಟಕ ಹಾಕಲು ಪ್ರೇರಣೆ ಎನ್ನಲಾಗಿದೆ. ಈಗಿನ ಕಿನ್ನಾಳ ಕಲೆಯ ವಸ್ತುಗಳಿಗೆ ದೇಶ-ವಿದೇಶಗಳಲ್ಲೂ ಬೇಡಿಕೆ ಇರುವುದರಿಂದ ಇದನ್ನೇ ಮಾದರಿಯಾಗಿ ಇಟ್ಟುಕೊಂಡು ಆಧುನಿಕತೆ ಅಳವಡಿಸಿ ಉತ್ಪಾದಿಸುವ ಉದ್ಧೇಶ ಹೊಂದಲಾಗಿದೆ.