ವಲಸೆ ಪಕ್ಷಿಗಳಿಗೆ ಆಹಾರವಾಗಿದ್ದ, ಕೊಡಗಿನವರಿಗೆ ಸಾಂಪ್ರದಾಯಿಕ ಆಹಾರವಾಗಿದ್ದ ಹಾಗೂ ಬತ್ತದ ಗದ್ದೆಗಳಲ್ಲಿ ಮಾತ್ರ ಹೇರಳವಾಗಿ ಸಿಗುತ್ತಿದ್ದ ಕೊಯ್ಲೆ ಮೀನು ಸಂತತಿ ಈಗ ಮರೆಯಾಗುತ್ತಿದ್ದು, ಇದರಿಂದ ಜೀವ ವೈವಿಧ್ಯಕ್ಕೆ ಪೆಟ್ಟು ಬೀಳುವ ಲಕ್ಷಣ ಕಾಣಬರುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ (ಡಿ.23) : ವಲಸೆ ಪಕ್ಷಿಗಳಿಗೆ ಆಹಾರವಾಗಿದ್ದ, ಕೊಡಗಿನವರಿಗೆ ಸಾಂಪ್ರದಾಯಿಕ ಆಹಾರವಾಗಿದ್ದ ಹಾಗೂ ಬತ್ತದ ಗದ್ದೆಗಳಲ್ಲಿ ಮಾತ್ರ ಹೇರಳವಾಗಿ ಸಿಗುತ್ತಿದ್ದ ಕೊಯ್ಲೆ ಮೀನು ಸಂತತಿ ಈಗ ಮರೆಯಾಗುತ್ತಿದ್ದು, ಇದರಿಂದ ಜೀವ ವೈವಿಧ್ಯಕ್ಕೆ ಪೆಟ್ಟು ಬೀಳುವ ಲಕ್ಷಣ ಕಾಣಬರುತ್ತಿದೆ.
undefined
ಕೊಯ್ಲೆ ಮೀನು ಎಂಬುದು ಬತ್ತದ ಗದ್ದೆಗಳಲ್ಲಿ ಹಾಗೂ ತೋಡುವಿನಲ್ಲಿ ಕಾಣಸಿಗುವ ಸಣ್ಣಜಾತಿಯ ಮೀನುಗಳು. ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೊಯ್ಲೆ ಮೀನು ಗದ್ದೆಗಳಲ್ಲಿ ಸಾಮಾನ್ಯವಾಗಿ ಸಿಗುತ್ತಿತ್ತು. ಇದನ್ನು ಕೊಡಗಿನಲ್ಲಿ ವಿಶೇಷ ಖಾದ್ಯವಾಗಿ ಸವಿಯುವುದೂ ಉಂಟು. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಕಾರಣದಿಂದಾಗಿ ಈ ಮೀನಿನ ಸಂತತಿ ಅಳಿವಿನಂಚಿನಲ್ಲಿದೆ.
ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಎರಡು ದಿನ ‘ಜೇನು ಹಬ್ಬ’
ಬತ್ತದ ಗದ್ದೆಗಳ ಕ್ಷೀಣದಿಂದಾಗಿ ಜಿಲ್ಲೆಯಲ್ಲಿ ಕೊಯ್ಲೆ ಮೀನಿನ ಸಂತತಿ ಕೂಡ ಮಾಯವಾಗುತ್ತಿದೆ. ಜಿಲ್ಲೆಯಲ್ಲಿ ಹತ್ತಾರು ವರ್ಷಗಳ ಹಿಂದೆ ಸುಮಾರು 50 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಕೃಷಿ ಮಾಡಲಾಗುತ್ತಿತ್ತು. ಆದರೆ ಈಗ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬತ್ತ ಬೆಳೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬತ್ತ ಕೃಷಿ ಕೂಡ ಕ್ಷೀಣಿಸುವುದು ಸತ್ಯ.
ಬತ್ತದ ಗದ್ದೆಗಳು ಸೈಟ್‌ಗಳಾಗುತ್ತಿದೆ. ಶುಂಠಿ, ತಾಳೆ ಸೇರಿದಂತೆ ಗದ್ದೆಗಳಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತಿದೆ. ಬಹುತೇಕರು ಗದ್ದೆಗಳನ್ನು ಪಾಳುಬಿಟ್ಟಿದ್ದಾರೆ. ಬತ್ತದ ಕೃಷಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಗದ್ದೆಯಲ್ಲಿ ನೀರಿನಾಂಶ ಇಲ್ಲದಂತಾಗಿದೆ. ಈ ಎಲ್ಲ ಕಾರಣದಿಂದಾಗಿ ಕೊಯ್ಲೆ ಮೀನು ಸಂತತಿ ಕ್ಷೀಣಿಸುತ್ತಿದೆ.
ಒಂದಾನೊಂದು ಕಾಲದಲ್ಲಿ ಮಹಿಳೆಯರು ಕೊಯ್ಲೆ ಮೀನನ್ನು ಗದ್ದೆಗಳಲ್ಲಿ ಹಿಡಿದು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಇದರಿಂದ ವಿಶೇಷ ಖಾದ್ಯವನ್ನು ಕೂಡ ಮಾಡಲಾಗುತ್ತಿತ್ತು. ಆದರೆ ಈ ಮೀನು ಕಾಣಸಿಗುವುದು ಈಗ ಅಪರೂಪ ಎಂಬಂತಾಗಿದ್ದು, ಎಲ್ಲಿಯೂ ಮಾರಾಟ ಮಾಡುತ್ತಿಲ್ಲ. ಕೊಯ್ಲೆ ಮೀನು ಹಿಡಿಯುವುದು ಕೂಡ ವಿರಳವಾಗಿದೆ.
ಜೀವ ವೈವಿಧ್ಯದಲ್ಲಿ ಕೊಯ್ಲೆ ಮೀನು ಪ್ರಮುಖವಾಗಿದೆ. ಕೊಯ್ಲೆ ಮೀನು ಬತ್ತದ ಗದ್ದೆಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಈ ಕೊಯ್ಲೆ ಮೀನು ತಿನ್ನಲೆಂದೇ ದೂರದ ಪ್ರದೇಶದಿಂದ ಹಲವು ವಲಸೆ ಪಕ್ಷಿಗಳು ಕೂಡ ಕೊಡಗಿನತ್ತ ಬರುತ್ತದೆ. ಏಡಿಗಳಿಗೆ ಕೂಡ ಆಹಾರವಾಗಿದೆ. ಆದರೆ ಕೊಯ್ಲೆ ಮೀನೇ ಮಾಯವಾಗುತ್ತಿದ್ದರೆ ವಲಸೆ ಪಕ್ಷಿಗಳು ಕಾಣಲು ಎಲ್ಲಿ ಸಾಧ್ಯ ಎನ್ನುತ್ತಾರೆ ವನ್ಯಜೀವಿ ಪ್ರಿಯ ಗೋಪ ಕುಮಾರ್.
ರಾಸಾಯನಿಕದಿಂದಲೂ ನಾಶ : ಆಧುನಿಕತೆಯಿಂದಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಕೊಯ್ಲೆ ಮೀನು ಸೇರಿದಂತೆ ಏಡಿ ಸೇರಿ ಹಲವು ಜಲಚರ ಜೀವಿಗಳು ಸಾವನಪ್ಪುತ್ತಿದೆ. ಆದ್ದರಿಂದ ಸಾವಯವ ಕೃಷಿ ಮಾಡಬೇಕು. ಇದರಿಂದ ಕೊಯ್ಲೆ ಮೀನು ಸಂತಾನೋತ್ಪತ್ತಿ ಮಾಡುತ್ತದೆ. ಇದರಿಂದ ಜೀವ ವೈವಿಧ್ಯ ಉಳಿಯಲು ಸಾಧ್ಯ.
ಕೊಯ್ಲೆ ಮೀನು ಉಳಿವಿಗೆ ಜಾಗೃತಿ ಕಾರ್ಯಕ್ರಮ
ಕೊಯ್ಲೆ ಮೀನು ಸಂತತಿ ಮರೆಯಾದರೆ ಭವಿಷ್ಯದಲ್ಲಿ ವಿವಿಧ ಪಕ್ಷಿಗಳು ಕೂಡ ಇಲ್ಲದಂತಾಗುತ್ತಿದೆ. ಅಲ್ಲದೆ ರುಚಿಕರ ಖಾದ್ಯವೂ ಸಿಗುವುದಿಲ್ಲ. ಆದ್ದರಿಂದ ಕೊಯ್ಲೆ ಮೀನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೊಯ್ಲೆ ಮೀನನ್ನು ಉಳಿಸಲು ಯೋಜನೆ ರೂಪಿಸಲಾಗಿದೆ. ಖ್ಯಾತ ವನ್ಯಜೀವಿ ಛಾಯಾಗ್ರಾಹಕ ದಿಲನ್ ಮಂದಣ್ಣ ಹಾಗೂ ವನ್ಯಜೀವಿ ಪ್ರಿಯ ಗೋಪಕುಮಾರ್ ಅವರು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಭತ್ತದ ಗದ್ದೆಗಳನ್ನು ಪಾಳುಬಿಡಬೇಡಿ, ಬತ್ತದ ಗದ್ದೆಗಳಲ್ಲಿ ಸಾವಯವ ಗೊಬ್ಬರ ಬಳಸಿ ಎಂಬ ಸಂದೇಶದೊಂದಿದೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಅಲ್ಲದೆ ಶಾಲಾ ಮಕ್ಕಳಿಗೂ ಕೂಡ ಇದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಮೀನು ಸಾಕಾಣಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳಿ
ಆಹಾರ ಪದ್ಧತಿಯಲ್ಲಿ ಕೊಯ್ಲೆ ಮೀನು!
ಕೊಡವರ ಆಹಾರ ಪದ್ಧತಿ ವಿಷಯಕ್ಕೆ ಬಂದರೆ ಬಹುತೇಕ ಎಲ್ಲರೂ ಕಡುಂಬಿಟ್ಟು-ಪಂದಿಕರಿ, ನೂಪುಟ್-ಕೋಳಿ ಕರಿ, ರೊಟ್ಟಿ-ಕಣಿಲೆæ ಕರಿ ಎಂಬುದು ಪ್ರಮುಖ. ಆದರೆ ಅವರಲ್ಲಿ ಬೆರಳೆಣಿಕೆಯಷ್ಟುಮಂದಿ ಮಾತ್ರ ಸಹಜವಾಗಿ ರೊಟ್ಟಿಮತ್ತು ಕೊಯ್ಲೆ ಮೀನು ಕರಿಯನ್ನು ಸೇವಿಸಿದ್ದಾರೆ. ಆದರೆ ಕೊಯ್ಲೆ ಮೀನು ಈಗ ಎಲ್ಲಿದೆ ಎಂಬುದು ಪ್ರಶ್ನೆ. ನಮಗೆ ಅಲ್ಲೊಂದು ಇಲ್ಲೊಂದು ಕಣಿಲೆ, ಅಣಬೆ ಕಾಣಸಿಗುತ್ತಿದೆ ಆದರೆ ನಮ್ಮಲ್ಲಿ ಕೆಲವೇ ಕೆಲವು ಜನರು ಮಾನ್ಸೂನ್ ಸಮಯದಲ್ಲಿ ಹೆಚ್ಚು ಬೇಡಿಕೆಯಿರುವ ಕೊಯ್ಲೆ ಮೀನನ್ನು ರುಚಿ ನೋಡಿದ್ದೇವೆ ಎನ್ನುತ್ತಾರೆ ಹಿರಿಯರು.
ಜೀವ ವೈವಿಧ್ಯತೆಯಲ್ಲಿ ಕೊಯ್ಲೆ ಮೀನು ಪ್ರಮುಖವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಕೊಯ್ಲೆ ಮೀನು ವಲಸೆ ಪಕ್ಷಿಗಳಿಗೆ ಪ್ರಮುಖ ಆಹಾರ. ಆದರೆ ಬತ್ತದ ಗದ್ದೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಈ ಅಪರೂಪದ ಮೀನು ಮರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಜಾಗೃತರಾಗುವುದು ಒಳಿತು.
-ದಿಲನ್ ಮಂದಣ್ಣ, ಖ್ಯಾತ ವನ್ಯಜೀವಿ ಛಾಯಾಗ್ರಾಹಕ
ಕೊಯ್ಲೆ ಮೀನು ಸಂತಾನೋತ್ಪತ್ತಿಯಾಗುವುದು ಬತ್ತದ ಗದ್ದೆಗಳಲ್ಲಿ. ಆದರೆ ಇತ್ತೀಚಿನ ದಿನಗಳಲ್ಲಿ ಬತ್ತದ ಗದ್ದೆಗಳು ಮಾಯವಾಗುತ್ತಿದೆ. ಆದ್ದರಿಂದ ಕೊಯ್ಲೆ ಮೀನು ರಕ್ಷಣೆ ಮಾಡಬೇಕು. ಕಲುಷಿತ ನೀರು ತೋಡುಗಳಿಗೆ ಬಿಡುವುದು ನಿಷೇಧ ಮಾಡಬೇಕು.
-ಬೋಸ್ ಮಾದಪ್ಪ, ವನ್ಯಜೀವಿ ಪ್ರೇಮಿ
20 ವರ್ಷಗಳ ಹಿಂದ ನಾವು ದಿನಕ್ಕೆ 40 ಕೆ.ಜಿ. ಕೊಯ್ಲೆಮೀನು ಮಾರಾಟ ಮಾಡುತ್ತಿದ್ದೆವು. ಆದರೆ ಈಗ ಸಿಗುತ್ತಿಲ್ಲ. ಹಲವು ಮಹಿಳೆಯರು ಗದ್ದೆಗಳಲ್ಲಿ ಕೊಯ್ಲೆ ಮೀನು ಹಿಡಿದು ತರುತ್ತಿದ್ದರು. ಈಗ ಬತ್ತದ ಗದ್ದೆ ಹಾಗೂ ತೋಡು ಕಡಿಮೆಯಾಗುತ್ತಿದೆ. ಮೀನು ಹಿಡಿಯುವವರು ಕೂಡ ಮರೆಯಾಗಿದ್ದಾರೆ. ಈಗ ಕೊಯ್ಲೆ ಮೀನು ಕಾಣುವುದೇ ಕಷ್ಟ.
-ಬೊಟ್ಟೋಳಂಡ ಉತ್ತಪ್ಪ, ಸ್ಮಿತಾ ಕೋಲ್ಡ್ ಸ್ಟೋರೆಜ್ ವಿರಾಜಪೇಟೆ