ಸುಪಾ ಮುಳುಗಡೆಯಾದ ಗ್ರಾಮಗಳ ಅವಶೇಷ ಗೋಚರ..!

By Kannadaprabha News  |  First Published Jun 11, 2022, 7:30 AM IST

*  ಜಲಾಶಯ ಬರಿದಾದಂತೆ ಉದ್ಭವಿಸಿದ ದೇವಸ್ಥಾನ, ಬಾವಿಗಳು
*  ಪ್ರವಾಸಿ ತಾಣವಾದ ಹಿನ್ನೀರ ಪ್ರದೇಶ
*  ಗತವೈಭವ ದರ್ಶನಕ್ಕೆ ನಿರಾಶ್ರಿತರ ಆಗಮನ 


ಅನಂತ ದೇಸಾಯಿ

ಜೋಯಿಡಾ(ಜೂ.11): ಕಾಳಿ ನದಿಯ ಜಲಾಶಯಗಳಿಗೆ ನೀರಿನ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ಸುಪಾ ಜಲಾಶಯದ ಹಿನ್ನೀರು ಪ್ರದೇಶ ಬರಿದಾಗಿದ್ದು, ಮುಳುಗಡೆಯಾಗಿದ್ದ ಗ್ರಾಮಗಳ ಒಂದೊಂದೇ ಅವಶೇಷಗಳು ಗೋಚರಿಸುತ್ತಿವೆ.

Tap to resize

Latest Videos

ವಿದ್ಯುತ್‌ ಉತ್ಪಾದನೆಗಾಗಿ ಸುಪಾ ಜಲಾಶಯದಿಂದ ಅಧಿಕ ಪ್ರಮಾಣದ ನೀರನ್ನು ಹರಿಸಲಾಗುತ್ತದೆ. ಇದರಿಂದ ಹಿನ್ನೀರ ಪ್ರದೇಶ ಬರಿದಾಗುತ್ತಿದೆ. ನಾಲ್ಕು ದಶಕಗಳ ಹಿಂದೆ ನಿರಾಶ್ರಿತರು ಕಳೆದುಕೊಂಡಿದ್ದ ಕೆಲವು ಗ್ರಾಮಗಳು ಮತ್ತೆ ನೋಡುವ ಅವಕಾಶ ಸಿಗುತ್ತಿವೆ. ಇದಕ್ಕೆ ಸುಪಾ ಮತ್ತು ಪಾಟೆ ಗ್ರಾಮಗಳಲ್ಲಿ ನೋಡಲು ಸಿಗುತ್ತಿರುವ ಹಳೆಯ ತೆರೆದ ಬಾವಿ ಮತ್ತು ಶಿಥಿಲಾವಸ್ಥೆಯ ದೇವಾಲಯಗಳೇ ಸಾಕ್ಷಿಯಾಗಿದೆ.

ಮುಂಗಾರು ಮಳೆ ಪ್ರಾರಂಭವಾಗಲು ತಡವಾಗಿದೆ. ಕಾಳಿ ನದಿಯ ಜಲಾಶಯಗಳಿಗೆ ನೀರಿನ ಕೊರತೆಯಾಗಿದೆ. ಸುಪಾ ಜಲಾಶಯ 145 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. ಸುಪಾ ಜಲಾಶಯವು ಕಾಳಿ ನದಿಯ ಇತರ ಎಲ್ಲ ಜಲಾಶಯಗಳಿಗೆ ನೀರು ಪೂರೈಸುತ್ತದೆ. ಈಗ ನಾಗಝರಿ, ಕೊಡಸಳ್ಳಿ, ಕದ್ರಾ ಜಲಾಶಯಗಳಲ್ಲಿ ವಿದ್ಯುತ್‌ ಉತ್ಪಾದನೆಗಾಗಿ ಸುಪಾ ಜಲಾಶಯದ ನೀರು ಬಳಕೆಯಾಗುತ್ತಿದೆ. ಹೀಗಾಗಿ ಸೂಪಾ ಬರಿದಾಗುತ್ತಿದೆ. ಇದರಿಂದ ಜನತೆ ದಿಗ್ಭ್ರಮೆಗೆ ಒಳಗಾಗಿದ್ದಾರೆ.

ಉತ್ತರ ಕನ್ನಡ: ಮುರ್ಡೇಶ್ವರಕ್ಕೆ ಬಂದಿದ್ದ ಇಬ್ಬರು ಸಮುದ್ರಪಾಲು

ಸುಪಾ ಜಲಾಶಯ 564 ಮೀಟರ್‌ ಎತ್ತರ ಇದೆ. ಈಗ 519 ಮೀ. ನೀರು ಸಂಗ್ರಹ ಇದೆ. ಸುಪಾ ಜಲಾಶಯದಿಂದ ಕನಿಷ್ಠ 480 ಮೀ. ವರೆಗೆ ನೀರು ಬಿಡಬಹುದಾಗಿದೆ. ಈಗ ನೀರು ತುಂಬಿದ ಹಿನ್ನೀರ ಪ್ರದೇಶ ಖಾಲಿ ಆಗುತ್ತಿದೆ. ಬರಗಾಲದಂತೆ ಭಾಸವಾಗುತ್ತಿದೆ. ಮುಳುಗಡೆಯಾಗಿದ್ದ ಗ್ರಾಮಗಳ ಗತವೈಭವ 40 ವರ್ಷಗಳ ಆನಂತರ ಮುನ್ನೆಲೆಗೆ ಬರುತ್ತಿದೆ.

ಸುಪಾ ಜಲಾಶಯದ ಹಿನ್ನೀರ ಪ್ರದೇಶ 1982ರಿಂದ ಸಂಪೂರ್ಣವಾಗಿ ಮುಳುಗಿತ್ತು. ಇಂದಿಗೂ ಈ ಸುಪಾ ಅಂದಿನ ತಾಲೂಕು ಕೇಂದ್ರ ಮತ್ತು ಪಾಟೆ ಗ್ರಾಮ ನೋಡುವ ಭಾಗ್ಯ ಈ ಗ್ರಾಮಸ್ಥರಿಗೆ ಸಿಕ್ಕಿರಲಿಲ್ಲ. ಈಗ ಸುಪಾ ಬರಿದಾಗುತ್ತಿದ್ದಂತೆ ಆ ಅವಕಾಶ ಸಿಗುತ್ತಿದೆ! ಅಂದಿನ ಕಾಲದ ಬಾವಿ, ದೇವಸ್ಥಾನ ತಲೆ ಎತ್ತಿದೆ. ಇವು ಮೊದಲಿನ ಸುಪಾ ಎತ್ತರದ ಪ್ರದೇಶದಲ್ಲಿರುವ ಆಸ್ಪತ್ರೆ ಮತ್ತು ಸರ್ಕಾರಿ ಪ್ರೌಢಶಾಲೆಯ ಹತ್ತಿರದ ಅವಶೇಷಗಳಾಗಿವೆ ಎನ್ನುತ್ತಾರೆ ಸ್ಥಳೀಯರಾದ ಸುಭಾಷ ವೆಳಿಪ.

ಗತವೈಭವ ದರ್ಶನಕ್ಕೆ ನಿರಾಶ್ರಿತರ ಆಗಮನ:

ಸುಪಾ ಜಲಾಶಯದ ಹಿನ್ನೀರಲ್ಲಿ ಮುಳುಗಿದ ಪೆರ್ಲೆ, ಆಂಬೇಲಿ, ಮುಳಾವಲಿ, ಬಾಪೇಲಿ, ಕುಕರ್ಡೆ, ಕುರವಡೆ, ಪೈಸೋಡೆ, ಪಾಟೆ, ಕೇವಲೆರ ಗ್ರಾಮಗಳು ಸುಪಾ ತಾಲೂಕು ಕೇಂದ್ರದ ಹತ್ತಿರದ ಗ್ರಾಮಗಳಾಗಿದ್ದವು. ಸುಪಾ ಜಲಾಶಯದ ಹಿನ್ನೀರಲ್ಲಿ ಮುಳುಗಿದ 47 ಗ್ರಾಮಗಳಲ್ಲಿ ಇವು ಕೂಡ ಸೇರುತ್ತವೆ. ನೀರು ಖಾಲಿಯಾಗುತ್ತಿದ್ದಂತೆ ಹಳೆಯ ಗ್ರಾಮಗಳು ಪತ್ತೆಯಾಗುತ್ತಿವೆ. ಇವುಗಳನ್ನು ನೋಡಲು ಜನ ಸಾಗರವೇ ಹರಿದುಬರುತ್ತಿದೆ. ಇಲ್ಲಿಗೆ ಬರುವ ನಿರಾಶ್ರಿತರು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.

ಸುಪಾ ಹಿನ್ನೀರು ಬರಿದಾಗಿದ್ದರೂ ಇನ್ನೂ ಅನೇಕ ಗ್ರಾಮಗಳು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಗ್ರಾಮದ ಹಿರಿಯರು ಕೆಲವು ಕುರುಹುಗಳನ್ನು ನೋಡಿ ಇದೇ ನಮ್ಮ ಗ್ರಾಮವೆಂದು ಹೇಳಿಕೊಳ್ಳುತ್ತಿದ್ದಾರೆ. ಈ ಮಟ್ಟಕ್ಕೆ ನೀರು ಸೂಪಾ ಜಲಾಶಯದಲ್ಲಿ ಕಡಿಮೆಯಾಗಿದ್ದು ಈಗ ಇತಿಹಾಸ. ಪ್ರಸಕ್ತ ಸಾಲಿನಲ್ಲಿ ಮಳೆ ಸಮರ್ಪಕವಾಗಿ ಬೀಳದಿದ್ದರೆ ಜಲಾಶಯ ತುಂಬುವುದು ಕಷ್ಟಸಾಧ್ಯ.

ಕರಾವಳಿಯಲ್ಲಿ ಮಳೆ ಚುರುಕು: ಕೃಷಿ ಕಾರ್ಯ ಚುರುಕು

ಪ್ರವಾಸಿ ತಾಣವಾದ ಹಿನ್ನೀರ ಪ್ರದೇಶ:

ಸುಪಾ ಜಲಾಶಯದಲ್ಲಿ ನೀರು ಕ್ಷೀಣಿಸುತ್ತಿದೆ. ಅಲ್ಲಲ್ಲಿ ನಿರ್ಮಾಣವಾದ ಜಲಾಶಯದ ನಡುಗಡ್ಡೆಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ನೂರಾರು ಸಂಖ್ಯೆಯಲ್ಲಿ ಪ್ರತಿದಿನ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತಿದ್ದಾರೆ.

ಹಿಂದೆ ನಾನು ನೋಡಿದ ಸುಪಾ ಪ್ರದೇಶವು ನೀರಿನಿಂದ ತುಂಬಿರುವ ಕಾರಣ ನೋಡಲಾಗಿರಲಿಲ್ಲ. ಈಗ ನೀರು ಕಡಿಮೆ ಆದ ಕಾರಣ ಅವಶೇಶಗಳು ಪತ್ತೆಯಾಗುತ್ತಿವೆ. ಇದರಿಂದ ಹಿಂದಿನ ಸುಪಾ ತಾಲೂಕಿನ ಕಲ್ಪನೆ ಮೂಡುತ್ತಿದೆ ಅಂತ ನಿವೃತ್ತ ಶಿಕ್ಷಕ ಪದ್ಮನಾಭ ಗಾಂವ್ಕರ ತಿಳಿಸಿದ್ದಾರೆ. 

click me!