* ಕೊರೋನಾ ಸಂಕಷ್ಟದಲ್ಲೂ ಜಿಲ್ಲೆಯ ಹಾಲು ಉತ್ಪಾದಕರ ಬೇಡಿಕೆ ಸರ್ಕಾರದಿಂದ ಈಡೇರಿಕೆ
* ಹಾವೇರಿ ಜಿಲ್ಲೆಯ ಹೈನುಗಾರಿಕೆ ಅಭಿವೃದ್ಧಿಗೆ ಸಿಕ್ಕ ಪ್ರೋತ್ಸಾಹ
* ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಉತ್ತೇಜನ
ನಾರಾಯಣ ಹೆಗಡೆ
ಹಾವೇರಿ(ಮೇ.28): ಜಿಲ್ಲೆಯ ಹಾಲು ಉತ್ಪಾದಕರ ಬಹುದಿನಗಳ ಬೇಡಿಕೆಯಾದ ಹಾಲು ಸಂಸ್ಕರಣಾ ಘಟಕ (ಮೆಗಾ ಡೇರಿ)ಗೆ ಗುರುವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿರುವುದು ಜಿಲ್ಲೆಯ ಸಾವಿರಾರು ಹೈನುಗಾರರ ಸಂತಸಕ್ಕೆ ಕಾರಣವಾಗಿದೆ.
ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕವನ್ನು 90 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಸಚಿವ ಸಂಪುಟ ಅಸ್ತು ಎಂದಿದೆ. ಪ್ರತ್ಯೇಕ ಹಾಲು ಘಟಕದ ಆರಂಭದ ಬೇಡಿಕೆಗೆ ಇದು ಆರಂಭಿಕ ಯಶಸ್ಸು ಎಂದೇ ಹೇಳಲಾಗುತ್ತಿದೆ.
ಧಾರವಾಡ ಹಾಲು ಒಕ್ಕೂಟ ಮಹಾಮಂಡಳಿ ವ್ಯಾಪ್ತಿಯ ಉತ್ತರ ಕನ್ನಡ, ಹಾವೇರಿ, ಗದಗ ಮತ್ತು ಧಾರವಾಡ ಈ ಜಿಲ್ಲೆಗಳಲ್ಲಿ ಒಟ್ಟು 45000 ಹಾಲು ಉತ್ಪಾದಕ ಸದಸ್ಯರಿದ್ದು, ಜಿಲ್ಲೆಯಲ್ಲೇ 22 ಸಾವಿರ ಹಾಲು ಉತ್ಪಾದಕರಿದ್ದಾರೆ. ಜಿಲ್ಲೆಯಲ್ಲಿ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಶೇ. 20ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ. ಆದ್ದರಿಂದ ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕದ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ಯೋಜನೆಗೆ ಸಚಿವ ಸಂಪುಟದಿಂದ ಅನುಮತಿ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
2ನೇ ಅಲೆಯಲ್ಲಿಯೇ ಮಕ್ಕಳು, ಯುವಕರಿಗೆ ಹೆಚ್ಚು ಸೋಂಕು..!
ಕ್ಷೀರ ಕ್ರಾಂತಿಗೆ ನಾಂದಿ:
ಹಾಲು ಸಂಸ್ಕರಣೆ ಹಾಗೂ ಪ್ಯಾಕಿಂಗ್ ಘಟಕ ಸ್ಥಾಪನೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಆಗಿತ್ತು. ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಪಿಪಿಪಿ ಮಾದರಿಯ ಈ ಯೋಜನೆಗೆ ಸರ್ಕಾರದ ವತಿಯಿಂದ 15 ಕೋಟಿ ಅನುದಾನ ನೀಡಲಾಗಿದೆ.
ಕಳೆದ ವರ್ಷ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದ ವೇಳೆ ಸಂಸ್ಕರಣಾ ಘಟಕ ಸ್ಥಾಪಿಸುವ ಭರವಸೆ ನೀಡಿದ್ದರು. ಆಗ ಅವರು ನೀಡಿದ್ದ ಭರವಸೆ ಈಡೇರಿದಂತಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಾವಿರಾರು ಜನ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಉತ್ತೇಜನ ಸಿಗಲಿದೆ ಎಂಬ ಭರವಸೆ ಮೂಡಿದೆ.
ಹೆಚ್ಚಿನ ಹಾಲು ಉತ್ಪಾದನೆ:
ಧಾರವಾಡ ಒಕ್ಕೂಟದ ವ್ಯಾಪ್ತಿಯಲ್ಲಿರುವ ನಾಲ್ಕು ಜಿಲ್ಲೆಗಳಿಂದ ಪ್ರತಿ ನಿತ್ಯ 2.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಆ ಪೈಕಿ ಹಾವೇರಿ ಜಿಲ್ಲೆಯಲ್ಲೇ 1.20 ಲಕ್ಷ ಲೀಟರ್ ಬರುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದ್ದರೂ ಇಲ್ಲಿ ಮೂಲ ಸೌಕರ್ಯ ಕೊರತೆಯಿಂದ ಧಾರವಾಡಕ್ಕೆ ಸಾಗಿಸಿ ಅಲ್ಲಿ ಸಂಸ್ಕರಣೆ ಮಾಡಬೇಕಿತ್ತು. ಈಗ ಇಲ್ಲಿಯೇ ಸಂಸ್ಕರಣಾ ಡೇರಿ ಸ್ಥಾಪನೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಾಲನ್ನು ಸ್ಥಳೀಯವಾಗಿಯೇ ಸಂಸ್ಕರಿಸಿ, ಮಾರುಕಟ್ಟೆಗೆ ಬಿಡಬಹುದಾಗಿದೆ.
ಇದರಿಂದ ಸಾರಿಗೆ ವೆಚ್ಚ ಕಡಿಮೆಯಾಗಲಿದ್ದು, ಮಾರುಕಟ್ಟೆ ವಿಸ್ತರಣೆ ಮಾಡಿಕೊಂಡು ಲಾಭ ಗಳಿಸಲು ಸಾಧ್ಯವಿದೆ. ಅಲ್ಲದೇ ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ನೀಡಲು ಸಾಧ್ಯವಿದ್ದು, ಹಾಲಿನ ಜೀವಿತಾವಧಿ ಸಮಯವೂ ಹೆಚ್ಚು ಸಿಗಲಿದೆ. ಇದರಿಂದ ಸ್ಥಳೀಯವಾಗಿ ಉತ್ಪಾದನೆಯಾಗುವ ಹಾಲಿಗೆ ಹೆಚ್ಚಿನ ಬೆಲೆ ನೀಡಬಹುದಾಗಿದ್ದು, ಸರ್ಕಾರದ ಪ್ರೋತ್ಸಾಹ ಧನವೂ ಜಿಲ್ಲೆಯ ರೈತರಿಗೆ ಹೆಚ್ಚು ಸಿಗುತ್ತದೆ. ಮೂಲ ಸೌಕರ್ಯ ಇದ್ದರೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಯಾವಾಗ ಬೇಕಾದರೂ ಮಾಡಲು ಸಾಧ್ಯವಿದೆ.
ಈ ಯೋಜನೆಯಿಂದ ಹಾವೇರಿ ಜಿಲ್ಲೆಯ ಸಹಸ್ರಾರು ಹೈನು ಕೃಷಿಕರಿಗೆ ಅನುಕೂಲವಾಗಲಿದೆ. ಇಂಥ ಮಹತ್ವಾಕಾಂಕ್ಷಿ ಯೋಜನೆಯನ್ನು ಆರ್ಥಿಕ ನೆರವು ನೀಡಿ ಜಾರಿಗೊಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.