ಮಕ್ಕಳಿಗೆ ಪುಸ್ತಕ, ಸಾಹಿತ್ಯದ ಗೀಳು ಹಚ್ಚದಿದ್ದರೆ, ಮೊಬೈಲ್ ಮೊದಲ ಪಾಠ ಶಾಲೆ, ಗೂಗಲ್ ಮೊದಲ ಗುರು ಆಗಲಿದೆ ಎಂದು ಹಿರಿಯ ಸಾಹಿತಿ ಡುಂಡಿರಾಜ್ ಆತಂಕ ವ್ಯಕ್ತಪಡಿಸಿದರು. 86ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ನಡೆದ ಮಕ್ಕಳ ಸಾಹಿತ್ಯ-ಮನೋವಿಕಾಸ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಕೃಷ್ಣ ಎನ್. ಲಮಾಣಿ
ಪಾಪು-ಚಂಪಾ ವೇದಿಕೆ
undefined
ಹಾವೇರಿ (ಜ.8) :ಮಕ್ಕಳಿಗೆ ಪುಸ್ತಕ, ಸಾಹಿತ್ಯದ ಗೀಳು ಹಚ್ಚದಿದ್ದರೆ, ಮೊಬೈಲ್ ಮೊದಲ ಪಾಠ ಶಾಲೆ, ಗೂಗಲ್ ಮೊದಲ ಗುರು ಆಗಲಿದೆ ಎಂದು ಹಿರಿಯ ಸಾಹಿತಿ ಡುಂಡಿರಾಜ್ ಆತಂಕ ವ್ಯಕ್ತಪಡಿಸಿದರು.
86ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನ(Kannada sahitya sammelana)ದ ಪಾಪು-ಚಂಪಾ ವೇದಿಕೆಯಲ್ಲಿ ನಡೆದ ಮಕ್ಕಳ ಸಾಹಿತ್ಯ-ಮನೋವಿಕಾಸ(Childrens literature) ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಆಸಕ್ತಿ, ಸಂತೋಷ, ಉಲ್ಲಾಸ ಆಧರಿಸಿ ನಾವು ಸಾಹಿತ್ಯ ರಚನೆ ಮಾಡಬೇಕಿದೆ. ಮಕ್ಕಳಿಗೆ ದುಬಾರಿ ಮೊಬೈಲ್(mobile), ಟ್ಯಾಬ್(Tabs)ಗಳನ್ನು ಕೊಡಿಸುವ ನಾವು, ಅವರಿಗೆ ಆಸಕ್ತಿಕರ ಪುಸ್ತಕ, ಪತ್ರಿಕೆಗಳನ್ನು ಕೊಡಿಸುತ್ತಿಲ್ಲ. ಹಾಗಾಗಿ ಮುಂದೆ ಮಕ್ಕಳು, ಮೊಬೈಲ್ ಮೊದಲ ಪಾಠ ಶಾಲೆ, ಗೂಗಲ್(Google) ಮೊದಲ ಗುರು ಎಂದು ಭಾವಿಸಲಿದ್ದಾರೆ. ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಿಂದ ಮಕ್ಕಳು ಕೇಡುವುದಕ್ಕಿಂತ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ದೊಡ್ಡವರಲ್ಲೂ ಮಗುವಿನ ಮನಸ್ಸು
ಮಕ್ಕಳಲ್ಲೂ ದೊಡ್ಡವರ ಮನಸ್ಸು ಇರುತ್ತದೆ. ಇದನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಸಾಹಿತಿಗಳು ಪುಸ್ತಕ ಬರೆಯಬೇಕು. ಮಕ್ಕಳ ಸಾಹಿತ್ಯವನ್ನು ಬರೀ ಮಕ್ಕಳು ಮಾತ್ರ ಓದುವುದಿಲ್ಲ. ದೊಡ್ಡವರು ಕೂಡ ಓದುತ್ತಾರೆ. ದೊಡ್ಡವರಲ್ಲೂ ಮಕ್ಕಳ ಮನಸ್ಸಿರುತ್ತದೆ. ಆ ಮನಸ್ಸನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾವು ಸಾಹಿತ್ಯ ರಚನೆ ಮಾಡಬೇಕು. ಜತೆಗೆ ಮಕ್ಕಳ ಸಾಹಿತಿಗಳು ಸೃಜನಶೀಲತೆಯೊಂದಿಗೆ ಬರೆಯಬೇಕು. ಮಕ್ಕಳನ್ನು ಆಕರ್ಷಿಸುವ, ಉಲ್ಲಸಿತಗೊಳಿಸುವ ನಿಟ್ಟಿನಲ್ಲಿ ಬರವಣಿಗೆ ಬರೆಯಬೇಕು ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನ ಸಾರಥಿ ಡಾ.ದೊಡ್ಡರಂಗೇಗೌಡ ವಿಶೇಷ ಸಂದರ್ಶನ
ಬರೀ ಅಂಕಕ್ಕೆ ಮಹತ್ವ
ಪಾಲಕರಲ್ಲೀಗ ಬರೀ ಅಂಕ (ಮಾರ್ಕ್ಸ್)ಗಳಿಗೆ ಮನ್ನಣೆ ನೀಡುವ ಪರಿಪಾಠ ಬೆಳೆದಿದೆ. ನಮ್ಮ ಸುತ್ತಲಿನ ವಾತಾವರಣ, ವಾಣಿಜ್ಯೀಕರಣಗೊಂಡಿರುವುದರಿಂದ ಈ ಸ್ಥಿತಿ ತಲೆದೋರಿದೆ. ಕಲೆ, ಸಾಹಿತ್ಯ, ಚಿತ್ರಕಲೆ, ನಾಟಕದ ಗೀಳನ್ನು ಮಕ್ಕಳಿಗೆ ಹಚ್ಚುವ ಪರಿಪಾಠ ನಮ್ಮಿಂದ ಮಾಯವಾಗುತ್ತಿದೆ. ಇದಕ್ಕೆ ಕಾರಣ, ವಿದೇಶಕ್ಕೆ ನಮ್ಮ ಮಕ್ಕಳನ್ನು ಕಳುಹಿಸಬೇಕೆಂಬ ವ್ಯಾಮೋಹ. ಹಾಗಾಗಿ ನಾವು ಈಗ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದರತ್ತ ಚಿತ್ತ ಹರಿಸುತ್ತಿಲ್ಲ. ನಾನು ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತಿ ಹೊಂದಿರುವೆ. ಆದರೆ, ನನಗೆ ಈ ವೇದಿಕೆ ಸಿಕ್ಕಿರುವುದು, ಬ್ಯಾಂಕ್ ಅಧಿಕಾರಿ ಎಂದಲ್ಲ. ನಾನೊಬ್ಬ ಕವಿ, ಸಾಹಿತಿ ಎಂಬುದನ್ನು ಮರೆಯಬಾರದು. ನನ್ನ ಬಾಲ್ಯದಲ್ಲಿ ಸಾಹಿತ್ಯದ ಕಡೆಗೆ ಬೆಳೆಸಿಕೊಂಡ ಆಸಕ್ತಿಯೇ ಇಂದು ನಾನು ಇಲ್ಲಿ ನಿಲ್ಲಲು ಕಾರಣ ಎಂದರು.
ಒಮ್ಮೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಸಿನಿಮಾ ಸಂವಾದ ನಡೆಯುತ್ತಿತ್ತು. ಆಗ ಮಕ್ಕಳೇ ಇಲ್ಲವಲ್ಲಾ ಎಂದು ಚರ್ಚೆ ನಡೆಯುತ್ತಿತ್ತು. ಆಗ ವೈಎನ್‌ಕೆಯವರು ಬಂದಿದ್ದಾರಲ್ಲ. ಕಳ್ಳ ನನ್ಮಕ್ಕಳು’ ಎಂದು ಹೇಳಿದ್ದರಂತೆ. ಅಂದರೆ, ಮಕ್ಕಳ ಹೆಸರಿನಲ್ಲಿ ಹಣ ಮಾಡುವ ನಿರ್ಮಾಪಕರು, ನಿರ್ದೇಶಕರು ಬಂದಿದ್ದಾರಲ್ಲ ಎಂಬ ಅರ್ಥದಲ್ಲಿ ಅವರು ಹಾಸ್ಯ ಚಟಾಕಿ ಹಾರಿಸಿದ್ದರು. ಹಾಗೇ ಈಗ ಈ ಗೋಷ್ಠಿಯಲ್ಲಿ ಮಕ್ಕಳಿಲ್ಲ. ಆದರೆ, ಮಕ್ಕಳಿಗೆ ಬೋಧಿಸುವ ಶಿಕ್ಷಕರು, ಉಪನ್ಯಾಸಕರು ಹೆಚ್ಚಿದ್ದಾರೆ. ಜತೆಗೆ ಪಾಲಕರು ಇದ್ದಾರೆ. ಹಾಗಾಗಿ ಮಕ್ಕಳಲ್ಲಿ ಆಸಕ್ತಿದಾಯಕ ವಿಷಯಗಳನ್ನು ಗುರುತಿಸಿ ಅವರಿಗೆ ಪೋ›ತ್ಸಾಹಿಸುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು ಎಂದರು.
ಮಕ್ಕಳಿಗಾಗಿ ಚುಟುಕು, ಹನಿಗವನವನ್ನೂ ನಾನು ರಚಿಸಿರುವೆ. ನಮ್ಮಲ್ಲಿ ಮಕ್ಕಳ ಮನಸ್ಸನ್ನು ಒಳಹೊಕ್ಕಿ ನೋಡುವ ಸಾಹಿತ್ಯ ರಚನೆ ಆಗಬೇಕಿದೆ. ಇದಕ್ಕಾಗಿ ಮಕ್ಕಳ ಸಾಹಿತಿಗಳು ಉತ್ತಮ ಬರವಣಿಗೆ ಬರೆಯಬೇಕು. ಮಕ್ಕಳ ಮನೋಲೋಕವೇ ಬೇರೆ. ಆ ಲೋಕವನ್ನು ಅರಿತುಕೊಂಡು ಸಾಹಿತ್ಯ ರಚನೆ ಆಗಬೇಕಿದೆ. ಅವರಂತಹ ಸಹೃದಯಿಗಳೂ ಹಾಗೂ ನೈಜ ಫೀಡ್ ಬ್ಯಾಕ್ ನೀಡುವವರು ಬೇರೆ ಯಾರೂ ಇಲ್ಲ. ಮುಗ್ಧ ಮನಸ್ಸಿನಿಂದ ಕೂಡಲೇ ಫೀಡ್‌ಬ್ಯಾಕ್ ನೀಡುತ್ತಾರೆ ಎಂದರು.
ಗಂಭೀರತೆ ದೊರೆಯಲಿ
ಮಕ್ಕಳ ಸಾಹಿತಿ ಆನಂದ ಪಾಟೀಲ್ ಆಶಯ ನುಡಿಯಲ್ಲಿ, ಮಕ್ಕಳ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಪ್ರಧಾನ ಸಾಹಿತ್ಯ ವಲಯದಲ್ಲಿದ್ದವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಉಳಿದ ವಿಶ್ವವಿದ್ಯಾಲಯಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ಆದ್ಯತೆ ದೊರೆಯುತ್ತಿಲ್ಲ. ಹಿಂದಿಯಲ್ಲಿ ಮಾತ್ರ ಎರಡ್ಮೂರು ವಿವಿಗಳಲ್ಲಿ ಮಾತ್ರ ಆದ್ಯತೆ ದೊರೆತಿದೆ. ಉಳಿದಂತೆ ಪ್ರಾದೇಶಿಕ ಭಾಷೆಯಲ್ಲೂ ಅಷ್ಟೊಂದು ಪ್ರಾಮುಖ್ಯತೆ ದೊರೆತಿಲ್ಲ. ಆದರೆ, ಅಮೆರಿಕ ಹಾಗೂ ಇಂಗ್ಲೆಂಡ್ ದೇಶಗಳ ವಿವಿಗಳಲ್ಲಿ ಮಕ್ಕಳ ಸಾಹಿತ್ಯದ ಮೇಲೆ ಪ್ರತ್ಯೇಕ ವಿಭಾಗಗಳನ್ನೇ ತೆರೆಯಲಾಗಿದೆ ಎಂದರು.
ಬಂಗಾಳಿ ಸಾಹಿತ್ಯ ಮಾದರಿ ಆಗಲಿ
ಡಾ. ಕೆ.ಎಸ್. ಪವಿತ್ರಾ ಅವರು ಮಕ್ಕಳ ಸಾಹಿತ್ಯದಲ್ಲಿ ಪ್ರಯೋಗಶೀಲತೆ ವಿಷಯದ ಕುರಿತು ವಿಷಯ ಮಂಡಿಸಿ, ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಬಂಗಾಳಿ ಭಾಷೆಯ ಸಾಹಿತ್ಯ ಮಾದರಿ ಆಗಬೇಕು. ಅಲ್ಲಿ ಕತೆ, ನಾಟಕ, ಕಿರು ಕಾದಂಬರಿ, ಕಾಮಿಕ್ಸ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಪುಸ್ತಕಗಳು ಬಂದಿವೆ. ಜತೆಗೆ ವಿಷಯ ತಜ್ಞರು ಇದ್ದಾರೆ. ನಾವು ಕೂಡ ಮಕ್ಕಳ ಸಾಹಿತ್ಯದಲ್ಲಿ ಹಲವು ಪ್ರಯೋಗಗಳನ್ನು ಮಾಡಬೇಕು. ನಾಟ್ಯ ಕ್ಷೇತ್ರ, ನಾಟಕ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಕ್ಕಳಿಗೆ ಆಸಕ್ತಿ ಪೂರಕವಾಗಿ ಕೆಲಸ ಮಾಡಬೇಕು ಎಂದರು.
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮರನ್ನು ಕಡೆಗಣಿಸಿಲ್ಲ: ಮಹೇಶ ಜೋಶಿ
ಉತ್ತರ ಕನ್ನಡದ ತಮಣ್ಣ ಬೀಗಾರ ಮಕ್ಕಳ ಸಾಹಿತ್ಯದ ಬಲವರ್ಧನೆ ಕುರಿತು ವಿಷಯ ಮಂಡಿಸಿದರೆ, ಹಾಲಯ್ಯ ಹಿರೇಮಠ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸದ ಕುರಿತು ವಿಷಯ ಮಂಡಿಸಿದರು. ಶಿವಾನಂದ ತೆಲ್ಲಿಕೇರಿ, ಎಂ. ಪ್ರಕಾಶಮೂರ್ತಿ, ಭಾರತಿ ಮದಬಾವಿ, ಪೂರ್ಣಚಂದ್ರ ತೇಜಸ್ವಿ ಎಚ್.ಆರ್. ನಿರ್ವಹಿಸಿದರು. ಇಡೀ ಸಭಾಂಗಣದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಜನರು ಮಕ್ಕಳ ಸಾಹಿತ್ಯದ ಗೋಷ್ಠಿಯನ್ನು ಆಸಕ್ತಿಯಿಂದ ಆಲಿಸಿದರು.