ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನ, ಜಾತ್ರೆಯಂದು ಚಂದ್ರಗುತ್ತಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ರಾಜ್ಯವಲ್ಲದೆ, ಹೊರ ರಾಜ್ಯಗಳಿಂದಲೂ ಆಗಮಿಸಉತ್ತಾರೆ. ಆದರೆ, ಭಕ್ತರಿಗೆ ವ್ಯವಸ್ಥಿತ ಶೌಚಾಲಯವೇ ಇಲ್ಲವಾಗಿದೆ. ರಥ ಬೀದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೌಚಗೃಹಗಳು ಅವ್ಯವಸ್ಥೆಯಿಂದ ಕೂಡಿವೆ.
ಎಚ್.ಕೆ.ಬಿ. ಸ್ವಾಮಿ
ಸೊರಬ(ಜ.02): ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬೆ ದೇವಸ್ಥಾನಕ್ಕೆ ರಾಜ್ಯಾದ್ಯಂತ ಭಕ್ತರಿದ್ದಾರೆ. ಹೆಚ್ಚು ಆದಾಯವನ್ನು ಹೊಂದಿರುವ ಈ ದೇಗುಲಕ್ಕೆ ಬರುವ ಭಕ್ತರಿಗೆ ಮಾತ್ರ ಸರ್ಕಾರ ಸಮರ್ಪಕ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಅತಿ ಮುಖ್ಯವಾದ ಶೌಚಾಲಯ ವ್ಯವಸ್ಥೆಯೇ ಇಲ್ಲದೇ ಭಕ್ತರು, ಯಾತ್ರಾರ್ಥಿಗಳು ಪ್ರತಿನಿತ್ಯ ಪರಿತಪಿಸುವಂತಾಗಿದೆ.
ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನ, ಜಾತ್ರೆಯಂದು ಚಂದ್ರಗುತ್ತಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ರಾಜ್ಯವಲ್ಲದೆ, ಹೊರ ರಾಜ್ಯಗಳಿಂದಲೂ ಆಗಮಿಸಉತ್ತಾರೆ. ಆದರೆ, ಭಕ್ತರಿಗೆ ವ್ಯವಸ್ಥಿತ ಶೌಚಾಲಯವೇ ಇಲ್ಲವಾಗಿದೆ. ರಥ ಬೀದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೌಚಗೃಹಗಳು ಅವ್ಯವಸ್ಥೆಯಿಂದ ಕೂಡಿವೆ.
ತಾಳಗುಪ್ಪ- ಶಿರಸಿ ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ ಪೂರ್ಣ, ಮಲೆನಾಡು- ಉತ್ತರ ಕರ್ನಾಟಕಕ್ಕೆ ಸಂಪರ್ಕ ಸುಲಲಿತ
ದಿವ್ಯ ನಿರ್ಲಕ್ಷ್ಯ:
ಈ ತಾತ್ಕಾಲಿಕವಾಗಿ ಶೌಚಗೃಹಗಳು ಶಿಥಿಲಗೊಂಡಿವೆ. ತಗಡಿನ ಮೇಲ್ಛಾವಣಿ ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿವೆ. ಬಾಗಿಲುಗಳು ಇಲ್ಲದೇ ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವಾಗಿವೆ. ಶುಚಿತ್ವ ಕಾಣದೇ ದುರ್ನಾತ ಬೀರುವ ಶೌಚಗೃಹಗಳ ಸುಧಾರಣೆಗೆ ಯಾರೂ ಮುಂದಾಗಿಲ್ಲ. ಈ ಕಾರಣದಿಂದ ಭಕ್ತರು ರಥಬೀದಿಯ ಆಜುಬಾಜಿನ ಗಿಡಗಳ ಮರೆಯಲ್ಲಿ, ಗದ್ದೆಗಳಲ್ಲಿ ದೇಹಬಾಧೆ ತೀರಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಚಂದ್ರಗುತ್ತಿ ಗ್ರಾಮದಲ್ಲಿಯೂ ಸ್ವಚ್ಛತೆ ನಿರ್ಲಕ್ಷಿಸಲಾಗಿದೆ. ಸುತ್ತಲ ಪರಿಸರ ದುರ್ನಾತ ಬೀರುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಮುಜರಾಯಿ ಇಲಾಖೆಗೆ ಇಲ್ಲಿಯ ಸಮಸ್ಯೆ ಅರಿವಿದ್ದರೂ ಸೂಕ್ತ ಕ್ರಮ ಜರುಗಿಸುವಲ್ಲಿ, ಜನಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ಸೋತಿವೆ.
ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಸಾಗರ ಉಪವಿಭಾಗಾಧಿಕಾರಿ ಅವರು ಆಡಳಿತಾಧಿಕಾರಿ. ಜಾತ್ರೆ ಹೊರತುಪಡಿಸಿ, ಹುಣ್ಣಿಮೆ ಮತ್ತು ಇತರೆ ವಿಶೇಷ ದಿನಗಳಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಕೋಟ್ಯಂತರ ರು.ಗಳ ಆದಾಯವಿದೆ. ಆದರೆ ಮೂಲ ಸೌಲಭ್ಯಗಳನ್ನು ಕಲ್ಪಸುತ್ತಿಲ್ಲ. ಅಧಿಕಾರಿಗಳು ಕೊನೆಯ ಪಕ್ಷ ಶೌಚಾಲಯ, ಸ್ನಾನಗೃಹ ನಿರ್ಮಾಣಕ್ಕಾದರೂ ಜಾಗ ಗುರುತಿಸಿ, ಕಟ್ಟಡ ನಿರ್ಮಿಸಿ, ನಿರ್ವಹಣೆ ಜವಾಬ್ದಾರಿ ಹೊರಬೇಕಿದೆ ಎನ್ನುವುದು ಗ್ರಾಮಸ್ಥರು, ಭಕ್ತರ ಒತ್ತಾಸೆ.
ಶಿವಮೊಗ್ಗ ಜಿಲ್ಲೆಯ ಮೂರು ಎ ಗ್ರೇಡ್ ದೇವಸ್ಥಾನಗಳಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನವೂ ಒಂದಾಗಿದೆ. ವರ್ಷಕ್ಕೆ ₹3ರಿಂದ ₹4 ಕೋಟಿ ಆದಾಯವಿದೆ. ದೇವಿ ದರ್ಶನಕ್ಕೆಂದು ಬರುವ ಭಕ್ತರು ರಥಬೀದಿಯಲ್ಲಿಯೇ ಉಳಿಯುತ್ತಾರೆ. ಗ್ರಾಮದ ಕಿರು ರಸ್ತೆ, ಕೃಷಿ ಜಮೀನುಗಳಲ್ಲಿ ದೇಹಬಾಧೆ ತೀರಿಸಿಕೊಳ್ಳುತ್ತಾರೆ. ಬಯಲಿನಲ್ಲಿಯೇ ಸ್ನಾನ, ಬಟ್ಟೆ ಬದಲಿಸಲು ಸುತ್ತಲೂ ಸೀರೆ ಕಟ್ಟಿಕೊಳ್ಳದೇ ವಿಧಿಯಿಲ್ಲ. ಈ ಅವ್ಯವಸ್ಥೆ ಹಿಂದಿನ ಬೆತ್ತಲೆ ಸೇವೆಗಿಂತಲೂ ಕಡೆಯಾಗಿದೆ ಎಂದು ಚಂದ್ರಗುತ್ತಿ ಕೃಷಿಕ ರಘು ಎಂ. ಸ್ವಾಧಿ ತಿಳಿಸಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿಗೂ ವೇತನ ಹೆಚ್ಚಳ ಮಾಡಬೇಕು: ಆಯನೂರು ಮಂಜುನಾಥ್
ರೇಣುಕಾದೇವಿ ಕ್ಷೇತ್ರದಲ್ಲಿ ಕಲ್ಯಾಣ ಮಂಟಪ, ಪ್ರವಾಸಿ ಮಂದಿರ ಇದೆ. ದಿನಕ್ಕೆ ಬಾಡಿಗೆ ₹650 ಪಡೆಯುತ್ತಾರೆ. ಆದರೆ, ಯಾವುದೇ ವ್ಯವಸ್ಥೆ ಇಲ್ಲ. ಶೌಚಾಲಯಗಳು ಶುಚಿತ್ವ ಇಲ್ಲದೇ ಗಬ್ಬು ನಾರುತ್ತವೆ. ಹಾಗಾಗಿ, ಯಾತ್ರಾರ್ಥಿಗಳು ಯಾರೂ ಇಲ್ಲಿ ತಂಗುವುದಿಲ್ಲ. ಹೆಣ್ಣುಮಕ್ಕಳು ಬಟ್ಟೆ ಬದಲಿಸಲು ಸೂಕ್ತ ವ್ಯವಸ್ಥೆ ಇಲ್ಲ ಎಂದು ರಾಣೇಬೆನ್ನೂರು ಮೈಲಾರಪ್ಪ ರಾಮಪ್ಪ ಗಡಾದರ್ ಹೇಳಿದ್ದಾರೆ.
ದೇವಸ್ಥಾನ ಮತ್ತು ರಥಬೀದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಲು ಪುರಾತತ್ವ ಇಲಾಖೆ ನಿಯಮಗಳು ಅಡ್ಡಿಯಾಗಿವೆ. ಶೌಚಾಲಯ ಕೊರತೆಯಿಂದ ಭಕ್ತರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿ ಗಮನಕ್ಕೆ ತರಲಾಗಿದೆ. ಈ ಹಿಂದೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಧರ್ಮಪ್ಪ ಕ್ಷೇತ್ರಕ್ಕೆ ಭೇಟಿ ನೀಡಿ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಶ್ರೀ ರೇಣುಕಾಂಬಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ತಿಳಿಸಿದ್ದಾರೆ.