20 ರಿಂದ 30 ದಿನಗಳಲ್ಲಿ ಕಚ್ಚಾ ವಸ್ತು ಬಳಸುವ ಮೂಲಕ ಆರಂಭ| ದೇಶದ ಒಟ್ಟು 20 ಘಟಕಗಳ ಪೈಕಿ ರಾಜ್ಯದಲ್ಲಿ ಎರಡು ಘಟಕಗಳಿಗೆ ಅನುಮತಿ| ರೆಮ್‌ಡೆಸಿವಿರ್‌ನ ಕೊರತೆ ಇದ್ದು ಅದನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ: ಸಚಿವ ನಿರಾಣಿ|
ಬಾಗಲಕೋಟೆ(ಏ.30): ಮುಂದಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರೆಮ್‌ಡೆಸಿವಿರ್ ತಯಾರಿಸುವ ಘಟಕ ಆರಂಭವಾಗಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಧೋಳದ ಉದ್ಯಮಿ ಸತೀಶ ಗಾರಗಿ ಅವರಿಗೆ ಈ ಘಟಕ ಆರಂಭಿಸಲು ಅನುಮತಿ ದೊರೆತಿದೆ. ಕೇಂದ್ರ ಸರ್ಕಾರ ದೇಶದಲ್ಲಿ 20 ಕಡೆ ಉತ್ಪಾದನೆಗೆ ಅವಕಾಶ ಕಲ್ಪಿಸಿದೆ. ಇದರಲ್ಲಿ ಕರ್ನಾಟಕದ ಎರಡು ಕಡೆಗಳಲ್ಲಿ ಉತ್ಪಾದನೆ ಘಟಕ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಒಂದು ಬಾಗಲಕೋಟೆ ಜಿಲ್ಲೆಗೆ ಸಿಕ್ಕಿರುವುದು ಸಂತೋಷದ ವಿಷಯ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ರೆಮ್‌ಡೆಸಿವಿರ್ ಅಭಾವ ಕೊರತೆ ನೀಗಿಸಲಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟುಔಷಧಗಳು ಬರುತ್ತಿವೆ ಎಂದರು.
ಬಾಗಲಕೋಟೆಯಲ್ಲಿ 3 ದಿನ ಅಲೆದರೂ ಸಿಗದ ಬೆಡ್: ಮಗನ ಎದುರೇ ಪ್ರಾಣಬಿಟ್ಟ ತಾಯಿ..!
ಶೀಘ್ರ ರೆಮ್‌ಡೆಸಿವಿರ್ ಘಟಕ ಆರಂಭ:
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟುಪ್ರಮಾಣದ ಔಷಧಗಳು ಬರುತ್ತಿವೆ. ಈಗಾಗಲೇ ಟಾಪ್ 20 ಔಷಧಗಳು ಸಿಪ್ಲಾದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೆಮ್‌ಡಿಸಿವಿರ್ ತಯಾರಿಸುವ ಘಟಕಗಳನ್ನು ಸ್ಥಾಪಿಸಿ ಮುಂದಿನ ದಿನಗಳಲ್ಲಿ ಇಲ್ಲಿಂದಲೇ ರೆಮ್‌ಡಿಸಿವಿರ್ ವಿತರಿಸುವಂತಾಗಲಿದೆ. ಬರುವ 20ರಿಂದ 30 ದಿನಗಳಲ್ಲಿ ರಾ ಮಟೀರಿಯಲ್ (ಕಚ್ಚಾವಸ್ತುಗಳು) ಬಳಸುವ ಮೂಲಕ ತಯಾರಿಸುವ ಯೋಜನೆ ನಮ್ಮಲ್ಲಿಯೆ ಪ್ರಾರಂಭವಾಗಲಿದೆ. ಇದರಿಂದ ರೆಮ್‌ಡಿಸಿವಿರ್‌ನ ಕೊರತೆ ಅಭಾವ ನೀಗಲಿದೆ ಎಂದು ವಿವರಿಸಿದರು.
ಸಿಎಂ ಸಹಿತ ಎಲ್ಲರಿಗೂ ವಂದನೆ:
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದರೂ ಮುಖ್ಯಮಂತ್ರಿಗಳು ಎಲ್ಲ ಹಿರಿಯ ಅಧಿಕಾರಿಗಳು, ಮಂತ್ರಿಗಳು ಮತ್ತು ಶಾಸಕರು ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಅವರಿಗೆಲ್ಲ ಇಡೀ ಆರು ಕೋಟಿ ಕನ್ನಡಿಗರ ಪರವಾಗಿ ವಂದನೆ ಸಲ್ಲಿಸುತ್ತೇನೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿ ಮಾಡಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚಾಚೂ ತಪ್ಪದೆ ಪಾಲಿಸಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡುವುದು ಮತ್ತು ಕಾಲಕಾಲಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದರು.
ಕೊರೊನಾ ಪಾಸಿಟಿವ್‌ಯಿದ್ರೂ ಮುಚ್ಚಿಟ್ಟು 2 ದಿನ ಕರ್ತವ್ಯಕ್ಕೆ ಹಾಜರ್; ಫಾರ್ಮಾಸಿಸ್ಟ್ ಸಸ್ಪೆಂಡ್
ರ‍್ಯಾಪಿಡ್ ಪರೀಕ್ಷೆ ಮತ್ತು ಆರ್‌ಟಿಪಿಎಸ್‌ಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳನ್ನು ಮಾಡಿದ ನಂತರ ಅವರ ಐಡಿ ತಯಾರಾಗುತ್ತದೆ. ಆ ರೋಗಿಯ ಹಿನ್ನೆಲೆ ಮತ್ತು ಕೋವಿಡ್ ಯಾವ ಹಂತದಲ್ಲಿದೆ ಎಂದು ತಿಳಿದು ಆ ರೋಗಿಗೆ ಬೇರೆ ಬೇರೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಕೆಲವೊಬ್ಬರು ರೆಮ್‌ಡೆಸಿವಿರ್ ಬೇಕು ನಮಗೆ ಅದು ಸಿಗುತ್ತಿಲ್ಲ ಎಂದು ಹೇಳುತ್ತಾರೆ. ರೆಮ್‌ಡೆಸಿವಿರ್‌ನ ಕೊರತೆ ಇದ್ದು ಅದನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona