ರೇಪ್ ಆರೋಪಿಯೋರ್ವ ಯುವತಿಗೆ ನಂಬಿಸಿ ಕೈಕೊಟ್ಟಿದ್ದರ ಜೊತೆಗೆ ಕೋರ್ಟಿಗೂ ಕೈ ಕೊಟ್ಟಿದ್ದಾನೆ. ಜಾಮೀನು ಪಡೆದವನು ಕೋರ್ಟಿನತ್ತ ಸುಳಿಯದೇ ಏಮಾರಿಸಿದ್ದಾನೆ.
ವರದಿ : ವೆಂಕಟೇಶ್ ಕಲಿಪಿ
ಬೆಂಗಳೂರು (ಜ.28): ಅತ್ಯಾಚಾರ ಆರೋಪ ಎದುರಿಸುತ್ತಿರುವ ಯುವಕನೊಬ್ಬ ಪ್ರೀತಿಸಿದ ಯುವತಿಯನ್ನಷ್ಟೇ ಅಲ್ಲ, ಹೈಕೋರ್ಟ್ ಅನ್ನೂ ನಂಬಿಸಿ ಏಮಾರಿಸಿದ ಘಟನೆ ನಡೆದಿದೆ.
ತಾನು ಪ್ರೀತಿಸಿದ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ ಬಳಿಕ ಯುವಕ ಕೈಕೊಟ್ಟಿದ್ದ. ಅತ್ಯಾಚಾರ ಪ್ರಕರಣ ದಾಖಲಾದ ನಂತರ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ. ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಪ್ರಮಾಣ ಪತ್ರ ಸಲ್ಲಿಸಿ, ಹೈಕೋರ್ಟ್‌ನಿಂದ ತಾತ್ಕಾಲಿಕ ಜಾಮೀನು ಪಡೆದ. ಜಾಮೀನು ಸಿಕ್ಕ ಕೂಡಲೇ ಸಂತ್ರಸ್ತೆಯನ್ನು ಮದುವೆಯೂ ಆಗದೆ, ಕೋರ್ಟ್‌ಗೂ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ!
ಆರೋಪಿ ನಡೆಯ ಬಗ್ಗೆ ಕಿಡಿಕಾರಿದ ಹೈಕೋರ್ಟ್, ಆತನ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?: ಕೊಡಗು ಜಿಲ್ಲೆಯ ಯುವತಿ 2020ರ ಜೂನ್‌ನಲ್ಲಿ ಸ್ಥಳೀಯ ಮಹಿಳಾ ಠಾಣೆಗೆ ದೂರು ನೀಡಿದ್ದರು. ‘ನಾನು ಹಾಗೂ ಆಶಿಕ್ ಎಂಬ ಯುವಕ ಪರಸ್ಪರ ಪ್ರೀತಿಸುತ್ತಿದ್ದೆವು. ಭೇಟಿಯಾಗಲು ಆಶಿಕ್ ತನ್ನ ಕಾಫಿ ಎಸ್ಟೇಟ್‌ಗೆ ಕರೆಯುತ್ತಿದ್ದ. ಮದುವೆಯಾಗುವುದಾಗಿ ಭರವಸೆ ನೀಡಿ ಬಲವಂತದಿಂದ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ. 2020ರ ಏ.13ರಂದು ಕಾಫಿ ಎಸ್ಟೇಟ್‌ಗೆ ಕರೆದು ಅತ್ಯಾಚಾರ ಎಸಗಿದ್ದ. ನಂತರ ಮದುವೆಯಾಗಲು ನಿರಾಕರಿಸಿದ’ ಎಂದು ದೂರಿನಲ್ಲಿ ಸಂತ್ರಸ್ತೆ ಹೇಳಿಕೆ ನೀಡಿದ್ದರು.
ಅಣ್ಣನ ಸ್ನೇಹಿತನಿಂದಲೇ ರೇಪ್: ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ .
ಈ ಹಿನ್ನೆಲೆಯಲ್ಲಿ ಆಶಿಕ್ ವಿರುದ್ಧ ಪೊಲೀಸರು ಅತ್ಯಾಚಾರ, ಬೆದರಿಕೆ, ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದರು. ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಆಶಿಕ್ ಅರ್ಜಿ ಸಲ್ಲಿಸಿದ್ದ. ಅದನ್ನು 3ನೇ ಹೆಚ್ಚುವರಿ ಕೊಡಗು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ.
ಕೋರ್ಟ್ ತಾತ್ಕಾಲಿಕ ಜಾಮೀನು:
ವಿಚಾರಣೆ ವೇಳೆ ಕೊಡಗಿನ ಕುಂಜಿಲ ಜಮಾತ್ ಮಸೀದಿಯಲ್ಲಿ ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸಿದ್ಧನಿದ್ದೇನೆ. ಆದರೆ, ಪೊಲೀಸರು ಬಂಧಿಸುವ ಆತಂಕ ಕಾಡುತ್ತಿದೆ ಎಂದು ಆಶಿಕ್ ತಿಳಿಸಿದ್ದ. ಹೀಗಾಗಿ, ನ್ಯಾಯಾಲಯ ಮೂರು ವಾರದ ತಾತ್ಕಾಲಿಕ ಜಾಮೀನು ನೀಡಿ, ರಾಜೀ ಸಂಧಾನ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿತು. ಆದರೆ, ಜಮಾತ್ ಮುಂದೆ ಆಶಿಕ್ ಹಾಜರಾಗಲಿಲ್ಲ. ನ್ಯಾಯಾಲಯ ಕಾರಣ ಕೇಳಿದಾಗ ಕೊರೋನಾ ಸೋಂಕು ತಗುಲಿದೆ ಎಂದು ತಿಳಿಸಿದ್ದ. ಹೀಗಾಗಿ ಮತ್ತೆ ನ್ಯಾಯಾಲಯ ಆತನ ತಾತ್ಕಾಲಿಕ ಜಾಮೀನನ್ನು ಸೆ.3ರವರೆಗೆ ಮುಂದುವರಿಸಿತ್ತು.
ಹೊಸದಾಗಿ ಮದುವೆಯಾಗಿದ್ದ ಸೊಸೆ ನಿಗೂಢ ಸಾವಿನ ನಂತರ ಅತ್ತೆಯ ಶವವೂ ಪತ್ತೆ!
ಅರ್ಜಿಯು ಅ.21ರಂದು ಮತ್ತೆ ವಿಚಾರಣೆಗೆ ಬಂದಾಗ ತಾವಿಬ್ಬರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಲು ಸಿದ್ಧವಿರುವುದಾಗಿ ಆಶಿಕ್ ಮತ್ತು ಸಂತ್ರಸ್ತೆಯು ತಿಳಿಸಿದರು. ಹೀಗಾಗಿ ಜಾಮೀನು ಅವಧಿಯನ್ನು ಮತ್ತೆ ಎರಡು ವಾರಗಳ ಕಾಲ ವಿಸ್ತರಿಸಲಾಯಿತು. ಹೀಗೆ ನೆಪಗಳನ್ನು ಹೇಳುತ್ತಾ ಡಿ.17ರವರೆಗೂ ಮದುವೆ ಮುಂದೂಡುತ್ತಾ, ಜಾಮೀನು ಅವಧಿ ವಿಸ್ತರಣೆಯಾಗುವಂತೆ ಆರೋಪಿ ನೋಡಿಕೊಂಡು ಬಂದಿದ್ದ. ಕಡೆಗೂ ಆತ ಮದುವೆಯಾಗದಿದ್ದರಿಂದ ಸಂತ್ರಸ್ತೆ ಮತ್ತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಡಿ. 17ರ ವಿಚಾರಣೆ ವೇಳೆ ಆರೋಪಿ ಆಶಿಕ್ ದುಬೈಗೆ ಹೋಗಿದ್ದಾನೆ. ಆತ ಭಾರತದಲ್ಲಿ ಇಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅತ್ತ ಆಶಿಕ್ ಪರ ವಕೀಲರು, ಅರ್ಜಿದಾರ ಸಿಗುತ್ತಾನೆಯೊ ಅಥವಾ ಇಲ್ಲವೊ ಎಂಬ ಬಗ್ಗೆ ತಮಗೆ ಗೊತ್ತಿಲ್ಲ ಎಂದು ತಿಳಿಸಿದ್ದರು.
ಇದರಿಂದ ಜ.5ರಂದು ವಿಚಾರಣೆಗೆ ತಪ್ಪದೇ ಖುದ್ದು ಹಾಜರಾಗಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು. ಜ.5ಕ್ಕೂ ಆತ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಜಾಮೀನು ರದ್ದುಪಡಿಸಿ ಆದೇಶಿಸಿತು.