ಮೆಟ್ರೋದ ‘ಮಿಯಾವಾಕಿ ಅರಣ್ಯ’ ಕನಸು ಭಗ್ನಗೊಳಿಸಿದ ಮಳೆರಾಯ..!

By Kannadaprabha NewsFirst Published Oct 29, 2022, 8:30 AM IST
Highlights

ಮೆಟ್ರೋಗೆ ಅರಣ್ಯ ಬೆಳೆಸಲು ಕವಡೆದಾಸರಹಳ್ಳಿ ಕೆರೆಯ ಬಳಿ 4 ಎಕರೆ ಜಾಗ ನೀಡಿದ್ದ ಕೈಎಡಿಬಿ ಆದರೆ ಸೆಪ್ಟೆಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದ ನಿಂತ ನೀರು

ಬೆಂಗಳೂರು(ಅ.29):  ಒತ್ತೊತ್ತಾಗಿ ಮರಗಳನ್ನು ಬೆಳೆಸುವ ಮಿಯಾವಾಕಿ ಅರಣ್ಯ ಯೋಜನೆಯನ್ನು ಈ ವರ್ಷವೇ ಜಾರಿಗೊಳಿಸಬೇಕು ಎಂಬ ಬೆಂಗಳೂರು ಮೆಟ್ರೋ ನಿಗಮದ ಕನಸಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆ ಆಡ್ಡಿಯಾಗಿದೆ. ಆದ್ದರಿಂದ ಮುಂದಿನ ವರ್ಷಕ್ಕೆ ಯೋಜನೆ ಮುಂದೂಡಿರುವುದಾಗಿ ಮೆಟ್ರೋ ನಿಗಮದ ಮೂಲಗಳು ತಿಳಿಸಿವೆ.

ಈ ವರ್ಷದ ಮಾನ್ಸೂನ್‌ ಅವಧಿಯಲ್ಲಿ ಮಿಯಾವಾಕಿ ಮಾದರಿಯಲ್ಲಿ ಕಡಿಮೆ ಜಾಗದಲ್ಲಿ ದಟ್ಟ ಅರಣ್ಯ ಬೆಳೆಸುವ ಗುರಿ ಇಟ್ಟುಕೊಂಡಿರುವುದಾಗಿ ಮೆಟ್ರೋ ನಿಗಮದ ಅಧಿಕಾರಿಗಳು ಹೇಳಿದ್ದರು. ಅದರಂತೆ ನಗರದ ವಿವಿಧೆಡೆ ಯೋಜನೆಗೆ ಜಾಗ ಹುಡುಕಾಡಿ ಬಳಿಕ ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ನಿಗಮ (ಕೆಐಎಡಿಬಿ)ವು ಮೆಟ್ರೋ ನಿಗಮಕ್ಕೆ ಏರೋಸ್ಪೆಸ್‌ ಪಾರ್ಕ್ ಬಳಿಯ ಕವಡೆದಾಸರಳ್ಳಿ ಕೆರೆಯ ಸಮೀಪದಲ್ಲಿ ನಾಲ್ಕು ಎಕರೆ ಜಾಗವನ್ನು ಅಂತಿಮಗೊಳಿಸಿತ್ತು.
ಆದರೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಜಾಗದಲ್ಲಿ ನೀರು ನಿಂತಿದೆ. ಈ ನೀರು ಬಸಿದು ಹೋಗಿಲ್ಲ. ಇದರಿಂದ ಯೋಜನೆಯನ್ನು ಈ ವರ್ಷ ಜಾರಿಗೊಳಿಸದಿರಲು ನಿರ್ಧರಿಸಿದ್ದೇವೆ ಎಂದು ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಹೊಸೂರು ತಿಳಿಸಿದ್ದಾರೆ.

ವೈಟ್‌ಫೀಲ್ಡ್‌-ಕೆ.ಆರ್‌.ಪುರದಲ್ಲಿ 15ರಿಂದ ಪರೀಕ್ಷಾರ್ಥ ಮೆಟ್ರೋ ರೈಲು ಓಡಾಟ

ನೀರು ನಿಲ್ಲುವ ಜಾಗದಲ್ಲಿ ಮಿಯಾವಾಕಿ ಅರಣ್ಯ ಬೆಳೆಸುವುದು ಸೂಕ್ತವಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಬಾರಿ ದಾಖಲೆಯ ಮಳೆ ಆಗಿರುವುದರಿಂದ ಕವಡೆದಾಸರಳ್ಳಿ ಕೆರೆಯ ಸಮೀಪ ನಾವು ಗುರುತಿಸಿದ್ದ ಜಾಗದಲ್ಲಿ ಯೋಜನೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಮಿಯಾವಾಕಿ ಯೋಜನೆಯಲ್ಲಿ ಸಣ್ಣ ಗಿಡಗಳನ್ನು ನೆಡಬೇಕು. ಸಣ್ಣ ಗಿಡಗಳು ನೀರು ನಿಂತ ಜಾಗದಲ್ಲಿ ಸರಿಯಾಗಿ ಬೆಳವಣಿಗೆ ಹೊಂದಲಾರವು. ಆದ್ದರಿಂದ ಈ ವರ್ಷದ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ದಿವ್ಯಾ ಹೊಸೂರು ಹೇಳಿದ್ದಾರೆ.

ಮಿಯಾವಾಕಿ ಯೋಜನೆ ಜಾರಿಗೊಳಿಸಲು ಮೆಟ್ರೋ ನಿಗಮವು ಆರಂಭದಲ್ಲಿ ಇಸ್ಕಾನ್‌ ದೇವಾಲಯ ಮತ್ತು ಪೀಣ್ಯ ಡಿಪೋದ ಬಳಿ ಜಾಗ ಗುರುತಿಸಿತ್ತು. ಆದರೆ ಈ ಎರಡು ಕಡೆಯು ಜಾಗ ಕಡಿಮೆ ಇದ್ದುದ್ದರಿಂದ ಮುಂಗಾರು ಪ್ರಾರಂಭಗೊಂಡ ಬಳಿಕ ಕವಡೆದಾಸರಳ್ಳಿಯನ್ನು ಅಂತಿಮಗೊಳಿಸಲಾಗಿತ್ತು. ಆದರೆ ಅಲ್ಲಿಯೂ ಈ ವರ್ಷ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ.

ಚಿಕ್ಕ ಜಾಗದಲ್ಲೇ ಸಾವಿರಾರು ಮರ

ಜಪಾನ್‌ನ ಜೀವಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರು ಅತ್ಯಂತ ಕಡಿಮೆ ಜಾಗದಲ್ಲಿ ಸ್ಥಳೀಯ ಪ್ರಬೇಧಕ್ಕೆ ಸೇರಿದ್ದ ನೂರಾರು ಸಸಿಗಳನ್ನು ನೆಟ್ಟು ಅರಣ್ಯವನ್ನಾಗಿ ರೂಪಿಸುವ ಪರಿಕಲ್ಪನೆ ಜಾರಿಗೆ ತಂದಿದ್ದರು. ಈ ಮಾದರಿಯಲ್ಲಿ ಒತ್ತೊತ್ತಾಗಿ ಗಿಡಗಳನ್ನು ಬೆಳೆಸುವ ಕಾರಣದಿಂದ ಒಂದು ಎಕರೆ ಜಾಗದಲ್ಲಿ ಸಾವಿರಾರು ಗಿಡಗಳು ಬೆಳೆಯುತ್ತವೆ. ಉಳಿದ ಅರಣ್ಯೀಕರಣ ಯೋಜನೆಗಳಿಗೆ ಹೋಲಿಸಿದರೆ ಸಸಿಗಳು ವೇಗವಾಗಿ ಬೆಳೆಯುತ್ತವೆ. ಮಾವು, ಹಲಸು ಸೇರಿದಂತೆ ಹೂ ಬಿಡುವ, ಹಣ್ಣು ನೀಡುವ ಗಿಡಗಳನ್ನು ಬೆಳೆಸಿ ತನ್ಮೂಲಕ ಪಕ್ಷಿಗಳು, ಚಿಟ್ಟೆಗಳಿಗೆ ಆಶ್ರಯ ತಾಣವಾಗಿ ಮಾರ್ಪಡಿಸುವುದು ಮೆಟ್ರೋದ ಉದ್ದೇಶವಾಗಿದೆ.
 

click me!