ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ: ಸಭಾಂಗಣಕ್ಕೆ ಪಾರಂಪರಿಕ ಸ್ಪರ್ಶ

By Suvarna News  |  First Published Feb 1, 2020, 12:53 PM IST

ಮಾನ್ಯಖೇಟದ ರಾಷ್ಟ್ರಕೂಟರ ಕೋಟೆ- ಕೊತ್ತಲ ಈಗ ಕಲಬುರಗಿ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆ| ಮಳಖೇಡ ಕೋಟೆ ಹಿನ್ನೆಲೆಯಲ್ಲಿ ಕಂಗೊಳಿಸುತ್ತಿದೆ ಶ್ರೀ ವಿಜಯ ಪ್ರಧಾನ ವೇದಿಕೆ| ಕವಿರಾಜ ಮಾರ್ಗದ ಸಾಲುಗಳು ಕಂಗೊಳಿಸುತ್ತಿವೆ|


ಕಲಬುರಗಿ(ಫೆ.01): ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ಇನ್ನೂ 4 ದಿನ ಬಾಕಿ ಇವೆ. ಸಿದ್ಧತೆಗಳು ಭರದಿಂದ ಸಾಗಿವೆ. ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗೆ ಅಂಗಳದಲ್ಲಿ ಪ್ರಧಾನ ವೇದಿಕೆಯ ನಿರ್ಮಾಣಕ್ಕೆ ಭಾರಿ ವೇಗ ದೊರೆತಿದೆ. 200 ಕ್ಕೂ ಹೆಚ್ಚು ಕಾರ್ಮಿಕರು ಹಗಲು ರಾತ್ರಿ ಎನ್ನದಂತೆ ಶ್ರೀ ವಿಜಯ ಪ್ರಧಾನ ವೇದಿಕೆಯನ್ನು ಮಳಖೇಡ (ಹಿಂದಿನ ಮಾನ್ಯಖೇಟ) ಕೋಟೆ ಕೊತ್ತಲಿನ ಮಾದರಿಯಲ್ಲಿ ಸಿದ್ಧಪಡಿಸುತ್ತಿದ್ದಾರೆ.

ಕಾಗಿಣಾ ನದಿ ತೀರದಲ್ಲಿ ರಾಷ್ಟ್ರಕೂಟರು ಆಳಿದ ಕೋಟೆ- ಕೊತ್ತಲ, ಬುರಜುಗಳು ಇಂದಿಗೂ ಸ್ಮಾರಕಗಳಾಗಿ ನಿಂತಿವೆ. ಅದೇ ಮಾದರಿಯಲ್ಲೇ ಶ್ರೀ ವಿಜಯ ಪ್ರಧಾನ ವೇದಿಕೆ ನಿರ್ಮಾಣವಾಗುತ್ತಿದ್ದು ನೋಡಲು ಬಹಳ ಆಕರ್ಷಕವಾಗಿದೆ.

Tap to resize

Latest Videos

undefined

ಕಲಬುರಗಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಕಾಶವಾಣಿ ನೇರ ಪ್ರಸಾರ

ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗ ದೊರೆಯ ಆಸ್ಥಾನದಲ್ಲಿಯೇ ಇದ್ದಂತಹ ಶ್ರೀ ವಿಜಯ 1500 ವರ್ಷಗಳ ಹಿಂದೆಯೇ ಕವಿರಾಜ ಮಾರ್ಗ ಕನ್ನಡ ಕಾವ್ಯ ಲಾಕ್ಷಣಿಕ ಗ್ರಂಥ ರಚಿಸುವ ಮೂಲಕ ಕನ್ನಡಿಗರ ಸ್ವಾಾಭಿಮಾನಕ್ಕೆ ಕಿರೀಟ ತೊಡಿಸಿದ್ದ. ಇದೇ ಕಾರಣಕ್ಕೆ ಕನ್ನಡ ಸಾಹಿತ್ಯದ ಉಗಮ ಸ್ಥಾನವಾಗಿಯೂ ಈ ಪ್ರದೇಶ ಗುರುತಿಸಲ್ಪಡುತ್ತಿದೆ. ಕನ್ನಡ ಚರಿತ್ರೆಯಲ್ಲಿ ರಾಷ್ಟ್ರಕೂಟರು ಶ್ರೇಷ್ಠ ಚಕ್ರವರ್ತಿಗಳಾಗಿದ್ದರು. 

ಕಲಬುರಗಿ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರ ಮೆರವಣಿಗೆ ದಾರಿ ಯಾವುದಯ್ಯ?

ಮಾನ್ಯಖೇಟ (ಈಗಿನ ಸೇಡಂ ತಾಲ್ಲೂಕಿನ ಮಳಖೇಡ) ಅವರ ರಾಜಧಾನಿ. ಕ್ರಿ.ಶ 8ರಿಂದ 10ನೇ ಶತಮಾನದವರೆಗೆ ಇವರ ಚಕ್ರಾಧಿಪತ್ಯವಿತ್ತು. ಮಳಖೇಡದಲ್ಲಿ ಈಗಲೂ ರಾಷ್ಟ್ರಕೂಟರ ಕೋಟೆಯ ಅವಶೇಷ ಉಳಿದುಕೊಂಡಿವೆ. ಅದೇ ಮಾದರಿಯ ಕೋಟೆ ಆಕೃತಿಯಲ್ಲೇ ಸಮ್ಮೇಳನ ವೇದಿಕೆ ನಿರ್ಮಿಸಲಾಗುತ್ತಿದೆ. ಈವರೆಗೆ ಸಿಕ್ಕ ಕನ್ನಡದ ಮೊದಲ ಪರಿಪೂರ್ಣ ಗ್ರಂಥ ’ಕವಿರಾಜಮಾರ್ಗವು ಇದೇ ರಾಷ್ಟ್ರಕೂಟರ ಕೊಡುಗೆಯಾಗಿದೆ. ದೊರೆ ಅಮೋಘವರ್ಷ ನೃಪತುಂಗನ ಆಸ್ಥಾಾನದಲ್ಲಿದ್ದ ಶ್ರೀವಿಜಯ ಇದರ ಕರ್ತೃ. ಹಾಗಾಗಿ 1500 ವರ್ಷಗಳ ಹಿಂದೆ ಈ ನಾಡನ್ನಾಳಿದ್ದಂತಹ ಈ ದೊರೆಗಳ ಸ್ಮರಣೆ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆದಿದೆ.

ಫೆ. 5 ರಿಂದ ಮೂರು ದಿನ ನಡೆಯಲಿರುವ ಸಮ್ಮೇಳನದ ಸಭಾಂಗಣ ಕನ್ನಡಿಗರ ಸಾರ್ವಭೌಮತ್ವ ಹಾಗೂ ಕಲ್ಯಾಣ  ರ್ನಾಟಕದ ಹೆಮ್ಮೆಗೆ ಕನ್ನಡಿ ಹಿಡಿಯುವಂತೆ ನಿರ್ಮಾಣವಾಗುತ್ತಿದೆ. ಇಡೀ ವೇದಿಕೆಗೆ ಪಾರಂಪರಿಕ ಸ್ಪರ್ಶ ನೀಡುವ ಕೆಲಸ ಭರದಿಂದ ಸಾಗಿದೆ.

ಇದರ ಮಧ್ಯದಲ್ಲಿ ಸಾಹಿತ್ಯ ಸಮ್ಮೇಳನದ ಬರವಣಿಗೆ ಇರಲಿದ್ದು, ಎಡ ಹಾಗೂ ಬಲಕ್ಕೆ ತಲಾ ಎರಡು ಕೋಟೆ ಬುರುಜುಗಳನ್ನು ನಿರ್ಮಿಸಲಾಗಿದೆ. ಇವುಗಳ ಮಧ್ಯೆ ಎರಡು ಬಾಗಿಲು ಆಕೃತಿ ಮಾಡಿದ್ದು, ಅದರ ಮೇಲಂಚಿನಲ್ಲಿ ಕುದುರೆಯ ಮುಖಗಳನ್ನು ಅಳವಡಿಸಲಾಗಿದೆ. ಹಳೆ ಕಾಲದ ಮನೆಗಳ ಬಾಗಿಲಿನ ಎರಡೂ ಬದಿಗೆ ಕುದುರೆಯ ಮುಖಗಳನ್ನು ಅಳವಡಿಸುವುದು ಈ ಭಾಗದ ಸಾಂಪ್ರದಾಯಿಕ ಶೈಲಿ. ಜತೆಗೆ, ಸೇಡಂನಲ್ಲಿ ಸಿಕ್ಕ 8ನೇ ಶತಮಾನದ ಶಿಲಾಶಾಸನ ಹಾಗೂ ಸನ್ನತಿಯಲ್ಲಿ ಸಿಕ್ಕ ಕ್ರಿ.ಪೂ. ಕಾಲದ ಶಿಲ್ಪಕಲಾಕೃತಿಯ ಮಾದರಿಗಳೂ ಇಲ್ಲಿ ಸ್ಥಾನ ಪಡೆದಿವೆ.

ಸಭಾಂಗಣದ ಸ್ವರೂಪ- ವಿಸ್ತಾರ

ಗುವಿವಿ ಜ್ಞಾನಗಂಗೆ ಆವರಣ ಪ್ರವೇಶಿಸುತ್ತಿದ್ದಂತೆ ಮೊದಲು ಬೃಹತ ಸ್ವಾಗತ ಕಮಾನು ಎದುರುಗೊಳ್ಳುತ್ತದೆ. ಇದರಿಂದ ಒಳಗೆ ಬಂದರೆ ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಎಂದೇ ಪರಿಗಣಿಸಲಾದ ಅನುಭವ ಮಂಟಪ’ ನಿಮ್ಮನ್ನು ಆಲಿಂಗಿಸಲಿದೆ. ಬಸವ ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಇದ್ದ ಮಾದರಿಯನ್ನೇ ಇಲ್ಲಿ ನಿರ್ಮಿಸಲಾಗುತ್ತಿದೆ. ಬಸವಾದಿ ಪ್ರಮಥರು, ಶರಣ, ಶರಣೆಯರ ಚಿತ್ರಗಳು ಎದುರಾಗುತ್ತವೆ.

ಸ್ವಾಗತ ಕಮಾನಿನಿಂದ ಹಿಡಿದು ವೇದಿಕೆವರೆಗೂ ಪ್ರತಿಹೆಜ್ಜೆಗೂ ಪಾರಂಪರಿಕ ಸ್ಪರ್ಶ ನೀಡಲಾಗುತ್ತಿದೆ. ಹೊರಗೋಡೆಗಳಲ್ಲಿ ದೀಪಸ್ತಂಭ, ಈ ಭಾಗದ ಸಂಗೀತ ಪರಿಕರ, ಜಾನಪದ ಸಲಕರಣೆಗಳನ್ನು ಚಿತ್ರಿಸಲಾಗುತ್ತಿದೆ. ಇದೆಲ್ಲವನ್ನೂ ಫ್ಲೈವುಡ್, ಪಿಒಪಿ, ಕಟ್ಟಿಗೆ, ಗೋಣಿಚೀಲ, ಸೆಣಬು, ಬಟ್ಟೆ, ಬಳಸಿ ನಿರ್ಮಿಸಲಾಗುತ್ತಿದೆ.

ಸಭಾಂಗಣದ ತುಂಬ ಜರ್ಮನ್ ತಂತ್ರಜ್ಞಾನ ಹೊಂದಿದ ಬೃಹತ್ ಬಟ್ಟೆಯ ಹೊದಿಕೆ ಇದ್ದು, ಬಿಸಿಲಿನ ಝಳ ಕೆಳಗೆ ಬರದಂತೆ ತಡೆಯಲಿದೆ. ಮೂರೂ ಕಡೆಯಿಂದ ಸಭಾಂಗಣ ತೆರೆದುಕೊಂಡಿದ್ದರಿಂದ ಗಾಳಿ, ಬೆಳಕಿಗೂ ಕಷ್ಟವಿಲ್ಲ.

ವೇದಿಕೆಯ ಆಕಾರ, ಆಕೃತಿ, ಆಕರ್ಷಣೆ

ಮುಖ್ಯವೇದಿಕೆ 120 ಅಡಿ ಅಗಲ, 40 ಅಡಿ ಉದ್ದ, 6 ಅಡಿ ಎತ್ತರ ಇರಲಿದೆ. ಇದರ ಮುಂದಿನ ಸಭಾಂಗಣ 216 ಅಡಿ ಅಗಲ, 400 ಅಡಿ ಉದ್ದ ಇರಲಿದೆ. 25 ಸಾವಿರ ಕುರ್ಚಿಗಳನ್ನು ಇಡಲು ಉದ್ದೇಶಿಸಲಾಗಿದೆ. ಇದರ ಮುಂಭಾಗಕ್ಕೆ ನಿರ್ಮಿಸುವ ಅನುಭವ ಮಂಟಪದ ಮಾದರಿ ಕೂಡ 216 ಅಡಿ ಅಗಲ. ಮುಖ್ಯ ವೇದಿಕೆಯನ್ನು ಕಲಬುರಗಿ ಆರ್ಟ್ ಸೊಸೈಟಿಯ ಕಲಾವಿದರು ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಸೇರಿದ ಮೈಸೂರಿನ ಕಲಾವಿದರು ಅನುಭವ ಮಂಟಪಕ್ಕೆ ರೂಪ ನೀಡುತ್ತಿದ್ದಾರೆ. ಇಂಥ ದೊಡ್ಡ ವೇದಿಕೆಯನ್ನು ಮೊದಲ ಬಾರಿಗೆ ನಿರ್ಮಿಸುತ್ತಿದ್ದು ಕಲಾವಿದರೂ ಇದನ್ನು ಸವಾಲಾಗಿ ಸ್ವೀಕರಿಸಿದ್ದಾರೆ.
 

click me!