ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಸೊಗಡು ಅಸಮಧಾನ. ಗೃಹ ಸಚಿವರಿಗೆ ಭಗವದ್ಗೀತೆ ಕಳುಹಿಸಿದ ಬಿಜೆಪಿ ಎಸ್ಟಿ ಮೋರ್ಚಾ.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು
ತುಮಕೂರು (ಜು. 28): ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೆ ಮಾಜಿ ಸಚಿವ ಸೊಗಡು ಶಿವಣ್ಣ ಸುದ್ದಿಗೋಷ್ಠಿ ನಡೆಸಿ ತಮ್ಮದೇ ಸರ್ಕಾರ ಹಾಗೂ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ. ಸದ್ಯ ಈ ಘಟನೆಯನ್ನು ನಾನು ಖಂಡಿಸುತ್ತೇನೆ, ಯಾವುದೋ ತಪ್ಪಿಗೆ ಹಿಂದೂಗಳಾಗಿ ಹುಟ್ಟಿದ್ದೇವೆ ಬದುಕಲು ಬಿಡಿ. ಈ ಘಟನೆಯಲ್ಲಿ ಸರ್ಕಾರ ವಿಫಲವಾಗಿದೆ ಹಿಂದುಗಳ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಕಿಡಿಗೇಡಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ನಮ್ಮ ಚಳವಳಿ ಹಿಂಸಾತ್ಮಕ- ಅಹಿಂಸಾತ್ಮಕ ಎರಡೂ ರೀತಿ ಇರಬಹುದು ಎಂದು ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಲ್ಲದ ರಾಜೀನಾಮೆ ಪರ್ವ : ತುಮಕೂರು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯರಾದ ವಿನಯ್ ಅದ್ವೈತ್, ಕಿರಣ್ , ರಕ್ಷಿತ್ ಹಾಗೂ ಶಕುಂತಲಾ ನಟರಾಜ್ ಸೇರಿದಂತೆ ತುಮಕೂರು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಎಲ್ಲರೂ ಸೇರಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಅದಲ್ಲದೇ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಾಲೇಗೌಡ ಕೂಡ ಸ್ಥಾನ ತ್ಯಜಿಸುವ ಮಾತುಗಳನ್ನು ಆಡಿದ್ದಾರೆ. ಇವರ ರಾಜೀನಾಮೆ ಪತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿ ಸರ್ಕಾರಕ್ಕೂ ಪ್ರವೀಣ್ ನೆಟ್ಟಾರು ಹತ್ಯೆ ನುಂಗಲಾರದ ಬಿಸಿ ತುತ್ತಾಗಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿತ್ತು. ಆದರೆ ಈಗ ಸಂಭ್ರಮದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆಯಿಂದ ಭುಗಿಲೆದ್ದ ಆಕ್ರೋಶ; ಬಿಜೆಪಿ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಶಿಫ್ಟ್ ಆಗ್ತಾರಾ?
ಗೃಹ ಸಚಿವರಿಗೆ ಭಗವದ್ಗೀತೆ ಕಳುಹಿಸಿದ ಕಾರ್ಯಕರ್ತರು: ಇನ್ನೊಂದೆಡೆ ತುಮಕೂರು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷರಿಂದ ಗೃಹ ಸಚಿವರಿಗೆ ಭಗವದ್ಗೀತೆ ಪುಸ್ತಕ ರವಾನೆ ಮಾಡಲಾಗಿದೆ. ಗೃಹ ಸಚಿವ ವಿಳಾಸಕ್ಕೆ ಕೋರಿಯರ್ ಮೂಲಕ ಭಗವದ್ಗೀತೆ ರವಾನೆ ಮಾಡಲಾಗಿದೆ. ಭಗವದ್ಗೀತೆ ಓದಿ ರಾಜಧರ್ಮ ಪಾಲಿಸುವಂತೆ ಸಂದೇಶ ನೀಡಲಾಗಿದೆ. ಬರೀ ಕಠಿಣ ಕ್ರಮ ಎಂದು ಗೃಹ ಸಚಿವರು ಹೇಳಿದರೆ ಆಗಲ್ಲ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಯುದ್ದ ಮಾಡುವುವಾಗ ಹೇಗಿರಬೇಕು ಹಾಗೇ ವರ್ತಿಸಬೇಕು, ನಿರ್ವೀರ್ಯರಾಗಿ ಇರಬಾರದು ಎಂದು ಸಲಹೆ ಕೊಟ್ಟಿದ್ದಾರೆ. ಹಾಗಾಗಿ ಗೃಹ ಸಚಿವರು ಇದನ್ನು ಓದಿ ತಮ್ಮ ಅಧಿಕಾರ ಬಳಸಿಕೊಳ್ಳಲು ಭಗವದ್ಗೀತೆ ಪುಸ್ತಕವನ್ನು ಕಳೂಹಿಸಲಾಗಿದೆ.
Praveen Nettaru murder; ಮುಸ್ಲಿಂ ಗೂಂಡಾಗಳಿಂದ ಈ ಹತ್ಯೆ, ಈಶ್ವರಪ್ಪ ಆರೋಪ
ಇಂದು ಬಿಜೆಪಿ ಕಾರ್ಯಕರ್ತರ ಮನವೊಲಿಸಲು ಹಾಗೂ ಪ್ರವೀಣ್ ನೆಟ್ಟಾರ್ ಗೆ ಶ್ರದ್ದಾಂಜಲಿ ಅರ್ಪಿಸಲು ಜಿಲ್ಲಾಧಿಕಾರಿ ಕಚೇರಿ ಬಳಿ ಶ್ರದ್ದಾಂಜಲಿ ಅರ್ಪಿಸಿ ನಂತರ ತುಮಕೂರು ಪ್ರಗತಿಪರ ನಾಗರೀಕ ವೇದಿಕೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇನ್ನು ತುಮಕೂರಿನಲ್ಲಿ ರಾಜೀನಾಮೆ ಪರ್ವ ಮುಂದುವರಿದಿದ್ದು. ಇದು ಪಕ್ಷಕ್ಕೆ ಮಾರಕವಾಗುತ್ತಾ ಅಥವಾ ಕೇವಲ ಪ್ರಚಾರಕ್ಕೆ ಸೀಮಿತಾಗಿರುತ್ತಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.