
ರಾಂ ಅಜೆಕಾರು
ಕಾರ್ಕಳ (ಜೂ.4) : ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಿಸಾಡುವುದರಿಂದ ಸಿಕ್ಕಾಪಟ್ಟೆಪರಿಸರ ಮಾಲಿನ್ಯವಾಗುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಅದೇ ಪ್ಲಾಸ್ಟಿಕ್ ಬಾಟಲ್‌ಗಳನ್ನು ಆಲಂಕಾರಿಕವಾಗಿ ಜೋಡಿಸಿ ಗಿಡಗಳನ್ನು ನೆಟ್ಟು ಉಡುಪಿಯ ಜನರ ಮನಗೆದ್ದಿದ್ದಾರೆ ಈ ದಂಪತಿ.
ಯತೀಶ್ ಕಿದಿಯೂರು-ಅಶ್ವಿತಾ(Yatish Kidiyur-Ashvita) ದಂಪತಿ ಈ ಸಾಧಕರು. ಉಡುಪಿ ತಾಲೂಕಿನ ಶ್ಯಾಮಿಲಿ ಕಾಲೇಜು ಸಮೀಪದ ಕಿದಿಯೂರು ಬಳಿ ನಿರ್ಮಿಸಿದ ‘ನೆರಳು ಮನೆ’ ಈಗ ಪ್ಲಾಸ್ಟಿಕ್ ಗಾರ್ಡನ್ ಮನೆಯಾಗಿ ಕಂಗೊಳಿಸುತ್ತಿದೆ.
ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಮಾಡುವುದೇ ನನ್ನ ಗುರಿ: ಶಾಸಕ ಪ್ರದೀಪ್ ಈಶ್ವರ್
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಪ್ತ ಸಹಾಯಕರಾಗಿ ಗುರುತಿಸಿಕೊಂಡಿರುವ ಯತೀಶ್ ಕಳೆದ ನಾಲ್ಕು ವರ್ಷಗಳಿಂದ ಈ ಪ್ಲಾಸ್ಟಿಕ್ ಬಾಟಲ್‌ಗಳು, ಟಯರ್‌ಗಳು, ಪ್ಲಾಸ್ಟಿಕ್ ಡ್ರಮ್, ಹಾಲಿನ ಪ್ಲಾಸ್ಟಿಕ್ ಪ್ಯಾಕೆಟ್‌ಗಳನ್ನು ಬಳಸಿಕೊಂಡು ವಿನೂತನವಾಗಿ ಗಾರ್ಡನಿಂಗ್‌ಗೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ.
ಯತೀಶ್ ಪತ್ನಿ ಅಶ್ವಿತಾ ಉಡುಪಿ ಹನುಮಂತ ನಗರದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಪ್ಲಾಸ್ಟಿಕ್ ಬಾಟಲ್‌ಗಳಿಗೆ ಬಣ್ಣ ತುಂಬಿ ಯತೀಶ್ ಅವರ ಗಾರ್ಡನಿಂಗ್ ಕಲೆಗೆ ಸಾಥ್ ನೀಡುತ್ತಿದ್ದಾರೆ. ಪ್ರಥಮ ಪಿಯುಸಿ ಕಲಿಯುತ್ತಿರುವ ಮಗಳು ಧನ್ವಿ ತಂದೆ ತಾಯಿಗೆ ಗಾರ್ಡನಿಂಗ್‌ನಲ್ಲಿ ಸಹಕಾರ ನೀಡುತ್ತಾಳೆ.
ಕಲೆಗೆ ಪ್ರೇರಣೆ:
ಈ ದಂಪತಿ ಸರ್ಕಾರಿ ಉದ್ಯೋಗದಲ್ಲಿದ್ದರೂ ಪ್ರತಿದಿನ ಎರಡು ಘಂಟೆಗಳನ್ನು ತಮ್ಮ ಹವ್ಯಾಸಕ್ಕೆ ವಿನಿಯೋಗಿಸುತ್ತಾರೆ. ಪ್ಲಾಸ್ಟಿಕ್ ಬಾಟಲ್‌ಗಳು ಹಾಗೂ ಹಾಲಿನ ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದನ್ನು ಗಮನಿಸುತ್ತಿದ್ದ ಯತೀಶ್ ಈ ಪ್ಲಾಸ್ಟಿಕ್ ಮರುಬಳಕೆಯಾಗಬೇಕು, ನಮ್ಮಲ್ಲಿರುವ ಪ್ಲಾಸ್ಟಿಕ್ ಬಳಸಿ ಅಲಂಕಾರಿಕ ವಸ್ತುಗಳನ್ನಾಗಿ ಮಾಡಬೇಕು ಎಂದು ತೀರ್ಮಾನಿಸಿದ್ದರು.
ತಾನೊಬ್ಬ ಕಲಾಕಾರನಾಗಿದ್ದುಕೊಂಡು ನೀರಿನ ಬಾಟಲ್‌ಗಳನ್ನು ಬಳಸಿಕೊಂಡು ಹಗ್ಗಗಳ ಸಹಾಯದಿಂದ ಹೂ ಕುಂಡಗಳನ್ನು ನೇತು ಹಾಕಿಕೊಂಡು ಅಲಂಕಾರಿಕವಾಗಿ ಜೋಡಿಸಿದ್ದಾರೆ.
ಮನೆಯಲ್ಲೇ ಪ್ಲಾಸ್ಟಿಕ್ ಗಾರ್ಡನ್:
ಎಂಟು ಸೆಂಟ್ಸ್ ಜಾಗದಲ್ಲಿ ನಿರ್ಮಿಸಲಾಗಿರುವ ನೆರಳು ಮನೆಯಲ್ಲಿ ಒಟ್ಟು 800ಕ್ಕೂ ಮಿಕ್ಕಿ ವಿವಿಧ ರೀತಿಯ ಹೂ, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಇದರಲ್ಲಿ 500ಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಮನೆಯ ಮೇಲ್ಚಾವಣಿಯಲ್ಲಿ ಹಣ್ಣಿನ ಗಿಡ, ತರಕಾರಿ ಹಣ್ಣಿನ ಗಿಡಗಳನ್ನು ಮೀನಿನ ಬಾಕ್ಸ್‌ನಲ್ಲಿ ಬೆಳೆಸಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳನ್ನು ಮನೆಯ ಸುತ್ತಲೂ, ಕಾರ್ ಪಾರ್ಕಿಂಗ್ ಭಾಗ ಹಾಗೂ ಬಾವಿಯ ಮೇಲ್ಭಾಗ, ಗೇಟ್‌ಗಳ ಮೇಲೆ ನೇತುಹಾಕಿ ಮನೆಯ ಅಂದ ಹೆಚ್ಚಿಸುವಂತೆ ಮಾಡಲಾಗಿದೆ.
ಪತ್ನಿ ಅಶ್ವಿತಾ ಪ್ಲಾಸ್ಟಿಕ್ ಬಾಟಲ್‌ಗಳ ಅಂದ ಹೆಚ್ಚಲು ಬಣ್ಣ ಹಚ್ಚುತ್ತಾರೆ. ಮನೆಯ ಮೇಲ್ಛಾವಣಿಯಲ್ಲಿ ಹಣ್ಣಿನ ಗಿಡಗಳನ್ನು, ಔಷಧೀಯ ಸಸ್ಯಗಳನ್ನು ನೆಟ್ಟಿದ್ದಾರೆ. ಮಾವು, ಸೀತಾಫಲ, ಸ್ಟಾರ್ ಫä್ರಟ್ಸ್, ಜಂಬು ನೇರಳೆ, ಚಿಕ್ಕು, ಕಾಳುಮೆಣಸು ಬೆಳೆಸಿ ಫಸಲು ತೆಗೆಯುತ್ತಿದ್ದಾರೆ.
ಅಂದಿನ ಜಿಲ್ಲಾಧಿಕಾರಿಯಾಗಿದ್ದ ಜಿ. ಜಗದೀಶ್ ಹಾಗೂ ಅಪರ ಜಿಲ್ಲಾಧಿಕಾರಿ ಈ ಕಲೆಗೆ ಪ್ರೋತ್ಸಾಹ ನೀಡಿದ್ದರು. ಯತೀಶ್ ಅವರ ಅಲಂಕಾರಿಕ ಯೋಚನಾಶೀಲತೆಯನ್ನು ಮನಗಂಡ ಅನೇಕ ಮಂದಿ ತಮ್ಮ ಮನೆಗಳಲ್ಲೂ ಈ ರೀತಿಯ ಪ್ಲಾಸ್ಟಿಕ್ ಗಾರ್ಡನಿಂಗ್ ನಿರ್ಮಿಸುತಿದ್ದಾರೆ.
1 ಲಕ್ಷ ಕೋಟಿ ಗಡಿ ದಾಟಿದ ಕಂಪನಿಯ ಮೌಲ್ಯ, ಪ್ಲಾಸ್ಟಿಕ್ ಚೀಲ ಹಿಡ್ಕೊಂಡು ಮಾರ್ಕೆಟ್ ಸುತ್ತಾಡಿದ ಮಾಲೀಕ!
ತನ್ನ ಮನೆ ನೋಡಲು ಬರುವ ಗೆಳೆಯರಿಗೆ ಕಾಣಿಕೆಯಾಗಿ ಈ ದಂಪತಿ ಪ್ಲಾಸ್ಟಿಕ್ ಹಾಲಿನ ಪ್ಯಾಕೆಟ್‌ನಲ್ಲಿ ಬೆಳೆಸಿದ ಗಿಡಗಳನ್ನು ನೀಡುತ್ತಾರೆ. ಆ ಮೂಲಕ ಪರಿಸರ ಕಾಳಜಿಗೆ ಮಾದರಿಯಾಗುತ್ತಾರೆ .
ಪ್ಲಾಸ್ಟಿಕ್ ಮರು ಬಳಕೆ ಮಾಡಬೇಕು. ಪರಿಸರ ಕಾಳಜಿ ಮೆರೆಯಬೇಕು. ನಿತ್ಯ ಎರಡು ಘಂಟೆಗಳ ಕಾಲ ಗಾರ್ಡನಿಂಗ್‌ಗೆ ಸಮಯ ನೀಡುವ ಕಾರಣ ಒತ್ತಡಗಳು ದೂರವಾಗುತ್ತವೆ. ಮನಸ್ಸು ಉಲ್ಲಾಸದಿಂದ ಇರುತ್ತದೆ. ಪರಿಸರವೇ ನಮಗೆ ಸ್ಫೂರ್ತಿ.
-ಯತೀಶ್ ಕಿದಿಯೂರು, ಪರಿಸರ ಪ್ರೇಮಿ.