ಯಾದಗಿರಿ: ಜೀವಕ್ಕೆ ಎರವಾಗುತ್ತಿದೆ ಜೀವಜಲ, ಗುರುಮಠಕಲ್‌ ಜನ ವಿಲವಿಲ..!

By Kannadaprabha News  |  First Published Mar 2, 2023, 2:08 PM IST

ಅನಪೂರ, ಚಿನ್ನಕಾರ ಗ್ರಾಮಗಳಲ್ಲಾದ ವಾಂತಿಭೇದಿ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಜನರ ಒತ್ತಾಯ. 


ಮೊಗುಲಪ್ಪ ಬಿ. ನಾಯಕಿನ್‌

ಗುರುಮಠಕಲ್‌(ಮಾ.02):  ಗುರುಮಠಕಲ್‌ ಮತಕ್ಷೇತ್ರದಲ್ಲಿ ಕುಡಿಯುವ ನೀರೆ ಜ್ವಲಂತ ಸಮಸ್ಯೆಯಾಗಿದೆ. ಯಾವುದೇ ರೀತಿ ಕುಡಿವ ನೀರಿನ ಕೊರತೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂಬುದು ಇಡೀ ತಾಲೂಕಿನ ಜನತೆಯ ಕೂಗಾಗಿದೆ. ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೂವರು ಮೃತಪಟ್ಟು, 85ಕ್ಕೂ ಹೆಚ್ಚಿನ ಜನರು ಅಸ್ವಸ್ಥಗೊಂಡ ಘಟನೆ ಮರೆಯುವ ಮುನ್ನವೇ ಮತ್ತೇ ಚಿನ್ನಕಾರ ಗ್ರಾಮದಲ್ಲಿ 35 ಜನರು ವಾಂತಿಭೇದಿ ಪ್ರಕರಣಗಳಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸರಿಯಾದ ಕುಡಿವ ಸರಬರಾಜು ನೀರಿನ ನಿರ್ವಹಣೆ ವಿಫಲ ಎನ್ನಲಾಗುತ್ತಿದೆ.

Tap to resize

Latest Videos

undefined

ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆ, ಜಲಜೀವನ ಮಿಷನ್‌, ಅಟಲ್‌ ಮಿಶನ್‌ ನಗರ ಸುಧಾರಣೆ ಮತ್ತು ಪುನರ್‌ಚೇತನ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅನುದಾನ ರೂಪದಲ್ಲಿ ಕೋಟಿ ಕೋಟಿ ರೂಪಾಯಿಗಳು ಸುರಿದರೂ ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿವ ನೀರು ಸಿಗದಿರುವುದು ವಿಷಾದಕಾರ.

Big 3: ಕಲುಷಿತ ನೀರು ಕುಡಿದು ಮೂವರು ಸಾವು ಪ್ರಕರಣ: ಪರಿಹಾರ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ನಾಮ ಕೆ ವಾಸ್ತೆ ಆರ್‌ಓ ಪ್ಲಾಂಟ್‌ಗಳು:

ತಾಲೂಕಿನಲ್ಲಿ ಒಟ್ಟು 18 ಪಂಚಾಯ್ತಿಗಳಿವೆ. 72 ಓಎಚ್‌ಟಿ (ಓವರ ಹೆಡ್‌ ಟ್ಯಾಂಕ್‌) ಗಳಿವೆ ಹಾಗೂ 102 ಮಿನಿ ಟ್ಯಾಂಕ್‌ಗಳಿವೆ. ಇವುಗಳ ಮೂಲಕ ಪಂಚಾಯ್ತಿ ವತಿಯಿಂದ ಜನರಿಗೆ ಕುಡಿಯಲು ನೀರಿನ ಸರಬರಾಜು ಮಾಡುತ್ತಿದೆ. ಒಟ್ಟು 92 ಆರ್‌ಒ ಪ್ಲಾಂಟ್‌ಗಳಲ್ಲಿ 6 ಆರ್‌ಒ ಪ್ಲಾಂಟ್‌ಗಳು ಮಾತ್ರ ಚಾಲ್ತಿಯಲ್ಲಿವೆ. ಉಳಿದೆಲ್ಲವು ದುರಸ್ತಿಗಾಗಿ ಕಾಯುತ್ತಿವೆ.

ಬದ್ದೇಪಲ್ಲಿ ತಾಂಡಾ, ತಾತಾಳಗೇರಿ, ಕೊಂಕಲ್‌, ಮುಸ್ಲೆಪಲ್ಲಿ ಸೇರಿ ಮುಂತಾದ ಕಡೆ ಈಗಾಗಲೇ ನೀರಿನ ಪೈಪ್‌ಲೈನ್‌ ಲೈನ್‌ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ, ಚಂಡರಕಿ, ಪುಟಪಾಕ್‌, ಗಾಜರಕೋಟ್‌, ಯಂಪಾಡ ಮುಂತಾದ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಪೈಪ್‌ ಲೈನ್‌ ಕಾಮಗಾರಿ ಶೀಘ್ರವಾಗಿ ಮುಗಿಸಬೇಕಾಗಿದೆ.

ಜೆಜೆಎಂ ವಿಫಲ:

ತಾಲೂಕಿನ ಗುರುಮಠಕಲ್‌ ಪಟ್ಟಣ ಸೇರಿದಂತೆ ಚಂಡರಕಿ, ಪುಟಪಾಕ್‌, ಚಿನ್ನಕಾರ, ಜೈಗ್ರಾಮ, ಯಂಪಾಡ ಸೇರಿದಂತೆ 175 ಗ್ರಾಮಗಳಲ್ಲಿ ಈ ಯೋಜನೆ ಹಳ್ಳ ಹಿಡಿದಿದೆ. ಮನೆ ಮುಂದೆ ನೀರಿನ ನಳ ಅಳವಡಿಸಿದರೆ ಆದಕ್ಕೆ ಟ್ಯಾಪ್‌ ಆಳವಡಿಸಿಲ್ಲ. ಇನ್ನು ಕೆಲವು ಕಡೆ ಮೀಟರ್‌ ಕೂಡಿಸಿಲ್ಲ ಹಾಗೂ ಚರಂಡಿ ನೀರಿನೊಳಗಿನಿಂದ ನೀರಿನ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಿದ್ದಾರೆ. ಇನ್ನು ಕೆಲವು ಕಡೆ ನಳದಲ್ಲಿ ನೀರೇ ಬಂದಿಲ್ಲವೆಂಬ ಎಂಬ ದೂರುಗಳಿವೆ. ಈ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಬೇಸಿಗೆ ಕಾಲದಲ್ಲಿ ಚಂಡರಕಿ, ಪುಟಪಾಕ್‌, ಗಾಜರಕೋಟ್‌, ಚಿಂತನಹಳ್ಳಿ, ಕಣೆಕಲ್‌, ತಾತಲಗೇರಾ, ಯಂಪಾಡ ಮುಂತಾದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿರುತ್ತದೆ. ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಪಂಚಾಯ್ತಿ ವತಿಯಿಂದ ಡಂಗೂರ ಬಾರಿಸಿ, ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಸಲಹೆ ನೀಡಲಾಗುತ್ತಿದೆ.

ಕೆರೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೆರೆಗಳ ಸುತ್ತ ಬೆಳೆದಿರುವ ಅನಾವಶ್ಯಕ ತ್ಯಾಜ್ಯ ಗಿಡಗಳನ್ನು ತೆರವುಗೊಳಿಸಿ, ಕೆರೆಗಳ ಸಂರಕ್ಷಣೆಗೆ ಗಮನಹರಿಸಬೇಕು. ಶುದ್ಧ ಕುಡಿಯುವ ನೀರಿನ ಮಹತ್ವದ ಬಗ್ಗೆ ತಿಳಿಸಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ವಿಶೇಷವಾಗಿ ಸ್ವಚ್ಛತೆ ಕಾಪಾಡಬೇಕು. ನೀರಿನ ತೊಂಬೆ, ಕೊಳವೆ ಬಾವಿಗಳ ಸುತ್ತಲೂ ಕಲುಷಿತ ನೀರು ತ್ಯಾಜ್ಯ ಇರದಂತೆ ಟ್ಯಾಂಕ್‌ ಕ್ಲೋರಿಷನ್‌ ಮಾಡಬೇಕು. 15 ದಿನಗಳಿಗೊಮ್ಮೆ ಟ್ಯಾಂಕ್‌ನ್ನು ಬ್ಲಿಚಿಂಗ್‌ ಪೌಡರ್‌ಗಳಿಂದ ಸ್ವಚ್ಛತೆ ಕಾಪಾಡಬೇಕು. ನೀರಿನ ಕುರಿತು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು. ಪಂಚಾಯ್ತಿ ಅಧಿಕಾರಿಗಳು ಖುದ್ದಾಗಿ ಗ್ರಾಮದ ಪ್ರತಿ ಬಡಾವಣೆಗಳಿಗೆ ಸಂಚರಿಸಿ ನೀರಿನ ಸರಬರಾಜು ಪೈಪ್‌ ಲೈನ್‌ ಸೋರಿಕೆ ಆಗಿದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂದು ಮುಂಜಾಗ್ರತೆ ವಹಿಸಬೇಕಾಗಿದೆ ಎಂಬುದು ಜನರ ಒತ್ತಾಯವಾಗಿದೆ.

ಬೇಸಿಗೆ ಕಾಲ ಆರಂಭವಾಗಿದೆ. ತಾಲೂಕಿನ ಕೆಲವು ಹಳ್ಳಿಗಳಲ್ಲಿ ನೀರಿನ ಜ್ವಲಂತ ಸಮಸ್ಯೆಗಳಿವೆ. ಈಗ ಕೆಲ ಹಳ್ಳಿಗಳಲ್ಲಿ ಬೊರ್‌ವೆಲ್‌ ಕೊರೆಸುತ್ತಿದ್ದಾರೆ. ಇದು ಚುರುಕಾಗಿ ಕೆಲಸವಾಗಬೇಕು. ಯಾವುದೇ ಅನಾಹುತ ಆಗದಂತೆ ಮುಂಜಾಗ್ರತೆ ವಹಿಸಬೇಕು ಅಂತ ಗುರುಮಠಕಲ್ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ನಾಗೇಶ ಗದ್ದಿಗಿ ತಿಳಿಸಿದ್ದಾರೆ. 

ಯಾದಗಿರಿ: ಕುಡಿಯುವ ನೀರಿನಲ್ಲಿ ಮಲ ಮಿಶ್ರಣಗೊಂಡಿದ್ದೇ ಮೂವರ ಸಾವಿಗೆ ಕಾರಣ

ಚಂಡರಕಿ ಗ್ರಾಮದಲ್ಲಿ ಜೆಜೆಎಂ ಅಡಿಯಲ್ಲಿ ನೀರಿನ ನಳ ನಮ್ಮ ಮನೆ ಮುಂದೆ ಅಳವಡಿಸಿದ್ದಾರೆ. ಕಳೆದ 2 ತಿಂಗಳಿಂದ ನಳದಲ್ಲಿ ನೀರು ಬರುತ್ತಿಲ್ಲ. ನೀರಿಗಾಗಿ ಪರದಾಡುವಂತಾಗಿದೆ. ಸಮಸ್ಯೆ ಮನಗಂಡು ಅಧಿಕಾರಿಗಳು ಕ್ರಮವಹಿಸಲು ಮುಂದಾಗಬೇಕು ಅಂತ ಚಂಡರಕಿ ಗ್ರಾಮಸ್ಥ ರಾಮುಲು ಹೇಳಿದ್ದಾರೆ. 

ಪ್ರತಿ ಪಂಚಾಯ್ತಿಗಳ ಪಿಡಿಓಗಳಿಗೆ ಸೂಚಿಸಿದ್ದೇನೆ. 2 ದಿನಕ್ಕೊಮ್ಮ ಕ್ಲೋರೈಡ್‌ ಮಾಡಿಸಬೇಕು. 15 ದಿನಕ್ಕೊಮ್ಮೆ ಬ್ಲಿಚಿಂಗ್‌ ಮಾಡಿಸಬೇಕು. ಇದರ ಜಿಪಿಎಸ್‌ ಟ್ಯಾಗ್‌ ಇಟ್ಟುಕೊಳ್ಳಬೇಕು ಹಾಗೂ ನೀರಿನ ಪೈಪ್‌ಲೈನ್‌ ಸೋರಿಕೆ ಪರಿಶೀಲಿಸಲು ಹೇಳಿದ್ದೇನೆ. ಯಾವುದೆ ರೀತಿ ಅನಾಹುತ ಆಗದಂತೆ ಕಟ್ಟೆಚ್ಚರ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಗುರುಮಠಕಲ್‌ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಸ್‌. ಖಾದ್ರೋಳಿ ಹೇಳಿದ್ದಾರೆ. 

click me!