ಮಂಗನ ಕಾಯಿಲೆ ಲಸಿಕೆಯಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ. ಇದರ ಬಗ್ಗೆ ತಪ್ಪು ಕಲ್ಪನೆ ಬೇಡ. ಆದ್ದರಿಂದ ತಪ್ಪದೇ ಇಂಜೆಕ್ಷನ್ ಹಾಕಿಸಿಕೊಳ್ಳಿ ಎಂದು ಶಾಸಕ ಹಾಲಪ್ಪ ಕರೆ ನೀಡಿದ್ದಾರೆ.
ಸಾಗರ [ಜ.18]: ಮಂಗನ ಕಾಯಿಲೆಯ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಪಾಯವಿಲ್ಲ. ಈ ಬಗ್ಗೆ ಜನರಲ್ಲಿ ತಪ್ಪುಕಲ್ಪನೆ ಬೇಡ ಎಂದು ಶಾಸಕ ಎಚ್.ಹಾಲಪ್ಪ ಹೇಳಿದರು.
ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗನ ಕಾಯಿಲೆ ತಡೆಗಟ್ಟುವ ಸಂಬಂಧ ಆರೋಗ್ಯ ಇಲಾಖೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ ಕೆಲವು ಭಾಗಗಳಲ್ಲಿ ಮಕ್ಕಳು ಹಾಗೂ ವಯೋವೃದ್ಧರು ಅನಗತ್ಯವಾಗಿ ಭಯಭೀತರಾಗಿ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಮಾಹಿತಿ ಇದೆ. ಜನರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಲಸಿಕೆ ತೆಗೆದುಕೊಳ್ಳದ ಹೂವಮ್ಮ ಎಂಬುವವರು ಕಳೆದ ವಾರ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ತುಮರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜನರಿಗೆ ನಂಬಿಕೆ ಬರಲು ಸ್ವತಃ ನಾನೇ ಲಸಿಕೆ ಹಾಕಿಸಿಕೊಂಡಿದ್ದೇನೆ. ಜೊತೆಗೆ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮಂಗನ ಕಾಯಿಲೆಗೆ ಮದ್ದು ಕಂಡುಹಿಡಿದ ಮಲೆನಾಡ ಹುಡುಗ..ಸಂಪೂರ್ಣ ಉಚಿತ.
ಮುಂಜಾಗೃತಾ ಕ್ರಮವಾಗಿ ತುಮರಿ, ಅರಲಗೋಡು, ಕಾರ್ಗಲ್‌ನಲ್ಲಿ ವೆಂಟಿಲೇಟರ್ ಒಳಗೊಂಡ ಸುಸಜ್ಜಿತ ಆಂಬ್ಯುಲೆನ್ಸ್ ಇರಿಸಲಾಗಿದೆ. ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೆಎಫ್‌ಡಿ ಘಟಕ ತೆರೆದಿದ್ದು, ಇಲ್ಲಿಯೂ ಸಹ ಎರಡು ಆಂಬ್ಯುಲೆನ್ಸ್ ಇರಿಸಲಾಗಿದೆ ಎಂದ ಶಾಸಕರು, ಮಂಗನ ಕಾಯಿಲೆ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಹಣಕಾಸಿನ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ.ರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಸಾಗರ ನಗರ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಪ್ರಮುಖರಾದ ವಿ.ಮಹೇಶ್, ಬಿ.ಎಚ್.ಲಿಂಗರಾಜ್, ಗಿರೀಶ್ ಗೌಡ ಇನ್ನಿತರರು ಹಾಜರಿದ್ದರು.
ಜನರಿಗೆ ತಿಳಿವಳಿಕೆ (ಕೆಎಫ್‌ಡಿ ಲೋಗೋ ಬಳಸಿ)
1)ಕರೂರು ಮತ್ತು ಭಾರಂಗಿ ಹೋಬಳಿಯಲ್ಲಿ ಕೆಎಫ್‌ಡಿ ಜನಜಾಗೃತಿ ಆರಂಭಿಸಿದ್ದು, ಗ್ರಾಮಸ್ಥರು ಮನೆ ಸುತ್ತ ಫೈರ್‌ಬೆಲ್ಟ್ ಹಾಕಿಕೊಳ್ಳಬೇಕು.
2) ಬಯಲು ಶೌಚಕ್ಕೆ ಹೋದರೆ ಕೆಎಫ್‌ಡಿ ಪೀಡಿತ ಉಣುಗು ತಗಲುವ ಸಾಧ್ಯತೆ ಇರುವುದರಿಂದ ಮನೆಯಲ್ಲಿರುವ ಶೌಚಾಲಯವನ್ನೇ ಉಪಯೋಗಿಸಬೇಕು.
3) ಗಾಳಿ, ನೀರು, ಕಾಯಿಲೆ ಪೀಡಿತ ವ್ಯಕ್ತಿಯೊಂದಿಗೆ ಮಾತನಾಡುವುದರಿಂದ ಕೆಎಫ್‌ಡಿ ಹರಡುವುದಿಲ್ಲ. ರೋಗಪೀಡಿತ ಉಣುಗು ಕಚ್ಚಿದರೆ ಮಾತ್ರ ಈ ಕಾಯಿಲೆ ಬರುತ್ತದೆ.