ಹುಬ್ಬಳ್ಳಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯು ಕಳೆದ 2 ವರ್ಷಗಳಲ್ಲಿ ಜಿಲ್ಲಾದ್ಯಂತ 49 ದಾಳಿ ನಡೆಸಿ ಮೂವರು ಬಾಲ, 36 ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಿಸಿದೆ. 39 ಪ್ರಕರಣ ದಾಖಲಿಸಿದೆ. ಈ ನಡುವೆ ನ್ಯಾಯಾಲಯ ತಪ್ಪಿತಸ್ಥರಿಗೆ .61 ಸಾವಿರ ದಂಡ ವಿಧಿಸಿದೆ.
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ಮಾ.16) : ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಕಷ್ಟುಕಾರ್ಯಕ್ರಮ ಜಾರಿ ಮಾಡುತ್ತಿವೆ. ಆದರೆ, ಪದ್ಧತಿ ಮಾತ್ರ ಕೊನೆಯಾಗಿಲ್ಲ. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯು ಕಳೆದ 2 ವರ್ಷಗಳಲ್ಲಿ ಜಿಲ್ಲಾದ್ಯಂತ 49 ದಾಳಿ ನಡೆಸಿ ಮೂವರು ಬಾಲ, 36 ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಿಸಿದೆ. 39 ಪ್ರಕರಣ ದಾಖಲಿಸಿದೆ. ಈ ನಡುವೆ ನ್ಯಾಯಾಲಯ ತಪ್ಪಿತಸ್ಥರಿಗೆ .61 ಸಾವಿರ ದಂಡ ವಿಧಿಸಿದೆ.
ಬಾಲ ಕಾರ್ಮಿಕ ಮುಕ್ತ ರಾಜ್ಯ (child labor free karnataka)ನಿರ್ಮಿಸಲು ರಾಜ್ಯ ಸರ್ಕಾರ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ(Child Labor Eradication Project) ಸೊಸೈಟಿ ಸ್ಥಾಪಿಸಿದೆ. ಅದರಡಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಸಮಿತಿಗೆ ನಿರ್ದೇಶಕರನ್ನು ನೇಮಿಸಲಾಗುತ್ತಿದೆ. ಬಾಲಕಾರ್ಮಿಕರ ಪದ್ಧತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಅಂತಹ ಪದ್ಧತಿಯಡಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಪತ್ತೆ ಮಾಡಿ ಅವರನ್ನು ರಕ್ಷಿಸಿ ಸೂಕ್ತ ಕ್ರಮಕೈಗೊಳ್ಳುವುದು ಇವರ ಹೊಣೆಯಾಗಿದೆ.
ಬಾಲ ಮತ್ತು ಕಿಶೋರ ಕಾರ್ಮಿಕರ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಧಾರವಾಡ ಡಿಸಿ
ಬಾಲ ಕಾರ್ಮಿಕ ಕಾಯ್ದೆ(Child labour act)ಯಡಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಬಾಲ ಕಾರ್ಮಿಕರು) ಮಕ್ಕಳಿಂದ ಯಾವ ಕೆಲಸವನ್ನೂ ಮಾಡಿಸುವಂತಿಲ್ಲ. 18 ವರ್ಷದೊಳಗಿನವರನ್ನು (ಕಿಶೋರ ಕಾರ್ಮಿಕರು) ಉದ್ಯಮ, ಕಾರ್ಖಾನೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಪಾಯಕಾರಿ ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ. ಅದನ್ನು ಮೀರಿದರೆ ಅದು ಶಿಕ್ಷಾರ್ಹ ಅಪರಾಧ. ಅಂತಹ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಅನಾಥರು, ಬಡತನ ಸೇರಿದಂತೆ ಹಲವು ಕಾರಣದಿಂದ ಮನೆ ಅಥವಾ ಊರು ಬಿಟ್ಟು ಬಂದು ಇಟ್ಟಂಗಿ ಭಟ್ಟಿ, ಗ್ಯಾರೇಜ್, ಹೋಟೆಲ್, ಬೇಕರಿ, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ವಿವಿಧೆಡೆ ಮಕ್ಕಳು ಕೆಲಸ ಮಾಡುತ್ತಾರೆ. ಅಂತಹವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರು ಕೆಲಸ ಮಾಡುವ ಸ್ಥಳಗಳ ಮೇಲೆ ದಾಳಿ ನಡೆಸಿ ರಕ್ಷಿಸಲಾಗುತ್ತಿದೆ. ದಾಳಿ ವೇಳೆ ರಕ್ಷಿಸುವ ಮಕ್ಕಳನ್ನು ಸಿಡಬ್ಲ್ಯೂಸಿ(ಮಕ್ಕಳ ಕಲ್ಯಾಣ ಸಮಿತಿ) ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಮಕ್ಕಳನ್ನು ಮತ್ತೆ ಮನೆಗೆ ಅಥವಾ ಶಾಲೆಗೆ, ವಸತಿ ನಿಲಯ, ಬಾಲಮಂದಿರ, ಮಹಿಳಾ ಅನುಪಾಲನಾ ಗೃಹ ಇವುಗಳಲ್ಲಿ ಎಲ್ಲಿ ಸೇರಿಸಬೇಕು ಎಂಬುದನ್ನು ನಿರ್ಣಯಿಸಲಾಗುತ್ತಿದೆ.
2021-22ನೇ ಸಾಲಿನಲ್ಲಿ 28 ದಾಳಿ ನಡೆಸಲಾಗಿದೆ. 2 ಬಾಲ ಹಾಗೂ 25 ಕಿಶೋರ ಕಾರ್ಮಿಕರ ಪ್ರಕರಣ ಪತ್ತೆ ಮಾಡಲಾಗಿದೆ. 6 ಪ್ರಕರಣ ಇತ್ಯರ್ಥಗೊಳಿಸಿರುವ ನ್ಯಾಯಾಲಯ ತಪ್ಪಿತಸ್ಥರಿಗೆ 61 ಸಾವಿರ ದಂಡ ವಿಧಿಸಿದೆ. 21 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 2022-23ನೇ ಸಾಲಿನಲ್ಲಿ 21 ದಾಳಿ ನಡೆಸಲಾಗಿದೆ. 1 ಬಾಲ ಹಾಗೂ 11 ಕಿಶೋರ ಕಾರ್ಮಿಕರ ಒಟ್ಟು 12 ಪ್ರಕರಣ ಪತ್ತೆ ಮಾಡಲಾಗಿದೆ. ಮೂರು ಪ್ರಕರಣ ಇತ್ಯರ್ಥಗೊಂಡಿವೆ. 9 ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ.
ಪೊಲೀಸ್, ಕಾರ್ಮಿಕ, ಕಂದಾಯ, ಪಂಚಾಯತ್‌ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕಾರ್ಖಾನೆ ಮತ್ತು ಬಾಯ್ಲರ್‌ಗಳ, ನಗರಾಭಿವೃದ್ಧಿ, ರೇಷ್ಮೆ, ಸಮಾಜ ಕಲ್ಯಾಣ, ಹಿಂದುಳಿದ ಕಲ್ಯಾಣ, ಕೃಷಿ ಸೇರಿದಂತೆ ಒಟ್ಟು 13 ಇಲಾಖೆಗಳ ಅಧಿಕಾರಿಗಳು ದಾಳಿ ವೇಳೆ ಪಾಲ್ಗೊಳ್ಳಬೇಕು. ಆದರೆ ಜಿಲ್ಲೆ ಕಾರ್ಮಿಕ ಹಾಗೂ ಪೊಲೀಸ್ ಹೊರತುಪಡಿಸಿ ಉಳಿದ ಇಲಾಖೆಗಳು ಇದರ ಕಡೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ ಎನ್ನುವ ಅಸಮಾಧಾನ ಜಿಲ್ಲೆಯಲ್ಲಿದೆ.
ರಾಯಚೂರಲ್ಲಿ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ..!
ಬಾಲಕಾರ್ಮಿಕ ಪದ್ಧತಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ನಿರಂತರ ದಾಳಿ ನಡೆಸಲಾಗುತ್ತಿದೆ. ಅಗತ್ಯವಿದ್ದಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಜತೆಗೆ ಜಿಲ್ಲೆಯ ಗ್ರಾಮೀಣ ಪ್ರದೇಶ ಸೇರಿದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಶ್ವೇತಾ ಸಂಗಮ, ಸಹಾಯಕ ಕಾರ್ಮಿಕ ಆಯುಕ್ತೆ
ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ದಾಳಿ ನಡೆಸಲಾಗುತ್ತಿದೆ. ಪತ್ತೆಯಾದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು. ಕೆಲ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲಾಗುತ್ತಿದೆ. ಸ್ಲಂಗಳು, ಎಸ್ಸಿ, ಎಸ್ಟಿಕಾಲನಿಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರ ಮೂಲಕ ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ.
ಬಸವರಾಜ ಪಂಚಾಕ್ಷರಿಮಠ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ
ಕಾಯ್ದೆ ಉಲ್ಲಂಘನೆ: ದಂಡ
ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ- 1986ರನ್ನು ಉಲ್ಲಂಘಿಸಿದ ಮಾಲೀಕರಿಗೆ 6 ತಿಂಗಳಿಂದ 2 ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ .20 ಸಾವಿರದಿಂದ .50 ಸಾವಿರ ದವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಅವಕಾಶವಿದೆ. ಪುನರಾವರ್ತಿತ ಅಪರಾಧಕ್ಕೆ 1-3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಪೋಷಕರೇ ಅಪರಾಧಿಗಳಾಗಿದ್ದಲ್ಲಿ ಪುನರಾವರ್ತಿ ಅಪರಾಧಕ್ಕೆ .10 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ. ತಪ್ಪಿತಸ್ಥ ಮಾಲೀಕ ತಾವು ಕೆಲಸಕ್ಕೆ ನಿಯೋಜಿಸಿಕೊಂಡಿದ್ದ ಪ್ರತಿ ಮಗುವಿಗೆ .20 ಸಾವಿರದಂತೆ ಮಕ್ಕಳ ಪುನರ್ವಸತಿಗಾಗಿ ರಚಿಸಿರುವ ಕಲ್ಯಾಣ ನಿಧಿಗೆ ದಂಡ ಪಾವತಿಸಬೇಕು ಎಂಬ ನಿಯಮವಿದೆ.