ಜಿಲ್ಲೆಯಲ್ಲಿ ರೇಬಿಸ್ ಕಾಯಿಲೆ ನಿಯಂತ್ರಣಕ್ಕೆ ಪೂರಕವಾಗಿ ಎ.ವಿ.ಆರ್ 3,696 ಮತ್ತು ಇಮ್ಯುನೊಗ್ಲಾಬ್ಯುಲಿನ್ 104 ಸ್ಟಾಕ್ ಲಸಿಕೆಗಳು ಲಭ್ಯವಿದ್ದು ಎಲ್ಲಾ ನಾಯಿಗಳಿಗೆ ಲಸಿಕಾ ಚುಚ್ಚು ಮದ್ದುಗಳನ್ನು ನೀಡಬೇಕು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಚಿಕ್ಕಬಳ್ಳಾಪುರ (ಸೆ.27) : ಜಿಲ್ಲೆಯಲ್ಲಿ ಕೇವಲ 8 ವರ್ಷದಲ್ಲಿ 65,032 ಮಂದಿಗೆ ನಾಯಿ ಕಡಿತ ಪ್ರಕರಣಗಳು ದಾಖಲಾದರೆ, 2016 ರಿಂದ 2022 ರವರೆಗೆ ರೇಬೀಸ್ ರೋಗಕ್ಕೆ ತುತ್ತಾಗಿ 8 ಮಂದಿ ಮೃತಪಟ್ಟಿದ್ದಾರೆ. 2015 ರಿಂದ 2019 ರವರೆಗೆ ಜಿಲ್ಲೆಯಲ್ಲಿ ನಾಯಿಕಡಿತದ ಪ್ರಕರಣಗಳು ಏರುಗತಿಯಲ್ಲಿದ್ದರೆ 2019 ರ ಕೋವಿಡ್ ಸಂಕಷ್ಟದ ವೇಳೆ ಬರೋಬ್ಬರಿ 10,437 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
ಬೆಂಗ್ಳೂರಲ್ಲಿ ಬೀದಿ ನಾಯಿ ಕಾಟ: ನಿತ್ಯ 400 ಶ್ವಾನಗಳಿಗೆ ಸಂತಾನಹರಣ
ಹೌದು, ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ರೇಬಿಸ್ ಕುರಿತ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳ ಕುರಿತು ಬಿಚ್ಚಿಟ್ಟಮಾಹಿತಿ ಇದು.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು
ಜಿಲ್ಲೆಯಲ್ಲಿ 2015 ರಿಂದ 2022ರ ಸೆಪ್ಪೆಂಬರ್ ಇಲ್ಲಿವರೆಗೂ ಜಿಲ್ಲಾದ್ಯಂತ ದಾಖಲಾಗಿರುವ ನಾಯಿ ಕಡಿತದ ಪ್ರಕರಣಗಳ ಪೈಕಿ ಅತಿ ಹೆಚ್ಚು ಗ್ರಾಮೀಣ ಭಾಗದಲ್ಲಿ ದಾಖಲಾಗಿದೆ. ಜಿಲ್ಲೆಯಲ್ಲಿ ದಾಖಲಾಗಿರುವ ಒಟ್ಟು 65,032 ಪ್ರಕರಣಗಳಲ್ಲಿ 2015 ರಲ್ಲಿ 9,637, 2016 ಟ್ಟು 10,375 ಪ್ರಕರಣ, 2017 ರಲ್ಲಿ 10,575, 2018ರಲ್ಲಿ 10,984 ಪ್ರಕರಣ, 2019 ರಲ್ಲಿ ಕೋವಿಡ್ ವೇಳೆ ಅತಿ ಹೆಚ್ಚು 10,437 ಪ್ರಕರಣ, 2020 ರಲ್ಲಿ 4,844 ಪ್ರಕರಣಗಳು ಹಾಗೂ 2021ನೇ ಸಾಲಿನಲ್ಲಿ 4,730 ಪ್ರಕರಣ ಮತ್ತು 2022 ರ ಸೆಪ್ಪೆಂಬರ್‌ನ ಇಲ್ಲಿಯವರೆಗೂ ಜಿಲ್ಲಾದ್ಯಂತ 3,450 ನಾಯಿಕಡಿತ ಪ್ರಕರಣಗಳು ದಾಖಲಾಗಿವೆಯೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಂತಾನ ಹರಣ ಚಿಕಿತ್ಸೆಗೆ ಸೂಚನೆ
ಜಿಲ್ಲೆಯಲ್ಲಿ ರೇಬಿಸ್ ಕಾಯಿಲೆ ನಿಯಂತ್ರಣಕ್ಕೆ ಪೂರಕವಾಗಿ ಎ.ವಿ.ಆರ್ 3,696 ಮತ್ತು ಇಮ್ಯುನೊಗ್ಲಾಬ್ಯುಲಿನ್ 104 ಸ್ಟಾಕ್ ಲಸಿಕೆಗಳು ಲಭ್ಯವಿದ್ದು ಎಲ್ಲಾ ನಾಯಿಗಳಿಗೆ ಲಸಿಕಾ ಚುಚ್ಚು ಮದ್ದುಗಳನ್ನು ನೀಡಬೇಕು. ಗ್ರಾಮ, ನಗರಗಳ ಸ್ಥಳೀಯ ಆಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕು. ಸಾಕು ಪ್ರಾಣಿಗಳನ್ನು ಸಾಕುವ ಕುಟುಂಬದವರೆಗೆ ರೇಬಿಸ್ ರೋಗದ ಬಗ್ಗೆ ಅರಿವು ಮೂಡಿಸಲು ಕ್ರಮವಹಿಸುವುದು ಅತ್ಯಗತ್ಯ ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಿಯಮ ತಿದ್ದುಪಡಿಗೆ ಪಾಲಿಕೆ ಪತ್ರ
ಅಲ್ಲದೇ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಬೇಕು. ಅದಕ್ಕೆ ಪೂರಕವಾಗಿ ಮಾಂಸ ಮಾರಾಟ ಅಂಗಡಿಗಳಲ್ಲಿ ಹಾಗೂ ಕೋಳಿಫಾರಂಗಳಲ್ಲಿನ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಗರಾಡಳಿತ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ….ಎಸ….ಮಹೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಯೆಲ್ಲಾ ರಮೇಶ್ ಬಾಬು, ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ರವಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ರೇಬಿಸ್ ರೋಗವು ವೈರಾಣುವಿನಿಂದ ಹರಡುವ ಸೊಂಕು ರೋಗವಾಗಿದ್ದು, ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಮಾರಣಾಂತಿಕ ಪ್ರಾಣಿಜನ್ಯ ರೋಗವಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿ ನಾಯಿಗಳಿಂದ ರೋಗ ಹರಡುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಎನ್.ಎಂ.ನಾಗರಾಜ್, ಜಿಲ್ಲಾಧಿಕಾರಿ.