ಕರಾವಳಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕಡಲಿನ ಆರ್ಭಟ , ಕಡಲು ಕೊರೆತಕ್ಕೆ ಬೇಕಾಗಿರುವುದು ತಾತ್ಕಾಲಿಕವಲ್ಲ ಶಾಶ್ವತ ಪರಿಹಾರ.
ವರದಿ: ಶಶಿಧರ ಮಾಸ್ತಿ ಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಹಿಂದಿನ ಕೆಲವು ದಿನಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆಯಾದರೂ, ಕಡಲಿನ ಆರ್ಭಟ ಮಾತ್ರ ಹೆಚ್ಚುತ್ತಿದೆ. ಅಲೆಗಳ ತೀವ್ರತೆ ಹೆಚ್ಚಿದಂತೆ ಕಡಲು ಕೊರೆತವೂ ಜೋರಾಗಿದೆ. ಉಡುಪಿ ಜಿಲ್ಲೆಯ ಅತೀದೊಡ್ಡ ಸಮಸ್ಯೆಯೇ ಕಡಲು ಕೊರೆತ. ಕಡಲಿನಲ್ಲಿ ತೂಫಾನ್ ಎದ್ದಾಗ, ವಿಪರೀತ ಗಾಳಿ ಬೀಸುವುದರಿಂದ ಅಲೆಗಳು ತೀರ ಪ್ರದೇಶಕ್ಕೆ ಹೊಡೆಯುತ್ತೆ. ಈ ವೇಳೆ ಕಡಲ ತೀರಕ್ಕೆ ಅಳವಡಿಸಿದ ಕಲ್ಲುಗಳು ಸಮುದ್ರ ಪಾಲಾಗುವ ಅಪಾಯ ಹೆಚ್ಚು. ಹಾಗಾಗಿ ಈ ಪ್ರದೇಶದಲ್ಲಿ ಕಡಲು ಕೊರೆತವೂ ಹೆಚ್ಚು. ಇದೊಂದು ಅನಿರೀಕ್ಷಿತ ಅನಾಹುತವಾಗಿದ್ದು ಕಡಲ ತೀರದ ಮನೆಗಳಿಗೆ ಅಪಾಯ ಕಟ್ಟಿಟ್ಟಬುತ್ತಿ! ಈಗಂತೂ ಸಮುದ್ರ ಪ್ರಕ್ಯುಬ್ಧಗೊಂಡು ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಜೂನ್, ಜುಲೈ ತಿಂಗಳ ಮಳೆಗೆ ಜಿಲ್ಲೆಯಲ್ಲಿ 1,840 ಮೀಟರ್ ಉದ್ದದಷ್ಟು ಕಡಕ್ಕೊಂತ ಸಂಭವಿಸಿರುವುದು ಆತಂಕಕಾರಿಯಾಗಿದೆ.
ಜಿಲ್ಲೆಯ ಕಡಲುಕೊರೆತ ಪೀಡಿತ ಪ್ರದೇಶಗಳು: ಬೈಂದೂರು ತಾಲೂಕಿನ ಮರವಂತೆ ಗ್ರಾಮದ ನಾಗಬನ ಬಳಿ 350 ಮೀ., ಕಿರಿಮಂಜೇಶ್ವರ ಗ್ರಾಮದ ಆದ್ರಗೋಳಿ ಸಮೀಪ 200 ಮೀ, ಕುಂದಾಪುರದ ಗುಜ್ಜಾಡಿ ಹೊಸಾಡು ಗ್ರಾಮದ ಕಂಚುಗೋಡಿನಲ್ಲಿ 250 ಮೀ., ಕಾಪು ತಾಲೂಕಿನ ಮುಳೂರಿನಲ್ಲಿ 200 ಮೀ., ಪಡುಬಿದ್ರಿಯ ನಡಿಪಟ್ಟದಲ್ಲಿ 270 ಮೀ., ಕೈಪಂಜಾಲುವಿನಲ್ಲಿ 240 ಮೀ., ಬ್ರಹಾವರ ಕೋಟ ಪಡುಕರೆಯಲ್ಲಿ 130 ಮೀ ಕಡಲು ಕೊರೆತ ಉಂಟಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕುತ್ಪಾಡಿ ಕಡಲ ತೀರದಲ್ಲಿ 200 ಮೀ.ನಷ್ಟು ಕಡಲು ಕೊರೆತ ಸಂಭವಿಸಿದೆ. ಪರಿಣಾಮ ಸಮುದ್ರ ತೀರದಲ್ಲಿದ್ದ ಬಹುತೇಕ ತೆಂಗಿನ ಮರಗಳು ಧರೆಗೆ ಉರುಳಿವೆ. ರಸ್ತೆ ಹಾಗೂ ಮೀನುಗಾರಿಕೆ ದೋಣಿಗಳಿಗೆ ಹಾನಿಯಾಗಿವೆ.
ಮಳೆ, ಇಳಿಯದ ನೆರೆ - ಉಕ್ಕಿ ಹರಿಯುತ್ತಿರುವ ನದಿಗಳ ಡ್ಯಾಂಗಳಿಂದ ಅಪಾರ ನೀರು
ತುರ್ತು ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ ಜಿಲ್ಲಾಡಳಿತ: ಜಿಲ್ಲೆಯಲ್ಲಿ ಕಡಲೊರೆತದಿಂದ ಆಗಿರುವ ಹಾನಿಗೆ ತುರ್ತು ಕಾಮಗಾರಿ ಮೂಲಕ ಸರಿಪಡಿಸಲು ಸರಕಾರಕ್ಕೆ 13.82 ಕೋ. ರೂ., ಅಂದಾಜು ಪ್ರಸ್ತಾವನೆ ಸಲ್ಲಿಸ ಲಾಗಿದೆ. ಬೈಂದೂರಿನ ಮರವಂತೆ ನಾಗಬನದ ಬಳಿ ಕಡಲ ತೀರದಲ್ಲಿ 2.63 ಕೋ. ರೂ., ಗುಜ್ಜಾಡಿ ಹೊಸಾಡು ಕಂಚುಗೋಡು ಬಳಿ 1.88 ಕೋ.ರೂ ಮೂಳೂರು 1.50 ಕೋ. ರೂ, ನಡಿಪ್ಪಟ್ಟ 2.03 ಕೋ, ರೂ., ಕೈಪುಂಜಾಲು 1.80 ಕೋ. ರೂ., ಕೋಟ ಪಡುಕರೆ 98 ಲಕ್ಷ ರೂ., ಕುತ್ಪಾಡಿ ಪಡುಕರೆಯಲ್ಲಿ 1.50 ಕೋ.ರೂ. ಅಗತ್ಯವಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
ದೀರ್ಘಕಾಲದ ಕಾಮಗಾರಿಗೆ ಸುಮಾರು 20 ಕೋ.ರೂ. ಅವಶ್ಯವಿದೆ. ಎಂದು ಉಲ್ಲೇಖಿಸಿದೆ. ಮರವಂತೆಯ ನಾಗಬನ ಬಳಿ ಪ್ರತಿಬಂಧಕ ಗೋಡೆ ನಿರ್ಮಿಸಲು 3.85 ಕೋ.ರೂ., ಕಂಚುಗೋಡಿಗೆ 2.75 ಕೋ.ರೂ., ಆದ್ರಗೋಳಿಗೆ 2.20 ಕೋ.ರೂ., ಮೂಳೂರಿಗೆ 2.20 ಕೋ.ರೂ., ನಡಿಪಟ್ಟಕ್ಕೆ 2.97 ಕೋ.ರೂ., ಕೈಪುಂಜಾಲುಗೆ 2.64 ಕೋ.ರೂ., ಕೋಟ ಪಡುಕರೆಗೆ 1.43 ಕೋ.ರೂ. ಗೆ ಬೇಡಿಕೇರಿಸಲಾಗಿದೆ.
ಸಿಂಗಟಾಲೂರು ಬ್ಯಾರೇಜಿಂದ 89,000 ಕ್ಯುಸೆಕ್ ನೀರು ಬಿಡುಗಡೆ: ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರು
ಜಿಲ್ಲೆಗೆ ಮುಖ್ಯಮಂತ್ರಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಕಡಲೊರೆತಕ್ಕೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆಗಿರುವ ನಷ್ಟದ ಬಗ್ಗೆಯೂ ಮುಖ್ಯಮಂತ್ರಿಯವರಿಗೆ ಮಾಹಿತಿ ಒದಗಿಸಲಾಗಿದೆ. ಮಳೆಗಾಲ ಆರಂಭವಾದ ಬಳಿಕ ನಡೆಸುವ ತಾತ್ಕಾಲಿಕ ಕಾಮಗಾರಿಯಿಂದ ಹೆಚ್ಚೇನೂ ಪ್ರಯೋಜನವಾಗುವುದಿಲ್ಲ .ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕು.ಪ್ರತೀ ವರ್ಷ ಮಳೆಗಾಲದಲ್ಲಿ ಕಡಲೊರೆತಕ್ಕೆ ತಡೆ ಒಡ್ಡಲು ಕಲ್ಲು ಹಾಕಲಾಗುತ್ತದೆ. ಇದರ ಬದಲಾಗಿ ಮಳೆಗಾಲಕ್ಕೂ ಮೊದಲೇ ಕಡಲೊರೆತ ಆಗಬಲ್ಲ ಪ್ರದೇಶಗಳನ್ನು ಗುರುತಿಸಿ, ಅಲ್ಲಿಗೆ ವೈಜ್ಞಾನಿಕ ವಿಧಾನದ ಮೂಲಕ ಕಲ್ಲು ಹಾಕುವ ಪ್ರಕ್ರಿಯೆ ಶುರುವಾಗಬೇಕು. ಜನಪ್ರತಿನಿಧಿಗಳ ಒತ್ತಡಕ್ಕೆ ತಾತ್ಕಾಲಿಕವಾಗಿ ಕಲ್ಲು ಹಾಕುವುದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಇರುವುದಿಲ್ಲ ಹೀಗಾಗಿ ಕಡಲ ತೀರದಲ್ಲಿ ವಾಸವಾಗಿ ರುವ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸ ಬೇಕಾದರೆ ವೈಜ್ಞಾನಿಕ ಕ್ರಮಗಳ ಮೂಲಕ ಕಾಮಗಾರಿ ನಡೆಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.