ಜಿಲ್ಲಾದ್ಯಂತ ನವರಾತ್ರಿ ಸಂಭ್ರಮ| ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ| ಹಾವೇರಿಯ ನವದುರ್ಗಾ ದೇವಸ್ಥಾನದಲ್ಲಿ ದಸರಾ ವೈಭವ| ವಿಶೇಷ ದೀಪಾಲಂಕಾರಗಳಿಂದ ದೇವಸ್ಥಾನಗಳು ಗಮನ ಸೆಳೆಯುತ್ತಿದೆ| ನವರಾತ್ರಿ ದಿನಗಳಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು| 9 ದಿನಗಳವರೆಗೆ ಒಂದೊಂದು ದಿನ ಒಂದೊಂದು ದೇವತೆಗೆ ವಿಶೇಷ ಪೂಜೆ|
ಹಾವೇರಿ(ಸೆ.30): ಜಿಲ್ಲೆಯ ದೇವಿ ದೇವಸ್ಥಾನಗಳಲ್ಲಿ ಭಾನುವಾರದಿಂದ ನವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ನಗರದ ರೈಲ್ವೆ ನಿಲ್ದಾಣದ ಸಮೀಪದ ನವದುರ್ಗೆಯರ ದೇವಸ್ಧಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಸಾವಿರಾರು ಭಕ್ತರನ್ನು ಸೆಳೆಯುತ್ತಿದೆ.
ಹಕ್ಕಲು ಮರಿಯಮ್ಮ ದೇವಿ ಮತ್ತು ನವದುರ್ಗಾ ದೇವಸ್ಥಾನದಲ್ಲಿ ನವದುರ್ಗಾ ದೇವತೆಗಳ ದರ್ಶನ ಭಾಗ್ಯ ದೊರೆಯುತ್ತದೆ. ಅಲ್ಲದೇ ಒಟ್ಟು 37 ದೇವರ ವಿಗ್ರಹಗಳಿದ್ದು ದೇವತೆಗಳ ದರ್ಶನವೂ ಇಲ್ಲಿ ಸಾಧ್ಯವಿದೆ.
ಶ್ರೀಶೈಲಪುತ್ರಿ, ಶ್ರೀಬ್ರಹ್ಮಚಾರಿಣಿ, ಶ್ರೀಚಂದ್ರಘಂಟಾ, ಶ್ರೀಕೂಷ್ಮಾಂಡಾ, ಶ್ರೀಸ್ಕಂದಮಾತಾ, ಶ್ರೀಕಾತ್ಯಾಯಿನಿ, ಶ್ರೀಕಾಲರಾತ್ರಿ, ಶ್ರೀಮಹಾಗೌರಿ, ಶ್ರೀಸಿದ್ಧಿದಾತ್ರೀ ದೇವತೆಗಳನ್ನು ಮೂರು ಮೂರಂತೆ ಜೋಡಿಸಿ ಒಂದೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.
ನವರಾತ್ರಿ ದಿನಗಳಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
ನವರಾತ್ರಿ ದಿನಗಳಂದು ಇಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಭಾನುವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆಯುತ್ತಿದ್ದು, ಭಕ್ತರು ಬಂದು ದೇವಿಗೆ ಪೂಜೆ ನೆರವೇರಿಸುತ್ತಿದ್ದಾರೆ.
ಒಂದೊಂದು ದಿನ ಒಂದೊಂದು ದೇವತೆಗೆ ವಿಶೇಷ ಪೂಜೆ
ಒಂದೊಂದು ದಿನ ಒಂದೊಂದು ದೇವತೆಗೆ ವಿಶೇಷ ಪೂಜೆ, ಹೋಮ ನಡೆಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೇಯ ದಿನ ಚಂದ್ರಘಂಟಾ, ನಾಲ್ಕನೇಯ ದಿನ ಕೂಷ್ಮಾಂಡಾ, ಐದನೇಯ ದಿನ ಸ್ಕಂದಮಾತಾ, ಆರನೇಯ ದಿನ ಕಾತ್ಯಾಯನಿ, ಏಳನೇಯ ದಿನ ಕಾಲರಾತ್ರಿ, ಎಂಟನೇ ದಿನ ಮಹಾಗೌರಿ, ಒಂಬತ್ತನೆ ದಿನ ಸಿದ್ಧಿಧಾತ್ರಿ ದೇವತೆಯನ್ನು ಪೂಜಿಸಲಾಗುತ್ತದೆ.
ಪ್ರತಿದಿನ ವಿಶೇಷವಾಗಿ ಅಲಂಕರಿಸಿ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮುಂಜಾನೆ ವಿವಿಧ ಹೋಮ, ಹವನ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ನಡೆಸಿ ಸಂಜೆ ಕುಂಕುಮಾರ್ಚನೆ ಮತ್ತು ಮಂಗಳಾರತಿ ಮಾಡಲಾಗುತ್ತದೆ. ನವರಾತ್ರಿಯ ದಿನಗಳಂದು ದೇವಸ್ಥಾನ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತದೆ.
ನವಗ್ರಹ ವೃಕ್ಷ
ನವದುರ್ಗೆಯವರು ಮಧ್ಯೆ ಇದ್ದು ಸುತ್ತಲೂ ಈಶ್ವರ, ವಿಷ್ಣು, ಗಣಪತಿ ಹಾಗೂ ಸೂರ್ಯ ದೇವರ ಮೂರ್ತಿಗಳಿವೆ. ಇದರ ಜತೆಗೆ ಸನಾತನ ಹಿಂದೂ ಧರ್ಮದ ಅಷ್ಟದೇವತೆಗಳಾದ ಶ್ರೀಗಣಪತಿ, ಶ್ರೀಲಕ್ಷ್ಮೀ, ಶ್ರೀಶಿವ, ಶ್ರೀದುರ್ಗಾ, ಶ್ರೀದತ್ತಾತ್ರೇಯ, ಶ್ರೀಕೃಷ್ಣ, ಶ್ರೀರಾಮ, ಶ್ರೀಮಾರುತಿ, ಶ್ರೀಸಾಯಿಬಾಬಾ ವಿಗ್ರಹಗಳು ಸಹ ಇಲ್ಲಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೇವಸ್ಥಾನದ ಹೊರ ಆವರಣದಲ್ಲಿ ನವಗ್ರಹಗಳ ಮೂರ್ತಿಗಳ ಜತೆಗೆ ನವಗ್ರಹ ವೃಕ್ಷಗಳೂ ಇವೆ. ಗ್ರಹಗಳ ಸಂಕೇತವಾದ ಎಕ್ಕೆ (ಸೂರ್ಯ), ದರ್ಬೆ (ಕೇತು), ಬನ್ನಿ (ಶನಿ), ಕರಿಕೆ (ರಾಹು), ಅತ್ತಿವೃಕ್ಷ (ಶುಕ್ರ), ಉತ್ರಾಣಿ (ಬುಧ), ಮುತ್ತಲ (ಚಂದ್ರ), ತೆರೇದ (ಮಂಗಳ), ಅಶ್ವತ್ಥವೃಕ್ಷ (ಗುರು)ಗಳನ್ನು ಇಲ್ಲಿ ಬೆಳೆಸಲಾಗಿದೆ. ಬೃಹತ್ ನಾಗ ವಿಗ್ರಹವೂ ಇಲ್ಲಿದೆ.
ಶ್ರೀಮರಿಯಮ್ಮ, ಶ್ರೀಮಾಯಮ್ಮ, ಶ್ರೀಗಾಳೆಮ್ಮ, ಶ್ರೀಮುಕಮ್ಮ ಹಾಗೂ ಶ್ರೀಬಸವಣ್ಣ ಮೂರ್ತಿಗಳು ಈ ದೇವಸ್ಥಾನದ ಮೂಲ ದೇವತೆಗಳಾಗಿವೆ. ಈ ದೇಗುಲದಲ್ಲಿ ಬಲು ಅಪರೂಪದ ಚತುರ್ಮುಖ ಗಣೇಶನ ವಿಗ್ರಹವಿದ್ದು, ಇಂಥ ಮೂರ್ತಿ ಇರುವುದು ರಾಜ್ಯದಲ್ಲಿ ಇದು ಎರಡನೇಯದು ಎನ್ನಲಾಗಿದೆ. ಈ ವಿಶೇಷವಾದ ಒಂದು ಟನ್ ತೂಕದ ಅಮೃತಶಿಲೆಯಲ್ಲಿ ಕೆತ್ತಿಸಲಾಗಿದೆ. ಇದಲ್ಲದೇ ಜಿಲ್ಲೆಯ ಪ್ರಮುಖ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ನಿಮಿತ್ತ ವಿಶೇಷ ಪೂಜೆ ನಡೆಯುತ್ತಿದೆ. ವಿಶೇಷ ದೀಪಾಲಂಕಾರಗಳಿಂದ ದೇವಸ್ಥಾನಗಳು ಗಮನ ಸೆಳೆಯುತ್ತಿದೆ.