ವಿಜಯನಗರ: ಇನ್ಮುಂದೆ ಹರಪನಹಳ್ಳಿಯಲ್ಲೇ ಹಿಪ್ಪುನೇರಳೆ ಸಸಿ ಲಭ್ಯ..!

By Kannadaprabha NewsFirst Published Sep 25, 2023, 2:00 AM IST
Highlights

ಕೂಡ್ಲಿಗಿ, ಚಿತ್ರದುರ್ಗ, ಕೊಪ್ಪಳದಂಥ ಸುತ್ತಲಿನ ತಾಲೂಕು, ಜಿಲ್ಲೆಗಳಿಗೆ ಹೋಗಿ ರೈತರು ಸಸಿ ತರಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಹೆಚ್ಚಿನ ದರದ ಜತೆಗೆ ಪ್ರಯಾಣ ವೆಚ್ಚವು ರೈತರಿಗೆ ಭಾರವಾಗಿತ್ತು. ಇದನ್ನು ತಪ್ಪಿಸಲು ರೇಷ್ಮೆ ಇಲಾಖೆ ಹಾಗೂ ತಾಲೂಕಿನ ನರೇಗಾ ವಿಭಾಗ ಸ್ಥಳೀವಾಗಿಯೇ ರೇಷ್ಮೆ ನರ್ಸರಿ ಅಭಿವೃದ್ಧಿಪಡಿಸಿ ಪಕ್ಕದ ಜಿಲ್ಲೆ ಹಾಗೂ ತಾಲೂಕುಗಳಿಗೆ ರೈತ ಅಲೆದಾಟ ಮತ್ತು ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕಿದಂತೆ ಹಾಕಿದೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಸೆ.25): ರೇಷ್ಮೆ ಇಲಾಖೆ ಹಾಗೂ ತಾಪಂನ ನರೇಗಾ ವಿಭಾಗದ ನೆರವಿನಿಂದ ಕೂಲಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ರೇಷ್ಮೆ ನರ್ಸರಿ ಪ್ರಾರಂಭವಾಗಿದ್ದು, ಇದರಿಂದ ದೂರದ ಜಿಲ್ಲೆಗಳಿಗೆ ತೆರಳಿ ಹಿಪ್ಪುನೇರಳೆ ಸಸಿ ತರಬೇಕಾಗಿದ್ದ ತಾಪತ್ರಯ ರೇಷ್ಮೆ ಬೆಳೆಗಾರರಿಗೆ ತಪ್ಪಿದಂತಾಗಿದೆ. ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಪಂನ ಸಿಇಒ ಅವರೇ ಖುದ್ದು ಹಿಪ್ಪುನೇರಳೆ (ರೇಷ್ಮೆ) ಕಡ್ಡಿ ನಾಟಿ ಮಾಡಿದ್ದರು.

ಅದೇ ನರ್ಸರಿಯಲ್ಲಿ ಇದೀಗ ಸಸಿಗಳು ಉತ್ತಮವಾಗಿ ಚಿಗುರಿದ್ದು, ಒಂದೂವರೆ ತಿಂಗಳಿಂದ ಎರಡು ತಿಂಗಳೊಳಗೆ ರೈತರಿಗೆ ಮಾರಾಟಗೊಂಡಿವೆ ಎನ್ನುತ್ತಾರೆ ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ್.

ಉರ್ದು ಶಾಲೆಯಲ್ಲಿ ಗಣಪತಿ ಪೂಜೆ;ಭಾವೈಕ್ಯತೆ ಸಾರಿದ ಮುಸಲ್ಮಾನ ವಿದ್ಯಾರ್ಥಿಗಳು!

ನರ್ಸರಿ ಅಭಿವೃದ್ಧಿ:

ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ್ ಅವರು ಛಲ ಹಾಗೂ ಉತ್ಸಾಹದಿಂದ ಎನ್‌ಆರ್‌ಎಲ್‌ಎಂನಡಿ ಶ್ರೀ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ಮೂಲಕ ಒಂದು ಎಕರೆಯಲ್ಲಿ ರೇಷ್ಮೆ ನರ್ಸರಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಒಂದು ಎಕರೆಯಲ್ಲಿ ಬೆಳೆದ ಹಿಪ್ಪುನೇರಳೆ ಸಸಿಗಳನ್ನು ಬರೊಬ್ಬರಿ 50ರಿಂದ 60 ಎಕರೆಯಲ್ಲಿ ಬೆಳೆಸಬಹುದು.

ಸ್ವಸಹಾಯ ಸಂಘದ ಹೊಣೆ:

ಕೂಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದವರೇ ರೇಷ್ಮೆ ನರ್ಸರಿ ಅಭಿವೃದ್ಧಿಪಡಿಸಿದ್ದು, ಇದಕ್ಕೆ ನರೇಗಾ ಯೋಜನೆಯಡಿ ಕೂಲಿ ಮೊತ್ತವಾಗಿ ₹1.10 ಲಕ್ಷ ಹಾಗೂ ಸಾಮಗ್ರಿ ಮೊತ್ತ ₹15 ಸಾವಿರ ಸೇರಿ ಒಟ್ಟು ₹1.25 ಲಕ್ಷವನ್ನು ಸಂಘಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ಇದರಿಂದ ಸಂಘದಲ್ಲಿರುವ 12 ಮಹಿಳಾ ಸದಸ್ಯರು ಕೂಲಿ ಕೆಲಸ ನಿರ್ವಹಿಸಿ ರೇಷ್ಮೆ ಸಸಿ ಮಾರಿದ ಹಣವು ತಮಗೇ ಸೇರುವುದರಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಹಾಗೂ ಕಡಿಮೆ ದರದಲ್ಲಿ ರೈತರಿಗೆ ಸ್ಥಳೀಯವಾಗಿಯೇ ರೇಷ್ಮೆ ಸಸಿ ಲಭ್ಯವಾಗುತ್ತವೆ. ಚಿಕ್ಕಹಳ್ಳಿಯಲ್ಲಿ ಅಭಿವೃದ್ಧಿಪಡುಸುತ್ತಿರುವ ರೇಷ್ಮೆ ನರ್ಸರಿಯಲ್ಲಿ 2 ಲಕ್ಷ ಸಸಿಗಳನ್ನು ಬೆಳೆಸಲು ಕಡ್ಡಿ ನಾಟಿ ಮಾಡಲಾಗಿದೆ.

ಇನ್ನು ಕೂಡ್ಲಿಗಿ, ಚಿತ್ರದುರ್ಗ, ಕೊಪ್ಪಳದಂಥ ಸುತ್ತಲಿನ ತಾಲೂಕು, ಜಿಲ್ಲೆಗಳಿಗೆ ಹೋಗಿ ರೈತರು ಸಸಿ ತರಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಹೆಚ್ಚಿನ ದರದ ಜತೆಗೆ ಪ್ರಯಾಣ ವೆಚ್ಚವು ರೈತರಿಗೆ ಭಾರವಾಗಿತ್ತು. ಇದನ್ನು ತಪ್ಪಿಸಲು ರೇಷ್ಮೆ ಇಲಾಖೆ ಹಾಗೂ ತಾಲೂಕಿನ ನರೇಗಾ ವಿಭಾಗ ಸ್ಥಳೀವಾಗಿಯೇ ರೇಷ್ಮೆ ನರ್ಸರಿ ಅಭಿವೃದ್ಧಿಪಡಿಸಿ ಪಕ್ಕದ ಜಿಲ್ಲೆ ಹಾಗೂ ತಾಲೂಕುಗಳಿಗೆ ರೈತ ಅಲೆದಾಟ ಮತ್ತು ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕಿದಂತೆ ಹಾಕಿದೆ.
ನರೇಗಾದಡಿ ಬರೀ ಕೂಲಿ ಕೆಲಸ ಮಾತ್ರವಲ್ಲ. ಜತೆಗೆ ಜನ ಜೀವನದ ಆರ್ಥಿಕ ಅಭಿವೃದ್ಧಿ ಆಗುತ್ತವೆ. ಇದಕ್ಕೆ ಕೂಲಹಳ್ಳಿ ಗ್ರಾಪಂನ ಚಿಕ್ಕಹಳ್ಳಿಯ ರೇಷ್ಮೆ ನರ್ಸರಿಯೇ ಸಾಕ್ಷಿ ಎಂದು ಹರಪನಹಳ್ಳಿ ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ.) ಯು.ಎಚ್. ಸೋಮಶೇಖರ್ ತಿಳಿಸಿದ್ದಾರೆ.  

ಡಿಕೆಶಿ ಮುಖ್ಯಮಂತ್ರಿಯಾಗಲಿ ಎಂಬ ವಿಚಾರವೇ ಅಪ್ರಸ್ತುತ: ಉಗ್ರಪ್ಪ

ರೇಷ್ಮೆ ನರ್ಸರಿ ಜತೆಗೆ ರೇಷ್ಮೆ ಬೆಳೆಯಲು ಹೊಸ ರೈತರು ಹುಟ್ಟಿಕೊಳ್ಳುತ್ತಾರೆ. ಸರ್ಕಾರಕ್ಕೆ ಪರೋಕ್ಷವಾಗಿ ಆದಾಯ ಹೆಚ್ಚಾಗಲು ಕಾರಣವಾಗುತ್ತದೆ. ತಾಂತ್ರಿಕವಾಗಿ ನಮ್ಮ ಇಲಾಖೆಯಿಂದ ಅಗತ್ಯ ನೆರವು ಹಾಗೂ ಕಾಲಕಾಲಕ್ಕೆ ಸಲಹೆ ನೀಡಲಾಗುತ್ತಿದೆ. ಇದರ ಜತೆಗೆ ರೇಷ್ಮೆ ಸಸಿ ಮಾರಾಟಕ್ಕೆ ನಾವೇ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಹರಪನಹಳ್ಳಿ ರೇಷ್ಮೆ ಇಲಾಖೆ ರೇಷ್ಮೆ ನಿರೀಕ್ಷಕ ಕೆ. ನಾಗರಾಜ ಹೇಳಿದ್ದಾರೆ.  

2017ರಿಂದ ಸ್ವಸಹಾಯ ಸಂಘದಲ್ಲಿ ಇದ್ದೇನೆ. ನರೇಗಾದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರಿಗಳ ಸಲಹೆ ಹಾಗೂ ನಮ್ಮ ಜೀವನ ಸುಧಾರಣೆ ದೃಷ್ಟಿಯಿಂದ ರೇಷ್ಮೆ ನರ್ಸರಿಯನ್ನು ನಮ್ಮ ಸಂಘದಿಂದ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಶ್ರೀ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಹಾಗೂ ನರೇಗಾ ಕೂಲಿಕಾರ್ಮಿಕರು ದೀಪಾ ತಿಳಿಸಿದ್ದಾರೆ. 

click me!