ಹಾವೇರಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ‘ಅಪಸ್ವರ ಸಾಕು, ಒಗ್ಗೂಡಿ ನುಡಿ ತೇರೆಳೆಯಬೇಕು’

By Kannadaprabha News  |  First Published Feb 8, 2020, 11:07 AM IST

ಯಾಲಕ್ಕಿ ನಾಡು ಹಾವೇರಿಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಎಲ್ಲರಲ್ಲಿ ಸಂತಸ| ಸಮ್ಮೇಳನವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಬೇಕೋ ಅಥವಾ ಬೇರೆ ಕಡೆ ನಡೆಸಬೇಕೋ ಎಂಬುದರ ಕುರಿತು ಚರ್ಚಿಸಲಾಗುವುದು| ಈ ಸಾರಿ ಯಾವುದೇ ಕಾರಣಕ್ಕೂ ಗೊಂದಲಗಳಿಗೆ ಅವಕಾಶ ಕೊಡುವುದಿಲ್ಲ| ರಾಣಿಬೆನ್ನೂರಿನ ಸಾಹಿತಿಗಳು, ಕನ್ನಡಾಭಿಮಾನಿಗಳ ಮನವೊಲಿಸಿ ಎಲ್ಲರೂ ಸೇರಿಕೊಂಡು ಸಮ್ಮೇಳನ ನಡೆಸುತ್ತೇವೆ|


ನಾರಾಯಣ ಹೆಗಡೆ 

ಹಾವೇರಿ[ಫೆ.08]: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯದ ಅವಕಾಶ ಯಾಲಕ್ಕಿ ಕಂಪಿನ ಹಾವೇರಿಗೆ ಸಿಕ್ಕಿದ್ದು, ಜಿಲ್ಲೆಯ ಸಾಹಿತ್ಯಾಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಹಿಂದೆ ಆಗಿರುವ ಪ್ರಮಾದದಿಂದ ಪಾಠ ಕಲಿತು ಸಂಭ್ರಮದಿಂದ ನುಡಿ ತೇರನ್ನೆಳೆಯಲು ಜಿಲ್ಲೆಯ ಎಲ್ಲ ಕನ್ನಡದ ಮನಸ್ಸುಗಳು ಒಂದಾಗಬೇಕಿದೆ. 

Tap to resize

Latest Videos

ಕಲಬುರಗಿಯಲ್ಲಿ ನಡೆದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಅಂದರೆ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ನೀಡಿ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಘೋಷಣೆ ಮಾಡಿದ್ದಾರೆ. ಇದಾಗಿ, ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಿಂಚಿನಂತೆ ಹರಿದಾಡಿದೆ. ಸಮ್ಮೇಳನದ ಅವಕಾಶ ಸಿಕ್ಕಿರುವುದಕ್ಕೆ ಎಲ್ಲರಲ್ಲೂ ಸಂತಸ ಮನೆ ಮಾಡಿದೆ. ಜಿಲ್ಲೆಯಾಗಿ 23 ವರ್ಷಗಳ ಬಳಿಕ ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಯಾಲಕ್ಕಿ ಕಂಪಿನ ನಗರಕ್ಕೆ ಅಕ್ಷರ ಜಾತ್ರೆ ನಡೆಸುವ ಅವಕಾಶ ಸಿಕ್ಕಿದಂತಾಗಿದೆ.  81ನೇ ಸಾಹಿತ್ಯ ಸಮ್ಮೇಳನದ ಅವಕಾಶ ಸಿಕ್ಕರೂ ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರೂ 5 ವರ್ಷಗಳ ಬಳಿಕ ಮತ್ತೊಮ್ಮೆ ಅವಕಾಶ ಸಿಗುತ್ತಿರುವುದು ಎಲ್ಲರಲ್ಲಿ ಸಂತಸ ಮನೆಮಾಡಿದೆ. 

ಹಾವೇರಿ ನಗರದಲ್ಲಿ ಸಮ್ಮೇಳನ: 

2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಚರ್ಚಿಸಿ ಹಾವೇರಿಗೆ 81ನೇ ಸಮ್ಮೇಳನದ ಆತಿಥ್ಯ ನೀಡುವ ಕುರಿತು ಘೋಷಿಸಲಾಗಿತ್ತು. ಹಾವೇರಿ ಜಿಲ್ಲೆಯ ಎಲ್ಲಿ ಎಂಬುದನ್ನು ನಿರ್ದಿಷ್ಟವಾಗಿ ಹೇಳದ್ದರಿಂದ ಜಿಲ್ಲೆಯ ಕನ್ನಡದ ಮನಸ್ಸುಗಳ ನಡುವೆಯೇ ಬಿರುಕು ಏರ್ಪಟ್ಟಿತ್ತು. ಆದರೆ, ಈ ಬಾರಿ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ ಅವರು ಹೆಸರು ಘೋಷಿಸುವಾಗ ಉದ್ದೇಶಪೂರ್ವಕ ಹಾಗೂ ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಹಾವೇರಿ ನಗರದಲ್ಲಿ ಮುಂದಿನ ಸಮ್ಮೇಳನ ಎಂದು ಹೇಳುವ ಮೂಲಕ ಮುಂದಾಗುವ ಭಿನ್ನಾಭಿಪ್ರಾಯಗಳಿಗೆ ಈಗಲೇ ತೆರೆ ಎಳೆದಿದ್ದಾರೆ. ಸಂಭ್ರಮದಿಂದ ನುಡಿ ತೇರನ್ನೆಳೆಯುವ ಅದ್ಭುತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. 

ಕೈತಪ್ಪಿದ್ದ ಅವಕಾಶ: 

81 ನೇ ಅಖಿಲ ಭಾರತ ಸಮ್ಮೇಳನದ ಆತಿಥ್ಯ ಸಿಕ್ಕರೂ ಹಾವೇರಿ ಮತ್ತು ರಾಣಿಬೆನ್ನೂರು ಜನರ ನಡುವೆ ಸ್ಥಳಕ್ಕಾಗಿ ಹಗ್ಗಜಗ್ಗಾಟ ನಡೆಯುವಂತಾಗಿತ್ತು. ಬಳಿಕ ಎರಡೂ ಕಡೆಯವರು ತಮ್ಮಲ್ಲೇ ಸಮ್ಮೇಳನವಾಗ ಬೇಕು ಎಂಬ ಹಠಕ್ಕೆ ಬಿದ್ದರು. ಕಸಾಪ ಅಂದಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರೆ ಬಂದು ಸಭೆ ನಡೆಸಿ ಅಭಿಪ್ರಾಯ ಪಡೆದರು. ಆದರೆ, ಜಿಲ್ಲೆಯ ಜನರಲ್ಲೇ ಒಮ್ಮತ ಏರ್ಪಡಲಿಲ್ಲ. ಸಮ್ಮೇಳನ ಬೇರೆ ಜಿಲ್ಲೆಯ ಪಾಲಾ ದರೂ ಪರವಾಗಿಲ್ಲ, ಆದರೆ ನಮ್ಮಲ್ಲೇ ಆಗಬೇಕು ಎಂಬ ತೀರ್ಮಾನಕ್ಕೆ ಹಾವೇರಿ ಮತ್ತು ರಾಣಿಬೆನ್ನೂರು ಜನತೆ ಬಂದಿದ್ದರು. ಇದು ತೀವ್ರತರಕ್ಕೆ ಹೋಗಿ ಜಿಲ್ಲೆ ಸಾಹಿತ್ಯಿಕ ಮನಸ್ಸುಗಳೇ ಒಡೆಯುವಂಥ ಹಂತಕ್ಕೆ ತಲುಪಿತು. ಇದರಿಂದ ಆತಂಕಗೊಂಡ ಕಸಾಪ ಪದಾ ಧಿಕಾರಿಗಳು ಜಿಲ್ಲೆಗೆ ಕೊಟ್ಟ ಅವಕಾಶವನ್ನು ವಾಪಸ್ ಪಡೆದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಗೆ ಸಿಕ್ಕ ಸಮ್ಮೇಳನ ಶ್ರವಣಬೆಳಗೊಳದ ಪಾಲಾಯಿತು. ಒಮ್ಮೆ ಸಿಕ್ಕ ಅವಕಾಶ ಕೈಚೆಲ್ಲಿದ ತಪ್ಪಿಗಾಗಿ 5 ವರ್ಷ ಕಾಯುವಂತಾಯಿತು. ಈಗ ಮತ್ತೆ ಅವಕಾಶ ಸಿಕ್ಕಿದ್ದು, ಸಮ್ಮೇಳನದ ಯಶಸ್ಸಿಗೆ ಇಡಿ ಜಿಲ್ಲೆಯವರು ಒಂದಾಗಬೇಕಿದೆ. ಮಾದರಿ ರೀತಿಯಲ್ಲಿ ಸಮ್ಮೇಳನ ಮಾಡಿ ತೋರಿಸಬೇಕಿದೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಲಿಂಗಯ್ಯ ಅವರು ತಮ್ಮ ಅವಧಿಯಲ್ಲಿ ಸಮ್ಮೇಳನ ಮಾಡುವ ಭರವಸೆ ನೀಡಿಯೇ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಆದರೆ, ಅವಧಿ ಮುಗಿಯುತ್ತ ಬಂದರೂ ಸಮ್ಮೇಳನ ಮಾತ್ರ ಬರಲಿಲ್ಲ. ಈ ಸಲವಾದರೂ ನಮಗೆ ಅವಕಾಶ ನೀಡಲು ಸಹಕರಿಸುವಂತೆ ಎಲ್ಲ ಜಿಲ್ಲೆಗಳ ಕಸಾಪ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಅಪಸ್ವರ ಬೇಡ: 

ಹಿಂದಿನ ತಪ್ಪಿನಿಂದ ಈಗಾಗಲೇ ಬಹುತೇಕರು ಪಾಠ ಕಲಿತಿದ್ದಾರೆ. ಈ ಸಲ ಮತ್ತೆ ಅಪಸ್ವರ ಏಳದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗುವ ಕಾರ್ಯವನ್ನು ಕಸಾಪ ಪದಾಧಿ ಕಾರಿಗಳು ಮಾಡಬೇಕಿದೆ. ಜಿಲ್ಲೆಯ ಎಲ್ಲ ಶಾಸಕರು ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಒಮ್ಮತ ಹೊಂದಿದ್ದಾರೆ. ರಾಣಿಬೆನ್ನೂರಿನ ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿದರೆ ಉಳಿದೆಲ್ಲರೂ ಜಿಲ್ಲಾ ಕೇಂದ್ರದಲ್ಲಿ ಸಮ್ಮೇಳನ ನಡೆಯಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಎಲ್ಲ ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರೆಲ್ಲ ರನ್ನು ಒಟ್ಟಿಗೆ ಸೇರಿಸಿಕೊಂಡು ಸಮ್ಮೇಳನಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಬೇಕಿದೆ. 

ಸಿದ್ಧತೆ ಆರಂಭವಾಗಬೇಕು: 

ಅಕ್ಷರ ಜಾತ್ರೆಗೆ ನಾಡಿನೆಲ್ಲೆಡೆಯಿಂದ ಲಕ್ಷಾಂತರ ಜನರು ಬರುವುದರಿಂದ ಈಗಿನಿಂದಲೇ ಸಿದ್ಧತೆ ಆರಂಭಿಸುವುದು ಅಗತ್ಯ. ಜಿಲ್ಲಾ ಕೇಂದ್ರವಾದರೂ ಹೆಚ್ಚಿನ ಮೂಲಸೌಲಭ್ಯ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ವಸತಿ ಸೌಕರ್ಯ ಇಲ್ಲಿಲ್ಲ. ಪ್ರಧಾನ ವೇದಿಕೆ, ಸಮಾನಾಂತರ ವೇದಿಕೆಗಳನ್ನು ಸಮೀಪದಲ್ಲಿ ಮಾಡುವ ರೀತಿಯ ವ್ಯವಸ್ಥೆಯೂ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಮಾಮೂಲಿಯಾಗಿದೆ. ಅದಕ್ಕಾಗಿ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಸಭೆ ಕರೆದು ಎಲ್ಲರ ಸಲಹೆ ಪಡೆದು ಮುನ್ನಡೆಯಬೇಕಿದೆ.

86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆತಿಥ್ಯ ಹಾವೇರಿ ನಗರಕ್ಕೆ ಸಿಕ್ಕಿದ್ದು, ಜಿಲ್ಲೆಯ ಎಲ್ಲ ಸಾಹಿತ್ಯಾಸಕ್ತರನ್ನು, ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಸ್ತುವಾರಿ ಸಚಿವರು, ಶಾಸಕರ ಸಭೆ ನಡೆಸಿ ಮಾದರಿ ಹಾಗೂ ಅದ್ಧೂರಿಯಾಗಿ ನಡೆಸಲು ಕಟಿ ಬದ್ಧನಾಗಿದ್ದೇನೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನಡೆದ ಸಮ್ಮೇಳನದಲ್ಲಿ ಕಸಾಪ ಕೇಂದ್ರ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಹಾವೇರಿ ನಗರದಲ್ಲೇ ಸಮ್ಮೇಳನ ನಡೆಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ, ಇದಕ್ಕೆ ಸಹಕರಿಸಿದ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ, ಜಿಲ್ಲೆಯ ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ ಹಾಗೂ ಶಾಸಕರು ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಮ್ಮೇಳನವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಬೇಕೋ ಅಥವಾ ಬೇರೆ ಕಡೆ ನಡೆಸಬೇಕೋ ಎಂಬುದರ ಕುರಿತು ಚರ್ಚಿಸಲಾಗುವುದು. ಈ ಸಾರಿ ಯಾವುದೇ ಕಾರಣಕ್ಕೂ ಗೊಂದಲಗಳಿಗೆ ಅವಕಾಶ ಕೊಡುವುದಿಲ್ಲ, ರಾಣಿಬೆನ್ನೂರಿನ ಸಾಹಿತಿಗಳು, ಕನ್ನಡಾಭಿಮಾನಿಗಳ ಮನವೊಲಿಸಿ ಎಲ್ಲರೂ ಸೇರಿಕೊಂಡು ಸಮ್ಮೇಳನ ನಡೆಸುತ್ತೇವೆ ಎಂದರು.

ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್‌ ಕಾಲೇಜ್‌ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ವೈದ್ಯಕೀಯ ಕಾಲೇಜನ್ನು ಎಲ್ಲಿ ಆರಂಭಿಸಬೇಕು ಎಂಬುದರ ಕುರಿತು ಉಸ್ತುವಾರಿ ಸಚಿವರು ಸಭೆ ಕರೆದು ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ. ದೇವಗಿರಿ ಯಲ್ಲಾಪುರ ಬಳಿ ಜಾಗೆ ಹಂಚಿಕೆಯಾಗಿದ್ದು, ಅಲ್ಲೇ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ನೆಲೋಗಲ್‌ ಬಳಿ ಮಾಡಿದರೆ ಸೂಕ್ತ ಎಂಬುದು ಆ ಭಾಗದ ಜನರ ಹಾಗೂ ನನ್ನ ಅಭಿಪ್ರಾಯವಾಗಿದೆ. ಎಲ್ಲೇ ಸ್ಥಾಪನೆ ಮಾಡಿದರೂ ತಪ್ಪಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ಹಾವನೂರು-ಶಾಕಾರ ಬ್ರಿಡ್ಜ್‌, ಹೊಸರಿತ್ತಿ ಬಳಿ ಬ್ಯಾರೇಜ್‌ ನಿರ್ಮಾಣ ಅನುದಾನ ಸಿಗುವ ನಿರೀಕ್ಷೆ ಇದ್ದು, ಕಳ್ಳಿಹಾಳ ಬಳಿ ವಸತಿಯುತ ಪದವಿ ಕಾಲೇಜು ನಿರ್ಮಿಸಲಾಗುವುದು ಎಂದರು.

ಕುಮಟಳ್ಳಿಗೂ ಸಚಿವ ಸ್ಥಾನ ಸಿಗಬೇಕಿತ್ತು

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದವರಲ್ಲಿ 10 ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು ಸ್ವಾಗತಾರ್ಹ. ಮಹೇಶ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ಸಿಗಬೇಕಿತ್ತು ಎಂದು ಶಾಸಕ ನೆಹರು ಓಲೇಕಾರ ಅಭಿಪ್ರಾಯಪಟ್ಟರು.

ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ ಗೌರವ ಹೆಚ್ಚುತ್ತಿತ್ತು. ಅವರನ್ನು ಯಾಕೆ ಬಿಟ್ಟಿದ್ದಾರೆ ಎಂಬುದು ಸಿಎಂಗೆ ಗೊತ್ತು. ರಾಜೀನಾಮೆ ಕೊಟ್ಟವರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಅದನ್ನು ಕೊಡುವುದು ಸಿಎಂಗೆ ಬಿಟ್ಟವಿಚಾರ. ನನಗೆ ಮುಂದೆ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದಾರೆ. ಮುಂದೆ ಸಚಿವ ಸ್ಥಾನ ಕೊಟ್ಟರೆ ಸಮಸ್ಯೆಯಿಲ್ಲ. ಅದಿಲ್ಲದಿದ್ದರೆ ನಿಗಮ ಮಂಡಳಿ ಕೊಡುವುದು ಸಿಎಂ ಅವರ ವಿಚಾರಕ್ಕೆ ಬಿಟ್ಟಿದ್ದು ಎಂದರು.

click me!