ತಮ್ಮ ಏಳಿಗೆ ಸಹಿಸದ ಮಾಜಿ ಶಾಸಕರೋರ್ವರು ತಮ್ಮನ್ನೂ ಹಾಗೂ ತಮ್ಮ ಮಗನನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ ಎಂದು ಹಾಲಿ ಶಾಸಕರೋರ್ವರು ಗಂಭೀರ ಆರೋಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಒಂದೆರಡು ತಿಂಗಳಿನಿಂದಲೂ ಹಲ್ಲೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ತುರುವೇಕೆರೆ (ಏ.15): ತಮ್ಮ ರಾಜಕೀಯ ಏಳಿಗೆ ಸಹಿಸದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಮ್ಮ ಹಾಗೂ ತಮ್ಮ ಮಗನನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ ಎಂದು ಶಾಸಕ ಮಸಾಲಾ ಜಯರಾಮ್ ಬಹಳ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕರ ಫಾರಂ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಕೃಷ್ಣಪ್ಪ ಒಂದೆರಡು ತಿಂಗಳಿನಿಂದ ಅವರ ಬೆಂಬಲಿಗರ ಮೂಲಕ ತಮ್ಮ ಬೆಂಬಲಿಗರ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ. ಈಗ ತಮ್ಮ ಮಗ ತೇಜುವಿನ ಮೇಲೆ ಉದ್ದೇಶಪೂರ್ವಕವಾಗಿ ತಮ್ಮ ಬೆಂಬಲಿಗರ ಮೂಲಕ ಹತ್ಯೆಗೆ ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಈ ದೃಷ್ಕೃತ್ಯದ ವಿರುದ್ಧ ಎಸ್ಪಿ ಮತ್ತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು, ಕೃಷ್ಣಪ್ಪನವರು ಹಿಂದಿನಿಂದ ಹಲ್ಲೆ ಮಾಡಿಸುವ ಬದಲು ನೇರವಾಗಿ ತಮ್ಮೊಂದಿಗೆ ಹೋರಾಟಕ್ಕೆ ಬರಲಿ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕೃಷ್ಣಪ್ಪನವರು ತಮ್ಮ ಮಗನ ಮೇಲೆ ಹಲ್ಲೆ ಮಾಡಿಸಿದ್ದಾರೆ. ಕೃಷ್ಣಪ್ಪನವರಿಗೆ ಇಂತಹ ಕೆಲಸ ಬಲು ಸುಲಭ. ಜೆಡಿಎಸ್ ಪಕ್ಷದಲ್ಲಿದ್ದ ಮುಖಂಡರನ್ನೂ ಹೀಗೆಯೇ ಮುಗಿಸಲು ಪ್ರಯತ್ನಿಸಿದ್ದರು. ಆದರೆ ನನ್ನ ಹತ್ತಿರ ಇವರ ಆಟ ನಡೆಯಲ್ಲ. ಜೆಡಿಎಸ್ ಮುಖಂಡರಾಗಿದ್ದ ಬ್ಯಾಲಹಳ್ಳಿ ಸೋಮಣ್ಣ, ಜೆಡಿಎಸ್‌ನ ತಾಪಂ ಸದಸ್ಯ ಎಂ.ಟಿ.ರಮೇಶಗೌಡ, ಮೊದಲಾದವರ ಮೇಲೆ ತಮ್ಮ ದರ್ಪ ತೋರಿಸಿದ್ದರು ಎಂದು ಕಿಡಿಕಾರಿದರು.
ತಮ್ಮ ಮಗ ತೇಜುವನ್ನು ಕೊಲೆ ಮಾಡಿಸಿ ತಮ್ಮ ವಂಶವನ್ನೇ ತೆಗೆಯುವ ಕೃತ್ಯ ಮಾಡಿದ ಕೃಷ್ಣಪ್ಪನವರಿಗೆ ತಮಗೂ ಮಕ್ಕಳಿದ್ದಾರೆ ಎಂಬ ಅರಿವು ಇರಬೇಕಿತ್ತು. ಮಗನ ಮೇಲೆ ಸೇಡು ತೀರಿಸಿಕೊಳ್ಳುವ ಬದಲು ತಮ್ಮ ಮೇಲೆ ಸೇಡು ತೀರಿಸಿಕೊಳ್ಳಲಿ ಎಂದು ಮಸಾಲಾ ಜಯರಾಮ್ ನೇರ ಸವಾಲು ಹಾಕಿದರು.
ಹಣಕ್ಕಾಗಿ ರೈಟರ್ ಕೊಲೆ: ಲಾರಿ ಚಾಲಕ, ಕ್ಲೀನರ್ ಬಂಧನ ...
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಬೇರಾರಯವ ರಾಜಕಾರಣಿಗಳ ಯಶಸ್ಸನ್ನು ಸಹಿಸೋಲ್ಲ. ಅವರನ್ನು ತುಳಿಯುವುದೇ ಅವರ ಅಭ್ಯಾಸವಾಗಿದೆ. ತಮ್ಮ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುವುದನ್ನು ನಾನು ಕಂಡು ಸುಮ್ಮನೆ ಕೂರಬೇಕಿತ್ತಾ ಎಂದು ಪ್ರಶ್ನಿಸಿದ ಜಯರಾಮ್, ತಮ್ಮನ್ನು ಬಂಧಿಸುವಂತೆ ಆಗ್ರಹಿಸಿ ಎಸ್‌ಪಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಸೊಪ್ಪು ಹಾಕುವನು ನಾನಲ್ಲ. ತಾವೂ ತಮ್ಮ ಬೆಂಬಲಿಗರೊಂದಿಗೆ ಕೃಷ್ಣಪ್ಪನವರ ಎಲ್ಲ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂದೇ ಪ್ರತಿಭಟನೆ ಮಾಡುವುದಾಗಿ ಶಾಸಕ ಮಸಾಲಾ ಜಯರಾಮ್ ಪ್ರತಿ ಸವಾಲು ಹಾಕಿದರು.
ಮಾಜಿ ಶಾಸಕರ ಮಗನ ವಿರುದ್ಧ ಸೋಮವಾರ ಪೇಟೆಯಲ್ಲಿ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಆಗ ತಾವ್ಯಾರೂ ಸಹ ಕೃಷ್ಣಪ್ಪನವರ ಮಗನನ್ನು ಬಂಧಿಸಿ ಎಂದು ಪ್ರತಿಭಟನೆ ಮಾಡಲಿಲ್ಲ. ಕಾರಣ ಪುತ್ರನ ತಾಯಿ ಹಾಗೂ ಪತ್ನಿಗೆ ನೋವಾಗಬಾರದು ಎಂದು ಗೌರವದಿಂದ ನಡೆದುಕೊಂಡೆವು. ಆದರೆ ಕೃಷ್ಣಪ್ಪ ತಾವು ಯಾವುದೇ ತಪ್ಪು ಮಾಡದಿದ್ದರೂ 307 ಪ್ರಕರಣ ದಾಖಲಿಸಿ ವಿಕೃತಿ ಮೆರೆದಿದ್ದಾರೆ ಎಂದು ದೂರಿದರು.
ರಾಜಕೀಯವಾಗಿ ಮುಗಿಸಲು ನಿರ್ಧಾರ: ತಮ್ಮನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಿದ್ದು. ಅಲ್ಲದೇ ರಾಜಕೀಯದ ಗಾಳಿಗಂಧ ಗೊತ್ತಿಲ್ಲದ ತಮ್ಮ ಮಗನ ಮೇಲೆ ಹಲ್ಲೆ ಮಾಡಿಸಿದ ಕೃತ್ಯಕ್ಕೆ ಮುಂದೆ ಕೃಷ್ಣಪ್ಪನವರು ಭಾರಿ ಬೆಲೆ ತೆರಬೇಕಾಗುತ್ತದೆ. ಕೃಷ್ಣಪ್ಪನವರ ಬಗ್ಗೆ ಇದುವರೆಗೂ ಗೌರವ ಹೊಂದಿದ್ದೆ. ಆದರೆ ಈ ರೀತಿ ಸೇಡು ತೀರಿಸಿಕೊಳ್ಳುವ ಮನೋಭಾವವಿರುವ ಕೃಷ್ಣಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ನಿರ್ಧರಿಸಿದ್ದೇನೆ. ಅಧಿಕಾರ ಇಲ್ಲದಿದ್ದರು ಗೂಂಡಾ ಪ್ರವೃತ್ತಿ ಮುಂದುವರಿಸಿರುವ ಕೃಷ್ಣಪ್ಪನವರಿಗೆ ರಾಜಕೀಯದಲ್ಲಿ ಅಧಿಕಾರ ಸಿಕ್ಕರೆ ಅಮಾಯಕರ ಸ್ಥಿತಿ ನೆನಸಿಕೊಳ್ಳಲೂ ಅಸಾಧ್ಯ. ಬಲಾಢ್ಯರಾಗಿರುವ ನಮ್ಮಂತಹವರನ್ನೇ ಆಟ ಆಡಿಸುವ ಕೃಷ್ಣಪ್ಪ ಇನ್ನು ಜನಸಾಮಾನ್ಯರನ್ನು ಬಿಟ್ಟಾರೆಯೇ ಎಂದು ಕಳವಳ ವ್ಯಕ್ತಪಡಿಸಿದರು.