ಯಾವುದೇ ಕಾರಣಕ್ಕೂ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಮತ್ತೊಂದು ಪ್ರದೇಶ ಸೇರಿಸಕೂಡದು| ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾಕೆ ನೀಡಲಾಯಿತು 371 ಜೆ ಎನ್ನುವ ವಿವರದೊಂದಿಗೆ ಮುಖ್ಯಮಂತ್ರಿಗೆ ಪತ್ರ ಬರೆದ ಶಾಸಕ ಅಮರೇಗೌಡ ಭಯ್ಯಾಪುರ|
ಕೊಪ್ಪಳ(ಡಿ. 02): ಮೊಳಕಾಲ್ಮೂರು ಕ್ಷೇತ್ರವನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಯ 371 ಜೆ ಗೆ ಸೇರ್ಪಡೆ ಮಾಡುವ ಕುರಿತು ಸಚಿವ ಶ್ರೀರಾಮುಲು ಅವರು ಹೇಳಿಕೆ ನೀಡಿರುವುದನ್ನು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಸಮಗ್ರ ವಿವರದೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಯಾವುದೇ ಕಾರಣಕ್ಕೂ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಮತ್ತೊಂದು ಪ್ರದೇಶ ಸೇರಿಸದಿರುವಂತೆ ಆಗ್ರಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾಕೆ ನೀಡಲಾಯಿತು 371 ಜೆ ಎನ್ನುವ ವಿವರದೊಂದಿಗೆ ಪತ್ರ ಬರೆದಿದ್ದಾರೆ.
undefined
ಪತ್ರದಲ್ಲಿ ಏನಿದೆ?:
ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಭಾಷಾವಾರು ಪ್ರಾಂತಗಳು ರಚನೆಯಾಗುವುದಕ್ಕಿಂತ ಮೊದಲು ಹೈದ್ರಾಬಾದ ರಾಜ್ಯದ ಭಾಗವಾಗಿದ್ದವು. ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ್ ನಿಜಾಮರು ಈ ಪ್ರದೇಶವನ್ನು ಆಳುತ್ತಿದ್ದರು.
ನಿಜಾಮರ ಆಡಳಿತದಲ್ಲಿ ಹೈದ್ರಾಬಾದ್ ಸಂಸ್ಥಾನದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸ್ಥಳೀಯರಿಗೆ ಮೀಸಲಿಡುವಂತಹ ಮುಲ್ಕಿ ಕಾನೂನು 1956ರವರೆಗೂ ಜಾರಿಯಲ್ಲಿತ್ತು. ಭಾಷಾವಾರು ಪ್ರಾಂತಗಳ ರಚನೆಯ ನಂತರ ಅದನ್ನು ಸಂವಿಧಾನಬದ್ಧವಾಗಿ ನೀಡುವ ವ್ಯವಸ್ಥೆಯೆ ಸಂವಿಧಾನದ 371ರ ಸೌಲಭ್ಯ. ಭಾಷಾವಾರು ಪ್ರಾಂತಗಳ ರಚನೆಯ ನಂತರ ಹೈದ್ರಾಬಾದ್ ರಾಜ್ಯದ ತೆಲಂಗಾಣ ಪ್ರದೇಶವನ್ನು ಅಂದಿನ ಆಂಧ್ರಪ್ರದೇಶಕ್ಕೆ ಸೇರಿಸಿ ಸಂವಿಧಾನದ 371ರ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಲಾಯಿತು. ಅದೇ ರೀತಿ ಅಂದಿನ ಹೈದ್ರಾಬಾದ್ ರಾಜ್ಯದ ಮರಾಠಿ ಮಾತನಾಡುವ ಮರಾಠಾವಾಡ ಪ್ರದೇಶದ 5 ಜಿಲ್ಲೆಗಳೂ ಭಾಷಾವಾರು ಪ್ರಾಂತಗಳ ರಚನೆ ಸಂದರ್ಭದಲ್ಲಿ ಅಂದಿನ ಬಾಂಬೆ ರಾಜ್ಯಕ್ಕೆ ಸೇರಿಸಿ ಸಂವಿಧಾನದ 371(2)ರ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಯಿತು. ಅದೇ ಸಂದರ್ಭದಲ್ಲಿ ಹೈದ್ರಾಬಾದ್ ರಾಜ್ಯದ ಭಾಗವಾಗಿದ್ದ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಆದರೆ, ನಮಗೆ ವಿಶೇಷ ಸ್ಥಾನಮಾನ ನೀಡದೆ ಅನ್ಯಾಯ ಮಾಡಲಾಯಿತು.
'ರಾಜ್ಯೋತ್ಸವ ಪುರಸ್ಕಾರ ಆಯ್ಕೆಯಲ್ಲೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ'
ಸಂವಿಧಾನದ 371ರ ಸೌಲಭ್ಯ ನೀಡಬೇಕೆಂದು ನಮ್ಮ ಭಾಗದ ಹೋರಾಟಗಾರರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಸುಧೀರ್ಘ ಹೋರಾಟ ನಡೆಸಿದ್ದರಿಂದ 2012ರಲ್ಲಿ ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ(ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು) ಸಂವಿಧಾನದ 371ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ. ಸಂವಿಧಾನದ 371ಜೆ ಅನ್ವಯ ವಿಶೇಷ ಸ್ಥಾನಮಾನ ನೀಡಲು ಪರಿಗಣಿಸಿರುವ ಮಾನದಂಡ ಕೇವಲ ಈ ಭಾಗದ ಹಿಂದುಳಿವಿಕೆ ಮಾತ್ರವಲ್ಲದೇ ಅನೇಕ ಸಮಸ್ಯೆಗಳು, ಅನ್ಯಾಯಗಳು ಸೇರಿದಂತೆ ಮೊದಲಾದ ಅಂಶಗಳನ್ನಾಧರಿಸಿ ನೀಡಲಾಗಿದೆ.
ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗದಗ ಜಿಲ್ಲೆಯ ಕೆಲವು ಹಳ್ಳಿಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿಸಿ 371ಜೆ ಸೌಲಭ್ಯ ನೀಡುವ ಪ್ರಸ್ತಾವನೆ ಬಂದಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ಕೈಬಿಡಲಾಯಿತು.
ಈಗ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮೊಳಕಾಲ್ಮುರು ಕ್ಷೇತ್ರ ಅಥವಾ ಚಿತ್ರದುರ್ಗ ಜಿಲ್ಲೆಯನ್ನು ಸೇರಿಸುವ ಹುನ್ನಾರ ನಡೆದಿದ್ದು, ಇದಕ್ಕೆ ಅವಕಾಶ ನೀಡಕೂಡದು.
ರಾಜ್ಯದಲ್ಲಿ ಡಾ. ಡಿ.ಎಂ. ನಂಜುಂಡಪ್ಪನವರ ವರದಿಯಂತೆ ಹಿಂದುಳಿದ 114 ತಾಲೂಕುಗಳು ಇದ್ದು, ರಾಜ್ಯ ಸರ್ಕಾರವು ಅಂತಹ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಯೋಜನೆಯೊಂದನ್ನು ರೂಪಿಸಿ ಕಾಲಮಿತಿಯೊಳಗೆ ಅವುಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ, ದೂರದೃಷ್ಟಿಯಿಲ್ಲದ ರಾಜ್ಯ ಸರ್ಕಾರಗಳು ಹಿಂದುಳಿದ ಪ್ರದೇಶದ ಅಭಿವೃದ್ಧಿ ಮಾಡುವದನ್ನು ಬಿಟ್ಟು, ಜನರಲ್ಲಿ ಅನಗತ್ಯವಾಗಿ ಗೊಂದಲ ಉಂಟು ಮಾಡುತ್ತಿರುವುದು ಖಂಡನೀಯವಾಗಿದೆ.
ರಾಜ್ಯದ ಯಾವುದೇ ಪ್ರದೇಶ ಅಥವಾ ಜಿಲ್ಲೆ ಅಥವಾ ತಾಲೂಕು ಅಥವಾ ಹೋಬಳಿ ಅಥವಾ ಹಳ್ಳಿಗಳನ್ನು ಯಾವುದೇ ಕಾರಣವಿದ್ದರೂ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಸೇರಿಸುವದನ್ನು ವಿರೋಧಿಸುತ್ತೇವೆ. ಇಂತಹ ಪ್ರಸ್ತಾವನೆಗಳು ಬಂದಲ್ಲಿ ಯಾವುದೇ ಕಾರಣಕ್ಕೂ ಪರಿಗಣಿಸಬಾರದೆಂದು ಎಂದು ಪತ್ರದಲ್ಲಿ ಖಡಕ್ ಆಗಿ ಆಗ್ರಹಿಸಲಾಗಿದೆ.