ಅಳಿಸಲಾಗದ ಶಾಹಿಯಿಂದ ಮುದ್ರೆ|ಲಕ್ಷಣರಹಿತ ಸೋಂಕಿತರು ಬೀದಿಯಲ್ಲಿ ಓಡಾಡದಂತೆ ಈ ಕ್ರಮ|ಸೀಲ್ ಹಾಕಿಸಿಕೊಂಡವರು ಬೀದಿಯಲ್ಲಿ ಕಂಡರೆ ಪಾಲಿಕೆಗೆ ಮಾಹಿತಿ ನೀಡಿ| ಅಂತಹವರ ವಿರುದ್ಧ ಕಾನೂನು ಕ್ರಮ ಖಚಿತ|
ಬೆಂಗಳೂರು(ಮಾ.26): ಕೊರೋನಾ ಹಬ್ಬುವಿಕೆಗೆ ಕಡಿವಾಣ ಹಾಕಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವವರ ಕೈಗಳಿಗೆ ಅಳಿಸಲಾಗದ ಶಾಹಿಯಿಂದ ‘ಕೋವಿಡ್ ದೃಢಪಟ್ಟಿದೆ’ ಎಂಬ ಮುದ್ರೆ(ಸೀಲ್) ಹಾಕಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಗುರುವಾರ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣದಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಂಬಂಧಪಟ್ಟಪಾಲಿಕೆಯ ಅಧಿಕಾರಿಗಳ ಜತೆಗೆ ಪರಿಶೀಲನಾ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಲಕ್ಷಣ ರಹಿತ ಸೋಂಕು ಕಂಡು ಬಂದು (ಎ-ಸಿಮ್ಟಮ್ಯಾಟಿಕ್) ಮನೆಯಲ್ಲೇ ಐಸೋಲೇಟ್ ಆಗಿರುವವರು ಓಡಾಟ ಮಾಡಬಾರದೆಂಬ ಕಾರಣಕ್ಕೆ ಮುದ್ರೆ ಹಾಕಲಾಗುವುದು. ಒಂದು ವೇಳೆ ಮುದ್ರೆ ಹಾಕಿಸಿಕೊಂಡವರು ತಿರುಗಾಡುವುದನ್ನು ಕಂಡರೆ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿ. ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಹೆಚ್ಚಾಗಿ 20ರಿಂದ 40 ವರ್ಷದೊಳಗೆ ಇರುವವರಲ್ಲಿ ಸೋಂಕು ಕಂಡುಬರುತ್ತಿದ್ದು, 70 ವರ್ಷ ಮೇಲ್ಪಟ್ಟವರಲ್ಲಿ ಸೋಂಕಿನ ಗಂಭೀರತೆ ಕಂಡುಬರುತ್ತಿದೆ. ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟರೆ ಕುಟುಂಬದ ಉಳಿದೆಲ್ಲಾ ಸದಸ್ಯರಿಗೂ ಕೋವಿಡ್ ಸೋಂಕು ಹರಡುವುದು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಎಚ್ಚರಿಕೆಯಿಂದಿರಬೇಕು. ಒಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾದ ಕೂಡಲೇ ಪ್ರತಿಯೊಬ್ಬರು ತಪ್ಪದೇ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದರು.
ಕೊರೋನಾ 2ನೇ ಅಲೆ ಸ್ಫೋಟ: ಮಾಸ್ಕ್ ಹಾಕಿಲ್ಲ ಅಂದ್ರೆ ದಂಡ ಫಿಕ್ಸ್..!
ಕ್ವಾರಂಟೈನ್ ವಾಚ್ ಮೂಲಕ ನಿಗಾ
ನಗರದಲ್ಲಿ ಸೋಂಕು ದೃಢಪಟ್ಟವರ ಮೇಲೆ ನಿಗಾವಹಿಸಲು ಕ್ವಾರಂಟೈನ್ ವಾಚ್ ತಂತ್ರಾಂಶವಿದ್ದು, ಆ ತಂತ್ರಾಂಶದ ಮೂಲಕ ಹೋಮ್ ಐಸೋಲೇಷನ್ ನಲ್ಲಿರುವವರ ಮೇಲೆ ನಿಗಾವಹಿಸಲು ಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೆ ಹೋಮ್ ಐಸೋಲೇಷನ್‌ನಲ್ಲಿ ಇರುವವರಿಗೆ ಸರಿಯಾದ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿದ ವರದಿ 24 ಗಂಟೆಯೊಳಗಾಗಿ ಪಡೆದು, ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಕನಿಷ್ಠ 20 ಪ್ರಾಥಮಿಕ ಹಾಗೂ ದ್ವಿತಿಯ ಸಂಪರ್ಕಿತರನ್ನು ಪತ್ತೆಹಚ್ಚಿ ಐಸೋಲೇಟ್ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಸುಧಾಕರ್ ತಿಳಿಸಿದರು.
ನಿತ್ಯ 80 ಸಾವಿರ ಲಸಿಕೆಗೆ ವ್ಯವಸ್ಥೆ
ಪಾಲಿಕೆ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟವರು 25 ಲಕ್ಷಕ್ಕೂ ಹೆಚ್ಚಿದ್ದು, ಎಲ್ಲರಿಗೂ ಲಸಿಕೆ ನೀಡಲಾಗುವುದು. ಈ ಸಂಬಂಧ ನಗರದಲ್ಲಿ 450 ಕೇಂದ್ರಗಳಲ್ಲಿ ಪ್ರತಿನಿತ್ಯ 80 ಸಾವಿರ ಲಸಿಕೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ಅಷ್ಟುಪ್ರಮಾಣದಲ್ಲಿ ಲಸಿಕೆ ಪಡೆಯಲು ನಾಗರಿಕರು ಬರುತ್ತಿಲ್ಲ. ಆದ್ದರಿಂದ ನಾಗರಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಎಲ್ಲಾ ಆಸ್ಪತ್ರೆಗಳಲ್ಲೂ ಹೆಲ್ಪ್‌ಡೆಸ್ಕ್, ಕಿಯೋಸ್ಕ್ ಹಾಗೂ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡುತ್ತೇವೆ ಎಂದು ಸುಧಾಕರ್ ತಿಳಿಸಿದರು.
ಕಲಬುರಗಿ: ಶರಣಬಸವೇಶ್ವರ ಜಾತ್ರೆ, ಭಕ್ತರ ಪಾಲ್ಗೊಳ್ಳುವಿಕೆಗೆ ನಿರ್ಬಂಧ
ಹಾಸಿಗೆಗಳ ಸಂಖ್ಯೆ ಪೋರ್ಟಲ್‌ನಲ್ಲಿ ಲಭ್ಯ
ನಗರದಲ್ಲಿರುವ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಎಷ್ಟು ಖಾಲಿಯಿವೆ, ಎಷ್ಟುಐಸಿಯು ಹಾಸಿಗೆಗಳಿವೆ ಎಂಬುದನ್ನು ತಿಳಿಯಲು ಸರಳೀಕೃತ ವ್ಯವಸ್ಥೆ ಮಾಡಲಾಗಿದ್ದು, ಆನ್‌ಲೈನ್ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಬಿಬಿಎಂಪಿ ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಬುಧವಾರ 51 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಹೇಳಿದರು.