* ಖಾಸಗಿ ವೈದ್ಯರಿಗೆ ಸೂಚನೆ ನೀಡಿ ಎಂದ ಕೃಷಿ ಸಚಿವ ಬಿ.ಸಿ. ಪಾಟೀಲ್
* ಹೋಂ ಐಸೋಲೇಶನ್‌ನಲ್ಲಿ ಇರುವವರನ್ನು ಕಾಳಜಿ ಕೇಂದ್ರಕ್ಕೆ ಕರೆತನ್ನಿ
* ಶಾಲಾ ಶಿಕ್ಷಕರು, ಮುಖ್ಯಾಧ್ಯಾಪಕರು ಕಡ್ಡಾಯವಾಗಿ ಹಾಜರಿ ಹಾಕಿ
ಕೊಪ್ಪಳ(ಮೇ.27): ಜ್ವರ, ಶೀತ, ಕೆಮ್ಮು ಎಂದು ಬರುವ ಕೋವಿಡ್ ಲಕ್ಷಣಗಳುಳ್ಳ ರೋಗಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ತಿಳಿಹೇಳಿ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್, ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವೈದ್ಯರಲ್ಲಿ ಮನವಿ ಮಾಡಿದ್ದಾರೆ.
undefined
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೋವಿಡ್-19 ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಖಾಸಗಿ ವೈದ್ಯರು ಕೋವಿಡ್ ಲಕ್ಷಣಗಳುಳ್ಳ ರೋಗಿಗಳಿಗೆ ತಾತ್ಕಾಲಿಕ ಔಷಧೋಪಚಾರ ಮಾಡುವುದರಿಂದ ರೋಗಿಗಳು ಗುಣಮುಖರಾಗದೆ, ಗಂಭೀರ ಹಂತ ತಲುಪಿದ ಮೇಲೆ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಾರೆ. ಇದರಿಂದ ರೋಗಿಯ ಪ್ರಾಣಕ್ಕೆ ಅಪಾಯವಾಗುವ ಜತೆಗೆ ಕೋವಿಡ್ ಪಾಸಿಟಿವ್ ಇದ್ದಲ್ಲಿ ಅದುವರೆಗೆ ಆ ರೋಗಿ ಬಹಳಷ್ಟುಜನರಿಗೆ ಸೋಂಕು ಹರಡಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೋವಿಡ್ ಲಕ್ಷಣಗಳುಳ್ಳ ಯಾವುದೇ ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಬೇಕು. ಜಿಲ್ಲೆಯ ಎಲ್ಲ ಗ್ರಾಮಗಳ ಖಾಸಗಿ ವೈದ್ಯರಿಗೆ ಅಗತ್ಯ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಡಿಎಚ್‌ಒ ಒಳಗೊಂಡು ಜಿಲ್ಲೆಯ ಎಲ್ಲ ಖಾಸಗಿ ಮತ್ತು ಸರ್ಕಾರಿ ವೈದ್ಯರ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ, ಅದರಲ್ಲಿ ರೋಗಿಯ ಕುರಿತು ಮಾಹಿತಿಯನ್ನು ನೀಡಲು ತಿಳಿಸಿ ಎಂದು ಸೂಚಿಸಿದರು.
ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರನ್ನು ಕೋವಿಡ್ ಆಸ್ಪತ್ರೆ, ಕಾಳಜಿ ಕೇಂದ್ರಗಳಿಗೆ ದಾಖಲಿಸಿ. ಮುಖ್ಯವಾಗಿ ಕೋವಿಡ್ ಸೋಂಕಿತ ವಯೋವೃದ್ಧರಿಗೆ ಹೆಚ್ಚಿನ ಆರೈಕೆ ಹಾಗೂ ಚಿಕಿತ್ಸೆಯ ಅಗತ್ಯವಿದೆ. ಮನೆಯಲ್ಲಿ ಅವರ ಆರೈಕೆಗೆ ಮನೆಯ ಸದಸ್ಯರನ್ನು ಅವಲಂಬಿಸುತ್ತಿದ್ದು, ಸೋಂಕು ಮನೆಯ ಇತರ ಸದಸ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂಥವರನ್ನು ಕೂಡಲೇ ಕಾಳಜಿ ಕೇಂದ್ರ, ಆಸ್ಪತ್ರೆಗಳಿಗೆ ದಾಖಲಿಸಿ. ಹೋಂ ಐಸೋಲೇಷನ್ ಸುರಕ್ಷಿತವಲ್ಲ. ಎಲ್ಲ ವಯೋಮಾನದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಎಂದು ಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರ ಸತ್ತು ಹೋದ ಮೇಲೆ ಸಿಎಂ ಬದಲಾದರೇನು ಪ್ರಯೋಜನ?: ಶಿವರಾಜ ತಂಗಡಗಿ
ಜಿಲ್ಲೆಯ ಬಹುತೇಕ ಔಷಧ ಅಂಗಡಿಗಳಲ್ಲಿ ಜ್ವರ, ಶೀತದಂತಹ ಕೋವಿಡ್ ಲಕ್ಷಣಗಳುಳ್ಳ ರೋಗಿಗಳಿಗೆ ವೈದ್ಯರ ಶಿಫಾರಸು ಇಲ್ಲದೆ ಮಾತ್ರೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲಾ ಔಷಧ ನಿಯಂತ್ರಕ ಅಧಿಕಾರಿಗಳು ಅಂತಹ ಔಷಧ ಅಂಗಡಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಸೂಚನೆ ನೀಡಬೇಕು. ವೈದ್ಯರ ಶಿಫಾರಸು ಇಲ್ಲದೆ ಜ್ವರಕ್ಕೆ ಸಂಬಂಧಿಸಿದ ಯಾವುದೇ ಮಾತ್ರೆಯನ್ನು ಯಾವುದೇ ಔಷಧ ಅಂಗಡಿಯವರು ನೀಡಬಾರದು ಎಂದು ಆದೇಶ ಹೊರಡಿಸಿ ಎಂದು ಅವರು ಸೂಚಿಸಿದರು.
ಮುಖ್ಯೋಪಾಧ್ಯಾಯರೇ ಶಾಲೆಯಲ್ಲಿರಿ:
ಕೋವಿಡ್ ಮೂರನೇ ಅಲೆಯ ಕುರಿತು ತಜ್ಞರು ಈಗಾಗಲೇ ಸೂಚನೆ ನೀಡಿದ್ದಾರೆ. ಅದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲ ಶಾಲಾ ಶಿಕ್ಷಕರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಶಾಲೆಗೆ ಕಡ್ಡಾಯವಾಗಿ ಹಾಜರಿ ಹಾಕಿ, ಗ್ರಾಮದ ಎಲ್ಲ ಮನೆ ಮನೆಗೆ ಭೇಟಿ ನೀಡಿ ಕೋವಿಡ್-19 ಮೂರನೇ ಅಲೆಯ ಬಗ್ಗೆ ಹಾಗೂ ಮಕ್ಕಳು ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದೆ. ಆದರೆ ವೆಂಟಿಲೇಟರ್‌ಗಳಿಗೆ ಪರ್ಯಾಯವಾಗಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆಯುಳ್ಳ ಬೈ ಪ್ಯಾಕ್‌ಗಳನ್ನು ಖರೀದಿಸಿ ಎಲ್ಲ ಕೋವಿಡ್ ಆಸ್ಪತ್ರೆಗಳಿಗೆ 5ರಂತೆ ಒದಗಿಸಿ. ಇದರ ನಿರ್ವಹಣೆ ಕೂಡ ಸುಲಭವಾಗಿದ್ದು, ಹೆಚ್ಚಿನ ರೋಗಿಗಳಿಗೆ ಇನ್ನೂ ಉತ್ತಮ ಸೌಲಭ್ಯ ಒದಗಿಸಬಹುದು ಎಂದು ಅವರು ಹೇಳಿದರು.
ಬ್ಯಾಂಕು ನಾಲ್ಕು ದಿನ:
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿಯೂ ನಾಲ್ಕು ದಿನಗಳ ಕಾಲ ಬ್ಯಾಂಕ್ ಶುರು ಮಾಡಿ. ಸೋಮವಾರದಿಂದ ಗುರುವಾರದ ವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 12 ಗಂಟೆ ವರೆಗೆ ತೆರೆದಿರಬೇಕು. ರೈತ ಸಂಪರ್ಕ ಕೇಂದ್ರಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೂ ತೆರೆದಿರುವಂತೆ ನೋಡಿಕೊಳ್ಳಿ ಎಂದು ಪಾಟೀಲ್ ಸೂಚಿಸಿದರು.
ಸಭೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಕೆ. ಹಿಟ್ನಾಳ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಕೆಡಿಪಿ ಸದಸ್ಯ ಅಮರೇಶ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಕಿಮ್ಸ್ ನಿರ್ದೇಶಕ ವೈಜನಾಥ ಇಟಗಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona